ಕನ್ನಡಪ್ರಭ ವಾರ್ತೆ ದಾವಣಗೆರೆ
ಜಿಲ್ಲೆಯಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳು ಸೇರಿದಂತೆ ಸೌಲಭ್ಯಗಳನ್ನು ವಿತರಣೆಗೆ ಜೂ.16 ರಂದು ದಾವಣಗೆರೆಗೆ ಮುಖ್ಯಮಂತ್ರಿಯವರು ಆಗಮಿಸುತ್ತಿದ್ದು, ಹೈಸ್ಕೂಲ್ ಮೈದಾನದಲ್ಲಿನ ಬೃಹತ್ ವೇದಿಕೆ ಸಿದ್ಧತೆ ಭರದಿಂದ ಸಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.ನಗರದ ಹೈಸ್ಕೂಲ್ ಮೈದಾನದಲ್ಲಿ ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳನ್ನು ವೀಕ್ಷಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಭಾನುವಾರ ಮಾತನಾಡಿದರು.
ಜೂ.16 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿರಿಯ ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪನವರ 95ನೇ ಜನ್ಮದಿನದ ಪ್ರಯುಕ್ತ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 12 ಗಂಟೆಗೆ ಶ್ರೀ ಕಲ್ಲೇಶ್ವರ ಇಂಡಸ್ಟ್ರೀಸ್ ಆವರಣದಲ್ಲಿನ ಆಧುನಿಕ ತಂತ್ರಜ್ಞಾನದ ತೊಗರಿಬೇಳೆ ಹಾಗೂ ಕಡ್ಲೇಬೇಳೆ ಮಿಲ್ ಉದ್ಘಾಟಿಸಿ ನಂತರ 12.30ಕ್ಕೆ ಹೈಸ್ಕೂಲ್ ಮೈದಾನ ತಲುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ನಿಂದ ಆಯೋಜಿಸಲಾಗಿರುವ ದಾವಣಗೆರ ಜಿಲ್ಲಾ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಸವಲತ್ತು ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದರು.ವಸ್ತು ಪ್ರದರ್ಶನ:
ಸರ್ಕಾರದ ವಿವಿಧ ಇಲಾಖೆಗಳಿಂದ 30ಕ್ಕೂ ಹೆಚ್ಚು ಮಳಿಗೆ ಸ್ಥಾಪಿಸಿ ಗ್ಯಾರಂಟಿ ಯೋಜನೆ, ಇನ್ನಿತರೆ ಇಲಾಖೆಗಳ ಮೂಲಕ ಸರ್ಕಾರದ ಪ್ರಮುಖ ಯೋಜನೆಗಳ ವಸ್ತುಪ್ರದರ್ಶನ ಇರಲಿದೆ. ಪ್ರಮುಖವಾಗಿ ಕೃಷಿ, ತೋಟಗಾರಿಕೆ ಇಲಾಖೆ, ಕಂದಾಯ ಇಲಾಖೆ, ಸ್ವ-ಸಹಾಯ ಸಂಘದಿಂದ ಉತ್ಪಾದಿಸಲಾದ ಕರಕುಶಲ ವಸ್ತುಗಳು, ಜವಳಿ ಮತ್ತು ಕೈಮಗ್ಗ ಇಲಾಖೆ, ಜಿಲ್ಲಾ ಪಂಚಾಯತ್ ಸೇರಿದಂತೆ ಅನೇಕ ಇಲಾಖೆಗಳು ಭಾಗವಹಿಸಲಿವೆ.ಹತ್ತು ಸಾವಿರಕ್ಕೂ ಅಧಿಕ ಆಸನ ವ್ಯವಸ್ಥೆ:
ಕಾರ್ಯಕ್ರಮಕ್ಕೆ ಜಿಲ್ಲಾದ್ಯಂತ ಗ್ರಾಮ ಪಂಚಾಯತಿವಾರು ಫಲಾನುಭವಿಗಳು, ಸಾರ್ವಜನಿಕರು ಆಗಮಿಸುತ್ತಿದ್ದು, ಮಳೆ ಬಂದರೂ ಸೋರದಂತೆ ಬೃಹತ್ ಜರ್ಮನ್ ಟೆಂಟ್ ನಿರ್ಮಿಸಲಾಗಿದೆ. ಸಮಾರಂಭಕ್ಕೆ ಸುಮಾರು 25 ಸಾವಿರಕ್ಕೂ ಅಧಿಕ ಜನರು ಆಗಮಿಸುವ ನಿರೀಕ್ಷೆ ಇದ್ದು, ಹತ್ತು ಸಾವಿರಕ್ಕೂ ಅಧಿಕ ಫಲಾನುಭವಗಳಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದರು.ಬಸ್ ವ್ಯವಸ್ಥೆ:
ಫಲಾನುಭವಿಗಳನ್ನು ಕರೆತರಲು ಪ್ರತಿ ಗ್ರಾಮ ಪಂಚಾಯತಿವಾರು ವಾಹನ ವ್ಯವಸ್ಥೆ ಮಾಡಲಾಗಿದೆ. ಇದರ ಸಂಪೂರ್ಣ ವ್ಯವಸ್ಥೆ ಜವಾಬ್ದಾರಿಯನ್ನು ಆಯಾ ಗ್ರಾಪಂ ಪಿಡಿಓ, ಅಂಗನವಾಡಿ ಕಾರ್ಯಕರ್ತೆ ಮತ್ತು ಗ್ರಾಮ ಆಡಳಿತಾಧಿಕಾರಿಗಳಿಗೆ ವಹಿಸಲಾಗಿದೆ. ನಗರದ ನಾಲ್ಕು ದಿಕ್ಕುಗಳಿಂದಲೂ ಜನರನ್ನು ಹೈಸ್ಕೂಲ್ ಮೈದಾನದ ವೇದಿಕೆ ಹತ್ತಿರ ಕರೆತರಲು ನಗರದ 50ಕ್ಕೂ ಹೆಚ್ಚು ಸ್ಥಳಗಳಲ್ಲಿ ಕೆಎಸ್‌ಆರ್‌ಟಿಸಿ ನಗರ ಸಾರಿಗೆ ಬಸ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದ್ದು, ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರು ಈ ವಾಹನಗಳಲ್ಲಿ ಬರಬಹುದಾಗಿದೆ ಎಂದರು.ಬಿಗಿ ಬಂದೋಬಸ್ತ್:
ಕಾರ್ಯಕ್ರಮದ ಬಂದೋಬಸ್ತ್‌ಗಾಗಿ 2 ಸಾವಿರಕ್ಕೂ ಅಧಿಕ ಸಿಬ್ಬಂದಿಗಳನ್ನು ನೇಮಿಸಲಾಗಿದ್ದು, ಇದರಲ್ಲಿ ಪೊಲೀಸ್ ಅಧಿಕಾರಿಗಳು ಸಹ ಸೇರಿದ್ದಾರೆ. ಅಲ್ಲದೇ ಕೆಎಸ್‌ಆರ್‌ಪಿ ತುಕಡಿ, ಡಿಎಆರ್ ಮತ್ತು ಕ್ಷಿಪ್ರ ಕಾರ್ಯಪಡೆಯೂ ಇರುತ್ತವೆ ಎಂದು ಮಾಹಿತಿ ನೀಡಿದರು.ಎಸ್ಪಿ ಉಮಾಪ್ರಶಾಂತ್, ಜಿಪಂ ಸಿಇಒ ಸುರೇಶ್ ಬಿ.ಇಟ್ನಾಳ್ ಮತ್ತಿತರರಿದ್ದರು.