6 ದಿನದಲ್ಲಿ ನಗರದ 4 ಮಂದಿಗೆ ಕಾಲರಾ ದೃಢ; ಮಾರಕ ಕಾಲರಾ ಬಗ್ಗೆ ಎಚ್ಚರವಿರಲಿ

KannadaprabhaNewsNetwork | Updated : Apr 07 2024, 06:54 AM IST
Follow Us

ಸಾರಾಂಶ

ನಗರದಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ಉಂಟಾಗಿರುವ ಬೆನ್ನಲ್ಲೇ ಕಲುಷಿತ ನೀರು ಮತ್ತು ಸೋಂಕಿತ ಆಹಾರದಿಂದ ಹರಡುವ ಮಾರಕ ಕಾಲರಾ ರೋಗ ಪತ್ತೆ ಆಗಿರುವುದು ತೀವ್ರ ಆತಂಕ ಸೃಷ್ಟಿಸಿದೆ.

 ಬೆಂಗಳೂರು :  ನಗರದಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ಉಂಟಾಗಿರುವ ಬೆನ್ನಲ್ಲೇ ಕಲುಷಿತ ನೀರು ಮತ್ತು ಸೋಂಕಿತ ಆಹಾರದಿಂದ ಹರಡುವ ಮಾರಕ ಕಾಲರಾ ರೋಗ ಪತ್ತೆ ಆಗಿರುವುದು ತೀವ್ರ ಆತಂಕ ಸೃಷ್ಟಿಸಿದೆ.

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜು ವಿದ್ಯಾರ್ಥಿನಿಯರಲ್ಲಿ ಇಬ್ಬರಿಗೆ ಕಾಲರಾ ದೃಢಪಟ್ಟಿದ್ದು, ಮತ್ತೊಬ್ಬರಿಗೆ ಪ್ರಾಥಮಿಕ ಪರೀಕ್ಷೆಯಲ್ಲಿ ದೃಢಪಟ್ಟಿದೆ.

ತನ್ಮೂಲಕ ಬೆಂಗಳೂರಿನಲ್ಲಿ ಕಳೆದ ಎರಡು ತಿಂಗಳಲ್ಲಿ ಒಂಬತ್ತು ಮಂದಿಗೆ ಕಾಲರಾ ದೃಢಪಟ್ಟಂತಾಗಿದೆ, ಈ ಪೈಕಿ ಕಳೆದ ಆರು ದಿನಗಳಲ್ಲಿ ನಾಲ್ಕು ಮಂದಿಗೆ ಕಾಲರಾ ಹರಡಿರುವುದು ಖಚಿತವಾಗಿದೆ. ಹೀಗಾಗಿ ನಾಗರಿಕರು ತೀವ್ರ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದು ವೈದ್ಯರು ತಿಳಿಸಿದ್ದಾರೆ.

ಕಾಲರಾ ಕರುಳಿನ ಸೋಂಕಾಗಿದ್ದು ಇದು ವಿಬ್ರಿಯೊ ಕಾಲರಾ ಎಂಬ ಬ್ಯಾಕ್ಟೀರಿಯಾದಿಂದ ಹರಡುತ್ತದೆ. ಕಲುಷಿತ ನೀರು ಮತ್ತು ಸೋಂಕಿತ ಆಹಾರದಿಂದ ಸಾಂಕ್ರಾಮಿಕವಾಗಿ ಹರಡುತ್ತದೆ. ಸೋಂಕಿನಿಂದ ಬಳುತ್ತಿರುವ ವ್ಯಕ್ತಿಯ ಮಲದಿಂದ ಕಲುಷಿತಗೊಂಡ ಆಹಾರ ಅಥವಾ ನೀರಿನಲ್ಲಿ ಬ್ಯಾಕ್ಟೀರಿಯ ಕಂಡು ಬರುತ್ತದೆ.

ವಿಬ್ರಿಯೊ ಕಾಲರಾ ಬ್ಯಾಕ್ಟೀರಿಯಾ ದೇಹವನ್ನು ಪ್ರವೇಶಿಸಿದ ಕೆಲವೇ ಗಂಟೆಗಳಲ್ಲಿ ಅಥವಾ ನಾಲ್ಕೈದು ದಿನಗಳ ಒಳಗಾಗಿ ಕಾಲರಾ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಬ್ಯಾಕ್ಟೀರಿಯಾವು ಕರುಳಿನಲ್ಲಿ ಒಂದು ವಿಷವನ್ನು ಬಿಡುಗಡೆ ಮಾಡುತ್ತದೆ. ಅದು ಸೋಂಕಿತರಲ್ಲಿ ತೀವ್ರ ಅತಿಸಾರವನ್ನು ಉಂಟು ಮಾಡುತ್ತದೆ.

ಅತಿಯಾದ ವಾಂತಿ, ಭೇದಿ ಕಾಣಿಸಿಕೊಂಡು ವ್ಯಕ್ತಿಯು ನಿತ್ರಾಣಗೊಳ್ಳುತ್ತಾರೆ. ನಿರ್ಜಲೀಕರಣ ಹಾಗೂ ಎಲೆಕ್ಟ್ರೋಲೈಟ್ಸ್‌ ನಷ್ಟದಿಂದ ಗಂಭೀರ ಅನಾರೋಗ್ಯಕ್ಕೆ ತುತ್ತಾಗಿ, ತ್ವರಿತವಾಗಿ ಚಿಕಿತ್ಸೆ ಪಡೆಯದಿದ್ದರೆ ಸಾವು ಸಹ ಸಂಭವಿಸುತ್ತದೆ.ನಿರ್ಲಕ್ಷಿಸಿದರೆ ಜೀವಕ್ಕೇ ಅಪಾಯ:

ಸೋಂಕಿತರಲ್ಲಿ ವಿಪರೀತ ಭೇದಿ ಮತ್ತು ಎಲೆಕ್ಟರೋಲೈಟ್ಸ್‌ ನಷ್ಟದಿಂದ ದೇಹದಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ತೀರಾ ಕಡಿಮೆಯಾಗುತ್ತದೆ.

ಜ್ವರ ಮತ್ತು ಚಳಿ ಉಂಟಾಗಿ ಉಸಿರಾಟದ ಪ್ರಕ್ರಿಯೆ ಬದಲಾಗುತ್ತದೆ. ಮಾನಸಿಕ ಸ್ಥಿತಿ ಅಸಮತೋಲನಗೊಳ್ಳುತ್ತದೆ. ಮೂತ್ರಪಿಂಡಗಳ ಹಾನಿ, ಪ್ರಜ್ಞೆ ತಪ್ಪುವುದು, ಮಾನಸಿಕ ಆಘಾತ, ಕೋಮ ಸ್ಥಿತಿಗೆ ಹೋಗುವುದು ಹಾಗೂ ತಕ್ಷಣ ಸೂಕ್ತ ಚಿಕಿತ್ಸೆ ದೊರೆಯದಿದ್ದರೆ ಸಾವನ್ನಪ್ಪಬಹುದು.ಮುನ್ನೆಚ್ಚರಿಕಾ ಕ್ರಮಗಳು:

*ನೀರನ್ನು ಕಾಯಿಸಿ ಆರಿಸಿ ಕುಡಿಯಬೇಕು.

*ಮನೆಯಲ್ಲಿ ಆರ್‌ಒ ಫಿಲ್ಟರ್‌ ಇದ್ದರೂ ಆ ನೀರನ್ನೂ ಕಾಯಿಸಿ ಆರಿಸಿ ಕುಡಿಯುವುದು ಉತ್ತಮ.

*ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು.

*ಹಣ್ಣು ಹಾಗೂ ಹಸಿ ತರಕಾರಿಯನ್ನು ತೊಳೆದು ಸೇವಿಸಬೇಕು.

*ವಾಂತಿ ಅಥವಾ ಬೇಧಿ ಕಾಣಿಸಿಕೊಂಡ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು.

*ಬೇಧಿ ಕಾಣಿಸಿಕೊಂಡರೆ ನಿರ್ಜಲೀಕರಣ ಆಗದಂತೆ ಹೆಚ್ಚು ನೀರು ಅಥವಾ ಓಆರ್‌ಎಸ್‌ ಸೇವಿಸಬೇಕು.

*ರಸ್ತೆ ಬದಿ ಆಹಾರ, ಪಾನೀಯ, ಐಸ್‌ ಸೇವಿಸಬಾರದು.

*ಮಾನವ ತ್ಯಾಜ್ಯಗಳನ್ನು ಒಳಗೊಂಡಿರುವ ನೀರಿನಿಂದ ಬೆಳೆದ ತರಾಕಾರಿ, ಕಲುಷಿತ ನೀರಿನಲ್ಲಿ ಬೆಳೆದ ಬೇಯಿಸದ ಮೀನು ಸೇವಿಸಬಾರದು.

ರೋಗ ತಡೆಗೆ ಬೀದಿಬದಿಹೋಟೆಲ್‌ ಸ್ಥಗಿತಗೊಳಿಸಿ: ಬೆಂಗಳೂರು ಹೋಟೆಲ್‌ ಸಂಘ ಆಗ್ರಹ

 ಬೆಂಗಳೂರು

ನಗರದಲ್ಲಿ ಕಾಲರಾದಂತ ಸಾಂಕ್ರಾಮಿಕ ರೋಗ ಹರಡುವಿಕೆಗೆ ಬಿಸಿಲಿನ ಜೊತೆಗೆ ಶುಚಿತ್ವ ಕಾಪಾಡದ ಬೀದಿ ಬದಿ ತಿನಿಸು ಮಾರುವ ಅನಧಿಕೃತ ಹೋಟೆಲ್‌ಗಳು ಕೂಡ ಕಾರಣವಾಗಿದ್ದು, ಇವುಗಳನ್ನು ಸ್ಥಗಿತಗೊಳಿಸುವಂತೆ ಬೃಹತ್‌ ಬೆಂಗಳೂರು ಹೋಟೆಲುಗಳ ಸಂಘ ಒತ್ತಾಯಿಸಿದೆ.

ಯಾವುದೇ ಪರವಾನಗಿ ಇಲ್ಲದೆ ನಗರದ ಬೀದಿಗಳಲ್ಲಿ ನಡೆಯುತ್ತಿರುವ ಹೊಟೆಲ್‌ಗಳು ಗ್ರಾಹಕರ ಆರೋಗ್ಯ ಕಾಪಾಡಲು ಯಾವುದೇ ಕ್ರಮ ವಹಿಸುತ್ತಿಲ್ಲ. ಇದರಿಂದ ಕಲುಷಿತ ತಿನಿಸುಗಳ ಸೇವನೆ ವ್ಯಾಪಕವಾಗಿದ್ದು, ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ. ಬಿಬಿಎಂಪಿ ಈ ಬಗ್ಗೆ ಕ್ರಮವಹಿಸಿ ಬೀದಿ ಹೋಟೆಲ್‌ಗಳನ್ನು ಸ್ಥಗಿತಗೊಳಿಸಬೇಕು. ಆದರೆ, ವ್ಯಾಪಾರಿಗಳ ಜೀವನೋಪಾಯಕ್ಕಾಗಿ ಸುಸಜ್ಜಿತ ಫುಡ್‌ ಕೋರ್ಟ್‌ ನಿರ್ಮಿಸಿಕೊಟ್ಟು ನೀರು, ವಿದ್ಯುತ್‌ ಒದಗಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.