ಬ್ಯಾಡಗಿ: ಎಫ್ಐಆರ್ ಪ್ರತಿಯನ್ನೂ ನ್ಯಾಯಾಲಯಕ್ಕೆ ಕೊಡದೇ ಶ್ರೀಕಾಂತ್ ಪೂಜಾರಿ ಬಂಧಿಸಿದ್ದು ಸದರಿ ಪ್ರಕರಣದಿಂದ ರಾಜ್ಯದ ಇತಿಹಾಸದಲ್ಲಿಯೇ ಒಬ್ಬ ಮುಖ್ಯಮಂತ್ರಿ ಮತ್ತು ಗೃಹಮಂತ್ರಿ ಮಹಾನ್ ಸುಳ್ಳುಗಾರರು ಎನ್ನೋದು ಗೊತ್ತಾಗಿದೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಆರೋಪಿಸಿದರು.
ಇಬ್ಬರೂ ಕ್ಷಮೆ ಕೇಳಲಿ: ಶ್ರೀಕಾಂತ್ ಪೂಜಾರಿ ಮೇಲೆ ರಾಮಮಂದಿರ ಹೋರಾಟದ ಕೇಸ್ ಹೊರತುಪಡಿಸಿ ಇನ್ಯಾವುದೇ 16 ಕೇಸ್‌ಗಳು ಇರಲಿಲ್ಲ, ಈ ಕುರಿತು ನ್ಯಾಯಾಲಯವು ಕೂಡ ಸ್ಪಷ್ಟವಾಗಿ ಹೇಳಿದೆ. ದಲಿತ ಸಮುದಾಯದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮನೆ ಧ್ವಂಸ ಮಾಡಿದ ಎಷ್ಟು ಜನರ ವಿರುದ್ಧ ಕ್ರಮಗಳಾಗಿವೆ ಎಂಬುದನ್ನು ಬಹಿರಂಗಪಡಿಸುವಂತೆ ಆಗ್ರಹಿಸಿದ ಅವರು, ಭಂಡತನ ಪ್ರದರ್ಶಿಸುತ್ತಿರುವ ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿ ರಾಜ್ಯದ ಜನರ ಕ್ಷಮೆ ಕೇಳುವಂತೆ ಒತ್ತಾಯಿಸಿದರು.
ಶ್ರೀಕಾಂತ್ ಪೂಜಾರಿಯಂತಹ ಲಕ್ಷಾಂತರ ಹಿಂದೂ ಕಾರ್ಯಕರ್ತರು ಜಗದೀಶ ಶೆಟ್ಟರ ಅವರನ್ನು ಸೋಲದಂತೆ ನೋಡಿಕೊಂಡು ಮುಖ್ಯಮಂತ್ರಿಗಳನ್ನಾಗಿ ಮಾಡಿದ್ದಾರೆ. ಆದರೆ ಕಾಂಗ್ರೆಸ್‌ಗೆ ಹೋದ ತಕ್ಷಣ ಹಿಂದೂಗಳ ವಿರುದ್ಧ ಮಾತನಾಡುವುದು ಸರಿಯಲ್ಲ. ಅವರೇ ಮುಖಮಂತ್ರಿ ಆಗಿದ್ದಾಗ ಕೇಸ್ ಏಕೆ ವಾಪಸ್ ತೆಗೆದುಕೊಳ್ಳಲಿಲ್ಲ ಎಂದು ಪ್ರಶ್ನಿಸಿದರು.ಸಿದ್ದು ಪುತ್ರನ ಪಾಕ್ ಪ್ರೀತಿ: ಸಿದ್ಧರಾಮಯ್ಯ ಮಗ ಡಾ.ಯತೀಂದ್ರನಿಗೆ ಪಾಕಿಸ್ತಾನದ ಮೇಲೆ ಪ್ರೀತಿ ಜಾಸ್ತಿ ಆಗಿದೆ. ಹಿಂದೂ ರಾಷ್ಟ್ರವಾದರೆ ಭಾರತವೂ ಪಾಕಿಸ್ತಾನದಂತೆ ಆಗಲಿದೆ ಎಂಬ ಹೇಳಿಕೆಗಳು ಅವರಲ್ಲಿರುವ ಅಪ್ರಭುದ್ದತೆ ತೋರುತ್ತದೆ. ಕೆಲ ದಿನ ಅವರು ಪಾಕಿಸ್ಥಾನಕ್ಕೆ ಹೋಗಿ ಬರುವುದು ಉತ್ತಮ ಎಂದು ಸಲಹೆ ನೀಡಿದರು.