ರೈತರ ಅಭಿವೃದ್ಧಿಗೆ ಶ್ರಮಿಸುವವರನ್ನು ಆಯ್ಕೆ ಮಾಡಿ

KannadaprabhaNewsNetwork | Published : Jun 30, 2025 1:47 AM

ರಾಜ್ಯದಲ್ಲಿ ಅತಿ ದೊಡ್ಡ ಜಿಲ್ಲಾ ಸಹಕಾರಿ ಬ್ಯಾಂಕ್‌ ಅನ್ನು ರಾಜ್ಯಕ್ಕೆ ಮಾದರಿ ಬ್ಯಾಂಕ್‌ ಮಾಡಲು ನಿರ್ಧರಿಸಲಾಗಿದೆ. ಪಕ್ಷಾತೀತವಾಗಿ ಅಭ್ಯರ್ಥಿಗಳ ಆಯ್ಕೆಗಾಗಿ ಪ್ರತಿ ತಾಲೂಕಿನಲ್ಲಿ ಎಲ್ಲ ಸಹಕಾರಿಗಳ ಸಭೆ ನಡೆಸಲಾಗುತ್ತದೆ.

ಕನ್ನಡಪ್ರಭ ವಾರ್ತೆ ರಾಮದುರ್ಗ

ಬೆಳಗಾವಿ ಜಿಲ್ಲೆಯ ರೈತರ ಅಭಿವೃದ್ಧಿಗಾಗಿ ಡಿಸಿಸಿ ಬ್ಯಾಂಕ್‌ ಇಂದು ರಾಷ್ಟ್ರೀಕೃತ ಬ್ಯಾಂಕಗಳೊಂದಿಗೆ ಪೈಪೋಟಿ ನಡೆಸಬೇಕಾಗಿದೆ. ರೈತರ ಕಲ್ಯಾಣಕ್ಕಾಗಿ ಶ್ರಮಿಸುವ ಸಹಕಾರಿಗಳ ಆಯ್ಕೆಗಾಗಿ ಪ್ರತಿ ತಾಲೂಕಿನಲ್ಲಿ ಸೌಹಾರ್ದ ಸಭೆ ನಡೆಸುತ್ತಿದ್ದೇವೆ ಎಂದು ಬೆಮುಲ್‌ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ನಗರದ ಮರಾಠಾ ಕಲ್ಯಾಣ ಮಂಟಪದಲ್ಲಿ ಅಕ್ಟೋಬರ್‌ ತಿಂಗಳಲ್ಲಿ ನಡೆಯಲಿರುವ ಬಿಡಿಸಿಸಿ ಬ್ಯಾಂಕ್‌ ಚುನಾವಣೆ ಹಿನ್ನೆಲೆಯಲ್ಲಿ ನಡೆದ ರಾಮದುರ್ಗ ತಾಲೂಕಿನ ಕೃಷಿ ಪತ್ತಿ ಸಹಕಾರಿ ಸಂಘಗಳ ಅಧ್ಯಕ್ಷರ ಮತ್ತು ಸದಸ್ಯರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಅತಿ ದೊಡ್ಡ ಜಿಲ್ಲಾ ಸಹಕಾರಿ ಬ್ಯಾಂಕ್‌ ಅನ್ನು ರಾಜ್ಯಕ್ಕೆ ಮಾದರಿ ಬ್ಯಾಂಕ್‌ ಮಾಡಲು ನಿರ್ಧರಿಸಲಾಗಿದೆ. ಪಕ್ಷಾತೀತವಾಗಿ ಅಭ್ಯರ್ಥಿಗಳ ಆಯ್ಕೆಗಾಗಿ ಪ್ರತಿ ತಾಲೂಕಿನಲ್ಲಿ ಎಲ್ಲ ಸಹಕಾರಿಗಳ ಸಭೆ ನಡೆಸಲಾಗುತ್ತದೆ. ಕೆಲವು ದಿನಗಳಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಅಭ್ಯರ್ಥಿ ಘೋಷಣೆ ಮಾಡಲಾಗುವುದು. ಬಹುಮತದಿಂದ ಆಯ್ಕೆ ಮಾಡಲು ಸಹಕಾರ ನೀಡಬೇಕು. ರೈತರ ಅಭಿವೃದ್ಧಿಗೆ ಶ್ರಮಿಸುವ ಸಹಕಾರಿಗಳನ್ನು ಡಿಸಿಸಿ ಬ್ಯಾಂಕ್‌ ನಿರ್ದೇಶಕರನ್ನಾಗಿ ಮಾಡಬೇಕು ಎಂದು ಹೇಳಿದರು.

ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಮಾತನಾಡಿ, ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್‌ ರೈತರ ಕಲ್ಯಾಣಕ್ಕಾಗಿ ಸುಮಾರು ₹34 ಸಾವಿರ ಕೋಟಿ ವ್ಯವಹಾರ ನಡೆಸುತ್ತಿದೆ. ಬ್ಯಾಂಕಿನ ಸರ್ವಾಂಗೀಣ ಅಭಿವೃದ್ಧಿಗೆ ಬಾಲಚಂದ್ರ ಜಾರಕಿಹೋಳಿ ಅವರ ನೇತೃತ್ವದಲ್ಲಿ ನಡೆಯುವ ಚುನಾವಣೆಗೆ ಘೋಷಣೆ ಮಾಡುವ ಅಭ್ಯರ್ಥಿ ಗೆಲುವಿಗೆ ಶ್ರಮಿಸುವುದಾಗಿ ಹೇಳಿದರು.

ಶ್ರೀ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ ಮಾತನಾಡಿ, ಮೊದಲಿನಿಂದಲೂ ಸಹೋದರ ಮಹಾದೇವಪ್ಪ ಯಾದವಾಡ ಅವರ ನೇತೃತ್ವದಲ್ಲಿ ತಾಲೂಕಿನ ಸಹಕಾರ ರಂಗಕ್ಕೆ ಕೊಡುಗೆ ನೀಡುತ್ತಿದ್ದು, ಮುಂದೆ ಕೂಡಾ ಹಾಲು ಒಕ್ಕೂಟದ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿಯವರ ಮಾರ್ಗದರ್ಶನದಲ್ಲಿ ಡಿಸಿಸಿ ಬ್ಯಾಂಕ್‌ ಚುನಾವಣೆ ಸೇರಿದಂತೆ ಎಲ್ಲ ಚುನಾವಣೆಗಳಲ್ಲಿ ಅವರು ಸೂಚಿಸಿದ ಅಭ್ಯರ್ಥಿ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.

ಸಭೆಯಲ್ಲಿ ಡಿಸಿಸಿ ಬ್ಯಾಂಕ್‌ ನಿರ್ದೇಶಕರಾದ ಎಸ್.ಎಸ್.ಢವಣ, ಅರವಿಂದ ಪಾಟೀಲ ಮಾತನಾಡಿದರು. ಸಭೆಯಲ್ಲಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಅಪ್ಪಾಸಾಹೇಬ ಕುಲಗುಡೆ, ಮಹಾಂತೇಶ ದೊಡಗೌಡ್ರ, ರಾಜು ಅಂಕಲಗಿ, ಬಿ.ಎಸ್.ಬೆಳವಣಕಿ, ಡಾ.ಕೆ.ವಿ.ಪಾಟೀಲ, ಪಿ.ಎಂ. ಜಗತಾಪ ಸೇರಿದಂತೆ ಹಲವರಿದ್ದರು.

ಜಿಲ್ಲೆಯ ಕೆಲವು ಶಾಸಕರು ಮಂತ್ರಿ ಸ್ಥಾನವು ಇರಲಿ, ಡಿಸಿಸಿ ಬ್ಯಾಂಕ್‌ ಡೈರಕ್ಟ್‌ರನು ಇರಲಿ ಎಂದು ವಿವಿಧ ಆಮಿಷವೊಡ್ಡಿ ಮತ ಕೆಳಲು ಬರುವ ಸಾಧ್ಯತೆ ಇದೆ. ಸಹಕಾರಿ ಕ್ಷೇತ್ರದ ಜ್ಞಾನವುಳ್ಳ, ಸಹಕಾರಿ ರಂಗದ ಅನುಭವ ಇದ್ದವರನ್ನು ಆಯ್ಕೆ ಮಾಡುವ ಮುಖಾಂತರ ಸಹಕಾರ ಕ್ಷೇತ್ರ ಬಲಪಡಿಸಿ. ಬಾಲಚಂದ್ರ ಜಾರಕಿಹೊಳಿ, ಶಾಸಕ