ಎಚ್ಡಿಕೆ ‘ಗ್ಯಾರಂಟಿ’ ಹೇಳಿಕೆಗೆ ಸಿಎಂ, ಡಿಸಿಎಂ ಕಿಡಿ

KannadaprabhaNewsNetwork | Updated : Apr 15 2024, 10:35 AM IST

ಸಾರಾಂಶ

ರಾಜ್ಯ ಕಾಂಗ್ರೆಸ್‌ ಸರ್ಕಾರದ ‘ಗ್ಯಾರಂಟಿ’ ಯೋಜನೆಗಳಿಂದ ನಮ್ಮ ಹಳ್ಳಿಯ ಹೆಣ್ಣುಮಕ್ಕಳು ದಾರಿ ತಪ್ಪಿದ್ದಾರೆ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಮಡಿಕೇರಿ : ರಾಜ್ಯ ಕಾಂಗ್ರೆಸ್‌ ಸರ್ಕಾರದ ‘ಗ್ಯಾರಂಟಿ’ ಯೋಜನೆಗಳಿಂದ ನಮ್ಮ ಹಳ್ಳಿಯ ಹೆಣ್ಣುಮಕ್ಕಳು ದಾರಿ ತಪ್ಪಿದ್ದಾರೆ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಮಾರಸ್ವಾಮಿಗೆ ಹೆಣ್ಣು ಮಕ್ಕಳ ಬಗ್ಗೆ ಕಳಕಳಿಯಿಲ್ಲ ಎಂದು ಸಿಎಂ ಕಿಡಿ ಕಾರಿದ್ದರೆ, ಮಹಿಳೆಯರನ್ನು ಅವಮಾನಿಸಿದ ಕುಮಾರಸ್ವಾಮಿ ಬೆಂಬಲಿತ ಪಕ್ಷಕ್ಕೆ ತಕ್ಕ ಪಾಠ ಕಲಿಸಿ ಎಂದು ಡಿ.ಕೆ.ಶಿವಕುಮಾರ್‌ ಕರೆ ನೀಡಿದ್ದಾರೆ.

ತುಮಕೂರು ಜಿಲ್ಲೆ ತುರುವೇಕೆರೆ ಪಟ್ಟಣದಲ್ಲಿ ಶನಿವಾರ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಪರ ಪ್ರಚಾರ ಭಾಷಣದಲ್ಲಿ ಮಾತನಾಡಿದ ಕುಮಾರಸ್ವಾಮಿ, ಗ್ಯಾರಂಟಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಭಾನುವಾರ ಮಡಿಕೇರಿಯ ಗಾಲ್ಫ್ ಗ್ರೌಂಡ್ ಹೆಲಿಪ್ಯಾಡ್‌ನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಎಚ್‌ಡಿಕೆಯವರ ಹೇಳಿಕೆಯಿಂದ ಅವರ ಮನಃಸ್ಥಿತಿ ಹೇಗಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ದಾರಿ ತಪ್ಪಿದ್ದಾರೆ ಎಂದರೇನು?. ಅವರ ಹೇಳಿಕೆಯಿಂದ ಹೆಣ್ಣುಮಕ್ಕಳ ಬಗ್ಗೆ ಅವರಿಗಿರುವ ಭಾವನೆ ಏನು ಎಂಬುದು ಅರ್ಥವಾಗುತ್ತದೆ. 2 ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು ಅವರು, ಈ ರೀತಿ ಮಾತನಾಡಿದರೆ ಜನ ಸಹಿಸುತ್ತಾರೆಯೇ ಎಂದು ಕಿಡಿ ಕಾರಿದರು.

ಇದೇ ವೇಳೆ, ಮಡಿಕೇರಿಯ ಗಾಂಧಿ ಮೈದಾನದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್‌, ಮಹಿಳೆಯರನ್ನು ಅವಮಾನಿಸಿದ ಕುಮಾರಸ್ವಾಮಿ ಬೆಂಬಲಿತ ಪಕ್ಷಕ್ಕೆ ತಕ್ಕ ಪಾಠ ಕಲಿಸಿ ಎಂದು ಜನರಿಗೆ ಕರೆ ನೀಡಿದರು. ಬಿಜೆಪಿಯ ಮೈತ್ರಿ ಪಕ್ಷವಾದ ಜೆಡಿಎಸ್‌ನ ಕುಮಾರಸ್ವಾಮಿಯವರು ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆ ಬಗ್ಗೆ ಟೀಕಿಸಿದ್ದಾರೆ. ತಾಯಂದಿರ ಮನೆ ಬೆಳಗಬೇಕು ಎಂಬುದೇ ಕಾಂಗ್ರೆಸ್ ಗುರಿಯಾಗಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಮಹಿಳೆಯರಿಗೆ ಸೂಕ್ತ ಗೌರವ ನೀಡಿದೆ. ಗ್ಯಾರಂಟಿ ಯೋಜನೆಗಳ ಮೂಲಕ ಮಹಿಳೆಯರಿಗೆ ಕಾಂಗ್ರೆಸ್ ಶಕ್ತಿ ತುಂಬುವ ಕೆಲಸ ಮಾಡಿದೆ. ಆದರೆ, ಇಂತಹ ಯೋಜನೆ ಬಗ್ಗೆ ಕುಮಾರಸ್ವಾಮಿ ಟೀಕೆ ಮಾಡುತ್ತಿದ್ದಾರೆ. ಯೋಜನೆಯಿಂದ ಹೆಣ್ಣು ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆ ಮಾನವ ಕುಲಕ್ಕೇ ಮಾಡಿದ ಅವಮಾನ ಎಂದರು.

‘ಕಾವೇರಿ ಭೂಮಿಯಲ್ಲಿ ನಿಂತು ನಾನು ಕೇಳುತ್ತಿದ್ದೇನೆ, ಮಹಿಳೆಯರಿಗೆ ಅಗೌರವ ಉಂಟು ಮಾಡುವ ಕುಮಾರಸ್ವಾಮಿಯಂತಹ ರಾಜಕಾರಣಿಯನ್ನು ಮೈತ್ರಿ ಪಕ್ಷದಲ್ಲಿ ಇಟ್ಟುಕೊಳ್ಳಲು ಬಯಸುತ್ತೀರಾ ಮೋದಿಯವರೇ’ ಎಂದು ಡಿಕೆಶಿ ಪ್ರಶ್ನಿಸಿದರು.

ಎಚ್‌ಡಿಕೆ ವಿರುದ್ಧ ಇಂದಿನಿಂದಲೇ ರಾಜ್ಯವ್ಯಾಪಿ ಕಾಂಗ್ರೆಸ್‌ ಹೋರಾಟ:

‘ಗ್ಯಾರಂಟಿ ಯೋಜನೆಗಳಿಂದ ಹಳ್ಳಿ ಮಹಿಳೆಯರು ದಾರಿ ತಪ್ಪಿದ್ದಾರೆ’ ಎಂಬ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರ ಹೇಳಿಕೆಯನ್ನು ಲೋಕಸಭಾ ಚುನಾವಣೆಗೆ ಪ್ರಮುಖ ಅಸ್ತ್ರವಾಗಿ ಬಳಸಿಕೊಳ್ಳಲು ಕಾಂಗ್ರೆಸ್‌ ತೀರ್ಮಾನಿಸಿದೆ. ಅಲ್ಲದೆ, ಚುನಾವಣೆ ಮುಗಿಯುವವರೆಗೂ ಈ ವಿಷಯ ಜೀವಂತವಾಗಿಡಲು ನಿರ್ಧರಿಸಿದೆ.ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ರಾತ್ರಿ ಜೂಮ್ ಆ್ಯಪ್‌ ಮೂಲಕ ಸಭೆ ನಡೆಸಿ ಕುಮಾರಸ್ವಾಮಿ ಅವರ ಹೇಳಿಕೆ ವಿರುದ್ಧ ಸೋಮವಾರದಿಂದಲೇ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ತಮ್ಮ ಪಕ್ಷದ ಎಲ್ಲಾ ಮುಂಚೂಣಿ ಘಟಕಗಳು, ಜಿಲ್ಲಾ ಘಟಕಗಳ ಪದಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರುಗಳು, ಮುಖಂಡರುಗಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.ಅಲ್ಲದೆ, ಮಹಿಳೆಯರ ಬಗ್ಗೆ ಕುಮಾರಸ್ವಾಮಿ ಅವರು ಅವಮಾನಕರ ರೀತಿಯಲ್ಲಿ ಹೇಳಿಕೆ ನೀಡಿರುವುದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗ ಮತ್ತು ರಾಜ್ಯ ಮತ್ತು ಕೇಂದ್ರ ಮಹಿಳಾ ಆಯೋಗಗಳಿಗೆ ದೂರು ನೀಡಲು ಕೂಡ ಸೂಚಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.ದಾರಿ ತಪ್ಪಿರುವುದು ಎಚ್‌ಡಿಕೆ: ಕಾಂಗ್ರೆಸ್‌ ಆಕ್ರೋಶ:

‘ಗ್ಯಾರಂಟಿ ಯೋಜನೆಗಳಿಂದ ಹಳ್ಳಿ ಮಹಿಳೆಯರು ದಾರಿ ತಪ್ಪಿದ್ದಾರೆ’ ಎಂದು ಹೇಳಿಕೆ ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮೇಲೆ ಆಡಳಿತಾರೂಢ ಕಾಂಗ್ರೆಸ್‌ ನಾಯಕರು ಮುಗಿಬಿದ್ದಿದ್ದು, ನಿಜವಾಗಿ ದಾರಿ ತಪ್ಪಿರುವುದು ಕುಮಾರಸ್ವಾಮಿ ಅವರೇ ಹೊರತು ಮಹಿಳೆಯರಲ್ಲ ಎಂದು ತಿರುಗೇಟು ನೀಡಿದ್ದಾರೆ.

ತಮ್ಮ ಹೇಳಿಕೆ ಮೂಲಕ ಕುಮಾರಸ್ವಾಮಿ ಅವರು ದುಡಿಯುವ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ. ಇದರ ವಿರುದ್ಧ ಕಾಂಗ್ರೆಸ್‌ ಹೋರಾಟ ನಡೆಸುತ್ತದೆ, ಚುನಾವಣಾ ಆಯೋಗಕ್ಕೂ ದೂರು ನೀಡುತ್ತದೆ ಎಂದೂ ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.ಈ ಸಂಬಂಧ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ, ಸಚಿವ ಕೃಷ್ಣ ಬೈರೇಗೌಡ, ಮಾಜಿ ಸಂಸದ ವಿ.ಎಸ್‌.ಉಗ್ರಪ್ಪ ಸೇರಿದಂತೆ ಆಡಳಿತ ಪಕ್ಷದ ಇನ್ನಿತರೆ ನಾಯಕರು ಭಾನುವಾರ ಕುಮಾರಸ್ವಾಮಿ ಅವರ ಹೇಳಿಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಕುಮಾರಸ್ವಾಮಿ ಅವರದ್ದು ಆತ್ಮ ವಂಚನೆಯ ಹೇಳಿಕೆ. ಅವರ ಈ ಮನಸ್ಥಿತಿ ಮಹಿಳೆಯರಿಗೆ ಮಾತ್ರವಲ್ಲ ಇಡೀ ಮಾನವೀಯ ಸಮಾಜಕ್ಕೆ ಮಾಡಿದ ಅಗೌರವ. ಇದು ಆತ್ಮವಂಚನೆ ಹೇಳಿಕೆ ಅಲ್ಲ ಎನ್ನುವುದಾದರೆ ಎನ್‌ಡಿಎ ಒಕ್ಕೂಟ ಅಧಿಕಾರಕ್ಕೆ ಬಂದರೆ ಗ್ಯಾರಂಟಿಗಳನ್ನು ರದ್ದು ಮಾಡುತ್ತೇವೆ ಎಂದು ಹೇಳಿಕೆ ನೀಡಲಿ ಎಂದು ಸವಾಲು ಹಾಕಿದರು.ನಮ್ಮ ಸರ್ಕಾರ ಕ್ಲಬ್ಬಿಗೆ ಹೋಗುವ ಮಹಿಳೆಯರಿಗೆ ಗ್ಯಾರಂಟಿ ಕೊಡುತ್ತಿಲ್ಲ. ಗಾರ್ಮೆಂಟ್ಸ್‌, ಬೀದಿ ಬದಿ ವ್ಯಾಪಾರಿಗಳು, ಬಡವರು, ಕೂಲಿ ಕಾರ್ಮಿಕರಿಗೆ ಸಹಾಯ ಮಾಡುತ್ತಿದೆ. ನಿಮ್ಮ ಪ್ರಕಾರ ದಾರಿ ತಪ್ಪಿರುವವರು ಯಾರು? ಶಕ್ತಿ ಯೋಜನೆ ಉಪಯೋಗಿಸಿಕೊಂಡು ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯದಂತಹ ಪುಣ್ಯಕ್ಷೇತ್ರಗಳಿಗೆ ಹೋದವರಾ? ಗಂಡನನ್ನು ಕಳೆದುಕೊಂಡರೂ ಗೃಹಲಕ್ಷ್ಮಿ ಯೋಜನೆಯಿಂದ ತಮ್ಮ ಮಕ್ಕಳ ಶಾಲಾ ಶುಲ್ಕ ಕಟ್ಟಿ ಓದಿಸುತ್ತಿರುವ ತಾಯಂದಿರಾ? ಯಾರು ದಾರಿ ತಪ್ಪಿದವರು? ಅಸಂಖ್ಯಾತ ತಾಯಂದಿರು ಮನೆಯಲ್ಲಿ ದುಡಿಯದೆ ಹೋಗಿದ್ದರೆ ನಮ್ಮಂತಹ, ನಿಮ್ಮಂತಹವರು ಇಂತಹ ಸ್ಥಾನಕ್ಕೆ ಬರುತ್ತಿರಲಿಲ್ಲ ಎನ್ನುವುದು ನೆನಪಿರಲಿ ಎಂದರು.

ಕುಮಾರಸ್ವಾಮಿ ಅವರ ಹೇಳಿಕೆ ನೋಡಿದರೆ ಮಹಿಳೆಯರು ನಾಲ್ಕು ಗೋಡೆಯ ಮಧ್ಯೆ ತಮ್ಮ ಅಡಿಯಾಳಾಗಿರಬೇಕೆಂಬ ಮನಸ್ಥಿತಿಯ ಸಂಕೇತನವನ್ನು ತೋರಿಸುತ್ತದೆ. ಮನುವಾದದ ಅಸಮಾಧಾನಗಳು ಇವತ್ತಿಗೂ ನಮ್ಮ ಮನಸ್ಸಿನಿಂದ ಹೋಗಿಲ್ಲ ಎನ್ನುವುದಕ್ಕೆ ಸಾಕ್ಷಿ. ಇದರ ವಿರುದ್ಧ ಕಾಂಗ್ರೆಸ್‌ ಹೋರಾಟ ನಡೆಸುತ್ತದೆ ಎಂದರು.

ಅಕ್ಷಮ್ಯ- ಸುರ್ಜೇವಾಲಾ:ನಿಜವಾಗಿ ದಾರಿ ತಪ್ಪಿದವರು ನೀವೇ ಹೊರತು ಮಹಿಳೆಯರಲ್ಲ ಮಿಸ್ಟರ್‌ ಕುಮಾರಸ್ವಾಮಿಯವರೇ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಹರಿಹಾಯ್ದಿದ್ದಾರೆ.

ಹಿಂದೆ ಸುಮಲತಾ ಅವರನ್ನು ಎಲ್ಲಿ ಮಲಗಿದ್ದೆ ಎಂದು ಕೇಳಿದ್ದಿರಿ. ಈಗ ಒಂದು ಹೆಜ್ಜೆ ಮುಂದೆ ಹೋಗಿ ಇಡೀ ರಾಜ್ಯದ ಮಹಿಳೆಯರ ನಡತೆಗೆ ಕಪ್ಪು ಚುಕ್ಕೆ ತರುವಂತಹ ಮಾತನಾಡಿದ್ದಿರಿ. ಇದು ನಿಜವಾಗಿಯೂ ಅಕ್ಷಮ್ಯ. ಮಹಿಳೆಯರು ಸಬಲರಾಗುವುದನ್ನು ಕಂಡು ಸಹಿಸಲಾಗದೆ ಇಂತಹ ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆ ಎಂದು ಅವರು ‘ಎಕ್ಸ್‌’ ಖಾತೆ ಮೂಲಕ ಪ್ರತಿಕ್ರಿಯಿಸಿದ್ದಾರೆ.ಚುನಾವಣಾ ಆಯೋಗಕ್ಕೆ ದೂರು- ಉಗ್ರಪ್ಪ:

ಕುಮಾರಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಮಾಜಿ ಸಂಸದ ವಿ.ಎಸ್‌.ಉಗ್ರಪ್ಪ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ಬಾರಿ ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿ ಅವರಿಗೆ ಮಹಿಳೆಯರ ಬಗ್ಗೆ ಗೌರವಯುತವಾಗಿ ಮಾತನಾಡಬೇಕೆಂಬ ಕನಿಷ್ಠ ಜ್ಞಾನವೂ ಇಲ್ಲದಂತಾಗಿದೆ. ತಮ್ಮ ಹೇಳಿಕೆ ಮೂಲಕ ದುಡಿಯುವ ಮಹಿಳೆಯರಿಗೆ ಅವರು ಅಪಮಾನ ಮಾಡಿದ್ದಾರೆ. ಇದು ಸಂವಿಧಾನಕ್ಕೂ ಮಾಡಿರುವ ಅಪಮಾನ. ಬಿಜೆಪಿಯೊಂದಿಗೆ ಸೇರಿ ಈ ರೀತಿ ಹೇಳಿಕೆ ನೀಡುವ ಮೂಲಕ ಅವರೂ ಮನುವಾದಿಯಾಗಿದ್ದಾರೆ ಎಂದು ಕಿಡಿಕಾರಿದರು.

ಸ್ತ್ರೀಯರಿಗೆ ಅಪಮಾನವಾಗುವ ರೀತಿಯಲ್ಲಿ ಮಾತಾಡಿಲ್ಲ: ಎಚ್‌ಡಿಕೆ

ಗ್ಯಾರಂಟಿಗಳ ಬಗ್ಗೆ ಹೇಳಿದ್ದೇನೆಯೇ ಹೊರತು ಮಹಿಳೆಯರಿಗೆ ಅಪಮಾನ ಮಾಡುವ ರೀತಿಯಲ್ಲಿ ನಾನು ಮಾತನಾಡಿಲ್ಲ. ಅನಗತ್ಯವಾಗಿ ಕಾಂಗ್ರೆಸ್ ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಸಮಜಾಯಿಷಿ ನೀಡಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರಿಗೆ ಬರ, ನೀರಿನ ಸಮಸ್ಯೆಗಿಂತ ರಾಜಕೀಯವೇ ಹೆಚ್ಚಾಗಿದೆ. ಸಿದ್ದರಾಮಯ್ಯ ಅವರ ಬಳಿ ಈ ಬಗ್ಗೆ ಹೇಳುವುದಕ್ಕೆ ಏನಿದೆ? ನಾನು ಹೇಳಿದ್ದೇ ಬೇರೆ, ಇವರು ತಿರುಚಿ ಹೇಳಿದ್ದೇ ಬೇರೆ. ಗ್ಯಾರಂಟಿಗಳ ಹೆಸರಲ್ಲಿ ನಿಮ್ಮನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದಷ್ಟೇ ಹೇಳಿದ್ದೇನೆ. ನಾನು ಮಹಿಳೆಯರನ್ನು ಅವಮಾನ ಮಾಡಿದ್ದೀನಾ? ಖಂಡಿತಾ ಇಲ್ಲ. ಮುಗ್ಧ ಜನರನ್ನು, ಮಹಿಳೆಯರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದಿದ್ದೇನೆ. ನೀವು ಎಚ್ಚರಿಕೆಯಿಂದ ಇರಿ ಎಂದು ಹೇಳಿದ್ದೇನೆ ಎಂದರು.

ನಾನಾಗಲಿ, ನನ್ನ ಕುಟುಂಬವಾಗಲಿ ಮಹಿಳೆಯರ ಬಗ್ಗೆ ಅಗೌರವದಿಂದ ನಡೆದುಕೊಂಡಿಲ್ಲ. ನಡೆದುಕೊಳ್ಳುವುದೂ ಇಲ್ಲ. ಕಷ್ಟ ಅಂತ ಬಂದಾಗ ನಾನು ನೆರವಾಗಿದ್ದೇನೆ. ಅಧಿಕಾರ ಸಿಕ್ಕಾಗ ಮಹಿಳೆಯರಿಗಾಗಿ ಒಳ್ಳೆಯ ಕಾರ್ಯಕ್ರಮ ಕೊಟ್ಟಿದ್ದೇನೆ. ಮಹಿಳೆಯರ ಬಗ್ಗೆ ನಾನು ಕೇವಲವಾಗಿ ಮಾತನಾಡುವ ವ್ಯಕ್ತಿ ಅಲ್ಲ. ಅವರನ್ನು ಅಸಡ್ಡೆಯಿಂದ ಕಂಡಿಲ್ಲ. ಮಹಿಳೆಯರಿಗೆ ಅವಮಾನ ಆಗುವ ರೀತಿ ಎಲ್ಲೂ ಹೇಳಿಲ್ಲ. ನಾನು ಏನು ಹೇಳಿದ್ದೇನೆ ಎನ್ನುವುದನ್ನು ಅರ್ಥ ಮಾಡಿಕೊಳ್ಳದೇ ಈ ರೀತಿ ಹೇಳುತ್ತಿದ್ದಾರೆ. ರಾಜಕೀಯದಲ್ಲಿ ನನಗೆ ಶಕ್ತಿ ಇದೆ ಅಂದರೆ ಅದು ಮಹಿಳೆಯರಿಂದಲೇ. ಕಾಂಗ್ರೆಸ್ ನಾಯಕರು ನನ್ನ ಮೇಲೆ ತಪ್ಪು ಹೊರಿಸುವ ರೀತಿ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Share this article