ರಸ್ತೆ ಒತ್ತುವರಿ ತೆರವು, ಸೌಲಭ್ಯ ಕಲ್ಪಿಸಿ: ಇಲ್ಲವೇ, ಲೋಕಸಭಾ ಚುನಾವಣೆ ಮತದಾನ ಬಹಿಷ್ಕಾರ ಎಚ್ಚರಿಕೆ

KannadaprabhaNewsNetwork | Published : Mar 19, 2024 12:52 AM

ಸಾರಾಂಶ

ಗೆಜ್ಜಲಗೆರೆ ಗ್ರಾಮದ ಸರ್ವೇ ನಂಬರ್ 267ರಲ್ಲಿ ಇರುವ ಬಸವನಪುರಕ್ಕೆ ಹೋಗುವ ರಸ್ತೆಗೆ ನಕ್ಷೆ ಪ್ರಕಾರ ರಸ್ತೆ ಕಲ್ಪಿಸಬೇಕು. ಗ್ರಾಮದ ಪರಿಶಿಷ್ಟ ಜಾತಿ ಜನಾಂಗಕ್ಕೆ ಮೂಲ ಸೌಲಭ್ಯ ದೊರಕಿಸಬೇಕು ಎಂದು ಹಲವು ಬಾರಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿಲ್ಲ.

ಕನ್ನಡಪ್ರಭ ವಾರ್ತೆ ಮದ್ದೂರುತಾಲೂಕಿನ ಗೆಜ್ಜಲಗೆರೆ ಸಮೀಪದ ಬಸವನದೊಡ್ಡಿ ಗ್ರಾಮಕ್ಕೆ ಹೋಗುವ ರಸ್ತೆ ಒತ್ತುವರಿ ತೆರವು ಹಾಗೂ ಮೂಲ ಸೌಲಭ್ಯ ಕಲ್ಪಿಸುವಲ್ಲಿ ತಾಲೂಕು ಆಡಳಿತದ ನಿರ್ಲಕ್ಷ್ಯ ಧೋರಣೆ ಖಂಡಿಸಿ ದಲಿತ ಪರ ಸಂಘಟನೆಗಳ ಕಾರ್ಯಕರ್ತರು ಸೋಮವಾರ ಪಟ್ಟಣದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ, ಲೋಕಸಭಾ ಚುನಾವಣೆ ಮತದಾನ ಬಹಿಷ್ಕಾರದ ಎಚ್ಚರಿಕೆ ನೀಡಿದರು.

ತಾಲೂಕು ದಲಿತ ಹಕ್ಕುಗಳ ಸಮಿತಿ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣಾ ಪಡೆ ಕಾರ್ಯಕರ್ತರು ಪ್ರತ್ಯೇಕ ಮೆರವಣಿಗೆ ನಡೆಸಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಕೆಲಕಾಲ ಧರಣಿ ನಡೆಸಿದರು. ಜಿಲ್ಲಾ, ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯ್ತಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

ಗೆಜ್ಜಲಗೆರೆ ಗ್ರಾಮದ ಸರ್ವೇ ನಂಬರ್ 267ರಲ್ಲಿ ಇರುವ ಬಸವನಪುರಕ್ಕೆ ಹೋಗುವ ರಸ್ತೆಗೆ ನಕ್ಷೆ ಪ್ರಕಾರ ರಸ್ತೆ ಕಲ್ಪಿಸಬೇಕು. ಗ್ರಾಮದ ಪರಿಶಿಷ್ಟ ಜಾತಿ ಜನಾಂಗಕ್ಕೆ ಮೂಲ ಸೌಲಭ್ಯ ದೊರಕಿಸಬೇಕು ಎಂದು ಹಲವು ಬಾರಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿಲ್ಲ ಎಂದು ದೂರಿದರು.

ಜಿಲ್ಲಾಡಳಿತ ತಕ್ಷಣ ರಸ್ತೆ ಒತ್ತುವರಿ ತೆರವು ಹಾಗೂ ಗ್ರಾಮಕ್ಕೆ ಮೂಲ ಕಲ್ಪಿಸುವ ಬಗ್ಗೆ ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಬೇಕು. ಇಲ್ಲವಾದಲ್ಲಿ ಬಸವನಪುರ ದೊಡ್ಡಿ ಗ್ರಾಮದ ಪರಿಶಿಷ್ಟ ಜಾತಿ ಜನಾಂಗದವರು ಮುಖಂಡರೊಂದಿಗೆ ಸಭೆ ನಡೆಸಿ ಲೋಕಸಭಾ ಚುನಾವಣೆ ಮತದಾನದ ಬಹಿಷ್ಕಾರದ ತೀರ್ಮಾನ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ದಲಿತ ಹಕ್ಕುಗಳ ಸಮಿತಿ ಎಂ.ನಿಂಗಯ್ಯ, ವೈರಮುಡಿ, ಟಿ.ಎಲ್.ಕೃಷ್ಣೇಗೌಡ, ಸತ್ಯ, ಪ್ರೇಮ ಕುಮಾರಿ, ಶಿವಲಿಂಗಯ್ಯ, ಶೋಭಾ, ಪುಷ್ಪ, ಶಶಿಕುಮಾರ್, ವಿಜಯೇಂದ್ರ, ಮಾನವ ಹಕ್ಕುಗಳ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ ಸಿ.ಎಚ್. ಚಂದ್ರಕುಮಾರ್, ಜಮೀರ್, ಬಾಬು ಸೇರಿದಂತೆ ಹಲವರು ಇದ್ದರು.

Share this article