ಜಿಲ್ಲಾ ಕೇಂದ್ರ ರಾಮನಗರದಲ್ಲಿ ನಗರ ಸಾರಿಗೆ ಬಸ್ ಸಂಚಾರ ಸೇವೆCity transport bus service in district headquarters Ramanagara

KannadaprabhaNewsNetwork |  
Published : Sep 10, 2025, 01:03 AM IST
6.ಎಚ್.ಎ.ಇಕ್ಬಾಲ್ ಹುಸೇನ್, ಶಾಸಕರು, ರಾಮನಗರ ಕ್ಷೇತ್ರ. | Kannada Prabha

ಸಾರಾಂಶ

ಈ ಹಿಂದೆ 2016ರಲ್ಲಿ ಕೇಂದ್ರ ಸರ್ಕಾರದ ನರ್ಮ್ ಸೇರಿದಂತೆ ವಿವಿಧ ಯೋಜನೆಯಡಿ ನಗರ ಭೂಸಾರಿಗೆ ನಿರ್ದೇಶನಾಲಯವು ಬಸ್ಸುಗಳ ಖರೀದಿಗೆ ಹಣಕಾಸು ನೆರವು ನೀಡಿತ್ತು. ರಾಮನಗರ ಸೇರಿದಂತೆ ಆರು ನಗರಗಳಲ್ಲಿ ನಗರ ಸಾರಿಗೆ ಬಸ್ಸುಗಳನ್ನು ಓಡಿಸಲು ಹೊಸ ಬಸ್ಸುಗಳನ್ನು ಖರೀದಿ ಕೂಡ ಮಾಡಲಾಗಿತ್ತು. ಆ ಬಸ್ಸುಗಳು ಕೆಲ ದಿನಗಳಷ್ಟೇ ಜನರಿಗೆ ಸೇವೆ ನೀಡಿ, ಆನಂತರ ಬೇರೆ ಮಾರ್ಗಗಳಲ್ಲಿ ಸಂಚಾರ ನಡೆಸುತ್ತಿವೆ.

ಎಂ.ಅಫ್ರೋಜ್ ಖಾನ್

ಕನ್ನಡಪ್ರಭ ವಾರ್ತೆ ರಾಮನಗರ

ಜಿಲ್ಲಾ ಕೇಂದ್ರ ರಾಮನಗರದಲ್ಲಿ ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರ ಅನುಕೂಲಕ್ಕಾಗಿ ಶೀಘ್ರದಲ್ಲಿಯೇ ನಗರ ಸಾರಿಗೆ ಬಸ್ ಸಂಚಾರ ಸೇವೆ ಪ್ರಾರಂಭಿಸಲಾಗುತ್ತಿದೆ.

ನಗರದೊಳಗೆ ಸಂಚರಿಸಲೆಂದೇ ಮೂರು ಮಿನಿ ಬಸ್ಸುಗಳನ್ನು ತರಲಾಗಿದ್ದು, ಇವು ನಿಗದಿತ ರೂಟುಗಳಲ್ಲಿ ಬೆಳಗ್ಗೆ 8 ರಿಂದ ರಾತ್ರಿ 7 ಗಂಟೆಯವರೆಗೂ ಸಂಚರಿಸುತ್ತವೆ. ನಗರದ ಬಹುತೇಕ ಪ್ರದೇಶದಲ್ಲಿ ಮಿನಿ ಬಸ್ಸುಗಳು ಸಂಚರಿಸಲು ಸಿದ್ಧತೆಗಳು ನಡೆದಿವೆ.

ನಗರ ಬಸ್ ಸಂಚಾರ ಸೇವೆ ಆರಂಭಿಸಬೇಕು ಎಂಬುದು ನಗರ ನಿವಾಸಿಗಳ ಬಹು ದಿನಗಳ ಬೇಡಿಕೆಯಾಗಿದೆ. ಆದರೆ, ಕೆಲವು ಮಾರ್ಗಗಳಲ್ಲಿ ರಸ್ತೆ ಇಕ್ಕಟ್ಟಾಗಿದೆ. ಜೊತೆಗೆ ವಾಹನ ಹಾಗೂ ಜನ ಸಂಚಾರವೂ ಹೆಚ್ಚು. ಅಂತಹ ಪ್ರದೇಶಗಳಲ್ಲಿ ಬಸ್ ವ್ಯವಸ್ಥೆ ಕಲ್ಪಿಸುವುದು ಕಷ್ಟ.

ಈ ಹಿಂದೆ 2016ರಲ್ಲಿ ಕೇಂದ್ರ ಸರ್ಕಾರದ ನರ್ಮ್ ಸೇರಿದಂತೆ ವಿವಿಧ ಯೋಜನೆಯಡಿ ನಗರ ಭೂಸಾರಿಗೆ ನಿರ್ದೇಶನಾಲಯವು ಬಸ್ಸುಗಳ ಖರೀದಿಗೆ ಹಣಕಾಸು ನೆರವು ನೀಡಿತ್ತು. ರಾಮನಗರ ಸೇರಿದಂತೆ ಆರು ನಗರಗಳಲ್ಲಿ ನಗರ ಸಾರಿಗೆ ಬಸ್ಸುಗಳನ್ನು ಓಡಿಸಲು ಹೊಸ ಬಸ್ಸುಗಳನ್ನು ಖರೀದಿ ಕೂಡ ಮಾಡಲಾಗಿತ್ತು. ಆ ಬಸ್ಸುಗಳು ಕೆಲ ದಿನಗಳಷ್ಟೇ ಜನರಿಗೆ ಸೇವೆ ನೀಡಿ, ಆನಂತರ ಬೇರೆ ಮಾರ್ಗಗಳಲ್ಲಿ ಸಂಚಾರ ನಡೆಸುತ್ತಿವೆ.

ವಿದ್ಯಾರ್ಥಿಗಳು ಹಾಗೂ ಬೇರೆ ತಾಲೂಕುಗಳಿಂದ ಕೆಲಸ ಕಾರ್ಯಗಳ ನಿಮಿತ್ತ ರಾಮನಗರಕ್ಕೆ ಆಗಮಿಸುವ ಜನರಿಗೆ ಸಾರಿಗೆ ವ್ಯವಸ್ಥೆ ಕೊರತೆ ಕಾಡುತ್ತಿತ್ತು. ಇದೀಗ ನಗರ ಸುಮಾರು 4 ಕಿ.ಮೀ ವ್ಯಾಪ್ತಿಯನ್ನು ಹೊಂದಿ ವಿಶಾಲವಾಗಿ ಬೆಳೆದಿದೆ. ನಗರದ ಒಂದು ತುದಿಯಿಂದ ಮತ್ತೊಂದು ತುದಿಗೆ ಹೋಗಿ ಬರಲು ಸರಿಸುಮಾರು 100 ರುಪಾಯಿ ಆಟೋಗೆ ನೀಡಬೇಕಾಗಿತ್ತು.

ಈಗ ನಗರ ಸಾರಿಗೆ ಸೌಲಭ್ಯದಿಂದ ಸಾವಿರಾರು ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿರೀಕ್ಷೆ ಇದೆ. ಗ್ರಾಮಾಂತರ ಪ್ರದೇಶ ಮತ್ತು ಇತರೆ ತಾಲೂಕು ಕೇಂದ್ರಗಳಿಂದ ಶಾಲಾ ಕಾಲೇಜಿಗೆ ಹೋಗಲು ನಿತ್ಯ ಸಾವಿರಾರು ವಿದ್ಯಾರ್ಥಿಗಳು ಆಗಮಿಸುತ್ತಾರೆ. ಇವರು ಬಸ್ ನಿಲ್ದಾಣದಿಂದ ಕಾಲೇಜುಗಳಿಗೆ ಹೋಗಲು ನಗರ ಸಾರಿಗೆ ಬಸ್ ವ್ಯವಸ್ಥೆಯ ಕೊರತೆ ಇತ್ತು. ಲಭ್ಯವಿರುವ ಕೆಎಸ್ಆರ್ ಟಿಸಿ ಬಸ್ ಗಳು ಕಾಲೇಜು ಎದುರು ನಿಲುಗಡೆ ನೀಡುವುದಿಲ್ಲ. ಅಗತ್ಯ ಸಮಯಕ್ಕೆ ಬಸ್ ಗಳ ಲಭ್ಯತೆ ಇರಲಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಅನೇಕ ಬಾರಿ ಪ್ರತಿಭಟನೆ ನಡೆಸಿರುವ ಉದಾಹರಣೆಗಳು ಇವೆ.

ಇದಲ್ಲದೆ ಸರ್ಕಾರಿ ಕಚೇರಿಗಳ ಕೆಲಸ ಕಾರ್ಯದ ನಿಮಿತ್ತ ಪ್ರತಿನಿತ್ಯ ಮಾಗಡಿ, ಚನ್ನಪಟ್ಟಣ, ಕನಕಪುರ, ಹಾರೋಹಳ್ಳಿ ತಾಲೂಕಿನಿಂದ ಜಿಲ್ಲಾ ಕೇಂದ್ರಕ್ಕೆ ಸಾವಿರಾರು ಮಂದಿ ಸಾರ್ವಜನಿಕರು ಆಗಮಿಸುತ್ತಾರೆ. ಅಲ್ಲದೆ, ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುತ್ತಾರೆ. ಇವರೆಲ್ಲರೂ ಸಾರಿಗೆ ಬಸ್ ಗಳ ಕೊರತೆಯ ಕಾರಣ ಆಟೋಗಳನ್ನು ಆಶ್ರಯಿಸುವುದು ಅನಿವಾರ್ಯವಾಗಿತ್ತು.

ಸಾರಿಗೆ ಬಸ್ ನಿಲ್ದಾಣದಿಂದ ಜಿಲ್ಲಾಸ್ಪತ್ರೆ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಗೆ ಆಟೋಗಳಲ್ಲಿ ತೆರಳಲು ಪ್ರಯಾಣಿಕರಿಗೆ ಕನಿಷ್ಠ 70 ರಿಂದ 100 ರುಪಾಯಿ ಖರ್ಚಾಗುತ್ತಿತ್ತು. ಇದೀಗ ನಗರ ಸಾರಿಗೆ ಸೌಲಭ್ಯದಿಂದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವ ನಿರೀಕ್ಷೆ ಇದೆ.

ನಗರ ಬಸ್ ಗಳ ಸಂಚಾರ ಮಾರ್ಗ ?

ನಗರ ಸಾರಿಗೆ ಬಸ್ ಸಂಚರಿಸುವ ಮಾರ್ಗದ ಸಿದ್ಧತೆ ಅಂತಿಮ ಹಂತದಲ್ಲಿದೆ. ಮೂರು ಬಸ್ ಗಳು 8 ಟ್ರಿಪ್ ಗಳಲ್ಲಿ ಸಂಚರಿಸಲು ಮಾರ್ಗ ಸಿದ್ಧ ಪಡಿಸಲಾಗಿದೆ. ಕೆಂಗಲ್ ನಿಂದ ಮೈಸೂರು - ಬೆಂಗಳೂರು ಹೆದ್ದಾರಿ ಮಾರ್ಗವಾಗಿ ರಾಮನಗರ ಕಾನೂನು ಕಾಲೇಜುವರೆಗೆ ಒಂದು ಮಾರ್ಗ.

ಕೊತ್ತೀಪುರ, ಯಾರಬ್ ನಗರ, ನೈಸ್ ರಸ್ತೆ, ರೈಲ್ವೆ ಕೆಳ ಸೇತುವೆ, ಎಂ.ಜಿ ರಸ್ತೆ, ಮಾಗಡಿ ಜಾಲಮಂಗಲ ರಸ್ತೆ, ಮಾಗಡಿ ಲಕ್ಷ್ಮೀಪುರ ರಸ್ತೆ, ಕೆಂಪೇಗೌಡ ಸರ್ಕಲ್, ರಾಯರದೊಡ್ಡಿ ಸರ್ಕಲ್, ಜೂನಿಯರ್ ಕಾಲೇಜು ಮೈದಾನ, ಎಂ.ಜಿ ರಸ್ತೆ, ಹಳೆ ಬಸ್ ನಿಲ್ದಾಣ, ಐಜೂರು ವತ್ತದ ಮಾರ್ಗದಲ್ಲಿ ಬಸ್ ಸಂಚಾರ ನಡೆಸಲು ಮಾರ್ಗ ಸಿದ್ಧತೆಯನ್ನು ಮಾಡುತ್ತಿದ್ದೇವೆ ಎಂದು ಕೆಎಸ್ಆರ್ ಟಿಸಿ ಮೂಲಗಳು ತಿಳಿಸಿವೆ.

ನಗರ ಸಾರಿಗೆ ಬಸ್ ಗಳಲ್ಲಿ ಮಹಿಳೆಯರು, ವಿದ್ಯಾರ್ಥಿನಿಯರಿಗೆ ಉಚಿತ ಪ್ರಯಾಣ ಇರಲಿದ್ದು, ಯುವಕರು ಕಾಲೇಜು ಪಾಸ್ ತೋರಿಸಿ ಪ್ರಯಾಣಿಸಬಹುದಾಗಿದೆ. ಇನ್ನು ಪುರುಷರು ಟಿಕೆಟ್ ಖರೀದಿಸಿ ಪ್ರಯಾಣಿಸಬೇಕಿದೆ. ಟಿಕೆಟ್ ದರ ಇನ್ನಷ್ಟೇ ಅಂತಿಮವಾಗಬೇಕಿದೆ.

---

‘ಬೆಂಗಳೂರು ದಕ್ಷಿಣ ಜಿಲ್ಲಾ ಕೇಂದ್ರ ರಾಮನಗರ ಟೌನಿನ ವ್ಯಾಪ್ತಿ ಬೆಳೆದಿದೆ. ದಿನ ಕಳೆದಂತೆ ಜನಸಂಖ್ಯೆಯೂ ವ್ಯಾಪಕವಾಗಿ ಹೆಚ್ಚಾಗುತ್ತಿದೆ. ಆದರೆ, ನಗರ ಸಾರಿಗೆ ಸೌಲಭ್ಯದ ಕೊರತೆ ಇತ್ತು. ಕೆಲಸ ಕಾರ್ಯದ ನಿಮಿತ್ತ ಕಚೇರಿಗಳು, ಆಸ್ಪತ್ರೆಗೆ ತೆರಳಲು 80 ರಿಂದ 100 ರುಪಾಯಿ ಖರ್ಚಾಗುತ್ತಿತ್ತು. ಇದನ್ನು ಮನಗಂಡು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಾರಿಗೆ ಸಚಿವರು ಆದ ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಮಾಡಲಾಗಿತ್ತು. ಇದೀಗ ನಮ್ಮ ಮನವಿಗೆ ಸ್ಪಂದಿಸಿ ನಗರ ಸಾರಿಗೆ ಸೇವೆ ನೀಡಲು ಮೂರು ಮಿನಿ ಬಸ್ ಗಳ ಸಂಚಾರಕ್ಕೆ ಇನ್ನೆರಡು ದಿನದಲ್ಲಿ ಚಾಲನೆ ನೀಡಲಾಗುವುದು.’ -ಎಚ್.ಎ.ಇಕ್ಬಾಲ್ ಹುಸೇನ್, ಶಾಸಕರು, ರಾಮನಗರ ಕ್ಷೇತ್ರ.

PREV

Recommended Stories

ಫಾರಿನ್‌ಗೆ ಅನ್ನಭಾಗ್ಯ ಅಕ್ಕಿ 2 ರೈಸ್‌ಮಿಲ್‌ ಜಫ್ತಿ: ಕೇಸು
ಮುಂದೇಕೆ, ಈಗ್ಲೆ ಮುಸ್ಲಿಂ ಆಗ್ಬಿಡಿ : ಬಿಜೆಪಿಗರ ಕಿಡಿ