ರಾಜು ಕಂಬಾಳೆ
ಬೆಂಗಳೂರು : ನಗರದಲ್ಲಿ ಭಾರೀ ಮಳೆಯಿಂದ ವಿವಿಧ ಕಡೆ ಎದುರಿಸುತ್ತಿರುವ ಪ್ರವಾಹ ಪರಿಸ್ಥಿತಿ ಪ್ರದೇಶಗಳು, ರಾಜಕಾಲುವೆ ಕಾಮಗಾರಿ ಮೆಟ್ರೋ ಡಬಲ್ ಡೆಕ್ಕರ್ ಕಾಮಗಾರಿ ಸೇರಿದಂತೆ ವಿವಿಧ ಸ್ಥಳಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬುಧವಾರ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿ, ಸ್ಥಳದಲ್ಲೇ ಅಗತ್ಯ ಸಲಹೆ ನೀಡಿ ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ವಿವಿಧ ಕಾಮಗಾರಿಗಳ ಬಗ್ಗೆ ಅಧಿಕಾರಿಗಳು ಮತ್ತು ಸ್ಥಳೀಯರಿಂದ ಮಾಹಿತಿ ಪಡೆದರು. ಕಾಮಗಾರಿ ವಿಳಂಬ ಮಾಡುವ ಗುತ್ತಿಗೆದಾರರಿಗೆ ನೋಟಿಸ್ ನೀಡುವಂತೆ ಸೂಚಿಸಿದರಲ್ಲದೇ, ಶಾಶ್ವತ ಪರಿಹಾರವಾಗದಿದ್ದರೆ ಎಲ್ಲರನ್ನೂ ಅಮಾನತುಗೊಳಿಸುವುದಾಗಿ ಮುಖ್ಯಮಂತ್ರಿಗಳು ಎಚ್ಚರಿಕೆ ನೀಡಿದರು.
₹11.5 ಕೋಟಿ ವೆಚ್ಚ ರಾಜಕಾಲುವೆಗೆ ಒಪ್ಪಿಗೆ:
ಮೊದಲಿಗೆ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ ಸಮೀಪದ ರಾಜಕಾಲುವೆಯಲ್ಲಿ ಮಳೆಗಾಲದಲ್ಲಿ ಪ್ರವಾಹ ಉಂಟಾಗುವ ಸ್ಥಳವನ್ನು ಪರಿಶೀಲನೆ ನಡೆಸಿದರು. ಈ ವೇಳೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸದ್ಯ ಇರುವ ರಾಜಕಾಲುವೆ ಕಿರಿದಾಗಿದ್ದು, ಇದಕ್ಕೆ ಸಮಾನಾಂತರವಾಗಿ ಇನ್ನೊಂದು ಕಾಲುವೆ ನಿರ್ಮಿಸುವುದರಿಂದ ಪ್ರವಾಹ ತಗ್ಗಿಸಬಹುದು. ಪ್ರವಾಹ ನಿಯಂತ್ರಣ ಕಾಮಗಾರಿಗೆ ₹11.5 ಕೋಟಿ ಅಂದಾಜು ವೆಚ್ಚದ ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.ಕೂಡಲೇ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಈ ಸಮಸ್ಯೆಗೆ ಶಾಶ್ವತ ಪರಿಹಾರವಾಗಬೇಕು. ಇಲ್ಲವಾದರೆ, ಎಲ್ಲರನ್ನು ಅಮಾನತುಗೊಳಿಸುವುದಾಗಿ ಮುಖ್ಯಮಂತ್ರಿಗಳು ಎಚ್ಚರಿಕೆ ನೀಡಿದರು.
ನಾಯಂಡನಹಳ್ಳಿ ಜಂಕ್ಷನ್‌ನಲ್ಲಿ ರಾಜಕಾಲುವೆ ವೀಕ್ಷಣೆ ವೇಳೆ, ₹7 ಕೋಟಿ ವೆಚ್ಚದಲ್ಲಿ ರಾಜಕಾಲುವೆ ಅಭಿವೃದ್ಧಿ ಕಾಮಗಾರಿಗೆ ಕಂದಾಯ ಇಲಾಖೆ ಮತ್ತು ಹಣಕಾಸು ಇಲಾಖೆ ಅನುಮೋದನೆ ಬಾಕಿ ಇದೆ ಎಂದು ತುಷಾರ್ ಗಿರಿನಾಥ್ ಹೇಳಿದರು. ತಕ್ಷಣ ಅನುಮೋದನೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ರಾಜಕಾಲುವೆ ವಿಸ್ತರಣೆಗೆ ಕ್ರಮ:
ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಬಿಎಂಆರ್‌ಸಿಎಲ್‌ನಿಂದ ನಿರ್ಮಿಸಲಾದ ರಾಜಕಾಲುವೆ ಪರಿಶೀಲಿಸಿದ ಮುಖ್ಯಮಂತ್ರಿ ಅವರಿಗೆ ಕಾಲುವೆ ಕಿರಿದಾಗಿವೆ. ಇದರಿಂದ ಮಳೆ ಬಂದಾಗ ಪ್ರವಾಹ ಪರಿಸ್ಥಿತಿ ಉಂಟಾಗಲಿದೆ ಎಂದು ಸ್ಥಳೀಯರು ದೂರಿದರು. ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಲು ₹4.5 ಕೋಟಿ ವೆಚ್ಚ ಕಾಮಗಾರಿ ಅಗತ್ಯವಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ಮಾಹಿತಿ ನೀಡಿದರು. ಇದಕ್ಕೆ ಮುಖ್ಯಮಂತ್ರಿಗಳು, ಯೋಜನೆಯನ್ನು ಮುಂದಿನ 10-15 ವರ್ಷಗಳ ಪರಿಣಾಮವನ್ನು ಗಮನದಲ್ಲಿರಿಸಿಕೊಂಡು ಕ್ರಿಯಾ ಯೋಜನೆ ರೂಪಿಸಲು ಸೂಚಿಸಿದರು.
ಮಡಿವಾಳ ಕೆರೆಗೆ ಜಾಕ್‌ವೆಲ್
ಕೋಡಿಚಿಕ್ಕನಹಳ್ಳಿ ವ್ಯಾಪ್ತಿಯ ಅನುಗ್ರಹ ಲೇಔಟ್‌ನಲ್ಲಿ ಮಳೆ ಬಂದಾಗ ರಾಜಕಾಲುವೆಯ ನೀರು ಮಡಿವಾಳ ಕೆರೆಗೆ ಹರಿದು ಹೋಗದೇ ಲೇಔಟ್‌ಗೆ ನುಗ್ಗಿ ಅವಾಂತರ ಸೃಷ್ಟಿಸುತ್ತದೆ. ರಾಜಕಾಲುವೆಗಿಂತ ಕೆರೆ ಎತ್ತರ ಪ್ರದೇಶದಲ್ಲಿದೆ. ಅನೇಕ ವರ್ಷದಲ್ಲಿ ಈ ಸಮಸ್ಯೆ ಕೈಗೊಂಡ ಪರಿಹಾರ ಯಶಸ್ವಿಯಾಗದೇ ಇರುವುದನ್ನು ಗಮನಿಸಿದ ಮುಖ್ಯಮಂತ್ರಿಗಳು, ಮಳೆ ಬಂದಾಗ ರಾಜಕಾಲುವೆಯಲ್ಲಿ ಬರುವ ನೀರನ್ನು ಜಾಕ್‌ವೆಲ್ ಮೂಲಕ ಪಂಪ್ ಮಾಡಿ ಕೆರೆಗೆ ಹರಿಸಲು ಸೂಚಿಸಿದರು.
ಇತರೆ ಭಾಗಕ್ಕೆ ಡಬಲ್ ಡೆಕ್ಕರ್‌ಗೆ ಸಿಎಂ ಸೂಚನೆ
ಮಾರೇನಹಳ್ಳಿ ರಸ್ತೆಯ ರಾಗಿಗುಡ್ಡ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ನಡುವಿನ 3.3 ಕಿ.ಮೀ. ಉದ್ದದ ರಸ್ತೆ ಮತ್ತು ಮೆಟ್ರೋ ಮೇಲ್ಸೇತುವೆಯ ಕಾಮಗಾರಿಯನ್ನು ಪರಿಶೀಲನೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಗರದಲ್ಲಿ ಸಂಚಾರ ದಟ್ಟಣೆ ನಿವಾರಣೆಗೆ ಈ ಡಬಲ್ ಡೆಕ್ಕರ್ ಮಾದರಿಯನ್ನು ನಗರದ ಇತರ ಭಾಗಗಳಲ್ಲಿಯೂ ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸಿಲ್ಕ್ ಜಂಕ್ಷನ್ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಜಯನಗರ 5ನೇ ಬ್ಲಾಕ್‌ನಲ್ಲಿ ಅಂಡರ್ ಪಾಸ್ ನಿರ್ಮಾಣ ಮಾಡುವಂತೆ ಸ್ಥಳೀಯರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಅಂಡರ್ ಪಾಸ್ ನಿರ್ಮಾಣಕ್ಕೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದರು.
ಗುತ್ತಿಗೆದಾರನಿಗೆ ನೋಟಿಸ್‌ಗೆ ಸೂಚನೆ
ಕಳೆದ ಆರು ವರ್ಷಗಳಿಂದ ನೆನೆಗುದಿಗೆ ಬಿದ್ದು 2.95 ಕಿ.ಮೀ. ಉದ್ದದ ಈಜಿಪುರ ಫ್ಲೈ ಓವರ್ ಕಾಮಗಾರಿ ಪರಿಶೀಲಿಸಿದ ಸಿದ್ದರಾಮಯ್ಯ, ಕಾಮಗಾರಿ ಸ್ಥಗಿತಗೊಳಿಸಿರುವುದಕ್ಕೆ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು. ಗುತ್ತಿಗೆದಾರರನ ವಿರುದ್ಧ ನೋಟಿಸ್ ಜಾರಿಗೊಳಿಸಿ, ಕಾಮಗಾರಿ ಆರಂಭಿಸದಿದ್ದರೆ, ಗುತ್ತಿಗೆ ರದ್ದುಪಡಿಸಿ ಹೊಸ ಗುತ್ತಿಗೆದಾರರನ್ನು ನೇಮಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ನಿರ್ದೇಶಿಸಿದರು.
ನಗರ ಪ್ರದಕ್ಷಿಣೆ ವೇಳೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್, ಬಿಡಿಎ ಅಧ್ಯಕ್ಷ ಹ್ಯಾರಿಸ್, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಸರ್ಕಾರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ್ ರಾವ್ ಇದ್ದರು.
‘ಒಣಗಿದ ಮರ ಯಾಕೆ ಬಿಟ್ಕೊಂಡಿದ್ದೀರಿ’
ನಗರ ಪ್ರದಕ್ಷಿಣೆ ವೇಳೆ ರಸ್ತೆ ಬದಿ ಇದ್ದ ಒಣ ಮರಗಳನ್ನು ಕಂಡು ಗರಂ ಆದ ಸಿದ್ದರಾಮಯ್ಯ, ಒಣಗಿದ ಮರ ಯಾಕೆ ಬಿಟ್ಕೊಂಡಿದ್ದೀರಿ. ಅನಾಹುತ ಆಗ್ಲಿ ಅಂತನಾ ಎಂದು ಬಿಬಿಎಂಪಿ ಅರಣ್ಯ ವಿಭಾಗದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ಬನಶಂಕರಿ 2ನೇ ಹಂತದ 100 ಅಡಿ ರಸ್ತೆಯ ಒಣಗಿದ ಮರಗಳನ್ನು ತೆರವುಗೊಳಿಸಬೇಕು. ನಗರದಾದ್ಯಂತ ಇರುವ ಒಣಮರ, ಅಪಾಯಕಾರಿ ಮರಗಳನ್ನು ತೆರವುಗೊಳಿಸಬೇಕು, ನಗರ ಸೌಂದರ್ಯಕ್ಕೆ ಹೆಚ್ಚು ಒತ್ತು ಕೊಡಬೇಕು ಎಂದು ಸೂಚಿಸಿದರು.