ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ರಾಜ್ಯದಲ್ಲೇ ಅತೀ ಹೆಚ್ಚು ತೆಂಗು ಬೆಳೆಯುವ ಜಿಲ್ಲೆಗಳಲ್ಲಿ ಎರಡನೇ ಸ್ಥಾನ ಪಡೆದಿರುವ ಹಾಸನ ಜಿಲ್ಲೆಯಲ್ಲಿ ಬಿಸಿಲಿನ ತಾಪಕ್ಕೆ ರೈತರು ತತ್ತರಿಸಿ ಹೋಗಿದ್ದು ತೆಂಗಿನ ಮರಗಳ ಸುಳಿಗಳು ನಶಿಸುತ್ತಿವೆ.ಬಿಸಿಲ ತಾಪಕ್ಕೆ ತೆಂಗು ಬೆಳೆ ಸಜೀವವಾಗಿ ದಹನವಾಗುತ್ತಿದೆ. ಸುಡು ಬಿಸಿಲಿಗೆ ತೆಂಗಿನಮರಗಳು ಒಣಗಿಹೋಗುತ್ತಿವೆ. ಇಳುವರಿ ತೀವ್ರ ಕುಸಿತಗೊಂಡಿದೆ. ಒಂದೆಡೆ ಮಳೆ ಇಲ್ಲ, ಕೊಳವೆ ಬಾವಿಗಳಲ್ಲಿ ನೀರಿಲ್ಲ, ಹೊಸದಾಗಿ ಕೊಳವೆಬಾವಿ ಕೊರೆಸಿದರೂ ನೀರು ಹೆಚ್ಚು ದಿನ ಉಳಿಯುತ್ತಿಲ್ಲ. ಹಿಂದೆಂದೂ ಕಾಣದಂತಹ ಇಂತಹ ಘನ ಘೋರ ದೃಶ್ಯವನ್ನು ನೋಡುತ್ತಾ ರೈತರು ರಕ್ತ ಕಣ್ಣೀರು ಸುರಿಸುತ್ತಿದ್ದಾರೆ.
ಸುಮಾರು ೩೮ ಡಿಗ್ರಿ ಇಂದ ೪೦ ಡಿಗ್ರಿವರೆಗೆ ಉಷ್ಣಾಂಶವಿದ್ದು ಭೂಮಿ ನೀರಿಗಾಗಿ ಬಾಯಿ ತೆರೆದು ನಿಂತಿದೆ. ಹಲವಾರು ವರ್ಷಗಳಿಂದ ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿಕೊಂಡು ಬಂದಿದ್ದ ತೆಂಗಿನ ಮರಗಳು ನೀರಿಲ್ಲದೆ ಒಣಗುತ್ತಿರುವುದು ಬೆಳೆಗಾರರ ಬದುಕಿಗೆ ಬೆಂಕಿ ಇಟ್ಟಂತಾಗಿದೆ. ಈ ರೀತಿಯ ಬಿಸಿಲನ್ನು ತಾವು ಹಿಂದೆಂದೂ ಕಂಡಿರಲಿಲ್ಲ. ತೆಂಗಿನಗರಿಗಳೆಲ್ಲಾ ಒಣಗುತ್ತಿವೆ. ಇಳುವರಿ ತೀವ್ರ ಪ್ರಮಾಣದಲ್ಲಿ ಕುಸಿತಕ್ಕೊಳಗಾಗಿದೆ. ಕೆಲವೆಡೆ ಸುಳಿಯೇ ಒಣಗಿಹೋಗಿ ತೆಂಗಿನಮರಗಳು ಅಸ್ಥಿಪಂಜರಗಳಾಗುತ್ತಿರುವುದು ಬೆಳೆಗಾರರ ಬದುಕನ್ನು ಮೂರಾಬಟ್ಟೆಯಾಗುವಂತೆ ಮಾಡಿದೆ. ಬಿಸಿಲ ತಾಪಕ್ಕೆ ಹಸಿ ತೆಂಗಿನಗರಿಗಳೇ ಸುಟ್ಟಂತಾಗುತ್ತಿವೆ. ಹಸಿರಿನಿಂದ ಕಂಗೊಳಿಸಬೇಕಿದ್ದ ತೆಂಗಿನ ಗರಿಗಳ ಬಣ್ಣ ಹಳದಿರೂಪಕ್ಕೆ ತಿರುಗಿವೆ. ಗರಿಗಳೆಲ್ಲವೂ ಮುದುಡಿಕೊಂಡಿವೆ. ತೇವಾಂಶವಿಲ್ಲದೆ ಹಸಿಮಟ್ಟೆ ಗರಿಗಳೇ ಮರದಿಂದ ಕಳಚಿಬೀಳುತ್ತಿವೆ. ಇದರೊಂದಿಗೆ ತೆಂಗಿನಬುಂಡೆಗಳು, ಕಾಯಿಗಳು ಉದುರಿಹೋಗುತ್ತಿವೆ. ಎಳನೀರು ಹಂತದ ತೆಂಗಿನಬುಂಡೆಗಳು ಬಳ್ಳಗಾಯಿಗಳಾಗುತ್ತಿವೆ. ಸುಡುಬಿಸಿಲಿಗೆ ಎಳನೀರಿನ ರುಚಿಯೇ ಬದಲಾಗಿಹೋಗಿದೆ. ಎಳನೀರನ್ನು ಕೊಯ್ಯಲಾಗದೆ, ಕಾಯಿ ಯಾಗುವವರೆಗೆ ಮರದಲ್ಲಿ ಉಳಿಸಿಕೊಳ್ಳುವುದಕ್ಕೂ ಆಗದೇ ಬೆಳೆಗಾರರು ಸಂಕಷ್ಟದ ಕೂಪಕ್ಕೆ ಸಿಲುಕಿದ್ದಾರೆ. ಒಂದೊಂದು ತೆಂಗಿನ ತೋಟಗಳಲ್ಲಿರಾಶಿಗಟ್ಟಲೆ ತೆಂಗಿನಮಟ್ಟೆಗರಿಗಳು ಬಿದ್ದಿವೆ. ಅವುಗಳನ್ನು ತೆರವುಗೊಳಿಸುವುದೇ ರೈತರಿಗೆ ದೊಡ್ಡ ಸವಾಲಾಗಿದೆ. ಅವುಗಳನ್ನು ಕೊಳ್ಳುವವರಿಲ್ಲದೆ, ರಾಶಿಹಾಕಿಕೊಳ್ಳಲು ಸಾಧ್ಯವಾಗದೆ ತೋಟಗಳಲ್ಲೇ ಬೆಂಕಿ ಹಚ್ಚಿ ಸುಡುತ್ತಿದ್ದಾರೆ. ತೆಂಗಿನಮರಗಳಿಗೆ ಕೊಳವೆ ಬಾವಿಗಳು, ಹನಿ ನೀರಾವರಿ ಮೂಲಕ ಒದಗಿಸುತ್ತಿರುವ ನೀರು ಯಾವುದಕ್ಕೂಸಾಲದಂತಾಗಿದೆ. ಬಿಸಿಲ ಶಾಖ ಹೆಚ್ಚಿದಂತೆಲ್ಲಾ ನಿರಂತರವಾಗಿ ಭೂಮಿಯ ಕಾವಿನಲ್ಲೂ ಏರಿಕೆಯಾಗಿದೆ. ಕೆಳಭಾಗದಲ್ಲಿ ಎಷ್ಟು ನೀರು ಹರಿಸಿದರೂ ಇಡೀ ಮರವನ್ನು ತಣಿಸುತ್ತಿಲ್ಲ. ತೋಟಗಳನ್ನು ತಣಿಸುವಷ್ಟು ನೀರೂ ಕೊಳವೆಬಾವಿಗಳಿಂದ ಸಿಗುತ್ತಿಲ್ಲ. ಹನಿ ನೀರಾವರಿಯನ್ನು ಅಳವಡಿಸಿಕೊಂಡಿರುವ ತೋಟಗಳಲ್ಲೂ ತೆಂಗಿನಗರಿಗಳು, ತೆಂಗಿನಬುಂಡೆಗಳು ಉದುರುವುದು ತಪ್ಪಿಲ್ಲ.
ಇದರಿಂದ ರೈತರಿಗೆ ಏನು ಮಾಡಬೇಕೆಂಬುದು ತೋಚದೇ ಚಿಂತಾಕ್ರಾಂತರಾಗಿದ್ದಾರೆ.ಬತ್ತಿದ್ದ ಕೊಳವೆಬಾವಿಗಳು; ಕೆಸರೆರೆಚಾಟದಲ್ಲಿ ರಾಜಕಾರಣಿಗಳು:
ತೆಂಗಿನಮರಗಳಿಗೆ ಬೇರುಮಟ್ಟದಲ್ಲಿ ಎಷ್ಟು ನೀರು ಕೊಟ್ಟರೂ ಮಳೆ ಬಿದ್ದಷ್ಟು ತಣಿಯುವುದಿಲ್ಲ. ಮಳೆಯಿಂದ ಭೂಮಿ ಸುತ್ತಮುತ್ತಲ ಪ್ರದೇಶವೆಲ್ಲಾ ತಂಪಾಗುತ್ತದೆ. ತಂಪಾದ ಗಾಳಿಯಿಂದ ಮರಗಳು ಚೈತನ್ಯ ಪಡೆದುಕೊಳ್ಳುತ್ತಿದ್ದವು. ತೀವ್ರ ಮಳೆ ಕೊರತೆ ಎದುರಿಸುತ್ತಿರುವ ಇಂದಿನ ದಿನಗಳಲ್ಲಿ ಹಾಲಿ ತೆಂಗಿನ ಮರಗಳನ್ನು ಕಾಪಾಡುತ್ತಿದ್ದ ತೋಟಗಳ ಕೊಳವೆಬಾವಿಗಳು ಬತ್ತಿಹೋಗಿವೆ. ಹೊಸದಾಗಿ ಕೊಳವೆಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಅಲ್ಲೊಂದು ಇಲ್ಲೊಂದು ಕೊಳವೆಬಾವಿಗಳಲ್ಲಿ ನೀರು ಬಂದರೂ ಹೆಚ್ಚು ಕಾಲ ಉಳಿಯುತ್ತಿಲ್ಲ, ವಾರ, ಹದಿನೈದು ದಿನಗಳಲ್ಲಿ ನೀರು ಬತ್ತಿಹೋಗುತ್ತಿವೆ.ಒಟ್ಟಾರೆ ರಾಜಕಾರಣಿಗಳು ತಮ್ಮ ತಮ್ಮ ವೈಯಕ್ತಿಕ ಕೆಸರೆರಚಾಟದಲ್ಲಿ ಬಿಸಿಯಾಗಿದ್ದರೆ ಇದನ್ನೇ ಅವಕಾಶವೆಂಬಂತೆ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದು ರೈತರಿಗೂ ನಮಗೂ ಸಂಬಂಧ ಇಲ್ಲದಂತೆ ಬೇಜವಾಬ್ದಾರಿ ವರ್ತನೆ ಸರಿಯಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.