ಅರ್ಧ ತಾಸು ಸುರಿದ ಮಳೆಗೆ ಚಿತ್ರದುರ್ಗ ಛಿದ್ರ

KannadaprabhaNewsNetwork | Updated : Aug 15 2024, 01:53 AM IST

ಸಾರಾಂಶ

ನೂರಾರು ಕೋಟಿ ರು. ಸರ್ಕಾರಿ ಅನುದಾನ ಬಳಸಿ ಚಿತ್ರದುರ್ಗದಲ್ಲಿ ನಿರ್ಮಿಸಿರುವ ಅವೈಜ್ಞಾನಿಕ ಸಿಸಿ ರಸ್ತೆಗಳು ಈ ಅನಾಹುತಕ್ಕೆ ಕಾರಣವಾಗಿದೆ. ಎಲ್ಲಿಯೂ ರಸ್ತೆ ಅಂಚಿನಲ್ಲಿ ಚರಂಡಿಗಳ ನಿರ್ಮಿಸದಿರುವ ಪರಿಣಾಮ ಮಳೆ ನೀರು ಸರಾಗವಾಗಿ ಹರಿಯದೆ ಸಿಕ್ಕ ಸಿಕ್ಕಕಡೆ ನುಗ್ಗುತ್ತಿದೆ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಬುಧವಾರ ಮುಂಜಾನೆ ಸುರಿದ ಅರ್ಧ ತಾಸು ಮಳೆಗೆ ಚಿತ್ರದುರ್ಗ ನಗರ ತತ್ತರಗೊಂಡಿದೆ. ಸಿಸಿ ರಸ್ತೆಗಳ ಮೇಲೆ ಬಿದ್ದ ನೀರು ಅಪಾರ ಪ್ರಮಾಣದಲ್ಲಿ ಹರಿದು ಬಂದ ಪರಿಣಾಮ ಗಾಂಧಿ ವೃತ್ತದಲ್ಲಿರುವ ಬಟ್ಟೆ ಅಂಗಡಿ ಅಜಂತ ಟೆಕ್ಸ್‌ಟೈಲ್ ಮುಳುಗಡೆಯಾಗಿದೆ. ಸರಿ ಸುಮಾರು ಎಂಟು ಅಡಿಯಷ್ಟು ನೀರು ಅಂಗಡಿಯಲ್ಲಿ ನಿಂತಿದ್ದು ಅಗ್ನಿ ಶಾಮಕ ಠಾಣೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ನೀರನ್ನು ಹೊರ ಹಾಕಬೇಕಾಯಿತು. ಇದೇ ಅಂಗಡಿ ಪಕ್ಕದ ಭರತ್ ಮೆಟಲ್ ಸ್ಟೋರ್‌ಗೂ ನೀರು ನುಗ್ಗಿದೆ. ಸ್ಟೀಲ್ ಪಾತ್ರೆಗಳ ತೊಳೆದು ಹೇಗೂ ಮಾರಾಟ ಮಾಡಬಹುದು. ಆದರೆ ಅಜಂತ ಟೆಕ್ಸ್ ಟೈಲ್ಸ್ ಗೆ ನುಗ್ಗಿದ ಚರಂಡಿ ನೀರು ಲಾಟ್‌ ಗಟ್ಟಲೆ ಬಟ್ಟೆಗಳ ಕೊಳಚೆ ನೀರಿನಲ್ಲಿ ಮುಳುಗಡೆಯಾಗಿದೆ. ಹತ್ತು ಲಕ್ಷಕ್ಕು ಹೆಚ್ಚು ರು. ಹಾನಿಯಾಗಿದೆ. ಇದಲ್ಲದೇ ನಗರದ ಖಾಸಗಿ ಬಸ್ ನಿಲ್ದಾಣದ ಸಮೀಪದ ಸಾಯಿ ಎಂಟರ್ ಪ್ರೈಸಸ್‌ಗೆ ಚರಂಡಿ ನೀರು ನುಗ್ಗಿ ಕೃಷಿ ಉಪಕರಣಗಳಿಗೆ ಧಕ್ಕೆಯಾಗಿದೆ.

ಮುಂಜಾನೆ ನಾಲ್ಕು ಗಂಟೆಯಿಂದ ನಾಲ್ಕುವರೆ ವರೆಗೆ ಅರ್ಧತಾಸು ಮಳೆಗೆ ಗಂಭೀರ ಅನಾಹುತಗಳಾಗಿವೆ. ಈಗ ಇನ್ನು ಮಳೆಗಾಲ ಆರಂಭವಾಗಿದ್ದು ಮುಂದಿನ ಮಳೆಗೆ ಹೇಗೋ ಎಂಬ ಆತಂಕ ಜನರಲ್ಲಿ ಶುರುವಾಗಿದೆ.

ನೂರಾರು ಕೋಟಿ ರು. ಸರ್ಕಾರಿ ಅನುದಾನ ಬಳಸಿ ಚಿತ್ರದುರ್ಗದಲ್ಲಿ ನಿರ್ಮಿಸಿರುವ ಅವೈಜ್ಞಾನಿಕ ಸಿಸಿ ರಸ್ತೆಗಳು ಈ ಅನಾಹುತಕ್ಕೆ ಕಾರಣವಾಗಿದೆ. ಎಲ್ಲಿಯೂ ರಸ್ತೆ ಅಂಚಿನಲ್ಲಿ ಚರಂಡಿಗಳ ನಿರ್ಮಿಸದಿರುವ ಪರಿಣಾಮ ಮಳೆ ನೀರು ಸರಾಗವಾಗಿ ಹರಿಯದೆ ಸಿಕ್ಕ ಸಿಕ್ಕಕಡೆ ನುಗ್ಗುತ್ತಿದೆ. ಹೊಳಲ್ಕೆರೆ ರಸ್ತೆಯಲ್ಲಿ ಬಾಕ್ಸ್ ಚರಂಡಿ ನಿರ್ಮಿಸಿ ಅದರ ಮೇಲೆ ಸ್ಲಾಬ್‌ಗಳ ಹಾಕಿ ಸಿಸಿ ರಸ್ತೆ ಮಾಡಲಾಗಿದೆ. ನೀರು ಹೋಗಲು ಜಾಗಗಳೇ ಇಲ್ಲ. ನಗರದ ಪ್ರವಾಸಿ ಮಂದಿರದಿಂದ ಗಾಂಧಿ ವೃತ್ತದವರೆಗೆ ಚರಂಡಿಗಳಿಲ್ಲ. ಬುರುಜಿನ ಹಟ್ಟಿ, ಉಚ್ಚಂಗಿ ಎಲ್ಲಮ್ಮ ದೇವಸ್ಥಾನ, ಹೆಡ್ ಪೋಸ್ಟ್ ಆಫೀಸ್ ಕಡೆಯಿಂದ ಬರುವ ನೀರು ನೇರವಾಗಿ ಗಾಂಧಿ ವೃತ್ತಕ್ಕೆ ನುಗ್ಗುತ್ತದೆ. ನಂತರ ಮೆದೆಹಳ್ಳಿ ರಸ್ತೆ ಕಡೆ ಹರಿದು ಹೋಗುತ್ತದೆ. ನೀರು ಹರಿಯಲು ಎಲ್ಲಿಯೂ ಚರಂಡಿಗಳಿಲ್ಲ. ಸಿಸಿ ರಸ್ತೆಗಳ ಬಳಸಿಕೊಂಡು ಸಾಗಬೇಕಿದೆ.

ಮೆದೆಹಳ್ಳಿ ರಸ್ತೆಯಲ್ಲಿ ಬರುವ ವರ್ತಕರು ತಮ್ಮ ವಾಣಿಜ್ಯ ಮಳಿಗೆಗಳ ಮುಂಭಾಗ ಮಳೆ ನೀರಿಗೆ ಹೆದರಿ ಒಂದರಿಂದ ಮೂರು ಅಡಿಗಳಷ್ಟು ತಡೆ ಗೋಡೆ ಕಟ್ಟಿಕೊಂಡಿದ್ದಾರೆ. ಅದರ ಮೇಲೆ ಏರಿಯೂ ಕೆಲವೊಮ್ಮೆ ಮಳೆ ನೀರು ನುಗ್ಗಿ ಅನಾಹುತ ಮಾಡುತ್ತದೆ. ಮಳೆ ಬಂದಿತೆಂದರೆ ಸಾಕು ವರ್ತಕರು ಮರಳು ಚೀಲ ಹಾಕಿಕೊಂಡು ತಮ್ಮ ಮಳಿಗೆಯಲ್ಲಿನ ವಸ್ತುಗಳ ಕಾಪಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲಾಡಳಿತ, ಶಾಸಕರ ಪಪ್ಪಿ ವಿರುದ್ಧ ಆಕ್ರೋಶ:

ಮಳೆ ನೀರು ನುಗ್ಗಿ ಅನಾಹುತ ಸೃಷ್ಠಿಸಿದ ಪರಿಣಾಮ ಆಕ್ರೋಶಗೊಂಡ ವರ್ತಕರು ಗಾಂಧಿ ವೃತ್ತದಲ್ಲಿ ರಸ್ತೆ ತಡೆ ಮಾಡಿ ವರ್ತಕರು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಡಳಿತ ಹಾಗೂ ಶಾಸಕ ವೀರೇಂದ್ರ ಪಪ್ಪಿ ವಿರುದ್ಧ ಘೋಷಣೆ ಕೂಗಿದರು. ನಗರದ ಹೃದಯ ಭಾಗದಲ್ಲಿದ್ದರೂ ನಾವು ಸಂಕಷ್ಟ ಅನುಭವಿಸಬೇಕಾಗಿ ಬಂದಿದೆ ಎಂದು ವರ್ತಕರು ಮಮ್ಮಲ ಮರುಗಿದರು. ಹರ್ ಘರ್ ಕಿ ಗಟಾರ ಪಾನಿ ಎಂದು ವ್ಯವಸ್ಥೆ ಬಗ್ಗೆ ಅಸಮಧಾನ ಹೊರಹಾಕಿದರು.

ರಸ್ತೆ ನಿರ್ಮಾಣ ಮಾಡುವಾಗ ಜಿಲ್ಲಾಡಳಿತ ಸೂಕ್ತ ನಿಗಾವಹಿಸದ ಕಾರಣ ಸಮಸ್ಯೆ ಸೃಷ್ಠಿಗೆ ಕಾರಣವಾಗಿದೆ. ಸರ್ಕಾರದ ಅನುದಾನ ಬಿಡುಗಡೆ ಮಾಡಿ ಕೈಕಟ್ಟಿ ಕುಳಿತ ಜಿಲ್ಲಾಡಳಿತ ಭವಿಷ್ಯದಲ್ಲಿ ಎದುರಾಗಬಹುದಾಗ ಸಂಕಷ್ಟ ಸನ್ನಿವೇಶಗಳ ನಿರೀಕ್ಷಿಸಿಲ್ಲ. ಚಿತ್ರದುರ್ಗದಲ್ಲಿ ಅವೈಜ್ಞಾನಿಕ ರಸ್ತೆಗಳು ನಿರ್ಮಾಣವಾಗುತ್ತಿವೆ. ರಸ್ತೆ ಮೇಲೆ ಬಿದ್ದ ಮಳೆ ನೀರು ಸರಾಗವಾಗಿ ಹರಿಯಲು ಚರಂಡಿ ವ್ಯವಸ್ಥೆ ಇಲ್ಲವೆಂದು ನಾಗರಿಕರು ಹಲವಾರು ಬಾರಿ ದೂರಿದರೂ ಜಿಲ್ಲಾಡಳಿತ ಕೇಳಿಸಿಕೊಳ್ಳಲೇ ಇಲ್ಲ. ಅಚ್ಚರಿ ಎಂದರೆ ಜಿಲ್ಲಾಧಿಕಾರಿ ನಿವಾಸದ ಮುಂಭಾಗ ಮಾಡಿರುವ ರಸ್ತೆಗೆ ಚರಂಡಿಯೇ ಇಲ್ಲ. ರಸ್ತೆ ಮೇಲೆ ಬಿದ್ದ ನೀರು ನೇರವಾಗಿ ಕಾನ್ವೆಂಟ್ ಮುಂಭಾಗ ಹರಿದು ಎಸ್ಪಿ ಆಫೀಸ್ ಮೂಲಕ ಸಾಗಿ ಎಲ್ಲಿ ಜಾಗ ಸಿಗುತ್ತದೋ ಅಲ್ಲಿ ನುಗ್ಗುತ್ತದೆ. ಅಷ್ಟರ ಮಟ್ಟಿಗೆ ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿದೆ.

ದಮ್ ಇಲ್ಲದ ರಸ್ತೆ ಸುರಕ್ಷತಾ ಸಮಿತಿ:

ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿಗೆ ಜಿಲ್ಲಾಧಿಕಾರಿಗಳೇ ಅಧ್ಯಕ್ಷರು. ತಿಂಗಳಿಗೊಮ್ಮೆಯೋ, ಎರಡು ತಿಂಗಳಿಗೊಮ್ಮೆಯೋ ಕಾಟಾಚಾರದ ಸಭೆ ಮಾಡಿ ಅಧಿಕಾರಿಗಳ ಕೂಡಿಹಾಕಿಕೊಂಡು ಸಭೆ ಬರಕಸ್ತ್ ಮಾಡಲಾಗುತ್ತದೆ. ಬಿ.ಡಿ ರಸ್ತೆಯಲ್ಲಿ ಚರಂಡಿಗಳು ಇಲ್ಲದೇ ಸಿಸಿ ರಸ್ತೆ ಮಾಡಿರುವ ಸಂಗತಿ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಚರ್ಚೆಯಾಗಿದೆ. ಸಭೆಯಲ್ಲಿ ಸರಿಪಡಿಸುವಂತೆ ಜಿಲ್ಲಾಧಿಕಾರಿ ಎಚ್ಚರಿಕೆ ಮಾತುಗಳನ್ನಾಡುತ್ತಾರೆ. ಆದರೆ ಪಾಲನೆ ಮಾಡಲು ಅಧಿಕಾರಿಗಳು ಮುಂದಾಗುತ್ತಿಲ್ಲ. ಅಷ್ಟರ ಮಟ್ಟಿಗೆ ರಸ್ತೆ ಸುರಕ್ಷತಾ ಸಮಿತಿ ದುರ್ಬಲವಾಗಿ ಕಾರ್ಯನಿರ್ವಹಿಸುತ್ತಿದೆ.

ನಗರಸಭೆಗೆ ಹಸ್ತಾಂತರವಾಗಿಲ್ಲ:

ಗಾಂಧಿ ವೃತ್ತದಲ್ಲಿ ಮಳೆ ನೀರು ನುಗ್ಗಿ ಅನಾಹುತದ ಸ್ಥಳಕ್ಕೆ ಪೌರಾಯುಕ್ತೆ ರೇಣುಕಾ ಭೇಟಿ ನೀಡಿದಾಗ ಜನತೆ ಆಕ್ರೋಶ ವ್ಯಕ್ತಪಡಿಸಿದರು. ಮಳೆ ನೀರು ನುಗ್ಗಿದ್ದಕ್ಕೆ ಪರಿಹಾರ ಕೊಡಿ ಎಂದು ಆಗ್ರಹಿಸಿದರು. ಅಚ್ಚರಿಯೆಂದರೆ ಚಿತ್ರದುರ್ಗ ನಗರದಲ್ಲಿ ವಿವಿಧ ಇಲಾಖೆಗಳು ಕೈಗೊಂಡಿರುವ ಸಿಸಿ ರಸ್ತೆ ಕಾಮಗಾರಿಗಳು ಪೂರ್ಣಗೊಂಡು ವರ್ಷಗಳೇ ಉರುಳಿದರೂ ನಗರಸಭೆಗೆ ಹಸ್ತಾಂತರ ಮಾಡಿಲ್ಲ. ನಮ್ಮ ಗಮನಕ್ಕೆ ಬಾರದೆ ಎಸ್ಟಿಮೇಷನ್ ತಯಾರಿಸಿ ರಸ್ತೆ ಮಾಡಲಾಗಿದೆ. ಎಲ್ಲಿಯೂ ಚರಂಡಿಗಳಿಲ್ಲ. ಮಳೆ ನೀರು ಎಲ್ಲಿಗೆ ಹೋಗಬೇಕು. ಯಾರೋ ಮಾಡಿದ ತಪ್ಪಿಗೆ ನಾವು ಬೈಯಿಸಿಕೊಳ್ಳಬೇಕಾಗಿದೆ ಎಂಬ ಅಸಹಾಯಕತೆ ನಗರಸಭೆಯದ್ದು. ರಸ್ತೆಗಳು ನಗರಸಭೆಗೆ ಹಸ್ತಾಂತರವಾಗದೇ ಇರುವುದರ ಬಗ್ಗೆ ಪೌರಾಯುಕ್ತೆ ರೇಣುಕಾ ಮೂರು ತಿಂಗಳ ಹಿಂದೆ ಸಂಬಂಧಿಸಿದ ಇಲಾಖೆಗೆ ಪತ್ರ ಬರೆದಿದ್ದೂ ಈ ವರೆಗೂ ಉತ್ತರಗಳು ಬಂದಿಲ್ಲ.

ಹೆಜ್ಜೆ ಹೆಜ್ಜೆಗೂ ಡೆಂಘೀ ಉತ್ಪಾದನಾ ಘಟಕಗಳು:

ಅವೈಜ್ಞಾನಿಕ ರಸ್ತೆ ನಿರ್ಮಾಣದಿಂದಾಗಿ ಪ್ರತಿ ಬೀದಿಯಲ್ಲಿಯೂ ಮಳೆ ನೀರು ರಸ್ತೆ ಬದಿಯಲ್ಲಿ ಸಂಗ್ರಹವಾಗುತ್ತಿದ್ದು ಡೆಂಘೀ ಉತ್ಪಾದನಾ ಘಟಕಗಳಾಗಿ ಗೋಚರಿಸುತ್ತಿವೆ. ನಗರದ ನಿವಾಸಿಗಳಿಗೆ ಡೆಂಘೀ ಬಗ್ಗೆ ಎಚ್ಚರಿಕೆ ನೀಡುವ ಜಿಲ್ಲಾಡಳಿತ ತಾನು ಹೆಜ್ಜೆ ಹೆಜ್ಜೆಗೂ ಸೃಷ್ಟಿಸಿರುವ ಡೆಂಗೆ ಉತ್ಪಾದನಾ ಘಟಕಗಳ ಬಗ್ಗೆ ಮಾತನಾಡುತ್ತಿಲ್ಲ. ಎಲ್ಲಿ ನೋಡಿದರೂ ಗುಂಡಿಗಳಲ್ಲಿ ಮಳೆ ನೀರು ಸಂಗ್ರಹವಾಗಿರುವ ದೃಶ್ಯ ಸಾಮಾನ್ಯವಾಗಿದೆ. ಗಾಂಧಿ ವೃತ್ತದ ಬಳಿ ಇರುವ ಉಪಾದ್ಯ ಹೋಟೆಲ್ ಮುಂಭಾಗ ಯಾವಾಗಲೂ ಮಳೆ ನೀರು ಸಂಗ್ರಹವಾಗಿರುತ್ತದೆ. ಕೊಚ್ಚೆ ನೀರಿನಿಂದ ಪಾರಾಗಿ ಸಂಚರಿಸುವುದೇ ನಾಗರಿಕರಿಗೆ ಸಾಹಸವಾಗಿದೆ.

ಅನಾಹುತದ ಬಗ್ಗೆ ಕನ್ನಡಪ್ರಭ ಮೊದಲೇ ಎಚ್ಚರಿಸಿತ್ತು

ಚಿತ್ರದುರ್ಗ ನಗರದಲ್ಲಿ ನಿರ್ಮಿಸಲಾದ ಅವೈಜ್ಞಾನಿಕ ರಸ್ತೆಗಳು ಭವಿಷ್ಯದಲ್ಲಿ ಸೃಷ್ಟಿಸಬಹುದಾದ ಆತಂಕಗಳ ಬಗ್ಗೆ ಕನ್ನಡಪ್ರಭ ತನ್ನ ಸರಣಿ ವರದಿಯಲ್ಲಿ ಮೊದಲೇ ಎಚ್ಚರಿಸಿತ್ತು. ಏನಿದು ರೋಡೆ ಏನ್ ದರೋಡೆ ಶೀರ್ಷಿಕೆಯ ಸರಣಿ ವರದಿ ಭಾಗ-38ರಲ್ಲಿ(25-9-2022) ರಂದು ಮಳೆ ಬಂದ್ರೆ ಜನ ದೋಣಿ ನೆನಪು ಮಾಡ್ಕಳ್ತಾರೆ ಎಂಬ ತಲೆ ಬರಹದ ವರದಿ ಪ್ರಕಟಿಸಿತ್ತು. ಇದಲ್ಲದೆ ಅನುದಾನ ಅಪವ್ಯಯ ಕುರಿತ ಮತ್ತೊಂದು ಸರಣಿ ವರದಿ ಭಾಗ-3 ರಲ್ಲಿ(16-1-2023) ರಂದು ಚರಂಡಿ ಮಾಡಿ ಕಾಂಕ್ರೀಟ್ ಹಾಕಿ ಮುಚ್ಚೋದು ಯಾವ ಮಾದರಿ ಎಂದು ರಸ್ತೆ ನಿರ್ಮಾಣದ ಪರಿ ಪ್ರಶ್ನಿಸಿತ್ತು. ಯಾವುದಕ್ಕೂ ಎಚ್ಚರಗೊಳ್ಳದ ಜಿಲ್ಲಾಡಳಿತ ಸರ್ಕಾರಿ ಅನುದಾನ ಬಿಡುಗಡೆ ಮಾಡಿ ಮಾನಿಟರಿಂಗ್ ಮಾಡುವ ಉಸಾಬರಿಗೇ ಹೋಗಲಿಲ್ಲ.

Share this article