ಕನ್ನಡಪ್ರಭ ವಾರ್ತೆ ವಿಜಯಪುರ
ಜಿಲ್ಲಾದ್ಯಂತ ಅರಣ್ಯೀಕರಣ ಹಾಗೂ ಹಸಿರೀಕರಣಕ್ಕೆ ಹೆಚ್ಚು ಒತ್ತು ನೀಡಿದ್ದರ ಪರಿಣಾಮ ಪ್ರಸ್ತುತ ವರ್ಷದಲ್ಲಿ ಉತ್ತಮ ವಾಯು ಗುಣಮಟ್ಟದ ಸೂಚ್ಯಂಕದಲ್ಲಿ ದೇಶದಲ್ಲಿಯೇ ವಿಜಯಪುರ ಜಿಲ್ಲೆ ೩ನೇ ಸ್ಥಾನ ಪಡೆದಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಹೇಳಿದರು.ನಗರದ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಜಿಪಂ ಆವರಣ ಹಸಿರೀಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಂದು ಹಂತದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಅರಣ್ಯ ಇಲಾಖೆಗಳ ಸಹಯೋಗದಲ್ಲಿ ಸ್ವಚ್ಛತೆ ಹಾಗೂ ಹಸಿರೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಜಿಪಂ ಒಳ ಮತ್ತು ಹೊರ ಆವರಣಗಳಲ್ಲಿ ನಿರಂತರ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಸ್ವಚ್ಛ ಶನಿವಾರ ಪರಿಕಲ್ಪನೆ ಆರಂಭಿಸಲಾಗಿದೆ ಎಂದರು.
ಮಾನವ ಬದುಕಲು ಪ್ರಾಣವಾಯು ಬೇಕು. ಪ್ರಾಣವಾಯುವಿಗಾಗಿ ಪ್ರತಿಯೊಬ್ಬರೂ ಒಂದು ಗಿಡ ನೆಡಬೇಕು. ಜಿಪಂ ಆವರಣದಲ್ಲಿ ನೆಡಲಾಗಿರುವ ಪ್ರತಿ ಸಸಿ ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ಅಧಿಕಾರಿ ಹಾಗೂ ಸಿಬ್ಬಂದಿ ವಹಿಸಿಕೊಳ್ಳಬೇಕು. ಈ ಕುರಿತು ಪ್ರತಿ ವಾರಕ್ಕೊಮ್ಮೆ ಖುದ್ದಾಗಿ ನಾನೇ ಪರಿಶೀಲಿಸುತ್ತೇನೆ ಎಂದು ತಿಳಿಸಿದರು.ಜಿಪಂ, ತೋಟಗಾರಿಕೆ, ಅರಣ್ಯ, ಪಂಚಾಯತ್ ರಾಜ್ ಎಂಜಿನಿಯರಿಂಗ್, ಜಲಾನಯನ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವಿಜಯಪುರ ಸಹಯೋಗದಲ್ಲಿ ಪ್ರಸ್ತುತ ಸಾಲಿನಲ್ಲಿ ಜಿಪಂ ಕಚೇರಿ ಸುತ್ತ-ಮುತ್ತಲಿನ ಆವರಣದ ಉದ್ಯಾನವನದಲ್ಲಿ ಒಟ್ಟು ೧೫೦ ವಿವಿಧ ಜಾತಿ ಅಲಂಕಾರಿಕ ಸಸಿ ನೆಟ್ಟು ಬೆಳೆಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಹಲಸು, ಮಾವು, ಪಾಮ್, ಸಂಪಿಗೆ, ಮಹಾಗನಿ ಸೇರಿದಂತೆ ಹತ್ತು ಹಲವು ಹೂ ಮತ್ತು ಹಣ್ಣು ಬಿಡುವ ಸಸಿ ನೆಡಲು ಯೋಜನೆ ರೂಪಿಸಲಾಗುತ್ತಿದೆ. ಸಸಿಗಳಿಗೆ ಪ್ರತಿ ನಿತ್ಯ ನೀರುಣಿಸಲು ಸ್ವಯಂಚಾಲಿತ ಹನಿ ಮತ್ತು ತುಂತುರು ಹನಿ ನೀರಾವರಿ ಪದ್ಧತಿ ಅಳವಡಿಸಲಾಗಿದೆ. ಈ ನಿಟ್ಟಿನಲ್ಲಿ ವಿಜಯಪುರ ಜಿಪಂ ಆವರಣದಲ್ಲಿರುವ ಉದ್ಯಾನವನ ಅಭಿವೃದ್ಧಿಪಡಿಸಿ ಸೌಂದರ್ಯೀಕರಣಗೊಳಿಸುವ ನೂತನ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಹಸಿರೀಕರಣ ಪರಿಕಲ್ಪನೆಯು ಜಿಪಂಯಲ್ಲಿ ಅಷ್ಟೇ ಅಲ್ಲದೆ ಜಿಲ್ಲೆಯ ಎಲ್ಲ ತಾಪಂ ಹಾಗೂ ಗ್ರಾಪಂನಲ್ಲಿಯೂ ಈ ಕ್ರಮ ಜಾರಿಗೆ ತರಲು ಯೋಜನೆ ರೂಪಿಸಲಾಗಿದೆ ಎಂದರು.ಮುಖ್ಯವಾಗಿ ಸಿದ್ದೇಶ್ವರ ಸ್ವಾಮೀಜಿ ನಿಸರ್ಗ ಪ್ರಿಯರಾಗಿದ್ದರು. ತಮ್ಮ ಜೀವನದಲ್ಲಿ ಪ್ರಕೃತಿ, ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛತೆಗೆ ಅತೀ ಮಹತ್ವ ನೀಡುತ್ತಿದ್ದರು. ಅಲ್ಲದೇ ಪರಿಸರ ಸ್ನೇಹಿಗಳಾಗಿದ್ದರು. ಅದೇ ರೀತಿ ನಾವೂ ಸಹ ಅವರಂತೆಯೇ ಪರಿಸರ ಸಂರಕ್ಷಣೆ ಮಾಡೋಣ ಎಂದರು.
ಈ ಮಹತ್ಕಾರ್ಯವು ಮೊಟ್ಟಮೊದಲನೆಯದಾಗಿ ಜಿಪಂಯಿಂದಲೇ ಪ್ರಾರಂಭವಾಗಿ ಎಲ್ಲ ತಾಲೂಕು ಹಾಗೂ ಗ್ರಾಪಂ ವ್ಯಾಪ್ತಿಗಳಲ್ಲಿಯೂ ಸಹ ಪಸರಿಸೋಣ ಎಂದು ಕರೆ ನೀಡಿದರು.ಈ ವೇಳೆ ಜಿಪಂ ಉಪಕಾರ್ಯದರ್ಶಿ ಡಾ.ವಿಜಯಕುಮಾರ ಆಜೂರ, ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಯೋಜನಾ ನಿರ್ದೇಶಕ ಬಿ.ಎಸ್.ರಾಠೋಡ, ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಸಹಾಯಕ ಕಾರ್ಯದರ್ಶಿ ಅನುಸೂಯಾ ಚಲವಾದಿ, ಅಭಿಯಂತರ ಬಸವರಾಜ ಕುಂಬಾರ, ತೋಟಗಾರಿಕೆ ಇಲಾಖೆಯ ನೀಲಕಂಠ ಬಿರಾದಾರ, ಅನುಸೂಯಾ ಸೋಮಣ್ಣವರ, ಈರಣ್ಣ ಕೋಟ್ಯಾಳ, ಮಹಾವೀರ ದಳವಾಯಿ, ಯಲ್ಲಪ್ಪ ಶಿವಣಗಿ, ಅಭಿಯಂತರರ ರವಿ ಪವಾರ, ವಿಲಾಸ ರಾಠೋಡ, ಲೆಕ್ಕ ಅಧೀಕ್ಷಕ ವಿಜಯಕುಮಾರ ಹತ್ತಿ, ಬಿ.ಬಿ.ಪಾಲಾಯಿ, ಸಾತಿಹಾಳ ಸೇರಿ ಇತರರಿದ್ದರು.