ಕರಾವಳಿ: ಮಾಘಚೌತಿ ಹಬ್ಬ ಆಚರಣೆ

KannadaprabhaNewsNetwork |  
Published : Feb 14, 2024, 02:16 AM IST
ಮಾಘಚೌತಿ ಹಿನ್ನೆಲೆಯಲ್ಲಿ ಕಾರವಾರ ತಾಲೂಕಿನ ಗಾಂವಗೇರಿಯಲ್ಲಿ ವಿನಾಯಕನಿಗೆ ಪೂಜೆ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಭಾದ್ರಪದ ಮಾಸದ ಗಣೇಶ ಚತುರ್ಥಿಯಂದು ಗಣಪತಿ ಮೂರ್ತಿಗಳನ್ನಿಟ್ಟು ಪೂಜೆ ಮಾಡುವುದು ಸಾಮಾನ್ಯ. ಆದರೆ ಕರಾವಳಿ ಭಾಗದಲ್ಲಿ ಮಾಘ ಮಾಸದಲ್ಲಿ ಕೂಡಾ ಗಣೇಶ ಚತುರ್ಥಿ ಆಚರಿಸುವ ಪದ್ಧತಿ ತಲೆ ತಲಾಂತರದಿಂದ ನಡೆದುಕೊಂಡು ಬಂದಿದೆ.

ಕಾರವಾರ:

ಭಾದ್ರಪದ ಮಾಸದ ಗಣೇಶ ಚತುರ್ಥಿಯಂದು ಗಣಪತಿ ಮೂರ್ತಿಗಳನ್ನಿಟ್ಟು ಪೂಜೆ ಮಾಡುವುದು ಸಾಮಾನ್ಯ. ಆದರೆ ಕರಾವಳಿ ಭಾಗದಲ್ಲಿ ಮಾಘ ಮಾಸದಲ್ಲಿ ಕೂಡಾ ಗಣೇಶ ಚತುರ್ಥಿ ಆಚರಿಸುವ ಪದ್ಧತಿ ತಲೆ ತಲಾಂತರದಿಂದ ನಡೆದುಕೊಂಡು ಬಂದಿದೆ.ಮಂಗಳವಾರ ಮಾಘ ಚೌತಿ ಹಿನ್ನೆಲೆಯಲ್ಲಿ ಕರಾವಳಿ ತಾಲೂಕಿನ ಹಲವೆಡೆ ಮಾಘಚೌತಿ ಹಬ್ಬ ಆಚರಿಸಲಾಯಿತು. ಇಂದು ಪ್ರತಿಷ್ಠಾಪಿಸುವ ಮೂರ್ತಿಯನ್ನು ಹರಕೆ ಗಣಪತಿ ಎಂದೇ ಹೇಳಲಾಗುತ್ತದೆ. ಇಷ್ಟಾರ್ಥಗಳ ಈಡೇರಿಕೆಗಾಗಿ ಹರಕೆ ಹೊತ್ತುಕೊಂಡವರು ಹಾಗೂ ಗಣೇಶ ಚತುರ್ಥಿಯ ಸಮಯದಲ್ಲಿ ಬೇರೆ ಬೇರೆ ಕಾರಣಗಳಿಂದ ಮೂರ್ತಿ ಪ್ರತಿಷ್ಠಾಪಿಸಲು ಸಾಧ್ಯವಾಗದಿರುವವರೂ ಸಹ ಮಾಘ ಚೌತಿಯಂದು ಗಣಪನ ಮೂರ್ತಿಯನ್ನಿಟ್ಟು ಪೂಜೆ ಮಾಡಿದರು. ಮನೆ, ಸಾರ್ವಜನಿಕವಾಗಿ ಏಕದಂತನ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಿ ವಿಸರ್ಜನೆ ಮಾಡಲಾಯಿತು.ಮಾಘ ಚೌತಿಯಂದು ಗಣಪತಿ ಮೂರ್ತಿಯನ್ನು ಮನೆಯಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುವ ಸಂಪ್ರದಾಯ ಹೆಚ್ಚಾಗಿ ಮಹಾರಾಷ್ಟ್ರ, ಗೋವಾದಲ್ಲಿ ಆಚರಿಸುತ್ತಾರೆ. ಕಾರವಾರ ಗೋವಾ ಗಡಿಯಾಗಿರುವುದರಿಂದ ಜತೆಗೆ ಮಹಾರಾಷ್ಟ್ರ ಸಂಸ್ಕೃತಿ ಸಹ ಕಾರವಾರದಲ್ಲಿ ಇರುವ ಹಿನ್ನಲೆ ಮಾಘ ಚೌತಿಯನ್ನು ಕಾರವಾರದಲ್ಲಿ ಸಹ ಆಚರಣೆ ಮಾಡುತ್ತಾ ಬಂದಿದ್ದು, ಅಂಕೋಲಾ, ಕುಮಟಾ ಭಾಗದಲ್ಲೂ ವಿಘ್ನೇಶನನ್ನು ಪೂಜಿಸಲಾಯಿತು.ಕಾರವಾರ ತಾಲೂಕಿನ ಮಾಜಾಳಿಯ ಗಾಂವಗೇರಿಯಲ್ಲಿ ಸಾರ್ವಜನಿಕವಾಗಿ ಗಣೇಶೋತ್ಸವ ನಡೆಯಿತು. ಸ್ಥಳೀಯರೊಂದೆ ಅಲ್ಲದೇ ಗೋವಾ, ಮಹಾರಾಷ್ಟ್ರದಿಂದ ಕೂಡಾ ಭಕ್ತರು ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡರು. ಹಲವಾರು ಮನೆಗಳಲ್ಲಿ ಕೂಡಾ ಮಾಘ ಚೌತಿ ಹಿನ್ನೆಲೆಯಲ್ಲಿ ವಿನಾಯಕನ ಪೂಜಾ ಕೈಂಕರ್ಯ ನಡೆದಿದ್ದು, ಕುಟುಂಬಸ್ಥರು, ಬಂಧು-ಬಳಗದವರು ಪಾಲ್ಗೊಂಡಿದ್ದರು. ಮೋದಕ, ಪಂಚಕಜ್ಜಾಯ ಒಳಗೊಂಡು ಸಿದ್ಧಿವಿನಾಯಕನಿಗೆ ಪ್ರಿಯವಾದ ಖಾದ್ಯ ತಯಾರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಭಾದ್ರಪದ ಚೌತಿಯಲ್ಲಿ ಒಂದು ದಿನ, ಐದು, ಏಳು ಹೀಗೆ ಹಲವು ದಿನಗಳ ಕಾಲ ಗಣಪನ ಆರಾಧನೆ ಇರುತ್ತದೆ. ಆದರೆ ಮಾಘ ಚೌತಿಯಲ್ಲಿ ಪ್ರತಿಷ್ಠಾಪಿಸುವ ಮೂರ್ತಿಯನ್ನು ಒಂದೇ ದಿನ ಇರಿಸಿ, ಪೂಜಿಸಿ ರಾತ್ರಿ ವೇಳೆಗೆ ವಿಸರ್ಜನೆ ಮಾಡಲಾಗುತ್ತದೆ. ಹಲವು ವರ್ಷದಿಂದ ಗಾಂವಗೇರಿಯಲ್ಲಿ ಸಾರ್ವಜನಿಕವಾಗಿ ಮಾಘ ಚೌತಿಯಂದು ಗಣೇಶೋತ್ಸವ ನಡೆಯುತ್ತಿದೆ. ಇಲ್ಲಿ ಕೆಲವು ಅಹಿತಕರ ಘಟನೆಗಳು ನಡೆಯುತ್ತಿದ್ದ ಕಾರಣ ಹಿರಿಯರು ಮಾಘ ಮಾಸದಲ್ಲಿ ಪೂಜೆ ಸಲ್ಲಿಸುವುದಾಗಿ ಹರಕೆಹೊತ್ತಿದ್ದರಂತೆ. ಗಣೇಶನ ಆರಾಧನೆ ಮಾಡಲು ಪ್ರಾರಂಭಿಸಿದಾಗಿನಿಂದ ಗ್ರಾಮಕ್ಕೆ ಒಳ್ಳೆಯದಾಗಿದೆ. ಮಾಘ ಮಾಸದ ಚೌತಿಯಂದು ಗ್ರಾಮಸ್ಥರೆಲ್ಲ ಸೇರಿ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ಅಂದೇ ವಿಸರ್ಜಿಸುತ್ತಾ ಬಂದಿದ್ದೇವೆ ಎಂದು ಬಾಬುರಾಯ್ ಗಜಾ ಸಾವಂತ ಹೇಳಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ