ಹೆದ್ದಾರಿ ಅಗಲೀಕರಣಕ್ಕೆ ನೀರಕಟ್ಟೆ- ಬಾರಿಕೆ ಸಂಪರ್ಕ ಕಾಲುಸಂಕ ಬಲಿ

KannadaprabhaNewsNetwork | Published : Jul 8, 2024 12:36 AM

ಸಾರಾಂಶ

ಈ ಮಧ್ಯೆ ಹೆದ್ದಾರಿ ಮತ್ತು ಬಾರಿಕೆ ರಸ್ತೆಯ ಕಡಿಯಲ್ಪಟ್ಟ ಸ್ಥಳಕ್ಕೆ ಮಣ್ಣು ತಂದು ಹಾಕಲಾಗಿದೆ. ಮಣ್ಣನ್ನು ಸಮತಟ್ಟು ಮಾಡದ ಕಾರಣ ಪರಿಸರದ ಜನತೆ ಮಣ್ಣಿನ ರಾಶಿಯಲ್ಲಿ ಅಪಾಯಕಾರಿಯಾಗಿ ಸಂಚರಿಸುತ್ತಿದ್ದಾರೆ.

ಉಲುಕ್ ಉಪ್ಪಿನಂಗಡಿ

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ ರಾಷ್ಟ್ರೀಯ ಹೆದ್ದಾರಿ ೭೫ರ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು, ಬಜತ್ತೂರು ಗ್ರಾಮದ ನೀರಕಟ್ಟೆ- ಬಾರಿಕೆ ಸಂಪರ್ಕ ಬೆಸೆಯುತ್ತಿದ್ದ ಕಾಲು ಸಂಕ (ಕಿರು ಸೇತುವೆ) ವನ್ನು ಕಾಮಗಾರಿಯ ವೇಳೆ ಕಿತ್ತು ಹಾಕಲಾಗಿದೆ. ಕಾಮಗಾರಿ ನಡೆಸುತ್ತಿರುವ ಸಂಸ್ಥೆ ಪರ್ಯಾಯ ವ್ಯವಸ್ಥೆಯನ್ನು ಮಾಡದಿರುವ ಕಾರಣ ಸುಮಾರು ೫೦ ಮನೆಗಳ ನಿವಾಸಿಗಳು ದಿನ ನಿತ್ಯ ಅಪಾಯಕ್ಕೆ ಮೈಯೊಡ್ಡುತ್ತಾ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.

ನೀರಕಟ್ಟೆಯಿಂದ ಬಾರಿಕೆಗೆ ಹೋಗುವ ರಸ್ತೆಗೆ ಹೆದ್ದಾರಿ ಬದಿಯ ತೋಡಿನಿಂದ ಸಂಪರ್ಕ ಸಾಧಿಸಲು ಈ ಹಿಂದೆ ಕಿರು ಸೇತುವೆ ನಿರ್ಮಿಸಲಾಗಿತ್ತು. ಜನತೆ ಅದನ್ನು ದಿನ ನಿತ್ಯ ಬಳಸುತ್ತಿದ್ದರು. ಹೆದ್ದಾರಿ ಅಗಲೀಕರಣಕ್ಕೆ ಈ ಸೇತುವೆ ಇದ್ದ ಸ್ಥಳವೂ ಒಳಪಟ್ಟಿದ್ದರಿಂದ ಸೇತುವೆಯನ್ನು ಕಿತ್ತು ಹಾಕಲಾಗಿತ್ತು.

ಈ ವೇಳೆ ಸದರಿ ರಸ್ತೆಯನ್ನು ಬಳಸುತ್ತಿದ್ದ ಬಾರಿಕೆಯ ನಿವಾಸಿಗಳು ಸಂಪರ್ಕಕ್ಕೆ ಪರ್ಯಾಯ ವ್ಯವಸ್ಥೆ ಏನೆಂದು ಪ್ರಶ್ನಿಸಿದಾಗ, ಹೆದ್ದಾರಿ ಬದಿಯ ತಡೆಗೋಡೆ ನಿರ್ಮಿಸಿದ ಬಳಿಕ ವ್ಯವಸ್ಥೆ ಕಲ್ಪಿಸಲಾಗುವುದೆಂದು ಭರವಸೆ ನೀಡಲಾಗಿತ್ತು. ಈ ಭರವಸೆಯನ್ನು ನಂಬಿದ ಇಲ್ಲಿನ ನಿವಾಸಿಗಳು ಕೆಲವು ದಿನ ಸಂಚಾರಕ್ಕೆ ಸಮಸ್ಯೆ ಆಗುತ್ತದೆ ಆದರೆ ಬಳಿಕ ಶಾಶ್ವತ ಪರಿಹಾರ ಸಿಗುತ್ತದಲ್ಲ ಎಂದು ಸುಮ್ಮನಾದರು. ಆದರೆ ತಿಂಗಳುಗಳು ಕಳೆದರೂ ಪರ್ಯಾಯ ವ್ಯವಸ್ಥೆ ಆಗದ ಕಾರಣ ನಿವಾಸಿಗಳು ಆಕ್ರೋಶಗೊಂಡು, ಪರ್ಯಾಯ ಸಂಕರ್ಪಕ ವ್ಯವಸ್ಥೆಗೆ ಆಗ್ರಹಿಸಿದ್ದಾರೆ.

ಈ ಮಧ್ಯೆ ಹೆದ್ದಾರಿ ಮತ್ತು ಬಾರಿಕೆ ರಸ್ತೆಯ ಕಡಿಯಲ್ಪಟ್ಟ ಸ್ಥಳಕ್ಕೆ ಮಣ್ಣು ತಂದು ಹಾಕಲಾಗಿದೆ. ಮಣ್ಣನ್ನು ಸಮತಟ್ಟು ಮಾಡದ ಕಾರಣ ಪರಿಸರದ ಜನತೆ ಮಣ್ಣಿನ ರಾಶಿಯಲ್ಲಿ ಅಪಾಯಕಾರಿಯಾಗಿ ಸಂಚರಿಸುತ್ತಿದ್ದಾರೆ.

ಹೆದ್ದಾರಿ ತಡೆ ಪ್ರತಿಭಟನೆ ಅನಿವಾರ್ಯ: ಕಾಮಗಾರಿಗೆ ಎಲ್ಲ ರೀತಿಯ ಸಹಕಾರವನ್ನು ನೀಡಿದೆವು. ಬಾರಿಕೆ ಪ್ರದೇಶದ ಸಂಪರ್ಕ ರಸ್ತೆಯನ್ನು ಹೆದ್ದಾರಿಗೆ ಜೋಡಿಸುವ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಸತತ ಮನವಿಯನ್ನೂ ಕಡೆಗಣಿಸಲಾಗಿದೆ. ಯಾರಿಂದಲೂ ಸ್ಪಂದನವಿಲ್ಲ. ದಿನ ನಿತ್ಯ ಜೀವವನ್ನು ಅಪಾಯಕ್ಕೊಡ್ಡಿ ಈ ಭಾಗದಲ್ಲಿ ನಡೆದಾಡಬೇಕಾದ ದುಸ್ಥಿತಿ ನಮ್ಮದಾಗಿದೆ. ಒಂದು ವಾರದ ಗಡುವು ನೀಡಲಾಗುವುದು. ಸಮಸ್ಯೆಗೆ ಪರಿಹಾರ ಸಿಗದಿದ್ದರೆ ಹೆದ್ದಾರಿ ತಡೆ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ಸ್ಥಳೀಯ ನಿವಾಸಿ, ಸಾಮಾಜಿಕ ಕಾರ್ಯಕರ್ತ ಕಿಶೋರ್ ಎಚ್ಚರಿಸಿದ್ದಾರೆ. ............ಹೆದ್ದಾರಿ ಅಗಲೀಕರಣ ಕಾಮಗಾರಿಯ ಕಾರಣಕ್ಕೆ ಗ್ರಾಮದ ಹಲವೆಡೆ ಸಮಸ್ಯೆಗಳು ಕಾಣಿಸಿವೆ. ಕೆಲವೆಡೆ ಬಗೆಹರಿಸಿದ್ದಾರೆ. ನೀರಕಟ್ಟೆ - ಬಾರಿಕೆ ಸಂಪರ್ಕ ಸೇತುವೆಯ ವಿಚಾರದಲ್ಲಿ ಹೆದ್ದಾರಿ ಇಲಾಖಾಧಿಕಾರಿಗಳು ಕ್ರಿಯಾಯೋಜನೆ ಸಿದ್ಧವಾಗಿದೆ, ಆ ಭಾಗದ ಅಗತ್ಯ ಕಾಮಗಾರಿಗಳು ಪೂರ್ಣಗೊಂಡ ತಕ್ಷಣವೇ ಕಿರು ಸೇತುವೆ ನಿರ್ಮಿಸಲಾಗುವುದೆಂದು ಹೇಳುತ್ತಾ ಬಂದಿದ್ದಾರೆ. ಈಗ ಮಳೆಗಾಲವಾದ್ದರಿಂದ ಸಂಚಾರಕ್ಕೆ ತೀವ್ರ ಸಮಸ್ಯೆಯಾಗುತ್ತಿದೆ. ನಮಗೆ ಪಂಚಾಯಿತಿಯಿಂದ ಏನೂ ಮಾಡಲು ಆಗುತ್ತಿಲ್ಲ.

- ಗಂಗಾಧರ ಪಿ.ಎನ್‌. ಬಜತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ

Share this article