ಸಮಾನ ಬೆಲೆ ಕಾಯ್ದುಕೊಂಡ ಕಾಫಿ

KannadaprabhaNewsNetwork | Published : Dec 29, 2024 1:20 AM

ಸಾರಾಂಶ

ಕಾಫಿ ಮಾರುಕಟ್ಟೆ ಇತಿಹಾಸದಲ್ಲೇ ಪ್ರಸಕ್ತ ವರ್ಷದ ಬೆಲೆ ಅತ್ಯಧಿಕವಾಗಿದ್ದು ಕಾಫಿ ಬೆಲೆ ಕಂಡು ಬೆಳಗಾರರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ೫೦ ಕೆಜಿ ರೋಬಸ್ಟ್ ಚರ್ರಿ ಕಾಫಿ ಧಾರಣೆ ೧೧ ಸಾವಿರ ರು.ಗಳಿದ್ದರೆ ಓಟಿ ಆಧಾರದಲ್ಲಿ ಮತ್ತಷ್ಟು ದರ ಇದಕ್ಕೆ ಕೂಡಿಕೆಯಾಗುವುದರಿಂದ ಪ್ರತಿ ಧಾರಣೆ ೧೩ ಸಾವಿರ ರು.ವರೆಗೆ ತಲುಪಿದೆ. ರೋಬಸ್ಟ್ ಪಾರ್ಚಮೆಂಟ್ ಧಾರಣೆ ೨೧ ಸಾವಿರಕ್ಕೆ ತಲುಪಿದೆ. ಅರೇಬಿಕ್ ಚರ್ರಿ ಧಾರಣೆ ಸಹ ಯಾವುದೇ ಓಟಿ ಇಲ್ಲದೆ ೧೧ ಸಾವಿರದಿಂದ ಆರಂಭವಾಗಿದ್ದು ಮತ್ತಷ್ಟು ಬೆಲೆ ಕೂಡಿಕೆಯಾಗಲಿದೆ.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಇತಿಹಾಸ ಸೃಷ್ಟಿಸಿರುವ ಕಾಫಿ ಧಾರಣೆ ಕಂಡು ಖುದ್ದು ಕಾಫಿ ಬೆಳೆಗಾರರೇ ಅಚ್ಚರಿಗೊಳಗಾಗಿದ್ದಾರೆ.

ಹೌದು! ಕಾಫಿ ಮಾರುಕಟ್ಟೆ ಇತಿಹಾಸದಲ್ಲೇ ಪ್ರಸಕ್ತ ವರ್ಷದ ಬೆಲೆ ಅತ್ಯಧಿಕವಾಗಿದ್ದು ಕಾಫಿ ಬೆಲೆ ಕಂಡು ಬೆಳಗಾರರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ೫೦ ಕೆಜಿ ರೋಬಸ್ಟ್ ಚರ್ರಿ ಕಾಫಿ ಧಾರಣೆ ೧೧ ಸಾವಿರ ರು.ಗಳಿದ್ದರೆ ಓಟಿ ಆಧಾರದಲ್ಲಿ ಮತ್ತಷ್ಟು ದರ ಇದಕ್ಕೆ ಕೂಡಿಕೆಯಾಗುವುದರಿಂದ ಪ್ರತಿ ಧಾರಣೆ ೧೩ ಸಾವಿರ ರು.ವರೆಗೆ ತಲುಪಿದೆ. ರೋಬಸ್ಟ್ ಪಾರ್ಚಮೆಂಟ್ ಧಾರಣೆ ೨೧ ಸಾವಿರಕ್ಕೆ ತಲುಪಿದೆ. ಅರೇಬಿಕ್ ಚರ್ರಿ ಧಾರಣೆ ಸಹ ಯಾವುದೇ ಓಟಿ ಇಲ್ಲದೆ ೧೧ ಸಾವಿರದಿಂದ ಆರಂಭವಾಗಿದ್ದು ಓಟಿ ಆಧಾರದಲ್ಲಿ ಮತ್ತಷ್ಟು ಬೆಲೆ ಕೂಡಿಕೆಯಾಗಲಿದೆ. ಅರೇಬಿಕ್ ಪಾರ್ಚಮೆಂಟ್ ಧಾರಣೆ ಸಹ ೨೧ ಸಾವಿರ ತಲುಪಿದೆ. ಇದರಿಂದಾಗಿ ಎರಡು ವಿಧದ ಕಾಫಿ ದರದಲ್ಲಿ ನಾಗಾಲೋಟ ಆರಂಭಿಸಿದೆ. ಸದ್ಯ ಅರೇಬಿಕ್ ಕಾಫಿ ಕೊಯ್ಲು ತಾಲೂಕಿನಲ್ಲಿ ಶೇ. ೩೦ ರಿಂದ ೪೦ರ ಪ್ರಮಾಣದಲ್ಲಿ ನಡೆದಿದ್ದರೆ ರೋಬಸ್ಟ್ ಕಾಫಿ ಕೊಯ್ಲು ಇದೀಗ ಆರಂಭವಾಗಿದೆ. ಸದ್ಯ ಕೊಯ್ಲು ನಡೆಸಿ ಮಾರಾಟ ಮಾಡಿರುವ ಬೆಳೆಗಾರರು ಹಿಂದೆಂದೂ ಕಂಡು ಕೇಳರಿಯದ ಬೆಲೆ ಕಂಡು ಹಿರಿಹಿರಿ ಹಿಗ್ಗುತ್ತಿದ್ದಾರೆ.

ಮಾರುಕಟ್ಟೆಗೆ ಬಿಡಲು ಜಿಜ್ಞಾಸೆ:

೨೦೨೩- ೨೪ನೇ ಸಾಲಿನಲ್ಲಿ ಕಾಫಿ ಮಾರುಕಟ್ಟೆ ಆರಂಭವಾದ ವೇಳೆ 50 ಕೇಜಿ ರೋಬಸ್ಟ್ ಚರ್ರಿ ಕಾಫಿ ಧಾರಣೆ ೭ ಸಾವಿರ ರು.ಗಳಿದ್ದರೆ ತದನಂತರದ ಅವಧಿಯಲ್ಲಿ ನಿಧಾನಗತಿ ಏರಿಕೆ ಕಂಡಿದ್ದು ಮಾರುಕಟ್ಟೆ ಅಂತ್ಯದ ವೇಳೆಗೆ ೧೧ ಸಾವಿರ ತಲುಪಿತ್ತು. ಇದರಿಂದಾಗಿ ಮೊದಲು ಕೊಯ್ಲು ನಡೆಸಿದ ಸಾಕಷ್ಟು ಬೆಳೆಗಾರರು ೭ ಸಾವಿರ ರು. ಬೆಲೆಯಲ್ಲೆ ತಮ್ಮ ಉತ್ಪನ್ನವನ್ನು ಮಾರಾಟ ಮಾಡಿದ್ದು ತದನಂತರದ ಬೆಲೆ ಕಂಡು ನಷ್ಟದ ಲೆಕ್ಕಾಚಾರ ಹಾಕುವಂತಾಗಿತ್ತು. ಆದರೆ, ಈ ಬಾರಿ ರೋಬಸ್ಟ್ ಚರ್ರಿ ಧಾರಣೆ ಮಾರುಕಟ್ಟೆ ಆರಂಭದಲ್ಲೇ ೧೧ ಸಾವಿರ ರು.ಗಳಿದ್ದರೂ ಈಗಾಗಲೇ ಕಾಫಿ ಕೊಯ್ಲು ನಡೆಸಿ ಸಂಸ್ಕರಿಸಿರುವ ಬೆಳೆಗಾರರು ತಮ್ಮ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡಲು ಮೀನಮೇಷ ಎಣಿಸುತ್ತಿದ್ದಾರೆ. ಇದರಿಂದಾಗಿ ಮಾರುಕಟ್ಟೆ ಆರಂಭವಾಗಿ ತಿಂಗಳು ಕಳೆದರೂ ನಿರೀಕ್ಷಿತ ಕಾಫಿ ಮಾರುಕಟ್ಟೆಗೆ ಬಾರದಾಗಿದೆ.

ಹಸಿರುವಾಣಿಗೆ ಕೇರಳಿಗರ ಲಗ್ಗೆ:

ಏಕಕಾಲಕ್ಕೆ ಕಾಫಿ ಕೊಯ್ಲು ಬರುವುದರಿಂದ ಕಾರ್ಮಿಕರ ಅಭಾವ ಮಿತಿ ಮೀರುವುದು ಸಾಮಾನ್ಯ ವಿಚಾರವಾಗಿದೆ. ಇದರಿಂದ ಕೆಲವು ಬೆಳೆಗಾರರು ತಮ್ಮ ಫಸಲನ್ನು ಗಿಡದಲ್ಲೇ ಹುಂಡಿ (ಹಸಿರುವಾಣಿ) ಲೆಕ್ಕದಲ್ಲಿ ನೀಡುವುದು ಕಳೆದ ಅರ್ಧ ದಶಕದಿಂದ ರೂಢಿಯಾಗಿತ್ತು. ಸಾಮಾನ್ಯವಾಗಿ ಅಪರೂಪಕ್ಕೊಬ್ಬ ಬೆಳೆಗಾರರು ಇಂತಹ ಹುಂಡಿ ಲೆಕ್ಕದಲ್ಲಿ ಫಸಲು ನೀಡಿ ಯಾವುದೆ ಶ್ರಮವಿಲ್ಲದೆ ಹಣ ಪಡೆಯುತ್ತಿದ್ದರು. ಆದರೆ, ವರ್ಷಪೂರ್ಣ ಗಿಡಗಳನ್ನು ಪೋಷಿಸುವ ಬೆಳೆಗಾರರು ಕೊಯ್ಲು ನಡೆಸುವ ವೇಳೆಗೆ ಹೈರಾಣಾಗುತ್ತಿದ್ದಾರೆ. ಇದರಿಂದಾಗಿ ಹಸಿರುವಾಣಿ ನೀಡುವ ಬೆಳೆಗಾರರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಅಧಿಕವಾಗುತ್ತಿದ್ದು ಸ್ಥಳೀಯ ಸಾಕಷ್ಟು ವ್ಯಾಪಾರಸ್ಥರು ಇದರಲ್ಲಿ ತೊಡಗಿಸಿಕೊಂಡಿದ್ದರು. ಆದರೆ, ಈ ಬಾರಿ ಕೇರಳಿಗರು ಹಸಿರುವಾಣಿ ವ್ಯವಹಾರಕ್ಕೆ ಲಗ್ಗೆ ಇಟ್ಟಿದ್ದು ಸ್ಥಳೀಯರಿಗೆ ಪೈಪೋಟಿ ನೀಡುತ್ತಿದ್ದಾರೆ. ಪರಿಣಾಮ ಹಸಿರುವಾಣಿ ನೀಡುವ ಬೆಳೆಗಾರರಿಗೆ ಉತ್ತಮ ದರ ದೊರಕುವಂತಾಗಿದೆ.

ಗ್ರೇಡ್ ಕಾಫಿಗೆ ಮತ್ತಷ್ಟು ದರ: ಸಾಮಾನ್ಯವಾಗಿ ಆಯ್ದ ಬೆಳೆಗಾರರು ಇದರಲ್ಲಿ ತೊಡಗಿಸಿಕೊಂಡಿದ್ದು ಸಂಪೂರ್ಣ ಹಣ್ಣಾದ ಕಾಫಿಯನ್ನು ಕೊಯ್ಲು ನಡೆಸಿ ಹದವಾದ ಬಿಸಿಲಿನಲ್ಲಿ ಒಣಗಿಸಿ ಮಾರಾಟ ಮಾಡುವ ಬೆಳೆಗಾರರು ಪ್ರತಿ ಐವತ್ತು ಕೆ.ಜಿ ಕಾಫಿಗೆ ೩೫ ಸಾವಿರದಿಂದ ೪೦ ಸಾವಿರ ರು.ಗಳವರೆಗೆ ಧಾರಣೆ ಪಡೆಯುತ್ತಿದ್ದಾರೆ. ಇಂತಹ ಕಾಫಿಯನ್ನು ಕೆಲವೇ ಆಯ್ದ ಪ್ರತಿಷ್ಠಿತ ಕಾಫಿ ಕಂಪನಿಗಳು ಖರೀದಿಸುತ್ತಿವೆ. ಇಂತಹ ಕಾಫಿ ಉತ್ಪಾದಿಸುವವರ ಸಂಖ್ಯೆ ಸಹ ಕಾಫಿ ಉದ್ಯಮದಲ್ಲಿ ವರ್ಷದಿಂದ ವರ್ಷಕ್ಕೆ ಅಧಿಕವಾಗುತ್ತಿದೆ.

Share this article