ಕನ್ನಡಪ್ರಭ ವಾರ್ತೆ ದಾವಣಗೆರೆ
ಕಾಂಗ್ರೆಸ್ ಸರ್ಕಾರದ ಹಿಂದಿನ ಅವಧಿಯಲ್ಲಿ ರಾಜ್ಯದ ಲಂಬಾಣಿ ತಾಂಡಾ, ಹಟ್ಟಿ, ಹಾಡಿಗಳನ್ನು ಕಂದಾಯ ಗ್ರಾಮಗಳನ್ನಾಗಿಸುವ ಕೆಲಸ ಆರಂಭಿಸಿದ್ದು, ಲಂಬಾಣಿ ತಾಂಡಾಗಳಿಗೆ ಕಂದಾಯ ಗ್ರಾಮಗಳ ಮಾನ್ಯತೆ ನೀಡಿ, ಅವುಗಳ ಸಮಗ್ರ ಅಭಿವೃದ್ಧಿಗೆ ಹೆಚ್ಚು ಅನುದಾನ ಕಲ್ಪಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಚರ್ಚಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಭರವಸೆ ನೀಡಿದರು.ನಗರದ ಚಿಗಟೇರಿ ಲೇಔಟ್‌ನಲ್ಲಿ ಭಾನುವಾರ ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾಡಳಿತ, ಜಿಪಂ ಹಾಗೂ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದಿಂದ 2.12 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿದ ಜಿಲ್ಲಾ ಬಂಜಾರ ಭವನ ಉದ್ಘಾಟಿಸಿ ಮಾತನಾಡಿದ ಅವರು, ತಾಂಡಾ, ಹಾಡಿ, ಹಟ್ಟಿಗಳನ್ನು ಕಂದಾಯ ಗ್ರಾಮವನ್ನಾಗಿಸುವ ಕೆಲಸ ಆರಂಭಿಸಿದಾಗ ಮಾಯಕೊಂಡದ ಆಗಿನ ಶಾಸಕ ಕೆ.ಶಿವಮೂರ್ತಿ ಸಹ ತಮ್ಮೊಂದಿಗೆ ಇದ್ದರು ಎಂದರು.
ಲಂಬಾಣಿ ಸಮುದಾಯದ ಸಮಗ್ರ ಅಭಿವೃದ್ಧಿಗೆ ತಾಂಡಾ ಅಭಿವೃದ್ಧಿ ನಿಗಮಕ್ಕೆ ಹೆಚ್ಚು ಅನುದಾನ, ಸಮುದಾಯದ ಇತರೆ ಬೇಡಿಕೆಗಳ ಬಗ್ಗೆ ವಿಧಾನಸಭೆ ಉಪ ಸಭಾಪತಿ ರುದ್ರಪ್ಪ ಲಮಾಣಿ ಜೊತೆಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಚರ್ಚಿಸುತ್ತೇವೆ. ಬಂಜಾರ ಸಮುದಾಯದ ಏಳಿಗೆಗೆ ಸಂಪೂರ್ಣ ಸಹಕಾರ ನೀಡು ತ್ತೇವೆ. ಲಂಬಾಣಿ ಸಮುದಾಯದ ಜೊತೆಗೆ ತಾವು ಸದಾ ನಿಲ್ಲುವುದಾಗಿ ಅವರು ಹೇಳಿದರು.ಶೈಕ್ಷಣಿಕವಾಗಿಯೂ ಲಂಬಾಣಿ ಸಮಾಜ ಮುಖ್ಯ ವಾಹಿನಿಗೆ ಬರುತ್ತಿದ್ದು, ಉತ್ತಮ ಹುದ್ದೆಗಳನ್ನು ಅಲಂಕರಿಸುತ್ತಿದ್ದಾರೆ. ದಾವಣಗೆರೆ ಚಿಗಟೇರಿ ಲೇಔಟ್‌ನಲ್ಲಿ 80-100 ಅಡಿ ಸುತ್ತಳತೆ ಜಾಗದಲ್ಲಿ 2.12 ಕೋಟಿ ರು. ಅನುದಾನದಲ್ಲಿ ಬಂಜಾರ ಭವನ ನಿರ್ಮಿಸಿದ್ದು, ಸಮಾಜ ಬಾಂಧವರು ಇದರ ಸದುಪಯೋಗ ಪಡೆಯಬೇಕು. ಸಮಾಜದಿಂದ ಇನ್ನೊಂದು ನಿವೇಶನಕ್ಕೆ ಬೇಡಿಕೆ ಇಟ್ಟಿದ್ದು, ಜೆ.ಎಚ್.ಪಟೇಲ್ ಬಡಾವಣೆಯಲ್ಲಿ ನೀಡಲಾದ 2 ಎಕರೆಯಲ್ಲಿ ಜಾಗ ಎಲ್ಲಿದೆ ಎಂಬುದನ್ನು ಹುಡುಕಿ ಎಂಬುದಾಗಿ ಸಮಾಜದ ಮುಖಂಡರಿಗೆ ಎಸ್ಸೆಸ್ ಮಲ್ಲಿಕಾರ್ಜುನ ಕಿವಿಮಾತು ಹೇಳಿದರು. ವಿಧಾನಸಭೆ ಉಪ ಸಭಾಪತಿ ರುದ್ರಪ್ಪ ಲಮಾಣಿ ಮಾತನಾಡಿ, ಬಂಜಾರ, ತುಳು ಭಾಷೆಗಳನ್ನು ಷೆಡ್ಯೂಲ್-1ರಲ್ಲಿ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು. ಆಗ ದೇವನಗರಿ ಭಾಷೆಯೊಂದಿಗೆ ಅನುವಾದ ಮಾಡಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ನಿಘಂಟು ತಯಾರಿಸುವ ಕಾರ್ಯ ಸಾಗಿದೆ. ಹಾಡಿ, ಹಟ್ಟಿ, ತಾಂಡಾ ಗಳು ಖಾಸಗಿ, ಅರಣ್ಯ ಮತ್ತು ಸರ್ಕಾರಿ ಭೂಮಿಯಲ್ಲಿದ್ದು, ಅವುಗಳಿಗೆ ಪಟ್ಟಾ ನೀಡುವಂತೆ ಕಂದಾಯ ಸಚಿವರು ನಿರ್ದೇಶನವನ್ನು ನೀಡಿದ್ದಾರೆ. ಅದರಿಂದ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ಸಿಗಲಿದೆ ಎಂದರು.
ಶಾಸಕರಾದ ಮಾಯಕೊಂಡದ ಕೆ.ಎಸ್.ಬಸವಂತಪ್ಪ, ಜಗಳೂರಿನ ಬಿ.ದೇವೇಂದ್ರಪ್ಪ, ಜಿಪಂ ಉಪ ಕಾರ್ಯದರ್ಶಿ ಕೃಷ್ಣ ನಾಯ್ಕ, ತಾಂಡಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಲ್.ಶಿವಶಂಕರ ನಾಯ್ಕ, ಸಮಾಜದ ಮುಖಂಡರು, ವಕೀಲರೂ ಆದ ರಾಘವೇಂದ್ರ ನಾಯ್ಕ, ಎನ್.ಜಯದೇವ ನಾಯ್ಕ, ಪಾಲಿಕೆ ಸದಸ್ಯರಾದ ಆರ್.ಎಲ್.ಶಿವಪ್ರಕಾಶ, ಮಂಜಾನಾಯ್ಕ, ಎನ್.ಹನುಮಂತ ನಾಯ್ಕ, ಶಿಲ್ಪ ಜಯಪ್ರಕಾಶ, ಮಾಜಿ ಮೇಯರ್ ಜಯಮ್ಮ ಗೋಪಿನಾಯ್ಕ, ತಾಂಡಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮಹಾರುದ್ರ ನಾಯ್ಕ, ಡಾ.ಪರಮೇಶ ನಾಯ್ಕ, ಹಾಲೇಕಲ್ಲು ಚಂದ್ರನಾಯ್ಕ, ಹುಲಿಕಟ್ಟೆ ಎಲ್.ಕೊಟ್ರೇಶ ನಾಯ್ಕ, ನಂಜಾ ನಾಯ್ಕ, ಲಿಂಗರಾಜನಾಯ್ಕ, ಗೋಪಿನಾಯ್ಕ, ಹನುಮಂತ ನಾಯ್ಕ, ಚಂದ್ರಶೇಖರ ನಾಯ್ಕ, ರಮೇಶ ನಾಯ್ಕ ಗೋಶಾಲೆ ಇತರರು ಇದ್ದರು. ಸಮುದಾಯದ ಸಮಸ್ಯೆ ನಿವಾರಿಸಿ: ಮುಖಂಡದಾವಣಗೆರೆ ಜಿಲ್ಲೆಯಲ್ಲಿ 200 ಲಂಬಾಣಿ ತಾಂಡಾ ಇದ್ದು, ಅಲ್ಲಿ ಸಾಕಷ್ಟು ಸಮಸ್ಯೆ ಇದೆ. ನಮ್ಮದು ಸಂಘರ್ಷ ಮಾಡುವ ಸಮುದಾಯ ಅಲ್ಲ. ದುಡಿಮೆ ಮಾಡಿ, ಬದುಕುವ ಸಮಾಜ. ಆದರೆ, ಸರ್ಕಾರ ಈಚೆಗೆ ನಮ್ಮನ್ನು ಕಡೆಗಣಿಸುತ್ತಿದೆಯೆಂಬ ಭಾವನೆ ಕಾಡುತ್ತಿದೆ. ತಾಂಡಾ ಅಭಿವೃದ್ಧಿ ನಿಗಮದ ಉದ್ದೇಶ ತಾಂಡಾಗಳಿಗೆ ಮೂಲ ಸೌಕರ್ಯ ನೀಡುವುದಾಗಿತ್ತು. ಹಿಂದೆ ಅಂಬೇಡ್ಕರ್ ನಿಗಮದಿಂದ ವೈಯಕ್ತಿಕ ಸಾಲ, ಇತರೆ ಸೌಲಭ್ಯ ಪಡೆಯುತ್ತಿದ್ದೆವು. ಈಗ ಸಮಾಜ ಕಲ್ಯಾಣ ಇಲಾಖೆ ನಿಮ್ಮೆಲ್ಲಾ ಸೌಲಭ್ಯ ತಾಂಡಾ ಅಭಿವೃದ್ಧಿ ನಿಗಮದಿಂದ ಪಡೆಯಿರಿ ಎನ್ನುವ ಮೂಲಕ ಅನ್ಯಾಯ ಮಾಡುತ್ತಿದೆ. ಈ ಸಮಸ್ಯೆ ನಿವಾರಿಸಬೇಕು. ಮುಂಚಿನಂತೆಯೇ ಅಂಬೇಡ್ಕರ್ ನಿಗಮದಿಂದ ಸಾಲ, ಇತರೆ ಸೌಲಭ್ಯ ಸಿಗುವಂತೆ ಮಾಡಬೇಕೆಂದು ಲಂಬಾಣಿ ಸಮಾಜದ ಹಿರಿಯ ಮುಖಂಡ ರಾಘವೇಂದ್ರ ನಾಯ್ಕ ಒತ್ತಾಯಿಸಿದರು.