ಸಿಎಂ ಭಾವಚಿತ್ರ ಕಾಣೆ: ಸಚಿವ ಲಾಡ್ ಕೆಂಡಾಮಂಡಲ

KannadaprabhaNewsNetwork | Published : Mar 11, 2024 1:19 AM

ಸಾರಾಂಶ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸಾಮಾನ್ಯನಿಧಿಯ ಅಡಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಸಭಾಭವನ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮದ ಬ್ಯಾನರ್ ನಲ್ಲಿ ಸಿಎಂ ಭಾವಚಿತ್ರ ಇಲ್ಲದಿರುವುದನ್ನು ಕಂಡು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಪಾಲಿಕೆಯ ನೂತನ ಸಭಾಭವನ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮದ ಬ್ಯಾನರ್‌ನಲ್ಲಿ ಮುಖ್ಯಮಂತ್ರಿಗಳ ಭಾವಚಿತ್ರ ಅಳವಡಿಸದಿರುವುದನ್ನು ಖಂಡಿಸಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಸೇರಿದಂತೆ ಪಾಲಿಕೆ ಪ್ರತಿಪಕ್ಷದ ಸದಸ್ಯರೆಲ್ಲರೂ ಕಾರ್ಯಕ್ರಮ ಬಹಿಷ್ಕರಿಸಿದರೆ, ಈ ಗೊಂದಲದ ನಡುವೆಯೇ ಶಂಕುಸ್ಥಾಪನೆ ನೆರವೇರಿಸಲಾಯಿತು.

ಹು-ಧಾ ಮಹಾನಗರ ಪಾಲಿಕೆ ಸಾಮಾನ್ಯನಿಧಿಯ ಅಡಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಸಭಾಭವನ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಭಾನುವಾರ ಪಾಲಿಕೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಅದಕ್ಕಾಗಿಯೇ ಬೃಹತ್‌ ಬ್ಯಾನರ್ ಸಹ ಅಳವಡಿಸಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಬ್ಯಾನರ್ ಗಮನಿಸಿದರು. ಅದರಲ್ಲಿ ಮುಖ್ಯಮಂತ್ರಿಗಳ ಭಾವಚಿತ್ರವೇ ಇರಲಿಲ್ಲ. ಇದನ್ನು ಕಂಡು ಸಿಡಿಮಿಡಿಗೊಂಡು ಆಯುಕ್ತರು, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

ಆಯುಕ್ತರಿಗೆ ತರಾಟೆ

ಪಾಲಿಕೆಯು ರಾಜ್ಯ ಸರ್ಕಾರವನ್ನು ಬಿಟ್ಟಿದೆಯಾ? ಆಯುಕ್ತರೇ ನೀವಾದರೂ ಇದನ್ನು ಗಮನಿಸಬೇಕಲ್ಲವೆ ಎಂದು ಡಾ. ಈಶ್ವರ ಉಳ್ಳಾಗಡ್ಡಿ ಅವರನ್ನು ತರಾಟೆಗೆ ತೆಗೆದುಕೊಂಡರು. ಹಳೆ ಕಟ್ಟಡ ನೆಲಸಮಗೊಳಿಸಲು ಸರ್ಕಾರದಿಂದ ಪರವಾನಗಿ ಪಡೆಯಲಾಗಿದೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಆಯುಕ್ತರು, ಪಾಲಿಕೆ ಸಾಮಾನ್ಯ ಸಭೆಯಲ್ಲಿ ಠರಾವ್ ಮಾಡಲಾಗಿದೆ. ಅದರಂತೆ ಶಂಕುಸ್ಥಾಪನೆ ಮಾಡಲಾಗುತ್ತಿದೆ ಎಂದು ಸಮರ್ಥಿಸಿಕೊಂಡರು. ಹಾಗಿದ್ದರೆ, ಮುಂದಿನ ದಿನಗಳಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಲಿದೆ, ನೀವೇ ಮಾಡಿಕೊಳ್ಳಿ ಎಂದು ಅಲ್ಲಿಂದ ಹೊರನಡೆಯಲು ಮುಂದಾದರು.

ಆಗ ಪಾಲಿಕೆ ಮೇಯರ್ ವೀಣಾ ಬರದ್ವಾಡ ಹಾಗೂ ಪಾಲಿಕೆ ಸದಸ್ಯ ವೀರಣ್ಣ ಸವಡಿ, ಸಚಿವ ಲಾಡ್ ಅವರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದರು. ಆದರೆ, ಲಾಡ್ ಶಂಕುಸ್ಥಾಪನೆ ನೆರವೇರಿಸದೇ ಶಾಸಕ ಪ್ರಸಾದ್ ಅಬ್ಬಯ್ಯನವರೊಂದಿಗೆ ಕಾರು ಏರಿ ಹೊರಟು ಹೋದರು. ಇದರೊಂದಿಗೆ ಪ್ರತಿಪಕ್ಷ ಕಾಂಗ್ರೆಸ್‌ ಸದಸ್ಯರು ಕಾರ್ಯಕ್ರಮವನ್ನು ಬಹಿಷ್ಕರಿಸಿ ಅಲ್ಲಿಂದ ಹೊರನಡೆದರು. ಸಚಿವರು ಹೀಗೆ ಹೊರ ನಡೆಯುತ್ತಿದ್ದಂತೆ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಶಿಷ್ಟಾಚಾರದ ಅಧಿಕಾರಿ ಎಸ್‌.ಸಿ. ಬೇವೂರ ಸೇರಿದಂತೆ ಎಲ್ಲ ಅಧಿಕಾರಿಗಳು ಅಲ್ಲಿಂದ ನಡೆದರು.

ಜೋಶಿ ಅವರಿಂದ ಅಡಿಗಲ್ಲು

ಉಸ್ತುವಾರಿ ಸಚಿವರು ಕೋಪಗೊಂಡು ಹೋಗುತ್ತಿದ್ದಂತೆ ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಅಧಿಕಾರಿ ವರ್ಗ ಹಾಗೂ ಪ್ರತಿಪಕ್ಷದ ಸದಸ್ಯರ ಗೈರಿನಲ್ಲಿ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಈ ವೇಳೆ ಪಾಲಿಕೆ ಮೇಯರ್ ವೀಣಾ ಬರದ್ವಾಡ, ಪ್ರತಿಪಕ್ಷದ ಉಪನಾಯಕ, ಶಾಸಕ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ ಹಾಗೂ ಬಿಜೆಪಿ ಸದಸ್ಯರು ಇದ್ದರು.

ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕ ಪ್ರಸಾದ ಅಬ್ಬಯ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೇ ಹೊರನಡೆದ ಮಾಹಿತಿಯನ್ನು ಪಾಲಿಕೆಯ ಕೆಲ ಸದಸ್ಯರು ತಿಳಿಸುತ್ತಿದ್ದಂತೆ ಜೋಶಿ ಕೆಲಕಾಲ ಗೊಂದಲಕ್ಕೆ ಒಳಗಾದರು. ಈ ಸಂದರ್ಭದಲ್ಲಿ ಪಾಲಿಕೆ ನೂತನ ಸಭಾಭವನ ನಿರ್ಮಾಣ ಸಮಿತಿಯ ಅಧ್ಯಕ್ಷ, ಪಾಲಿಕೆ ಸದಸ್ಯ ವೀರಣ್ಣ ಸವಡಿ ಮತ್ತು ಮೇಯರ್ ವೀಣಾ ಬರದ್ವಾಡ ಅವರ ಮನವಿಯ ಮೇರೆಗೆ ಶಂಕುಸ್ಥಾಪನೆ ನೆರವೇರಿಸಿದರು.

ಕ್ಷುಲ್ಲಕ ರಾಜಕಾರಣ ಸರಿಯಲ್ಲ

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜೋಶಿ, ಮುಖ್ಯಮಂತ್ರಿಗಳ ಭಾವಚಿತ್ರವಿಲ್ಲ ಎಂಬ ಕಾರಣಕ್ಕೆ ಸಚಿವ ಸಂತೋಷ ಲಾಡ್ ಅಸಮಾಧಾನಗೊಂಡು ಕಾರ್ಯಕ್ರಮದಿಂದ ಹೊರಟು ಹೋಗಿರುವುದು ಸರಿಯಲ್ಲ. ಅಧಿಕಾರಿಗಳು ತಿಳಿಯದೇ ತಪ್ಪು ಮಾಡಿರಬಹುದು, ನಾನು ಇದ್ದಿದ್ದರೆ ಮುಖ್ಯಮಂತ್ರಿಗಳ ಭಾವಚಿತ್ರ ಹಾಕಿಸುವಂತೆ ಸೂಚಿನೆ ನೀಡುತ್ತಿದ್ದೆ. ಆದರೆ, ಕ್ಷುಲ್ಲಕ ಕಾರಣಕ್ಕೆ ಉಸ್ತುವಾರಿ ಸಚಿವರು ಕಾರ್ಯಕ್ರಮದಿಂದ ಹೊರಟು ಹೋಗಿರುವುದು ಸರಿಯಲ್ಲ ಎಂದರು.

ಜೆಜೆಎಂ ಸೇರಿದಂತೆ ಅನೇಕ ಕೇಂದ್ರದ ಯೋಜನೆಯ ಕಾಮಗಾರಿಯ ಬ್ಯಾನರ್‌ನಲ್ಲಿಯೂ ಪ್ರಧಾನಿಯವರ ಭಾವಚಿತ್ರ ಬಳಸಿಲ್ಲ. ಹಾಗೆಂದು ನಾವ್ಯಾರೂ ಆರೋಪ ಮಾಡಿಲ್ಲ. ಪೂರ್ವ ನಿಗದಿಯಂತೆ ಪಾಲಿಕೆ ನೂತನ ಸಭಾಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಾಗಿದೆ ಎಂದರು.

ಸಹಕಾರ ನೀಡಿ

ಪಾಲಿಕೆಯ ಹಳೆಯ ಕಟ್ಟಡ ತೆರವುಗೊಳಿಸುವ ಬಗ್ಗೆ ಸರ್ಕಾರದಿಂದ ಅನುಮತಿ ಪಡೆದಿರುವ ಅಥವಾ ಪಡೆಯದೇ ಇರುವ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ. ನೂತನ ಕಟ್ಟಡ ನಿರ್ಮಿಸುವಂತೆ 15 ವರ್ಷಗಳಿಂದ ಸದಸ್ಯರು ಒತ್ತಾಯಿಸುತ್ತಿದ್ದರು. ಆದರೆ, ಅಭಿವೃದ್ಧಿ ವಿಷಯದಲ್ಲಿ ಯಾರೊಬ್ಬರೂ ರಾಜಕೀಯ ಮಾಡದೆ, ಸಹಕಾರ ನೀಡಬೇಕು ಎಂದರು.

ಈ ವೇಳೆ ಶಾಸಕ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಪಾಲಿಕೆ ಮೇಯರ ವೀಣಾ ಬರದ್ವಾಡ, ಸದಸ್ಯ ತಿಪ್ಪಣ್ಣ ಮಜ್ಜಗಿ, ವೀರಣ್ಣ ಸವಡಿ, ಶಿವು ಹಿರೇಮಠ, ಸಂತೋಷ ಚೌಹ್ವಾಣ, ಶಿವು ಮೆಣಸಿನಕಾಯಿ, ವಿಜಯಾನಂದ ಶೆಟ್ಟಿ, ರೂಪಾ ಶೆಟ್ಟಿ ಸೇರಿದಂತೆ ಬಿಜೆಪಿ ಸದಸ್ಯರು ಪಾಲ್ಗೊಂಡಿದ್ದರು.

ಸರ್ಕಾರದ ಒಪ್ಪಿಗೆ ಪಡೆದಿಲ್ಲ

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಪಾಲಿಕೆಯ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಭಾವಚಿತ್ರ ಹಾಕದಿರುವುದು ಸರಿಯಲ್ಲ. ಹಳೆಯ ಕಟ್ಟಡ ಕೆಡವಲು ಸರ್ಕಾರದ ಒಪ್ಪಿಗೆ ಪಡೆದಿಲ್ಲ ಎಂಬುದು ನನ್ನ ಗಮನಕ್ಕೆ ಬಂದಿದೆ. ಹಾಗಾಗಿ ನಾನು ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸದೇ ಹೋಗುತ್ತಿರುವುದಾಗಿ ತಿಳಿಸಿದರು.

Share this article