ಕನ್ನಡಪ್ರಭ ವಾರ್ತೆ, ದಾವಣಗೆರೆ
ಒಂದು ದಿನ ಸ್ವಚ್ಚತೆ ಕೈಗೊಂಡಾಕ್ಷಣ ಸಂಪೂರ್ಣ ಸ್ವಚ್ಚತೆ ಆಗೋದಿಲ್ಲ. ಆದರೆ ಸ್ಚಚ್ಚತಾ ಸೇವೆ ಮುಂದುವರಿದಲ್ಲಿ ಗಣನೀಯವಾಗಿ ನಿರಂತರ ಸ್ವಚ್ಚತೆ ಕಾಣಬಹುದು. ಆಗ ಸ್ವಚ್ಚ ಪರಿಸರ ನಿರ್ಮಾಣವಾಗಲಿದೆ. ಕೆರೆ ಪರಿಸರ ನಿರ್ಮಲವಾಗಿಸಲು ಸಾರ್ವಜನಿಕರ ಸಹಭಾಗಿತ್ವದಲ್ಲಿ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು.ನಗರದ ಕುಂದುವಾಡ ಕೆರೆ ಸುತ್ತ ಗುರುವಾರ ಮುಂಜಾನೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಮಹಾನಗರ ಪಾಲಿಕೆ ಮತ್ತು ವಿವಿಧ ಸಂಘ, ಸಂಸ್ಥೆಗಳ ಮತ್ತು ಸಾರ್ವಜನಿಕರ ಸಹಕಾರದಲ್ಲಿ ಕೈಗೊಂಡ ಸ್ವಚ್ಚತಾ ಹೀ ಸೇವಾ ಪಾಕ್ಷಿಕದ ಅಂಗವಾಗಿ ಒಂದು ದಿನ, ಒಂದು ಗಂಟೆ ಎಲ್ಲರೊಟ್ಟಿಗೆ ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪ್ರತಿಜ್ಞಾವಿಧಿ ಬೋಧಿಸಿ, ಸ್ವತಃ ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ದಾವಣಗೆರೆ ಸ್ಮಾರ್ಟ್ ಹೆಲ್ಪ್ ಅಪ್ಲಿಕೇಷನ್:ಸ್ವಚ್ಚತೆ ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕ ಕುಂದುಕೊರತೆ ವ್ಯವಸ್ಥೆ ನಿವಾರಣೆಗೆ "ದಾವಣಗೆರೆ ಸ್ಮಾರ್ಟ್ ಹೆಲ್ಪ್ ಅಪ್ಲಿಕೇಷನ್ " ಬಿಡುಗಡೆ ಮಾಡಲಾಗಿದೆ. ನಾಗರಿಕ ಸೇವೆ ಮತ್ತು ಹೊಣೆಗಾರಿಕೆ ಸುಧಾರಿಸುವತ್ತ ಒಂದು ಪ್ರಮುಖ ಹೆಜ್ಜೆಯಾಗಿ ಈ ಆಪ್‌ನ್ನು ಜಿಲ್ಲಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಬಿಡುಗಡೆಗೊಳಿಸಿದ್ದಾರೆ. ಕಸ ವಿಲೇವಾರಿ ಕುರಿತ ಪುರಾವೆಗಳ ಛಾಯಾಚಿತ್ರಗಳನ್ನು ಮೊಬೈಲ್ ಅಪ್ಲಿಕೇಶನ್ ಮುಖಾಂತರ ಅಪ್ಲೋಡ್ ಮಾಡುವುದರೊಂದಿಗೆ ಸರಳ ನೋಂದಣಿ ಮಾಡಿಕೊಳ್ಳಬಹುದು. ನಾಗರಿಕರು ತಮ್ಮ ಆದ್ಯತೆಯ ಭಾಷೆ- ಕನ್ನಡ ಅಥವಾ ಇಂಗ್ಲಿಷ್‌ನಲ್ಲಿ ದೂರು ಸಲ್ಲಿಸಬಹುದು. ಹಾಗೆಯೇ ಸಮಯ-ಬದ್ಧ ಪರಿಹಾರ ಕಾರ್ಯ ವಿಧಾನಕ್ಕೆ ಸಹ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಸಂಗ್ರಹ-ವಿಲೇವಾರಿ ಕುರಿತು ದೂರನ್ನು ಸಲ್ಲಿಸಬಹುದು. ದೂರು ಸಲ್ಲಿಸಲು ಪ್ಲೇ-ಸ್ಟೋರ್‌ನಲ್ಲಿ ** https://play.google.com/store/apps/details?id=com.dvgsmart.help ** ಜಾಲತಾಣದಲ್ಲಿ ಡೌನ್ಲೋಡ್ ಮಾಡಿಕೊಳ್ಳಬೇಕು ಎಂದು ವಿವರಿಸಿದರು.
ಸ್ವಚ್ಚತಾ ಕಾರ್ಯದಲ್ಲಿ ಅಧಿಕಾರಿಗಳು ಸ್ವಯಂ ಸೇವಕರು, ಪೌರಕಾರ್ಮಿಕರು ಸೇರಿ ನೂರಾರು ಜನರು ಭಾಗವಹಿಸಿ ಸುಮಾರು 350 ಕೆ.ಜಿ.ಗೂ ಅಧಿಕ ಪ್ಲಾಸ್ಟಿಕ್ ಮತ್ತು ಕಸವನ್ನು ಸಂಗ್ರಹಿಸಲಾಯಿತು. ಈ ವೇಳೆ ಕುಂದುವಾಡ ಕೆರೆಯಲ್ಲಿ ಬೆಳಗಿನ ಮತ್ತು ಸಂಜೆ ವಾಯುವಿಹಾರಿಗಳಿಗೆ ಅನುಕೂಲ ಆಗುವಂತೆ ಮೂಲಸೌಕರ್ಯ ಕಲ್ಪಿಸುವಂತೆ ವಾಯು ವಿಹಾರಿಗಳು ಮನವಿ ಮಾಡಿದರು.ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಜಿಪಂ ಸಿಇಒ ಗಿತ್ತೆ ಮಾಧವ ವಿಠಲರಾವ್, ದೂಡಾ ಆಯುಕ್ತ ಹುಲಮನಿ ತಿಮ್ಮಣ್ಣ, ನಗರಾಭಿವೃದ್ದಿ ಕೋಶ ಯೋಜನಾ ನಿರ್ದೇಕ ಮಹಾಂತೇಶ್, ನಗರಸಭೆ ಆಯುಕ್ತೆ ರೇಣುಕಾ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಮಧುಸೂಧನ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಕೊಟ್ರೇಶ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಷಣ್ಮುಖಪ್ಪ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್ ಇತರರು ಇದ್ದರು.