ಕನ್ನಡಪ್ರಭ ವಾರ್ತೆ, ಬೆಂಗಳೂರು
‘ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅತ್ಯುತ್ತಮ ಅಭ್ಯರ್ಥಿ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಲೋಕಸಭೆಗೆ ನಂಬರ್ ಒನ್ ಅಭ್ಯರ್ಥಿ.
ಇಬ್ಬರ ಬಗ್ಗೆಯೂ ಸಮೀಕ್ಷೆ ಮಾಡಿಸಿ, ಉತ್ತಮ ಕ್ಷೇತ್ರ ಕೊಡಲಿ’ ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿಕೆ ನೀಡಿದ್ದಾರೆ.ಅಗತ್ಯ ಬಿದ್ದರೆ ಸಚಿವರು ತ್ಯಾಗಕ್ಕೆ ಸಿದ್ಧರಾಗಬೇಕಾಗುತ್ತದೆ ಎಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ ಕುರಿತ ಪ್ರಶ್ನೆಗೆ ತಾಳ್ಮೆ ಕಳೆದುಕೊಂಡ ಮಹದೇವಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎದುರೇ ಈ ಹೇಳಿಕೆ ನೀಡಿದರು.
ಜತೆಗೆ, ಯಾವುದೇ ಕಾರಣಕ್ಕೂ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸಿದ್ದರಾಮಯ್ಯ ಎದುರೇ ಸ್ಪಷ್ಟಪಡಿಸಿದರು.ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರು.
ಹೀಗಾಗಿ, ಅವರು ಆ ರೀತಿ ಹೇಳಲೇಬೇಕು. ನಾನು ಬೇಕಾದಷ್ಟು ತ್ಯಾಗ ಮಾಡಿದ್ದೀನಿ. ನಾನು ಎಂದೂ ಅಧಿಕಾರಕ್ಕಾಗಿ ಹಾತೊರೆದವನಲ್ಲ. ಸಿದ್ಧಾಂತಕ್ಕಾಗಿ ಹೋರಾಟ ಮಾಡುವವನು.
ನಾನು ಲೋಕಸಭೆಗೆ ಸ್ಪರ್ಧಿಸುವುದಿಲ್ಲ. ಬದಲಿಗೆ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದರೂ ಅವರ ಪರ ಕೆಲಸ ಮಾಡುತ್ತೇನೆ. ರಾಜ್ಯದಲ್ಲಿ 20 ಸ್ಥಾನ ಗೆಲ್ಲುವ ವಿಶ್ವಾಸ ಇದೆ ಎಂದರು.
ಸಮೀಕ್ಷಾ ವರದಿಯಲ್ಲಿ ನಿಮ್ಮ ಹೆಸರಿದೆ ಎಂಬ ಪ್ರಶ್ನೆಗೆ, ‘ಸಮೀಕ್ಷೆ ಮೂಲಕ ನನ್ನ ಹೆಸರು ಬರಬೇಕಾ?. ನಾನು ರಾಜಕೀಯಕ್ಕೆ ಬಂದು 40 ವರ್ಷ ಕಳೆದಿದೆ.
ನನಗಾಗಲಿ ಅಥವಾ ನನ್ನ ಪುತ್ರ ಸುನಿಲ್ ಬೋಸ್‌ಗಾಗಲಿ ಟಿಕೆಟ್ ಕೊಡಿ ಎಂದು ಜನರೇ ಹೇಳುತ್ತಿದ್ದಾರೆ. ಆದರೆ, ನಾನು ಸ್ಪರ್ಧಿಸುವುದಿಲ್ಲ. ಪುತ್ರನಿಗೆ ಟಿಕೆಟ್ ನೀಡಿ ಎಂದೂ ಕೇಳಲ್ಲ. ಅದು ಹೈಕಮಾಂಡ್‌ಗೆ ಬಿಟ್ಟ ವಿಚಾರ’ ಎಂದು ಹೇಳಿದರು.
ನನ್ನ ಮಗನ ಹೆಸರು ಪ್ಯಾನೆಲ್‌ನಲ್ಲಿ ಇದೆ. ಮೂರು ಚುನಾವಣೆಯಲ್ಲಿ ಆತ ಆಕಾಂಕ್ಷಿಯಾಗಿದ್ದ. ಪಕ್ಷ ಅವಕಾಶ ನೀಡದಿದ್ದರೂ ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ. ಅವರಿಗೆ ಅವಕಾಶ ನೀಡುವುದು ಪಕ್ಷಕ್ಕೆ ಬಿಟ್ಟ ವಿಚಾರ ಎಂದು ಮಹದೇವಪ್ಪ ಅವರು ಸ್ಪಷ್ಟಪಡಿಸಿದರು.