ಹವಾಮಾನ ಇಲಾಖೆಯಿಂದ ಜಿಲ್ಲೆಗೆ ಹೀಟ್ ವೇವ್ ಎಚ್ಚರಿಕೆ । ಜಿಲ್ಲಾಡಳಿತ ಕ್ರಮ । ಸೂಕ್ತ ಮುನ್ನೆಚ್ಚರಿಕೆ ವಹಿಸಲು ನಿರ್ದೇಶನ
ಚಿತ್ರದುರ್ಗ ಜಿಲ್ಲೆಯಲ್ಲಿ ಅಧಿಕ ಉಷ್ಣಾಂಶ ದಾಖಲಾಗುತ್ತಿದ್ದು ಹವಾಮಾನ ಇಲಾಖೆ ಹಾಗೂ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಜಿಲ್ಲೆಗೆ ಬಿಸಿಗಾಳಿ ಎಚ್ಚರಿಕೆ (ಹೀಟ್ ವೇವ್) ನೀಡಿದೆ. ಹೀಟ್ ವೇವ್ ಸ್ಟ್ರೋಕ್ (ಶಾಖದ ಅಲೆ) ನಿಂದಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಾರ್ವಜನಿಕರ ಹಿತದೃಷ್ಟಿಯಿಂದ ಮನ್ನೆಚ್ಚರಿಕೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.
ಸಾರ್ವಜನಿಕರು ಹೀಟ್ ವೇವ್ ಕುರಿತು ಸದಾ ಎಚ್ಚರಿಕೆಯಿಂದ ಇರಬೇಕು. ರೇಡಿಯೋ,ಟಿವಿ,ದಿನ ಪತ್ರಿಕೆಗಳಲ್ಲಿ ಬರುವ ಮುನ್ಸೂಚನೆಗಳನ್ನು ತಿಳಿದುಕೊಂಡು ಅವುಗಳನ್ನು ಪಾಲಿಸಬೇಕು. ಬಾಯಾರಿಕೆಯಿಲ್ಲದಿದ್ದರೂ ಹೆಚ್ಚಾಗಿ ನೀರನ್ನು ಕುಡಿಯುಬೇಕು. ಹಗುರ, ತಿಳಿ-ಬಣ್ಣದ, ಸಡಿಲವಾದ ಮತ್ತು ರಂಧ್ರವುಳ್ಳ ಹತ್ತಿ ಬಟ್ಟೆಗಳನ್ನು ರಕ್ಷಣಾತ್ಮಕ ಕನ್ನಡಕಗಳು, ಛತ್ರಿ,ಟೋಪಿ, ಬೂಟುಗಳು ಅಥವಾ ಚಪ್ಪಲಿಗಳನ್ನು ಧರಿಸಿಬೇಕು ಎಂದು ಸೂಚಿಸಿದ್ದಾರೆ.ರಾತ್ರಿ ವೇಳೆ ಬಸ್ಸಿನಲ್ಲಿ ದೂರದ ಪ್ರಯಾಣ ಉತ್ತಮ. ಒಂದು ವೇಳೆ ಹಗಲಿನಲ್ಲಿ ಪ್ರಯಾಣ ಮಾಡುವ ಸಂದರ್ಭ ಬಂದರೆ, ನಿಮ್ಮೊಂದಿಗೆ ನೀರನ್ನು ತೆಗೆದುಕೊಂಡು ಹೋಗಿ ಕುಡಿಯಬೇಕು. ಬಿಸಿನಲ್ಲಿ ಹೊರಗೆ ಕೆಲಸ ಮಾಡುವವರು, ಟೋಪಿ ಧರಿಸಬೇಕು. ತಲೆ, ಕುತ್ತಿಗೆ, ಮುಖ ಮತ್ತು ಕೈಕಾಲುಗಳ ಮೇಲೆ ಒದ್ದೆಯಾದ ಬಟ್ಟೆಯನ್ನು ಬಳಸಬೇಕು. ದೇಹವನ್ನು ತಂಪಾಗಿಡಲು ಮನೆಯಲ್ಲಿ ತಯಾರಿಸಿದ ಪಾನೀಯಗಳಾದ ಲಸ್ಸಿ, ಶರಬತ್, ನಿಂಬೆ ನೀರು, ಮಜ್ಜಿಗೆ ಇತ್ಯಾದಿಗಳನ್ನು ಸೇವನೆ ಮಾಡಬೇಕು ಎಂದಿದ್ದಾರೆ.
ಮಕ್ಕಳು ಅಥವಾ ಸಾಕುಪ್ರಾಣಿಗಳನ್ನು ಬಿಸಿಲಿನಲ್ಲಿ ನಿಲ್ಲಿಸಿದ ವಾಹನಗಳ ಹತ್ತಿರ ಬಿಡಬೇಡಿ. ವಾಹನಗಳ ಒಳಗಡೆ ತಾಪಮಾನವು ಹೆಚ್ಚಿ ಮಕ್ಕಳಿಗೆ ಅಪಾಯಕಾರಿಯಾಗಬಹುದು. ಕಪ್ಪುಬಟ್ಟೆ ಅಥವಾ ಬಿಗಿಯಾದ ಬಟ್ಟೆಗಳನ್ನು ಧರಿಸಬಾರದು. ಮಧ್ಯಾಹ್ನ 12 ರಿಂದ 3 ರವರೆಗೆ ಹೊರಗೆ ಕೆಲಸ ಹಾಗೂ ಶ್ರಮದಾಯಕ ಚಟುವಟಿಕೆಗಳನ್ನು ಮಾಡಬಾರದು. ಬಿಸಿಲಿನ ಸಮಯದಲ್ಲಿ ಅಡುಗೆ ಮಾಡಬಾರದು. ಅಡುಗೆ ಮಾಡುವ ಸ್ಥಳದಲ್ಲಿ ಸಮರ್ಪಕವಾಗಿ ಗಾಳಿಯಾಡಲು ಬಾಗಿಲು ಮತ್ತು ಕಿಟಕಿಗಳನ್ನು ತೆರೆದಿಡಬೇಕು ಎಂದು ಸಲಹೆ ನೀಡಿದ್ದಾರೆ.