ಕನ್ನಡಪ್ರಭ ವಾರ್ತೆ ಮೂಡಿಗೆರೆ
ಮಲೆನಾಡು ಭಾಗಕ್ಕೆ ತೋಟಗಳಲ್ಲಿ ಮಿಶ್ರ ಬೆಳೆಯಾಗಿ ಕೋಕೋ ಸೂಕ್ತ ಎಂದು ತೋಟಗಾರಿಕೆ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು, ತೋಟದ ಬೆಳೆ ವಿಭಾಗ ಡಾ.ಭೂಮಿಕಾ.ಎಚ್.ಆರ್ ತಿಳಿಸಿದರು.ತಾಲೂಕಿನ ಹ್ಯಾಂಡ್ ಪೋಸ್ಟ್‌ನಲ್ಲಿರುವ ತೋಟಗಾರಿಕೆ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆದ ಕೋಕೋ ಬೆಳೆಯಲ್ಲಿ ಸುಧಾರಿತ ಕೃಷಿ ಪದ್ಧತಿಗಳು, ರೈತರ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ ಅವರು, ಬದಲಾಗುತ್ತಿರುವ ಹವಾಗುಣದಲ್ಲಿ ಒಂದೇ ಬೆಳೆಯನ್ನು ನಚ್ಚಿ ರೈತರು ಕೃಷಿ ನಡೆಸುವುದು ಸಾಧ್ಯವಿಲ್ಲ. ಹಾಗಾಗಿ ಮಿಶ್ರಬೆಳೆ ಪದ್ಧತಿ ರೈತರ ಆಹಾರ ಹಾಗೂ ಆರ್ಥಿಕ ಭದ್ರತೆಗೆ ಸಹಕಾರಿ. ಈ ನಿಟ್ಟಿನಲ್ಲಿ ಈಗಾಗಲೇ ಇರುವ ಅಡಿಕೆ, ತೆಂಗು, ಕಾಫಿ ತೋಟಗಳಲ್ಲಿ ನೆರಳಿನಾಶ್ರಯದಲ್ಲಿ ಬೆಳೆಯಬಹುದಾದ ಕೋಕೋ ಮಿಶ್ರ ಬೆಳೆ ಪದ್ಧತಿಗೆ ಸೂಕ್ತವಾದ ಬೆಳೆ. ದೇಶಿಯ ಉತ್ಪನ್ನವು ಆಂತರಿಕ ಬೇಡಿಕೆ ಸಹ ಪೂರೈಸಲು ಸಾಕಾಗುತ್ತಿಲ್ಲ. ಕೋಕೋ ಬೆಳಗೆ ದೇಶಿಯ ಹಾಗೂ ಅಂತಾರಾಷ್ಟ್ರೀಯ ಬೇಡಿಕೆ ಇರುವುದರಿಂದ ಬೆಳೆಯನ್ನು ಬೆಳೆಯಲು ಹೆಚ್ಚಿನ ಅವಕಾಶಗಳಿವೆ ಎಂದು ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತೋಟಗಾರಿಕಾ ಮಹಾವಿದ್ಯಾಲಯದ ಡೀನ್ ಡಾ.ನಾರಾಯಣ್ ಎಸ್. ಮಾವರ್ಕರ್ ಮಾತನಾಡಿ, ಗೇರು ಮತ್ತು ಕೋಕೋ ಅಭಿವೃದ್ಧಿ ನಿರ್ದೇಶನಾಲಯ, ಕೊಚ್ಚಿನ್, ಕೇರಳ ಬೆಳೆ ಉತ್ಪಾದನೆಗೆ ಪ್ರೋತ್ಸಾಹ ನೀಡುತ್ತಿದ್ದು, ಈ ಸಂಬಂಧ ರೈತರು ಒಟ್ಟಾಗಿ ಸಹಾಯ ಧನಕ್ಕೆ ಪ್ರಸ್ತಾವನೆಯನ್ನು ಮಹಾವಿದ್ಯಾಲಯದ ಮೂಲಕ ಸಲ್ಲಿಸಬಹುದು ಎಂದು ತಿಳಿಸಿದರುಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ.ಶಿವಪ್ರಸಾದ್, ಸಹ ಸಂಶೋಧನಾ ನಿರ್ದೇಶಕರು, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಮೂಡಿಗೆರೆ ಮಾತನಾಡಿ, ಕ್ಯಾಂಪ್ಕೋ ಸಂಸ್ಥೆಯು ಪುತ್ತೂರಿನಲ್ಲಿದ್ದು ಕೋಕೋ ಮಾರುಕಟ್ಟೆಗೆ ಯಾವುದೇ ಸಮಸ್ಯೆ ಇಲ್ಲ. ಅಡಿಕೆ ಭವಿಷ್ಯ ನಿಶ್ಚಿತವಾಗಿಲ್ಲದ ಕಾರಣ ಅಡಿಕೆಯೊಂದಿಗೆ ಮಿಶ್ರ ಬೆಳೆಯಾಗಿ ಕೋಕೋ ಬೆಳೆಯುವುದರಿಂದ ಸುಸ್ಥಿರ ಕೃಷಿ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದಂತಹ ಶ್ರೀಮತಿ ಶ್ವೇತಾರವರು ಅತಿಥಿಯಾಗಿ ಆಗಮಿಸಿ, ತೋಟಗಾರಿಕೆ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳು, ಕೋಕೋ ಬೆಳೆಯ ವಿಸ್ತರಣೆಗೆ ಸಿಗುವಂತಹ ಸಹಾಯಧನ ಇನ್ನೂ ಇತರ ವಿಚಾರಗಳ ಬಗ್ಗೆ ತಿಳಿಸಿಕೊಟ್ಟರು ಹಾಗೂ ರೈತರು ಈ ಬೆಳೆಯನ್ನು ಬೆಳೆಯಲು ಮುಂದೆ ಬರಬೇಕು ಎಂದು ಹೇಳಿದರು.ತೋಟಗಾರಿಕೆ ಮಹಾವಿದ್ಯಾಲಯದ ಕೀಟಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಸೈಯದ್ ಇಮ್ರಾನ್ ಕೋಕೋ ಬೆಳೆಯಲ್ಲಿ ಕೀಟ ನಿರ್ವಹಣೆ ಬಗ್ಗೆ ಉಪನ್ಯಾಸ ನೀಡಿದರು. ಡಾ. ಉಲ್ಲಾಸ್, ವಿಜ್ಞಾನಿ ಕೆವಿಕೆ ಮೂಡಿಗೆರೆ ಇವರು ತೋಟದ ಬೆಳೆಗಳಲ್ಲಿ ಹನಿ ನೀರಾವರಿ ಪದ್ಧತಿ ಬಗ್ಗೆ ಹಾಗೂ ಬರ ಪರಿಸ್ಥಿತಿಯಲ್ಲಿ ತೋಟಗಳ ಬೆಳೆಗಳ ನಿರ್ವಹಣೆ ವಿಚಾರಗಳ ಬಗ್ಗೆ ರೈತರಿಗೆ ತಿಳಿಸಿಕೊಟ್ಟರು.
ಡಾ. ಶ್ರೀನಿವಾಸ್ ಪ್ರಾಧ್ಯಾಪಕ, ಸಿಬ್ಬಂದಿ ಸಲಹೆಗಾರರು ಹಾಗೂ ಸಹಾಯಕ ತೋಟಗಾರಿಕಾ ಅಧಿಕಾರಿ ಭಾಗಿಯಾಗಿದ್ದರು.