ಮೋಡ ಮುಸುಕಿದ ವಾತಾವರಣ ಬಿಳಿಜೋಳ ಬೆಳೆದ ರೈತರಲ್ಲಿ ಆತಂಕ

KannadaprabhaNewsNetwork | Published : Dec 28, 2024 1:03 AM

ಸಾರಾಂಶ

ಕಡಿಮೆ ಖರ್ಚಿನಲ್ಲಿ ಬೆಳೆ ಕೈಗೆ ಬರುವ ಬಿಳಿ ಜೋಳಕ್ಕೆ ಸದ್ಯ ವಾತಾವರಣದ ವೈಪರಿತ್ಯದಿಂದ ತೆನೆಯ ಕಾಳು ಕೆಟ್ಟು ಹೋಗುವ ಸಂಭವ

ಮಹದೇವಪ್ಪ ಎಂ. ಸ್ವಾಮಿ ಶಿರಹಟ್ಟಿ

ಕಳೆದ ವಾರದಿಂದ ಹವಾಮಾನದಲ್ಲಿ ಬದಲಾವಣೆಯಾಗಿ ಮೋಡ ಕವಿದ ವಾತಾವರಣ, ಹನಿ ಹನಿ ಮಳೆ ಬೀಳುತ್ತಿರುವುದರಿಂದ ಬಿಳಿ ಜೋಳ ಬೆಳೆದ ರೈತರಲ್ಲಿ ಆತಂಕ ಮೂಡಿಸಿದೆ.

ಬಿಳಿ ಜೋಳ ತೆನೆ ಹಾಕುವ ವೇಳೆಯಲ್ಲಿ ಮಳೆ, ಗಾಳಿ ಬೀಸುತ್ತಿರುವುದು ರೈತರಲ್ಲಿ ಭಯದ ವಾತಾವರಣ ಮೂಡಿಸಿದೆ. ಕಳೆದ ೨-೩ ತಿಂಗಳಿಂದ ಪಾಲನೆ ಪೋಷಣೆ ಮಾಡಿದ ಬಿಳಿ ಜೋಳ ಇನ್ನೇನು ಕೈಗೆ ಬರುವ ವೇಳೆ ಮಳೆ, ಗಾಳಿ ಹಾಗೂ ಮೋಡ ಮುಸುಕಿದ ವಾತಾವರಣದಿಂದ ಬೆಳೆ ಕೈಗೆ ಬರುತ್ತಿದೆಯೋ ಹೇಗೆ ಎಂಬ ಚಿಂತೆ ರೈತರನ್ನು ಕಾಡುತ್ತಿದೆ. ಮಳೆ ಆಧಾರಿತ ಕೃಷಿ ಭೂಮಿ ಹೊಂದಿರುವ ಈ ಭಾಗದಲ್ಲಿ ಬಿಳಿ ಜೋಳ ಪ್ರಮುಖ ಆಹಾರ ಬೆಳೆಯಾಗಿ ಬೆಳೆಯುತ್ತಾರೆ. ಬಹುತೇಕ ಕಪ್ಪು ಭೂಮಿಯಾಗಿದ್ದರಿಂದ ಬಿಳಿ ಜೋಳಕ್ಕೆ ಹೇಳಿ ಮಾಡಿಸಿದ ಭೂಮಿಯಾಗಿದೆ. ಬಿತ್ತನೆಗೆ ಪೂರ್ವದಲ್ಲಿ ಮಾತ್ರ ಮಳೆ ಬಿದ್ದು ಭೂಮಿ ಹಸಿಯಾದರೆ ಸಾಕು ನಂತರ ಚಳಿಗೆ ಬೆಳೆದು ಫಲ ನೀಡುವ ಬೆಳೆ ಇದಾಗಿದೆ.

ಕಡಿಮೆ ಖರ್ಚಿನಲ್ಲಿ ಬೆಳೆ ಕೈಗೆ ಬರುವ ಬಿಳಿ ಜೋಳಕ್ಕೆ ಸದ್ಯ ವಾತಾವರಣದ ವೈಪರಿತ್ಯದಿಂದ ತೆನೆಯ ಕಾಳು ಕೆಟ್ಟು ಹೋಗುವ ಸಂಭವ ಹೆಚ್ಚಾಗಿದೆ. ಮಳೆಯಿಂದ ಕಾಳು ಕಟ್ಟಿದ್ದ ತೆನೆಗಳು ಕಪ್ಪು ಬಣ್ಣಕ್ಕೆ ತಿರುಗುವ ಸಂಭವ ಹೆಚ್ಚಾಗಿದೆ. ಕಳೆದ ವರ್ಷ ಇದೇ ರೀತಿ ಮಳೆ, ಗಾಳಿ ಬಂದಿದ್ದರಿಂದ ಬಹುತೇಕ ರೈತರ ಜೋಳದ ಕಾಳುಗಳು ಕಪ್ಪು ಬಣ್ಣಕ್ಕೆ ತಿರುಗಿ ನಷ್ಟ ಅನುಭವಿಸಿದ್ದರು.

ತಾಲೂಕಿನಲ್ಲಿ ಸದ್ಯದ ವಾತಾವರಣ ನೋಡಿದರೆ ಕೆಡುಕಿನ ಮಳೆ ಶುರುವಾಗುವ ಲಕ್ಷಣ ಕಂಡುಬರುತ್ತಿದೆ. ಕಳೆದ ವರ್ಷವೂ ಮಳೆ, ಗಾಳಿಗೆ ಸಿಕ್ಕು ಫಜೀತಿ ಪಟ್ಟಿರುವ ರೈತರು ಇನ್ನೊಂದು ತಿಂಗಳು ಮಳೆ ತಡೆದರೆ ಸಾಕು ಹಿಂಗಾರು ಹಂಗಾಮಿನ ಫಸಲಿನ ರಾಶಿ ಕಾರ್ಯ ಪೂರ್ಣಗೊಳ್ಳುತ್ತದೆ. ಆದರೆ ಏನು ಮಾಡೋದು ನಾವು ಅಂದುಕೊಂಡಂತೆ ನಡೆಯುವುದಿಲ್ಲವಲ್ಲ ಎಂದು ರೈತರು ಚಿಂತಿಸತೊಡಗಿದ್ದಾರೆ.

ಪಕ್ಷಿಗಳ ಕಾಟಕ್ಕೆ ಬೇಸತ್ತ ರೈತರು: ಬೆಳೆದು ನಿಂತಿರುವ ಬಿಳಿ ಜೋಳಕ್ಕೆ ಪಕ್ಷಿಗಳ ಕಾಟ ಹೆಚ್ಚಾಗಿದ್ದು, ರೈತರು ಬೇಸತ್ತು ಹೋಗಿದ್ದಾರೆ. ಪಕ್ಷಿಗಳು ಹಿಂಡುಗಟ್ಟಲೆ ಹಾರಾಡಿಕೊಂಡು ಒಮ್ಮೆಲೆ ದಾಳಿ ಮಾಡುವುದರಿಂದ (ಹಾಲುಗಾಳು) ಜೋಳ ನಾಶ ಮಾಡುತ್ತಿರುವುದರಿಂದ ರೈತರು ಬೆಳೆ ರಕ್ಷಣೆಗೆ ಬೆಳಗಿನ ಜಾವ ಕೊರೆಯುವ ಚಳಿಯಲ್ಲಿಯೇ ಜಮೀನಿನಲ್ಲಿ ಪಕ್ಷಿಗಳನ್ನು ಓಡಿಸಲು ತಟ್ಟೆ ಅಥವಾ ಡ್ರಮ್‌ ಹಿಡಿದು ಬಾರಿಸುತ್ತಾ ಶಬ್ದ ಮಾಡುತ್ತಿದ್ದಾರೆ. ಶಬ್ದ ಮಾಡಿದರೆ ಸ್ವಲ್ಪ ಪಕ್ಷಿಗಳ ಕಾಟ ಕಡಿಮೆಯಾಗುತ್ತದೆ. ಇದಕ್ಕೆಂದೇ ದಿನಪೂರ್ತಿ ನಿಲ್ಲಬೇಕಾಗುತ್ತದೆ.

ತಾಲೂಕಿನಲ್ಲಿ ಹಿಂಗಾರು ಬಿಳಿಜೋಳ ೪.೩೦೦ ಹೆಕ್ಟೇರ್, ಕಡಲೆ ೫.೪೭೫ ಹೆಕ್ಟೇರ್ ಹಾಗೂ ಕುಸುಬೆ ೪೫೫ ಹೆಕ್ಟೇರ್ ಬಿತ್ತನೆ ಮಾಡಲಾಗಿದೆ. ಮೋಡ ಕವಿದ ವಾತಾವರಣ, ಅಕಾಲಿಕ ಮಳೆ ಸುರಿದರೆ ಕಾಳು ಕಟ್ಟುವ ಹಂತದಲ್ಲಿರುವ ಬಿಳಿ ಜೋಳದ ತೆನೆಗೆ ನೀಡು ಬಡಿದರೆ ಬೆಳೆಗೆ ಕಾಡಿಗೆ ರೋಗ ಬರುವ ಸಾಧ್ಯತೆ ಹೆಚ್ಚಾಗಿದೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ರೇವಣೆಪ್ಪ ಮನಗೂಳಿ ತಿಳಿಸಿದ್ದಾರೆ.

ಬೇಗ ಬಿತ್ತನೆ ಮಾಡಿದ ಜೋಳ ಈಗ ಕಾಳು ಕಟ್ಟುವ ಹಂತದಲ್ಲಿದೆ. ಜಮೀನಿನಲ್ಲಿ ಬೆಳೆದ ಜೋಳಕ್ಕೆ ಹಕ್ಕಿಗಳ ಕಾಟ ಒಂದೆಡೆಯಾದರೆ ಹವಾಮಾನ ವೈಪರಿತ್ಯದ ಪರಿಣಾಮ ಅಕಾಲಿಕ ಮಳೆ ಸುರಿದರೆ ಬಿಳಿಜೋಳ ಕಪ್ಪು ಬಣ್ಣಕ್ಕೆ ತಿರುಗಿ ದರ ಕುಸಿತವಾಗಿ ನಷ್ಟ ಅನುಭವಿಸುವಂತಾಗುತ್ತಿದೆ ಎಂದು ರೈತ ತಿರಕಪ್ಪ ಬಂಕಾಪೂರ ಹೇಳಿದರು.

Share this article