ಕನ್ನಡಪ್ರಭ ವಾರ್ತೆ ಉಡುಪಿಪೌರ ಕಾರ್ಮಿಕರನ್ನು ಕಸದವರು ಎಂದು ಕರೆಯಲಾಗುತ್ತದೆ, ಆದರೆ ಅವರ ಸ್ವಚ್ಛತೆಯವರು. ಕಸವನ್ನು ಸೃಷ್ಟಿಸುವ, ಅದನ್ನು ಎಸೆಯುವವರು ನಿಜವಾದ ಕಸದವರು. ಮನೆಯಲ್ಲಿ, ಪರಿಸರದಲ್ಲಿ ಕಸ ಸೃಷ್ಟಿಯಾಗುವುದನ್ನು ಕಡಿಮೆ ಮಾಡಿ, ಪೌರಕಾರ್ಮಿಕರ ಆರೋಗ್ಯ ಮತ್ತು ನೆಮ್ಮದಿಯನ್ನು ಹೆಚ್ಚಿಸಬೇಕು ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಹೇಳಿದರು.ಅವರು ಶನಿವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಹಿಳಾ ಮೋರ್ಚದ ವತಿಯಿಂದ ನಡೆದ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಪೌರ ಕಾರ್ಮಿಕ ಮಹಿಳೆಯರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಬಿಜೆಪಿ ನಾಯಕಿ ಶೀಲಾ ಕೆ. ಶೆಟ್ಟಿ, ಮಹಿಳೆಯರನ್ನು ಮಹಿಳಾ ದಿನಾಚರಣೆಯ ಒಂದು ದಿನ ಗೌರವಿಸಿದರೆ ಸಾಲದು, ನಿತ್ಯವೂ ಗೌರವಿಸಬೇಕು. ಮಹಿಳೆಯರೂ ಅಂತಹ ಗೌರವವನ್ನು ಪಡೆಯುವ ನಡತೆಯನ್ನು ರೂಢಿಸಿಕೊಳ್ಳಬೇಕು ಎಂದರು.ಮಹಿಳೆಯರು ಮನೆಯಿಂದ ಹೊರಗೆ ಸಮಾಜದಲ್ಲಿ, ಉದ್ಯೋಗದಲ್ಲಿ ಸಾಧನೆ ಮಾಡಿದರೆ ಸಾಲದು, ಮನೆಯೊಳಗಿನ ಕರ್ತವ್ಯಗಳನ್ನು ನಿಭಾಯಿಸಬೇಕು ಎಂದವರು ಕಿವಿಮಾತು ಹೇಳಿದರು.ಈ ಸಮಾರಂಭದಲ್ಲಿ ಜಿಲ್ಲೆಯಲ್ಲಿ ಪೌರಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವ ರಾಧಾ ಉಡುಪಿ, ಶಾಂತಾ ಬೀಡಿನಗುಡ್ಡೆ, ಸ್ಮಿತಾ ಬಂಗೇರ, ಸುಶೀಲಾ, ಜಲಜ ಮತ್ತು ಶಾಂತಾ ಆತ್ರಾಡಿ ಅವರನ್ನು ಗೌರವಿಸಲಾಯಿತು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ರಾಜ್ಯ ಮಹಿಳಾ ಮೋರ್ಚಾ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ರಜನಿ ಪೈ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರೇಶ್ಮಾ ಉದಯ ಶೆಟ್ಟಿ, ನಿಕಟಪೂರ್ವ ಜಿಲ್ಲಾ ಮಹಿಳಾ ಮೋರ್ಚ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅನಿತಾ ಮರವಂತೆ, ಜಿಲ್ಲಾ ಉಪಾಧ್ಯಕ್ಷ ಕಿರಣ್ ಕುಮಾರ್, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ವೇದಿಕೆಯಲ್ಲಿದ್ದರು.