ಶ್ರವಣದೋಷ ಮಕ್ಕಳಿಗೆ ಕಾಕ್ಲಿಯರ್‌ ಇಂಪ್ಲಾಂಟ್‌ ಯಶಸ್ವಿ

KannadaprabhaNewsNetwork |  
Published : Oct 18, 2025, 02:02 AM IST
ಬಿಎಲ್‌ಡಿಇ ಆಸ್ಪತ್ರೆಯಲ್ಲಿ ಶ್ರವಣದೋಷ ಮಕ್ಕಳಿಗೆ ಕಾಕ್ಲಿಯರ್‌ ಇಂಪ್ಲಾಂಟ್‌ ಯಶಸ್ವಿ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ನಗರದ ಬಿಎಲ್‌ಡಿಇ ಡಿಮ್ಡ್ ವಿಶ್ವವಿದ್ಯಾಲಯದ ಬಿ.ಎಂ.ಪಾಟೀಲ ಮೆಡಿಕಲ್ ಕಾಲೇಜ್‌ ಆಸ್ಪತ್ರೆಯ ಕಿವಿ, ಮೂಗು ಹಾಗೂ ಗಂಟಲು ವಿಭಾಗದಲ್ಲಿ ಶ್ರವಣ ದೋಷದಿಂದ ಬಳಲುತ್ತಿದ್ದ ಎರಡು ವರ್ಷದೊಳಗಿನ ಇಬ್ಬರು ಮಕ್ಕಳಿಗೆ ಕಾಕ್ಲಿಯರ್‌ ಇಂಪ್ಲಾಂಟ್ ಅತ್ಯಾಧುನಿಕ ಕಿವಿಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದೆ. ಸುವರ್ಣ ಆರೋಗ್ಯ ಸುರಕ್ಷಾ ಯೋಜನೆಯಡಿ ಆಸ್ಪತ್ರೆಯಲ್ಲಿ ಈವರೆಗೆ ಐದು ಮಕ್ಕಳಿಗೆ ಕಾಕ್ಲಿಯರ್‌ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ನಡೆಸಿದಂತಾಗಿದೆ.

ಕನ್ನಡಪ್ರಭ ವಾರ್ತೆ ವಿಜಯಪುರ

ನಗರದ ಬಿಎಲ್‌ಡಿಇ ಡಿಮ್ಡ್ ವಿಶ್ವವಿದ್ಯಾಲಯದ ಬಿ.ಎಂ.ಪಾಟೀಲ ಮೆಡಿಕಲ್ ಕಾಲೇಜ್‌ ಆಸ್ಪತ್ರೆಯ ಕಿವಿ, ಮೂಗು ಹಾಗೂ ಗಂಟಲು ವಿಭಾಗದಲ್ಲಿ ಶ್ರವಣ ದೋಷದಿಂದ ಬಳಲುತ್ತಿದ್ದ ಎರಡು ವರ್ಷದೊಳಗಿನ ಇಬ್ಬರು ಮಕ್ಕಳಿಗೆ ಕಾಕ್ಲಿಯರ್‌ ಇಂಪ್ಲಾಂಟ್ ಅತ್ಯಾಧುನಿಕ ಕಿವಿಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದೆ. ಸುವರ್ಣ ಆರೋಗ್ಯ ಸುರಕ್ಷಾ ಯೋಜನೆಯಡಿ ಆಸ್ಪತ್ರೆಯಲ್ಲಿ ಈವರೆಗೆ ಐದು ಮಕ್ಕಳಿಗೆ ಕಾಕ್ಲಿಯರ್‌ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ನಡೆಸಿದಂತಾಗಿದೆ. ಈಗ ಈ ಮಕ್ಕಳು ಮಾತನಾಡುತ್ತಿದ್ದಾರೆ ಎಂದು ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ರಾಜೇಶ ಹೊನ್ನುಟಗಿ ತಿಳಿಸಿದ್ದಾರೆ.

ಪ್ರಕಟಣೆಯ ಮೂಲಕ ವಿಷಯ ತಿಳಿಸಿರುವ ಅವರು, ಬಿಎಲ್‌ಡಿಇ ಆಸ್ಪತ್ರೆಯಲ್ಲಿ ಈ ಯೋಜನೆಯಡಿ ಮೂರು ವರ್ಷದೊಳಗಿನ ಹುಟ್ಟು ಕಿವುಡ ಮಕ್ಕಳಿಗೆ ಈ ಶಸ್ತ್ರಚಿಕಿತ್ಸೆ ಲಭ್ಯವಿದ್ದು ₹6 ಲಕ್ಷ ವೆಚ್ಚದ ಕಿವಿಯ ಇಂಪ್ಲಾಂಟ್‌ನ್ನು ಒಳಕಿವಿಗೆ ಅಳವಡಿಸಬಹುದಾಗಿದೆ. ನಂತರ ಎರಡು ವರ್ಷ ವಾಕ್ ಶ್ರವಣ ತರಬೇತಿ ಕೊಡಲಾಗುತ್ತದೆ. ಸಾರ್ವಜನಿಕರು ಈ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದರು.

ಶ್ರವಣದೋಷ ಕಂಡುಬಂದರೆ ಒಂದೂವರೆ ವರ್ಷದೊಳಗೆ ಚಿಕಿತ್ಸೆ ಮಾಡಿಸಿದರೆ ಮಗು ಇತರ ಮಕ್ಕಳಂತೆ ಪೂರ್ಣವಾಗಿ ಮಾತನಾಡುತ್ತದೆ. ಮೂರು ವರ್ಷದ ನಂತರ ಚಿಕಿತ್ಸೆ ಬಯಸಿದರೆ ಮಗುವಿಗೆ ಸರ್ಕಾರದ ಈ ಉಚಿತ ಯೋಜನೆ ಸೌಲಭ್ಯ ಇರುವುದಿಲ್ಲ. ಆಸ್ಪತ್ರೆಯಲ್ಲಿ ಖಾಸಗಿಯಾಗಿಯೂ ಶಸ್ತ್ರಚಿಕಿತ್ಸೆ ಲಭ್ಯವಿದೆ. ಐದು ವರ್ಷದ ನಂತರ ಶಸ್ತ್ರಚಿಕಿತ್ಸೆಯಾದರೂ ಮಗುವಿಗೆ ಕೇವಲ ಶಬ್ಧ ಕೇಳುತ್ತದೆ. ಮಾತುಗಳು ಅರ್ಥವಾಗುವ ಶಕ್ತಿ ಸಿಗುವುದಿಲ್ಲ ಎಂದು ಕಾಕ್ಲಿಯರ್ ಇಂಪ್ಲಾಂಟ್ ಸರ್ಜನ್ ಮತ್ತು ಇಂಪ್ಲಾಂಟ್ ಕೋ-ಆರ್ಡಿನೇಟರ್‌ ಡಾ.ಎಚ್.ಟಿ.ಲತಾದೇವಿ ತಿಳಿಸಿದ್ದಾರೆ.

2025ರ ಜನವರಿಯಿಂದಲೇ ಈ ಯೋಜನೆ ಪ್ರಾರಂಭವಾಗಿದ್ದು, ಎಲ್ಲ ನವಜಾತಶಿಶುಗಳನ್ನು ಶ್ರವಣ ಪರೀಕ್ಷೆಗಳಿಗೆ ಒಳಪಡಿಸಿ ಹುಟ್ಟು ಕಿವುಡತನ ಪತ್ತೆಹಚ್ಚುವ ಸೌಲಭ್ಯ ಹಾಗೂ ಶಸ್ತ್ರಚಿಕಿತ್ಸೆಯು ಲಭ್ಯವಿದೆ ಎಂದು ಕುಲಪತಿ ಡಾ.ಅರುಣ ಇನಾಮದಾರ ತಿಳಿಸಿದ್ದಾರೆ.

ಬಿಎಲ್‌ಡಿಇ ಆಸ್ಪತ್ರೆ ವೈದ್ಯರ ಈ ಯಶಸ್ವಿ ಶಸ್ತ್ರಚಿಕಿತ್ಸೆಗೆ ಕಾಲೇಜಿನ ಪ್ರಾಚಾರ್ಯೆ ಡಾ.ತೇಜಶ್ವಿನಿ ವಲಭ, ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ.ವಿಜಯಕುಮಾರ ಕಲ್ಯಾಣಪ್ಪನವರ, ಡಾ.ಎಚ್.ಟಿ.ಲತಾದೇವಿ, ಡಾ.ವಾಸಂತಿ ಆನಂದರನ್ನು ಅಭಿನಂದಿಸಿದ್ದಾರೆ.

PREV

Recommended Stories

ಪಕ್ಷದ ಗೆಲುವಿಗೆ ಕಾರ್ಯಕರ್ತೆಯರು ಶ್ರಮಿಸಿ
ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ವಿಧಿಸಿ