ಹೊನ್ನಾವರ: ಕರಾವಳಿಯಲ್ಲಿ ಹೆಚ್ಚಾಗಿ ಕಾಣುವ ಅಡಕೆ ಬೆಳೆಯ ಉಪಬೆಳೆಯಾಗಿ ಬೆಳೆಯುವ ಬೆಳೆಗಳಲ್ಲಿ ತೆಂಗು ಪ್ರಧಾನವಾಗಿದೆ. ಕಲ್ಪವೃಕ್ಷ ಎಂದು ಕರೆಯಲ್ಪಡುವ ತೆಂಗಿಗೆ ಇನ್ನಿಲ್ಲದ ರೋಗಗಳು ಅದಾಗಲೇ ಬಾಧಿಸಿದೆ. ಆದರೆ ಈಗ ಇದ್ದಕ್ಕಿದ್ದಂತೆ ತಾಲೂಕಿನಲ್ಲಿ ಬೆಳೆಯುವ ತೆಂಗಿನ ಪ್ರಮಾಣ ಕುಸಿದಿದೆ. ಇಳುವರಿ ಕಡಿಮೆ ಆಗುತ್ತಿರುವುದು ರೈತರು ಕಂಗಾಲಾಗುವಂತೆ ಮಾಡಿದೆ.
ಹೊನ್ನಾವರ ಸಮುದ್ರದ ಕಿನಾರೆಯನ್ನು ಹೊಂದಿರುವ ಸ್ಥಳ. ಸಮುದ್ರದ ಗಾಳಿ ಬೀಸುವ ಕಡೆ ಹೆಚ್ಚು ತೆಂಗು ಬೆಳೆಯುತ್ತದೆ ಎಂಬ ಮಾತಿದೆ. ಜತೆಗೆ ಫಲವತ್ತಾದ ಮಣ್ಣು, ಗೊಬ್ಬರ ಮತ್ತು ನೀರನ್ನು ಹಾಕದಿದ್ದರೂ ತೆಂಗಿನ ಇಳುವರಿ ಚೆನ್ನಾಗಿಯೇ ಬರುತ್ತಿತ್ತು. ಆದರೆ ಯಾಕೋ ತಿಳಿದಿಲ್ಲ, ಹೊನ್ನಾವರ ತಾಲೂಕಿನ ಬಹುತೇಕ ಭಾಗಗಳಲ್ಲಿ ಈಗ ಇಳುವರಿ ಕುಂಠಿತಗೊಂಡಿದೆ.ತಪ್ಪಿಲ್ಲ ಕಾಡುಪ್ರಾಣಿಗಳ ಹಾವಳಿ: ಈಗಾಗಲೇ ನುಸಿರೋಗದಿಂದ ತೆಂಗಿನಕಾಯಿಯ ಸ್ವರೂಪವೇ ಬದಲಾಗಿ ಹೋಗಿದೆ. ಜತೆಗೆ ಕಾಯಿ ಚಿಕ್ಕದಾಗುತ್ತಾ ಸಾಗಿದೆ. ಅಲ್ಲದೆ ತೆಂಗಿನ ಕಾಯಿ ತೋಟದಲ್ಲಿ ಬಿದ್ದಿದ್ದರೆ ಕಥೆ ಮುಗಿತು. ತೋಟಕ್ಕೆ ನುಗ್ಗುವ ಹಂದಿ, ಮುಳ್ಳುಹಕ್ಕಿ, ಕೆಸಳ, ಮಂಗ ಇವುಗಳ ಉಪಟಳ ತಡೆಯಲು ಸಾಧ್ಯವಿಲ್ಲ ಎನ್ನುವ ಪರಿಸ್ಥಿತಿ ಇದೆ. ಇದರ ನಡುವೆ ಇಳುವರಿ ಕುಸಿತ ಆಗಿರುವುದು ಗಾಯದ ಮೇಲೆ ಬರೆ ಹಾಕಿದಂತೆ ಆಗಿದೆ.
ತೆಂಗಿನಕಾಯಿಗೆ ಹೆಚ್ಚಿನ ಬೆಲೆ ಬಂದಿದೆ. ಒಂದು ಕೆ.ಜಿ.ಗೆ ಸರಾಸರಿ ₹೬೦ ರಿಂದ ₹೬೫ ದರ ಮಾರುಕಟ್ಟೆಯಲ್ಲಿದೆ. ಆದರೆ ತೆಂಗಿನಕಾಯಿಯ ಇಳುವರಿ ಕಡಿಮೆ ಆಗಿರುವುದರಿಂದ ಬೆಳೆದ ರೈತರ ಮನೆ ಖರ್ಚಿಗೆ ಸಾಕಾಗುತ್ತಿದೆಯೆ ಹೊರತು ಅದನ್ನು ಮಾರಾಟ ಮಾಡಿ ಹಣ ಗಳಿಸಲು ಸಾಧ್ಯವಾಗುತ್ತಿಲ್ಲ.ಹಳ್ಳಿಯ ಪ್ರದೇಶದಲ್ಲಿ ತೆಂಗಿನಕಾಯಿಯನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ದಿನಿತ್ಯದ ಅಡುಗೆಗೆ ಬೇಕೇಬೇಕು. ಹೀಗಿರುವಾಗ ತೆಂಗಿನಕಾಯಿ ಫಸಲು ಕಡಿಮೆ ಆಗುತ್ತಿರುವುದು ಸಂಕಷ್ಟಕ್ಕೆ ಕಾರಣವಾಗಿದೆ.ಏಕಾಏಕಿ ತೆಂಗಿನ ಇಳುವರಿ ಕಡಿಮೆ ಆಗಿರುವುದರಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ಅಲ್ಲದೆ ತೆಂಗಿನ ಇಳುವರಿಯನ್ನು ಹೆಚ್ಚಿಸಿಕೊಳ್ಳಲು ಯಾವ ಮಾರ್ಗೋಪಾಯಗಳನ್ನು ತೆಗೆದುಕೊಳ್ಳಬೇಕು ಎಂಬ ಚಿಂತೆಯಲ್ಲಿದ್ದಾರೆ.ಇಳುವರಿ ಕಡಿಮೆಯಾಗಿದೆ: ನಾವು ಚಿಕ್ಕ ಹಿಡುವಳಿದಾರರು. ನಮ್ಮ ತೋಟದಲ್ಲಿ ಅಡಕೆ ಬೆಳೆ ಜತೆ ತೆಂಗನ್ನು ಬೆಳೆಯುತ್ತೇವೆ. ಸರಿಸುಮಾರು ೫೦-೬೦ ತೆಂಗಿನ ಮರಗಳಿವೆ. ಪ್ರತಿ ನಾಲ್ಕು ತಿಂಗಳಿಗೊಮ್ಮೆ ತೆಂಗಿನ ಕಾಯಿಯನ್ನು ಕೊಯ್ಯಿಸುತ್ತೇವೆ. ಆ ವೇಳೆ ಸುಮಾರು ಒಂದು ಸಾವಿರ ಕಾಯಿ ಬರುತ್ತಿತ್ತು. ಆದರೆ ಈಗ ಆರುನೂರರಿಂದ ಏಳುನೂರು ಕಾಯಿ ಬರುತ್ತಿದೆ. ಮೊದಲಿಗೆ ಹೋಲಿಸಿದರೆ ಈಗ ಇಳುವರಿ ಏಕಾಏಕಿ ಕಡಿಮೆ ಆಗಿದೆ ಎಂದು ರೈತ ಮಂಜುನಾಥ ಹೆಗಡೆ ಹೇಳುತ್ತಾರೆ.