ಶುದ್ಧ ನೀರಿನ ಘಟಕ ದುರಸ್ತಿ ಮಾಡದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಿ

KannadaprabhaNewsNetwork |  
Published : Nov 30, 2023, 01:15 AM IST
ಹೂವಿನಹಡಗಲಿಯ ತಾಪಂ ಸಭಾಂಗಣದಲ್ಲಿ ಶಾಸಕ ಕೃಷ್ಣನಾಯ್ಕ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಸಭೆ ಜರುಗಿತು.ಹೂವಿನಹಡಗಲಿ ತಾಲೂಕಿನ ಹೊಳಗುಂದಿ ಗ್ರಾಮದ ಯಲ್ಲಪ್ಪ ಇವರ 20 ಮೇಕೆಗಳು ಸಿಡಿಲು ಬಡಿದ ಸತ್ತಿರುವುವ ಹಿನ್ನೆಲೆಯಲ್ಲಿ 80 ಸಾವಿರ ರುಗಳ ಚೆಕ್‌ ವಿತರಣೆ ಮಾಡಿದ ಶಾಸಕ ಕೃಷ್ಣನಾಯ್ಕ.  | Kannada Prabha

ಸಾರಾಂಶ

ರಸ್ತೆಯ ಸ್ಥಿತಿಗತಿ ಕುರಿತು ಲೋಕೋಪಯೋಗಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆಯಿಂದ ಮಾಹಿತಿ ಪಡೆದ ಶಾಸಕರು, ಹೊಸ ರಸ್ತೆ ನಿರ್ಮಾಣಕ್ಕೆ ಸರ್ಕಾರ ಅನುದಾನ ನೀಡುತ್ತಿಲ್ಲ, ಅಲ್ಪಸ್ವಲ್ಪ ಬಂದ ಅನುದಾನದಲ್ಲಿ ಗುಂಡಿಗಳನ್ನು ಮುಚ್ಚಬೇಕಿದೆ. ಆದ್ದರಿಂದ ಆ ಕಾಮಗಾರಿಯನ್ನು ಸರಿಯಾಗಿ ಮಾಡಬೇಕೆಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ತಾಲೂಕಿನಲ್ಲಿ 112 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಇದರಲ್ಲಿ 11 ಘಟಕಗಳು ಇಂದಿಗೂ ದುರಸ್ತಿಯಾಗಿಲ್ಲ. ಇದರಿಂದ ಗ್ರಾಮಸ್ಥಱು ಪಕ್ಕದೂರಿಗೆ ಹೋಗಿ ನೀರು ತರುವಂಥ ಸ್ಥಿತಿ ಇದೆ. ಆದ್ದರಿಂದ ದುರಸ್ತಿ ಮಾಡದ ಕಂಪನಿ ಗುತ್ತಿಗೆದಾರರಿಂದ ಹಣ ಹಿಂಪಡೆದು ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಶಾಸಕ ಕೃಷ್ಣನಾಯ್ಕ ಸೂಚಿಸಿದರು.

ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ತ್ರೈಮಾಸಿಕ ಕೆಡಿಪಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಬರಗಾಲದಲ್ಲಿ ಜನರಿಗೆ ನೀರಿನ ತೊಂದರೆ ಆಗದಂತೆ ಎಚ್ಚರಿಕೆ ವಹಿಸಬೇಕೆಂದು ತಿಳಿಸಿದರು.

ರಸ್ತೆಯ ಸ್ಥಿತಿಗತಿ ಕುರಿತು ಲೋಕೋಪಯೋಗಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆಯಿಂದ ಮಾಹಿತಿ ಪಡೆದ ಶಾಸಕರು, ಹೊಸ ರಸ್ತೆ ನಿರ್ಮಾಣಕ್ಕೆ ಸರ್ಕಾರ ಅನುದಾನ ನೀಡುತ್ತಿಲ್ಲ, ಅಲ್ಪಸ್ವಲ್ಪ ಬಂದ ಅನುದಾನದಲ್ಲಿ ಗುಂಡಿಗಳನ್ನು ಮುಚ್ಚಬೇಕಿದೆ. ಆದ್ದರಿಂದ ಆ ಕಾಮಗಾರಿಯನ್ನು ಸರಿಯಾಗಿ ಮಾಡಬೇಕೆಂದು ತಿಳಿಸಿದರು.

ಹಳ್ಳಿಗಳಲ್ಲಿ ರೈತರು ಸಾಕಷ್ಟು ರಸ್ತೆಯನ್ನು ಕಡಿದು ಹಾಳು ಮಾಡುತ್ತಾರೆ. ಇದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಕೂಡಲೇ ಪ್ರತಿ ಪಿಡಿಒಗಳಿಗೆ ಇಲಾಖೆಯಿಂದ ಪತ್ರ ಬರೆದು, ರಸ್ತೆ ಕಡಿಯುವ ಮುನ್ನ ಇಲಾಖೆಯ ಅನುಮತಿ ಪಡೆಯಬೇಕು ಎಂದರು.

ಪ್ರತಿಯೊಂದು ಇಲಾಖೆಯ 5 ವರ್ಷಗಳ ಹಿಂದಿನ ಕಾಮಗಾರಿಗಳು ಹಾಗೂ ಯೋಜನೆ ಸೇರಿದಂತೆ ಎಲ್ಲ ಮಾಹಿತಿಯನ್ನು ನೀಡಬೇಕು. ನನ್ನ ಅನುಮತಿ ಇಲ್ಲದೇ ಯಾವುದೇ ಬಿಲ್‌ ಬರೆಯುವಂತಿಲ್ಲ. ಒಂದು ವೇಳೆ ತಪ್ಪಿದರೆ ನಿಮ್ಮ ಮೇಲೆ ಕ್ರಮ ಕೈಗೊಳ್ಳುತ್ತೇನೆಂದು ಶಾಸಕರು ಎಚ್ಚರಿಕೆ ನೀಡಿದರು.

ಪ್ರತಿಯೊಂದು ಇಲಾಖೆಯಲ್ಲಿ ಬಯೋ ಮೆಟ್ರಿಕ್‌ ವ್ಯವಸ್ಥೆ ಮಾಡಬೇಕು. ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬಂದು ಜನರ ಕೆಲಸ ಮಾಡಬೇಕಿದೆ. ಅವರನ್ನು ಅಲೆದಾಡಿಸುವ ಕೆಲಸ ಮಾಡಬೇಡಿ ಎಂದರು.

ಈ ಸಂದರ್ಭದಲ್ಲಿ ತಾಪಂ ಆಡಳಿತಾಧಿಕಾರಿ ಅಶೋಕ ತೋಟದ್‌, ತಹಸೀಲ್ದಾರ್‌ ಕೆ. ಶರಣಮ್ಮ, ತಾಪಂ ಇಒ ಜಯರಾಮ ಚವ್ಹಾಣ ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಇತ್ತೀಚೆಗೆ ತಾಲೂಕಿನ ಹೊಳಗುಂದಿ ಗ್ರಾಮದಲ್ಲಿ ಸಿಡಿಲು ಬಡಿದು 20 ಮೇಕೆಗಳು ಮೃತಪಟ್ಟಿದ್ದವು. ಅವುಗಳ ಮಾಲೀಕರಿಗೆ ಸರ್ಕಾರದಿಂದ ಮಂಜೂರಾದ ₹80 ಸಾವಿರ ಚೆಕ್‌ನ್ನು ಮಾಲೀಕ ಯಲ್ಲಪ್ಪ ಅಳವಂಡಿ ಅವರಿಗೆ ಶಾಸಕ ಕೃಷ್ಣನಾಯ್ಕ ಹಾಗೂ ತಹಸೀಲ್ದಾರ್‌ ಕೆ. ಶರಣಮ್ಮ ವಿತರಿಸಿದರು.3 ತಾಸು ತಡವಾಗಿ ಬಂದ ಶಾಸಕ:

ತಾಪಂ ಸಭಾಂಗಣದಲ್ಲಿ ಬೆಳಗ್ಗೆ 10 ಗಂಟೆಗೆ ಶಾಸಕ ಕೃಷ್ಣನಾಯ್ಕ ಅವರ ಅಧ್ಯಕ್ಷತೆಯಲ್ಲಿ ಆರಂಭವಾಗಬೇಕಿದ್ದ ತ್ರೈಮಾಸಿಕ ಕೆಡಿಪಿ ಸಭೆಯು 3 ತಾಸು ತಡವಾಗಿ ಆರಂಭವಾಯಿತು. ಬೆಳಗ್ಗೆಯಿಂದ ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ ತಾಲೂಕಿನಿಂದ ಆಗಮಿಸಿದ್ದ ಅಧಿಕಾರಿಗಳು ಕಾಯ್ದು ಸುಸ್ತಾಗಿದ್ದರು. ಜತೆಗೆ ಶಾಸಕರ ಜನಸಂಪರ್ಕ ಕಚೇರಿಯ ಮುಂದೆ ಮಹಿಳೆಯರು ಶಾಸಕರನ್ನು ಕಾಯ್ದು ಸುಸ್ತಾಗಿ ಬಂದ ದಾರಿಗೆ ಸುಂಕ ಇಲ್ಲದೇ ಮನೆ ಕಡೆಗೆ ಹೆಜ್ಜೆ ಹಾಕಿದರು.

ತ್ರೈಮಾಸಿಕ ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟಿಸ್‌ ನೀಡಬೇಕು. ಜತೆಗೆ ಅನುಪಾಲನಾ ವರದಿ ನೀಡದ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಶಾಸಕ ಕೃಷ್ಣನಾಯ್ಕ ತಾಪಂ ಜಯರಾಮ ಚವ್ಹಾಣಗೆ ಸೂಚಿಸಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ