ವಕ್ಫ್ ಬಗ್ಗೆ ಸಿಎಂ ನಡೆ ಚುನಾವಣಾ ತಂತ್ರ: ಬಿಜೆಪಿ ಮಂಡಲ ಸಂಚಾಲಕ ಲೋಕೇಶ್

KannadaprabhaNewsNetwork | Updated : Nov 06 2024, 12:47 AM IST

ಸಾರಾಂಶ

ರೈತರ ಪಹಣಿಯಲ್ಲಿ ವಕ್ಫ್‌ ಆಸ್ತಿ ಎಂಬುದಾಗಿ ನಮೂದು ಮಾಡದಂತೆ ತಾತ್ಕಾಲಿಕವಾಗಿ ತಡೆ ಹಿಡಿದಿರುವುದು ಕೇವಲ ಚುನಾವಣೆಯ ತಂತ್ರಗಾರಿಕೆಯಾಗಿದೆ. ಮುಂದಿನ ದಿನಗಳಲ್ಲಿ ರೈತರಿಗೆ ಇದು ಮರಣ ಶಾಸನವಾಗಿಯೇ ಮುಂದುವರಿಯಲಿದೆ ಎಂದು ಬಿಜೆಪಿ ಮಂಡಲ ಸಂಚಾಲಕ ಲೋಕೇಶ್ ತಿಳಿಸಿದರು. ಅರಕಲಗೂಡು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಅಲ್ಪಸಂಖ್ಯಾತರ ಓಲೈಕೆಗೆ ಜನರ ಆಸ್ತಿ ಕಬಳಿಕೆ ಹುನ್ನಾರ

ಕನ್ನಡಪ್ರಭ ವಾರ್ತೆ ಅರಕಲಗೂಡು

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರಿಗಳ ಸಭೆ ನಡೆಸಿ ರೈತರ ಪಹಣಿಯಲ್ಲಿ ವಕ್ಫ್‌ ಆಸ್ತಿ ಎಂಬುದಾಗಿ ನಮೂದು ಮಾಡದಂತೆ ತಾತ್ಕಾಲಿಕವಾಗಿ ತಡೆ ಹಿಡಿದಿರುವುದು ಕೇವಲ ಚುನಾವಣೆಯ ತಂತ್ರಗಾರಿಕೆಯಾಗಿದೆ. ಮುಂದಿನ ದಿನಗಳಲ್ಲಿ ರೈತರಿಗೆ ಇದು ಮರಣ ಶಾಸನವಾಗಿಯೇ ಮುಂದುವರಿಯಲಿದೆ ಎಂದು ಬಿಜೆಪಿ ಮಂಡಲ ಸಂಚಾಲಕ ಲೋಕೇಶ್ ತಿಳಿಸಿದರು.

ಪಟ್ಟಣದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿ, ಶಾಂತಿ, ಸಾಮರಸ್ಯದ ನಾಡಾಗಿದ್ದ ರಾಜ್ಯವನ್ನು ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ವಕ್ಫ್‌ ಮಂಡಳಿಯ ಮೂಲಕ ಅತ್ಯಂತ ಆತಂಕದ ಸ್ಥಿತಿಗೆ ತಳ್ಳುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೆತೃತ್ವದ ಸರ್ಕಾರ ದೇಶದ ಜನತೆಯ ಹಿತದೃಷ್ಟಿಯಿಂದ ಹಾಗೂ ವಕ್ಫ್‌ ಮಂಡಳಿಯಲ್ಲಿ ಆಗುತ್ತಿದ್ದ ಅಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ವಕ್ಫ್‌ ಕಾಯ್ದೆಗೆ ತಿದ್ದುಪಡಿ ತರುವ ವಿಧೇಯಕವನ್ನು ಮಂಡಿಸಿದೆ. ಇದು ಜಂಟಿ ಪಾರ್ಲಿಮೆಂಟರಿ ಬೋರ್ಡ್‌ ಪರಿಶೀಲನೆಯಲ್ಲಿದೆ. ಈ ತಿದ್ದುಪಡಿ ಜಾರಿಯಾಗುವುದು ಬಹುತೇಕ ಖಚಿತವಾಗುತ್ತಿದ್ದಂತೆ ವಕ್ಫ್‌ ಬೋರ್ಡ್ ತನ್ನ ಕರಾಳ ಕೈಚಳಕವನ್ನು ಮಾಡುವ ಮೂಲಕ ಇಡೀ ದೇಶದಲ್ಲಿ ಸಾರ್ವಜನಿಕ ಆಸ್ತಿಯನ್ನು ಕಬಳಿಸುವ ಹುನ್ನಾರಕ್ಕೆ ಕೈಹಾಕಿದೆ. ರಾಜ್ಯದಲ್ಲೂ ನಡೆಯುತ್ತಿರುವ ಇಂತಹ ಕೃತ್ಯಗಳಿಗೆ ಕಾಂಗ್ರೆಸ್ ಸರ್ಕಾರ ಕುಮ್ಮಕ್ಕು ನೀಡುತ್ತಿದೆ ಎಂದು ದೂರಿದರು.

ಸರ್ಕಾರದ ವಿವೇಚನೆಯಿಲ್ಲದೆ ಕೈಗೊಳ್ಳುತ್ತಿರುವ ನಿರ್ಧಾರಗಳಿಂದಾಗಿ ರಾಜ್ಯದ ಅನೇಕ ಆಸ್ತಿಗಳ ವ್ಯಾಜ್ಯ ಬೀದಿಗೆ ಬರುತ್ತಿದೆ. ಈಗಾಗಲೇ ಕಡಕೋಳದಲ್ಲಿ ಎರಡು ಕೋಮುಗಳ ನಡುವೆ ಸಂಘರ್ಷ ಪ್ರಾರಂಭವಾಗಿದೆ. ಇದು ಇಡೀ ರಾಜ್ಯವನ್ನು ವ್ಯಾಪಿಸುವ ಸಾಧ್ಯತೆಯಿದೆ. ಇಡೀ ರಾಜ್ಯದ ರೈತರ ಹಿತದೃಷ್ಟಿಯಿಂದ ತನ್ನ ನಿಲುವನ್ನು ತೆಗೆದುಕೊಳ್ಳಬೇಕಾಗಿದ್ದ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರನ್ನು ಓಲೈಸುವ ದೃಷ್ಟಿಯಿಂದ ಸಂಪೂರ್ಣವಾಗಿ ಅವರ ಪರವಾಗಿ ನಿಂತಿದೆ. ಈ ರೀತಿಯ ಕೃತ್ಯಗಳನ್ನು ಮುಂದುವರಿಸಿದಲ್ಲಿ ಇಡೀ ರಾಜ್ಯದಲ್ಲಿ ಜನತೆಯನ್ನು ಒಗ್ಗೂಡಿಸಿ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ಮಾಜಿ ಅಧ್ಯಕ್ಷ ವಿಶ್ವನಾಥ್, ಮಂಡಲ ಮುಖಂಡ ಮಾದೇಶ್, ಜಿಲ್ಲಾ ಒಬಿಸಿ ಮೋರ್ಚಾದ ಉಪಾಧ್ಯಕ್ಷ ಮಹೇಶ್ ಇದ್ದರು.

Share this article