ಕನ್ನಡಪ್ರಭ ವಾರ್ತೆ ಮೈಸೂರು
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹುಮ್ಮಸ್ಸು ಇಮ್ಮಡಿಯಾಗಿದೆ. ಕೇಂದ್ರದ ನಾಯಕರಿಗೆ ನಾನು ಎಷ್ಟು ಪ್ರಭಾವಿ ಎಂದು ಸೆಡ್ಡು ಹೊಡೆಯಲು ಸಮಾವೇಶ ಮಾಡುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಟಿ.ಎಸ್. ಶ್ರೀವತ್ಸ ಟೀಕಿಸಿದರು.ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಲು ಪರದಾಡುತ್ತಿದ್ದಾರೆ. ಅದಕ್ಕಾಗಿಯೇ ಬಿಪಿಎಲ್ ಕಾರ್ಡ್ ಗಳ ಪರಿಷ್ಕರಣೆಗೆ ಮುಂದಾಗಿದ್ದಾರೆ. ವಿಪಕ್ಷವಾಗಿರುವ ನಾವು ಸರ್ಕಾರದ ಜನವಿರೋಧಿ ನಡೆಯನ್ನು ಜನರಿಗೆ ತಿಳಿಸುವಲ್ಲಿ ಎಲ್ಲೋ ಒಂದು ಕಡೆ ವಿಫಲವಾದೆವಾ ಎನಿಸುತ್ತಿದೆ ಎಂದರು.
ಬೇರೆಯವರ ಮೇಲೆ ಗೂಬೆ ಕೂರಿಸುವ ಕೆಲಸ:ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್ ಜಾರಿಗೆ ರಾಜ್ಯ ಸರ್ಕಾರದಿಂದ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ರಾಜ್ಯಪಾಲರ ಅಧಿಕಾರವನ್ನು ಮೊಟಕುಗೊಳಿಸುವ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಇವರ ಸರ್ಕಾರದಲ್ಲಿ ಹಗರಣಗಳ ಸರಮಾಲೆಯೇ ಇದೆ. ಅದರ ಬಗ್ಗೆಯೂ ತನಿಖೆ ಮಾಡಲಿ. ವಾಲ್ಮೀಕಿ ಹಗರಣ, ಮುಡಾ ಹಗರಣ, ಅಬಕಾರಿ ಹಗರಣ ಸೇರಿದಂತೆ ಹಲವಾರು ಹಗರಣದಲ್ಲಿ ತೊಡಗಿದೆ. ಅದನ್ನು ಬಿಟ್ಟು ಬೇರೆಯವರ ಮೇಲೆ ಗೂಬೆ ಕೂರಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.
ಭಿನ್ನಾಭಿಪ್ರಾಯ ಶಮನ:ಬರುವ ಡಿ.3 ರಂದು ಬಿಜೆಪಿ ಕೋರ್ ಕಮಿಟಿ ಸಭೆ ಕರೆದಿದ್ದಾರೆ. ಸಭೆಯಲ್ಲಿ ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಪಕ್ಷದ ನಿಲುವಿನ ಕುರಿತು ಚರ್ಚೆ ನಡೆಸುವುದರ ಜೊತೆಗೆ ಪಕ್ಷದಲ್ಲಿರುವ ಆಂತರಿಕ ಭಿನ್ನಾಭಿಪ್ರಾಯಗಳ ಕುರಿತು ಚರ್ಚಿಸುವ ಸಾಧ್ಯತೆ ಇದೆ. ಪಕ್ಷದ ಹೈಕಮಾಂಡ್, ಹಿರಿಯ ನಾಯಕರು ಮಧ್ಯಸ್ಥಿಕೆ ವಹಿಸಿ ನಮ್ಮ ನಾಯಕರ ನಡುವೆ ಉಂಟಾಗಿರುವ ಭಿನ್ನಾಭಿಪ್ರಾಯವನ್ನು ಶಮನ ಮಾಡಲಿದ್ದಾರೆ ಎಂದರು.ಮುಂದೆ ಎಲ್ಲರೂ ಒಟ್ಟಾಗಿ ಹೋಗುವ ನಿರ್ದೇಶನವನ್ನು ನಮ್ಮ ಹಿರಿಯ ನಾಯಕರು ಕೊಡಲಿದ್ದಾರೆ. ಪಕ್ಷದೊಳಗಿನ ಆಂತರಿಕ ಕಚ್ಚಾಟವೂ 3 ಕ್ಷೇತ್ರಗಳ ಉಪ ಚುನಾವಣೆ ಮೇಲೆ ಪರಿಣಾಮ ಬೀರಿದೆ ಎನ್ನಲಾಗುತ್ತಿದೆ. ಮುಂದೆ ಈ ರೀತಿ ಆಗದಂತೆ ನಮ್ಮ ನಾಯಕರು ಶಿಸ್ತು ಕ್ರಮ ಜರುಗಿಸುವ ಭರವಸೆ ಇದೆ ಎಂದು ಅವರು ಹೇಳಿದರು.