ನಗರಸಭೆ ಬಜೆಟ್ ಸಭೆ ಪದೇ ಪದೇ ಮುಂದೂಡಿಕೆ

KannadaprabhaNewsNetwork | Published : Mar 7, 2024 1:47 AM

ಸಾರಾಂಶ

ರಾಣಿಬೆನ್ನೂರು ನಗರಸಭೆ ಬಜೆಟ್ ಸಭೆ ಪದೇ ಪದೇ ಮುಂದೂಡಿಕೆಯಾಗುತ್ತಿದೆ. ಒಂದು ರೀತಿಯಲ್ಲಿ ತೋಳ ಬಂತು ತೋಳ ಎನ್ನುವಂತಾಗಿದ್ದು, ಜನರಲ್ಲಿ ಬೇಸರ ಮೂಡಿಸಿದೆ.

ಬಜೆಟ್ ಮಂಡನೆ ವಿಳಂಬದಿಂದ ನಗರದ ಅಭಿವೃದ್ಧಿಗೆ ಹಿನ್ನಡೆ । ಲೋಕಸಭಾ ಚುನಾವಣೆ ನೀತಿ-ಸಂಹಿತೆ ಭೀತಿ

ಬಸವರಾಜ ಸರೂರ

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

ಜಿಲ್ಲೆಯಲ್ಲಿಯೇ ಪ್ರಮುಖ ನಗರವಾಗಿರುವ ರಾಣಿಬೆನ್ನೂರು ನಗರಸಭೆ ಬಜೆಟ್ ಸಭೆ ಪದೇ ಪದೇ ಮುಂದೂಡಿಕೆಯಾಗುತ್ತಿದೆ. ಒಂದು ರೀತಿಯಲ್ಲಿ ತೋಳ ಬಂತು ತೋಳ ಎನ್ನುವಂತಾಗಿದ್ದು, ಜನರಲ್ಲಿ ಬೇಸರ ಮೂಡಿಸಿದೆ.

ಮೊದಲಿಗೆ ಮಾ. 4ರಂದು ಬಜೆಟ್ ಸಭೆ ನಿಗದಿ ಮಾಡಿ ಎಲ್ಲ ಸದಸ್ಯರುಗಳಿಗೂ ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ನಗರಸಭೆ ವತಿಯಿಂದ ಮಾಹಿತಿ ಕಳುಹಿಸಲಾಗಿತ್ತು. ಆದರೆ ಮಾ. 3ರಂದು ದಿಢೀರನೇ ಅದನ್ನು ಮಾ. 7ಕ್ಕೆ ಮುಂದೂಡಲಾಗಿದೆ ಎಂದು ತಿಳಿಸಲಾಯಿತು. ನಂತರ ಮಾ. 6ರಂದು ಪುನಃ ಬಜೆಟ್ ಸಭೆಯನ್ನು 11ಕ್ಕೆ ಮುಂದೂಡಲಾಗಿದೆ ಎಂದು ತಿಳಿಸಲಾಗಿದೆ.

ಕಾರಣವೇನು?:

ಪ್ರತಿ ವರ್ಷ ಫೆಬ್ರವರಿ ತಿಂಗಳ ಎರಡನೇ ವಾರ ಅಥವಾ ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಸ್ಥಳೀಯ ನಗರಸಭೆ ಬಜೆಟ್ ಮಂಡನೆ ಮಾಡಲಾಗುತ್ತಿತ್ತು. ಕಳೆದ ವರ್ಷ (2023) ಮೇ ತಿಂಗಳಿನಲ್ಲಿ ನಗರಸಭೆ ಅಧ್ಯಕ್ಷರ ಅವಧಿ ಮುಕ್ತಾಯವಾಗಿದ್ದು, ಹೊಸ ಮೀಸಲಾತಿಯಂತೆ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ನಡೆಯಬೇಕಾಗಿದೆ. ಆದರೆ ಸ್ಥಳೀಯ ನಗರಸಭೆ ಸೇರಿದಂತೆ ರಾಜ್ಯದ ಹಲವಾರು ನಗರಸಭೆಗಳಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ವಿಚಾರ ನ್ಯಾಯಾಲಯದ ಮೆಟ್ಟಿಲೇರಿರುವ ಕಾರಣ ಇಂದಿನವರೆಗೂ ಆಡಳಿತಾಧಿಕಾರಿಗಳ (ಜಿಲ್ಲಾಧಿಕಾರಿ) ಅಧ್ಯಕ್ಷತೆಯಲ್ಲಿಯೇ ನಗರಸಭೆಯ ಆಡಳಿತ ನಡೆಯುತ್ತಿದೆ. ಹೀಗಾಗಿ ಬಜೆಟ್ ಮಂಡನೆ ಕೂಡ ಅವರೇ ಮಾಡಬೇಕಾಗಿದೆ. ಆದರೆ ಜಿಲ್ಲಾಧಿಕಾರಿಗಳು ಬಜೆಟ್ ಮಂಡನೆ ಮಾಡಲು ಸರಿಯಾದ ಸಮಯ ನೀಡದ ಕಾರಣ ಬಜೆಟ್ ಸಭೆ ಮುಂದೂಡಲಾಗುತ್ತಿದೆ ಎನ್ನುವುದು ಅಧಿಕಾರಿಗಳ ಸಮಜಾಯಿಷಿಯಾಗಿದೆ.

ನೀತಿ-ಸಂಹಿತೆ ಭೀತಿ:

ನಗರದ ಅಭಿವೃದ್ಧಿ ಸಲುವಾಗಿ ಹಲವಾರು ಯೋಜನೆಗಳನ್ನು ಬಜೆಟ್‌ನಲ್ಲಿ ರೂಪಿಸಿ ಜಾರಿಗೊಳಿಸಲಾಗುತ್ತದೆ. ಆದರೆ ಬಜೆಟ್ ಮಂಡನೆ ವಿಳಂಬವಾಗುತ್ತಿರುವುದು ಅಭಿವೃದ್ಧಿಗೆ ಹಿನ್ನಡೆಯಾದಂತಾಗುತ್ತಿದೆ. ಒಂದು ವೇಳೆ ಮಾ.11ರಂದು ಕೂಡ ಬಜೆಟ್ ಮಂಡನೆಯಾಗದಿದ್ದರೆ ನಂತರ ಒಂದೆರಡು ದಿನಗಳಲ್ಲಿ ಲೋಕಸಭಾ ಚುನಾವಣಾ ಘೋಷಣೆಯಾಗುವ ಸಾಧ್ಯತೆಗಳಿವೆ. ಹಾಗಾದಲ್ಲಿ ನೀತಿ-ಸಂಹಿತೆ ಜಾರಿಯಾಗಿ ಬಜೆಟ್ ಮಂಡನೆಗೆ ಅವಕಾಶವಿಲ್ಲದಂತಾಗುತ್ತದೆ.

ಕೆಲವೊಂದು ಅನಿವಾರ್ಯ ಕಾರಣಗಳಿಂದ ಬಜೆಟ್ ಸಭೆ ಮುಂದೂಡಲಾಗಿದೆ. ಜಿಲ್ಲಾಧಿಕಾರಿ ಸಮಯ ನೀಡಿದ್ದು, ಮಾ.11ರಂದು ಬಜೆಟ್ ಮಂಡನೆಗೆ ದಿನಾಂಕ ನಿಗದಿ ಮಾಡಲಾಗಿದೆ ಎಂದು ನಗರಸಭೆ ಪೌರಾಯುಕ್ತ ಎಚ್.ಮಹಾಂತೇಶ ತಿಳಿಸಿದ್ದಾರೆ.ಪದೇ ಪದೇ ಬಜೆಟ್ ಸಭೆ ಮುಂದೂಡಿಕೆಯಾಗುತ್ತಿರುವುದು ನಗರದ ಜನತೆಗೆ ಮಾಡಿದ ಅವಮಾನವಾಗಿದೆ. ನಗರಸಭೆ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿಗಳಿಗೆ ಬಿಡುವಿಲ್ಲದ ಕೆಲಸಗಳಿದ್ದರೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರ ಮೂಲಕ ಬಜೆಟ್ ಮಂಡಿಸಬೇಕು ಎಂದು ನಗರಸಭೆ ಸದಸ್ಯ ಮಲ್ಲಿಕಾರ್ಜುನ ಅಂಗಡಿ ಒತ್ತಾಯಿಸಿದ್ದಾರೆ.

Share this article