ಪಾಲಿಕೆ ಆಸ್ತಿಕರ ಹೆಚ್ಚಳಕ್ಕೆ ಬೆಚ್ಚಿದ ನಾಗರೀಕರು!

KannadaprabhaNewsNetwork |  
Published : Apr 17, 2025, 12:03 AM IST
ಮದಮದಮದಮ | Kannada Prabha

ಸಾರಾಂಶ

ಮಹಾನಗರ ಪಾಲಿಕೆ ಏಕಾಏಕಿ ಆಸ್ತಿಕರ ವಿಪರೀತ ಎನ್ನುವ ಮಟ್ಟಿಗೆ ಹೆಚ್ಚಳ ಮಾಡಿರುವುದು. ಸರ್ಕಾರದ ನಿಯಮದಂತೆ ಆಸ್ತಿಕರ ಹೆಚ್ಚಳವಾಗಿದೆ. ಇದರಲ್ಲಿ ಏನು ಮಾಡಲು ಆಗದು ಎಂದು ಪಾಲಿಕೆ ಹೇಳಿದರೆ, ಆಡಳಿತ ಮಂಡಳಿ ಸದಸ್ಯರೇ ಹೆಚ್ಚಿರುವ ಆಸ್ತಿಕರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಶಿವಾನಂದ ಗೊಂಬಿ ಹುಬ್ಬಳ್ಳಿ

ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಸ್ವಂತ ಮನೆಯಲ್ಲಿ ವಾಸಿಸುವವರು ಇದೀಗ ಬಾಡಿಗೆ ಮನೆಯಲ್ಲಿ ಇದ್ದಂತಾಗಿದೆ. ಅಷ್ಟೊಂದು ತೆರಿಗೆ ವಿಧಿಸಲಾಗುತ್ತಿದೆ.. ಏನ್ಮಾಡೋದು..!

ಇದು ಹು-ಧಾ ಮಹಾನಗರ ಪಾಲಿಕೆಯು ಪ್ರಸಕ್ತ ಸಾಲಿನಲ್ಲಿ ಆಕರಿಸುತ್ತಿರುವ ಆಸ್ತಿ ಕರದ ಕುರಿತಂತೆ ಸಾರ್ವಜನಿಕರು ನೊಂದು ನುಡಿಯುತ್ತಿರುವ ಮಾತು.

ಇದಕ್ಕೆ ಕಾರಣ, ಮಹಾನಗರ ಪಾಲಿಕೆ ಏಕಾಏಕಿ ಆಸ್ತಿಕರ ವಿಪರೀತ ಎನ್ನುವ ಮಟ್ಟಿಗೆ ಹೆಚ್ಚಳ ಮಾಡಿರುವುದು. ಸರ್ಕಾರದ ನಿಯಮದಂತೆ ಆಸ್ತಿಕರ ಹೆಚ್ಚಳವಾಗಿದೆ. ಇದರಲ್ಲಿ ಏನು ಮಾಡಲು ಆಗದು ಎಂದು ಪಾಲಿಕೆ ಹೇಳಿದರೆ, ಆಡಳಿತ ಮಂಡಳಿ ಸದಸ್ಯರೇ ಹೆಚ್ಚಿರುವ ಆಸ್ತಿಕರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯೂ ಇದರ ವಿರುದ್ಧ ಸಭೆ ನಡೆಸಲು ನಿರ್ಧರಿಸಿದೆ. ಸಾರ್ವಜನಿಕರು ಪಾಲಿಕೆ ವಿರುದ್ಧ ಹೋರಾಟಕ್ಕೆ ಇಳಿದರೂ ಅಚ್ಚರಿಯಿಲ್ಲ ಎಂಬಂತಹ ಪರಿಸ್ಥಿತಿ ಇದೆ.

ಎಷ್ಟು ಏರಿಕೆ: ಆಸ್ತಿಗಳಿಗೆ ಪರಿಷ್ಕೃತ ಎಸ್‌ಆರ್‌ (ಮಾರುಕಟ್ಟೆ) ದರವನ್ನು ಮೌಲ್ಯಮಾಪನ ಮಾಡಿ ಅದಕ್ಕೆ ತಕ್ಕಂತೆ ಆಸ್ತಿ ಕರ ವಿಧಿಸುವುದು. ಈ ಕೆಲಸ 2019ರಿಂದ ಆಗಬೇಕಿತ್ತು. ಅದೀಗ ಆಗಿದೆ. ಕೆಲವೊಂದಿಷ್ಟು ಪ್ರದೇಶಗಳಲ್ಲಿ ಮಾರುಕಟ್ಟೆ ಬೆಲೆ ದುಪ್ಪಟ್ಟು, ಮೂರು ಪಟ್ಟು ಆಗಿದೆ. ಅದಕ್ಕೆ ತಕ್ಕಂತೆ ಆಯಾ ಆಸ್ತಿಗಳ ತೆರಿಗೆ ಹೆಚ್ಚಿದೆ. ಜತೆಗೆ ಪ್ರತಿವರ್ಷ ಪಾಲಿಕೆಯೂ ಶೇ. 3ರಷ್ಟು ಆಸ್ತಿ ಕರ ಹೆಚ್ಚಳ ಮಾಡಬಹುದಾಗಿದೆ.

ಇದನ್ನು ಸ್ಥಳೀಯ ಅವಕಾಶ, ಅಭಿವೃದ್ಧಿಯನ್ನು ಗಣನೆಗೆ ತೆಗೆದುಕೊಂಡು ಶೇ. 5ರಷ್ಟು ಹೆಚ್ಚಳ ಮಾಡುವ ಅವಕಾಶವಿದೆ. ಕಳೆದ ಮೂರು ವರ್ಷಗಳಿಂದ 2022, 2023, 2024 ಈ ಮೂರು ವರ್ಷ ಹೆಚ್ಚಳ ಮಾಡಿರಲಿಲ್ಲ. ಆಗ ಏಕೆ ಮಾಡಿರಲಿಲ್ಲ ಎಂಬ ಪ್ರಶ್ನೆಗೆ ವಿಧಾನಸಭೆ, ಲೋಕಸಭೆ ಚುನಾವಣೆ ಇತ್ತು. ಆಗ ಹೆಚ್ಚಳ ಮಾಡಿದರೆ ಸಾರ್ವಜನಿಕರ ಮೇಲೆ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ಮಾಡಿರಲಿಲ್ಲವಂತೆ. ಇದೀಗ ಅದನ್ನೂ ಸೇರಿಸಿ ಜತೆಗೆ ಈ ವರ್ಷದ ಶೇ. 3ರನ್ನು ಸೇರಿಸಿ ಹೆಚ್ಚಳ ಮಾಡಲಾಗಿದೆ. ಇದರಿಂದ ಶೇ. 18ರಷ್ಟು ತೆರಿಗೆ ಹೆಚ್ಚಳವಾದಂತಾಗಿದೆ. ಜತೆಗೆ ಮಾರುಕಟ್ಟೆ ಬೆಲೆಗೆ ತಕ್ಕಂತೆ ತೆರಿಗೆ ಹಾಕುವುದರಿಂದ ಆಯಾ ಆಸ್ತಿಗಳ ತೆರಿಗೆ ಹೆಚ್ಚಳವಾಗಿದೆ.

ಕೆಲವೊಂದಿಷ್ಟು ಆಸ್ತಿಗಳ ತೆರಿಗೆ ದುಪ್ಪಟ್ಟು ಕೂಡ ಆಗಿದೆ. ಜತೆಗೆ ಇದಕ್ಕೆ ಘನತ್ಯಾಜ್ಯ ನಿರ್ವಹಣಾ ಶುಲ್ಕ, ಯುಜಿಡಿ ನಿರ್ವಹಣಾ ಶುಲ್ಕ ಎಂದು ಆಕರಿಸಲಾಗುತ್ತಿದೆ. ಹೀಗಾಗಿ ತೆರಿಗೆಯೆಲ್ಲ ವಿಪರೀತವಾಗಿದೆ ಎಂದು ಪಾಲಿಕೆಯ ಮೂಲಗಳೇ ಒಪ್ಪಿಕೊಳ್ಳುತ್ತವೆ. ಇದೆಲ್ಲವೂ ಇದೀಗ ಜನಾಕ್ರೋಶಕ್ಕೆ ಕಾರಣವಾಗುತ್ತಿದೆ ಎಂದು ಪಾಲಿಕೆ ಮೂಲಗಳು ತಿಳಿಸುತ್ತವೆ.

ಆಡಳಿತ ಮಂಡಳಿ ಅಸಹಾಯಕತೆ: ಕೆಎಂಸಿ ಕಾಯ್ದೆ ತಿದ್ದುಪಡಿ ಮಾಡಿ ಆಸ್ತಿಯ ಅಂದಿನ ಮಾರುಕಟ್ಟೆ ದರದಂತೆ ತೆರಿಗೆ ನಿಗದಿಪಡಿಸಬೇಕು ಎಂಬ ನಿಯಮವನ್ನು ಜಾರಿಗೊಳಿಸಿರುವುದು ರಾಜ್ಯ ಸರ್ಕಾರ. ಹೀಗಾಗಿ ಈ ವಿಷಯದಲ್ಲಿ ಪಾಲಿಕೆಗೆ ಏನೂ ಮಾಡಲು ಆಗುತ್ತಿಲ್ಲ. ಸಾರ್ವಜನಿಕರಿಗೆ ಹೊರೆಯಾಗುತ್ತಿದೆ ಎಂದೆನಿಸಿದರೂ ಆಡಳಿತ ಮಂಡಳಿ ಅಸಹಾಯಕತೆಯಿಂದ ಕೈಕಟ್ಟಿ ಕುಳಿತುಕೊಳ್ಳುವಂತಾಗಿದೆ ಎಂಬುದು ಪಾಲಿಕೆ ಹಿರಿಯ ಸದಸ್ಯರ ಅಂಬೋಣ. ಆದರೂ ಇದಕ್ಕೆ ಸಂಬಂಧಪಟ್ಟಂತೆ ಪಾಲಿಕೆಯಿಂದ ಏನು ಮಾಡಲು ಸಾಧ್ಯ ಎಂಬುದರ ಚರ್ಚಿಸಲು ಹಿರಿಯ ಸದಸ್ಯರ ಸಭೆ ನಡೆಸಲು ಮೇಯರ್‌ ಮುಂದಾಗಿದ್ದಾರೆ ಎಂಬುದು ಮಾತ್ರ ಸ್ಪಷ್ಟ.

ಏನೇ ಆಗಲಿ ಪಾಲಿಕೆಯು ಆಸ್ತಿ ತೆರಿಗೆಯನ್ನು ಹೆಚ್ಚಳ ಮಾಡಿರುವುದಕ್ಕೆ ತೀವ್ರ ಆಕ್ರೋಶವಂತೂ ವ್ಯಕ್ತವಾಗುತ್ತಿರುವುದು ಸತ್ಯ.

ಆಸ್ತಿಗಳ ಮಾರುಕಟ್ಟೆ ದರದಂತೆ ತೆರಿಗೆ ಹೆಚ್ಚಳ ಮಾಡಿರುವುದರಿಂದ ಜನರಿಗೆ ಹೊರೆಯಾಗಿರುವುದಂತೂ ಸತ್ಯ. ಶೇ. 18, 21ರಷ್ಟು ಹೆಚ್ಚಾಗುತ್ತಿದೆ. ಈ ಸಂಬಂಧ ಪಾಲಿಕೆ ಏನು ಮಾಡಲು ಸಾಧ್ಯ ಎಂಬುದರ ಕುರಿತಂತೆ ಹಿರಿಯ ಸದಸ್ಯರೊಂದಿಗೆ ಸಭೆ ನಡೆಸಲಾಗುವುದು ಎಂದು ಪಾಲಿಕೆ ಮೇಯರ್‌ ರಾಮಪ್ಪ ಬಡಿಗೇರ ಹೇಳಿದರು.

ಆಸ್ತಿ ತೆರಿಗೆಯನ್ನು ಪರಿಷ್ಕೃತ ಮೌಲ್ಯಮಾಪನದ ಮಾಡಿರುವುದರಿಂದ ಸಾರ್ವಜನಿಕರಿಗೆ ಹೊರೆಯಾಗಿದೆ. ಸ್ವಂತ ಮನೆಯಿದ್ದವರಿಗೆ ಈ ತೆರಿಗೆಯಿಂದ ಬಾಡಿಗೆ ಮನೆಯಲ್ಲಿ ಇದ್ದಂತಾಗುತ್ತಿದೆ. ಹಿಂದೆ ಎಷ್ಟೋ ವರ್ಷದ ಹಿಂದೆ ಖರೀದಿಸಿದ್ದ, ಕಟ್ಟಿಸಿದ್ದ ಮನೆಗೂ ಈಗಿನ ಮಾರುಕಟ್ಟೆ ಮೌಲ್ಯದಂತೆ ತೆರಿಗೆ ವಿಧಿಸಿದರೆ ಹೇಗೆ? ಇದನ್ನು ಸರ್ಕಾರದ ಮಟ್ಟದಲ್ಲಿ ಸರಿಪಡಿಸುವ ಕೆಲಸ ಆಗಬೇಕು ಎಂದು ಪಾಲಿಕೆ ಮಾಜಿ ಮೇಯರ್ ಈರೇಶ ಅಂಚಟಗೇರಿ ಮನವಿ ಮಾಡಿದರು.

ಆಸ್ತಿ ತೆರಿಗೆಯನ್ನು ವಿಪರೀತ ಹೆಚ್ಚಳ ಮಾಡಲಾಗಿದೆ. ತೆರಿಗೆ ಹೆಚ್ಚಳ ಮಾಡಿರುವುದರ ಜತೆಗೆ ಘನತ್ಯಾಜ್ಯ ನಿರ್ವಹಣೆ, ಯುಜಿಡಿ ಶುಲ್ಕ ಎಂದು ಕೂಡ ವಸೂಲಿ ಮಾಡಲಾಗುತ್ತಿದೆ. ಸಚಿವರು, ಶಾಸಕರು ಸೇರಿದಂತೆ ಜನಪ್ರತಿನಿಧಿಗಳು ಈ ಬಗ್ಗೆ ಗಮನವನ್ನೇ ಹರಿಸುತ್ತಿಲ್ಲ. ಸಾರ್ವಜನಿಕರು ರೊಚ್ಚಿಗೇಳುವ ಮುನ್ನವೇ ಎಚ್ಚೆತ್ತು ತೆರಿಗೆ ಹೆಚ್ಚಳವನ್ನು ಕಡಿತಗೊಳಿಸಬೇಕು ಎಂದು ಸಾರ್ವಜನಿಕ ಜಗದೀಶ ಹೊಂಬಳ ಒತ್ತಾಯಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ