ಲೈಟ್‌ಹೌಸ್ ದ್ವೀಪದಲ್ಲೂ ಸ್ವಚ್ಛತೆಯ ಪಹರೆ

KannadaprabhaNewsNetwork |  
Published : Nov 27, 2023, 01:15 AM IST
ಸ್ವಚ್ಛತೆಗಾಗಿ ತೆರಳಿದ ಪಹರೆಯ ತಂಡ  | Kannada Prabha

ಸಾರಾಂಶ

ಕಾರವಾರ ಟ್ಯಾಗೋರ್ ಕಡಲತೀರದಿಂದ 9 ಕಿ.ಮೀ. ನಷ್ಟು ಬೋಟಿನಲ್ಲಿ ಪ್ರಯಾಣಿಸಿ ಲೈಟ್‌ಹೌಸ್‌ ದ್ವೀಪದಲ್ಲಿ ಸ್ವಚ್ಛತೆ ನಡೆಸುವ ಮೂಲಕ ಭಾನುವಾರ ಪಹರೆ ವೇದಿಕೆ ಸದಸ್ಯರು ಸ್ವಚ್ಛತಾಕಾರ್ಯದಲ್ಲಿನ ತಮ್ಮ ಬದ್ಧತೆಯನ್ನು ಮೆರೆದರು. ದ್ವೀಪದಲ್ಲಿ ಸಂಗ್ರಹಿಸಿದ ತ್ಯಾಜ್ಯವನ್ನು ಮೂಟೆ ಮೂಟೆಗಳಲ್ಲಿ ಬೋಟಿನಲ್ಲಿ ಹೇರಿಕೊಂಡು ಕಾರವಾರಕ್ಕೆ ಬಂದು ನಗರಸಭೆ ಮೂಲಕ ವಿಲೇವಾರಿ ಮಾಡಲಾಯಿತು.

ಕಾರವಾರ: ಇಲ್ಲಿನ ಟ್ಯಾಗೋರ್ ಕಡಲತೀರದಿಂದ 9 ಕಿ.ಮೀ. ನಷ್ಟು ಬೋಟಿನಲ್ಲಿ ಪ್ರಯಾಣಿಸಿ ಲೈಟ್‌ಹೌಸ್‌ ದ್ವೀಪದಲ್ಲಿ ಸ್ವಚ್ಛತೆ ನಡೆಸುವ ಮೂಲಕ ಭಾನುವಾರ ಪಹರೆ ವೇದಿಕೆ ಸದಸ್ಯರು ಸ್ವಚ್ಛತಾಕಾರ್ಯದಲ್ಲಿನ ತಮ್ಮ ಬದ್ಧತೆಯನ್ನು ಮೆರೆದರು.

ದ್ವೀಪದಲ್ಲಿ ಸಂಗ್ರಹಿಸಿದ ತ್ಯಾಜ್ಯವನ್ನು ಮೂಟೆ ಮೂಟೆಗಳಲ್ಲಿ ಬೋಟಿನಲ್ಲಿ ಹೇರಿಕೊಂಡು ಕಾರವಾರಕ್ಕೆ ಬಂದು ನಗರಸಭೆ ಮೂಲಕ ವಿಲೇವಾರಿ ಮಾಡಲಾಯಿತು.

ಮಹಿಳೆಯರು, ಮಕ್ಕಳೂ ಕೂಡ ಸ್ವಚ್ಛತಾಕಾರ್ಯದಲ್ಲಿ ತೊಡಗಿಕೊಂಡು ಗಮನ ಸೆಳೆದರು. ಲೇಡಿಸ್ ಬೀಚ್, ಕಾಳಿಮಾತಾ ದ್ವೀಪಗಳಲ್ಲಿ ಸ್ವಚ್ಛತೆ ನಡೆಸಿದ್ದ ಪಹರೆ ಲೈಟ್‌ಹೌಸ್‌ ದ್ವೀಪದಲ್ಲೂ ಸ್ವಚ್ಛತೆ ಕೈಗೊಂಡಿದ್ದು ವಿಶೇಷವಾಗಿತ್ತು.

ಸ್ವಚ್ಛತೆಗೂ ಮುನ್ನ ನಡೆದ ಪುಟ್ಟ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಲೈಟ್‌ಹೌಸ್ ಒಂದು ಅತ್ಯುತ್ತಮ ಪ್ರವಾಸಿ ತಾಣ. ಈ ತಾಣವನ್ನು ಸ್ವಚ್ಛವಾಗಿ ಇಡಬೇಕಾದ ಅವಶ್ಯಕತೆ ಇದೆ. ಪಹರೆ ವೇದಿಕೆ ಸದಸ್ಯರು ಇಲ್ಲಿಗೆ ಬಂದು ಸ್ವಚ್ಛತೆ ನಡೆಸುವಲ್ಲಿ ತಮಗೆ ಪಾಲ್ಗೊಳ್ಳಲು ಅವಕಾಶ ದೊರಕಿದ್ದು ಸಂತಸ ತಂದಿದೆ ಎಂದು ಹೇಳಿದರು.

ಪಹರೆ ವೇದಿಕೆ ಅಧ್ಯಕ್ಷ ನಾಗರಾಜ ನಾಯಕ, ಪಹರೆ ಎಂಟೂವರೆ ವರ್ಷಗಳಿಂದ ಸ್ವಚ್ಛತಾ ಅಭಿಯಾನ ನಡೆಸುತ್ತಿದೆ. ಕಾರವಾರ ನಗರ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವಲ್ಲಿ ಪಹರೆ ತೊಡಗಿಕೊಂಡಿದೆ. ಕಾರವಾರದಿಂದ ಅಂಕೋಲಾಕ್ಕೆ ಸ್ವಚ್ಛತಾ ನಡಿಗೆ, ಗೋವಾ ಗಡಿಗೆ ಪಾದಯಾತ್ರೆ ಮತ್ತಿತರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಪಹರೆ ವೇದಿಕೆ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ ಎಂದರು.

ಪಹರೆ ಗೌರವಾಧ್ಯಕ್ಷೆ ಖೈರುನ್ನೀಸಾ ಶೇಖ, ಕಸಾಪ ತಾಲೂಕು ಅಧ್ಯಕ್ಷ ರಾಮ ನಾಯ್ಕ ಉಪಸ್ಥಿತರಿದ್ದರು. ಪತ್ರಕರ್ತ ಟಿ.ಬಿ. ಹರಿಕಾಂತ ಸ್ವಾಗತಿಸಿದರು. ಮೂರು ಬೋಟ್‌, 80 ಸದಸ್ಯರು: ಮೂರು ಬೋಟುಗಳಲ್ಲಿ ಪಹರೆಯ 80ರಷ್ಟು ಸದಸ್ಯರು ಬೆಳಗ್ಗೆ 8.30ಕ್ಕೆ ಕಾರವಾರದಿಂದ ಲೈಟ್‌ಹೌಸ್ ದ್ವೀಪಕ್ಕೆ ತೆರಳಿ ಸ್ವಚ್ಛತಾ ಕಾರ್ಯ ಕೈಗೊಂಡು ಸಂಜೆ 4 ಗಂಟೆಗೆ ಮರಳಿದರು. ಲೈಟ್‌ಹೌಸ್‌ನ ಪಿಕ್ನಿಕ್ ಸ್ಪಾಟ್‌ನಲ್ಲಿ ಸಂಗ್ರಹಗೊಂಡಿದ್ದ ಪ್ಲಾಸ್ಟಿಕ್ ಬಾಟಲಿಗಳು, ತಿಂಡಿ ತಿನಿಸುಗಳ ಪ್ಯಾಕೆಟ್‌ಗಳು, ಇತರ ತ್ಯಾಜ್ಯವನ್ನು ಸಂಗ್ರಹಿಸಿ ತ್ಯಾಜ್ಯದ ಮೂಟೆಗಳನ್ನು ಕಾರವಾರಕ್ಕೆ ತಂದು ವಿಲೇವಾರಿ ಮಾಡಲಾಯಿತು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ