ವಿಘ್ನೇಶ್ ಎಂ. ಭೂತನಕಾಡು
ಕನ್ನಡಪ್ರಭ ವಾರ್ತೆ ಮಡಿಕೇರಿಕೊಡಗು ಜಿಲ್ಲೆಯಲ್ಲಿ ಕೂಡ ಬಿಸಿಲಿನ ತಾಪಮಾನ ಏರುತ್ತಿದ್ದು, ನದಿ ಮೂಲಗಳು ಬರಡಾಗುತ್ತಿವೆ. ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಕಾಫಿ ಕೊಯ್ಲು ಈಗಾಗಲೇ ಮುಗಿದಿದೆ. ಇದೀಗ ಮುಂದಿನ ವರ್ಷದ ಫಸಲಿಗೆ ಹೂವು ಅರಳಿಸಲು ಕಾಫಿ ಬೆಳೆಗಾರರು ಹರಸಾಹಸ ಪಡುವಂತಾಗಿದ್ದು, ಮಳೆಗೆ ಎದುರು ನೋಡುತ್ತಿದ್ದಾರೆ.
ಜಿಲ್ಲೆಯ ಕಾವೇರಿ ನದಿ ಹರಿದು ಹೋಗುವ ವ್ಯಾಪ್ತಿಯಲ್ಲಿ ಈಗಾಗಲೇ ಮೋಟಾರ್ ಪಂಪ್ ಸೆಟ್ ಮೂಲಕ ನೀರನ್ನು ಹಾಯಿಸಲಾಗಿದ್ದು, ನದಿ ನೀರು ಬಹುತೇಕ ಖಾಲಿಯಾಗಿದ್ದು, ಬಂಡೆಕಲ್ಲುಗಳ ದರ್ಶನವಾಗುತ್ತಿದೆ. ಭಾರಿ ಮಳೆಯಾಗುವ ವರೆಗೆ ನದಿಗಳ ಪರಿಸ್ಥಿತಿ ತೀವ್ರ ಶೋಚನೀಯ ಸ್ಥಿತಿಯಲ್ಲಿರುತ್ತದೆ.ಅರೆಬಿಕಾ ಹಾಗೂ ರೋಬೆಸ್ಟಾ ಕಾಫಿ ಕೊಯ್ಲು ಮುಕ್ತಾಯಗೊಂಡಿದ್ದು, ಇದೀಗ ಬೆಳೆಗಾರರು ಹರಸಾಹಸ ಮಾಡಿ ಮುಂದಿನ ವರ್ಷದ ಕಾಫಿ ಫಸಲಿಗಾಗಿ ಹೂವನ್ನು ಅರಳಿಸಬೇಕಾಗಿದೆ. ಇದರಿಂದ ಕೃತಕವಾಗಿ ನೀರು ಸಿಂಪಡಿಸಲು ಬೆಳೆಗಾರರು ಸ್ಪ್ರಿಂಕ್ಲರ್ ಮೊರೆ ಹೋಗಿದ್ದು, ಕೆಲವೆಡೆ ಈಗಾಗಲೇ ಮೋಟಾರ್ ಪಂಪ್ ಸೆಟ್ ಮೂಲಕ ಕೃತಕವಾಗಿ ಕಾಫಿ ತೋಟಕ್ಕೆ ನೀರು ಸಿಂಪಡಣೆ ಮಾಡಿದ್ದಾರೆ. ಇದರಿಂದ ಬೆಳೆಗಾರರಿಗೆ ವೆಚ್ಚ ಕೂಡ ಅಧಿಕವಾಗುತ್ತಿದೆ.
ಕೃಷಿ ಹೊಂಡ ಹಾಗೂ ಕೆಲವರು ನದಿ ಮೂಲಗಳನ್ನು ಬಳಸಿಕೊಂಡು ಕಾಫಿ ಗಿಡಗಳಿಗೆ ನೀರು ಹಾಯಿಸಿದ್ದಾರೆ. ಆದರೆ ನೀರಿನ ವ್ಯವಸ್ಥೆ ಇಲ್ಲದ ಸಣ್ಣ ಬೆಳೆಗಾರರು ಮಳೆ ಯಾವಾಗ ಬರುತ್ತದೆ ಎಂದು ಪ್ರತಿ ದಿನವೂ ಕೂಡ ಆಕಾಶ ನೋಡುವ ಪರಿಸ್ಥಿತಿ ಕಂಡುಬಂದಿದೆ.ಮಾರ್ಚ್ ತಿಂಗಳ ಆರಂಭದಲ್ಲೇ ಕಾವೇರಿ ಸೇರಿದಂತೆ ಇತರೆ ನದಿ ಹಾಗೂ ಹೊಳೆಗಳು ಬತ್ತಿ ಹೋಗಿವೆ. ಇದೀಗ ತಾನೆ ಬೇಸಿಗೆ ಆರಂಭವಾಗಿದೆ. ಇನ್ನೂ ಎರಡು ವರೆ ತಿಂಗಳು ಬೇಸಿಗೆ ಇರಲಿದ್ದು, ಇದರಿಂದ ಕಾವೇರಿ ನದಿ ಉಗಮಿಸುವ ಕೊಡಗು ಜಿಲ್ಲೆಯಲ್ಲೂ ಕೂಡ ಮುಂದಿನ ದಿನಗಳಲ್ಲಿ ನೀರಿಗೆ ಹಾಹಾಕಾರ ಎದುರಾಗುವ ಸಾಧ್ಯತೆ ಉಂಟಾಗಿದೆ.
ಒಣಗುತ್ತಿದೆ ಕಾಫಿ, ಕಾಳುಮೆಣಸು : ತೀರಾ ಬಿಸಿಲಿನ ತಾಪದಿಂದಾಗಿ ಕೊಡಗು ಜಿಲ್ಲೆಯ ಕಾಫಿ ತೋಟಗಳಲ್ಲಿ ಕಾಫಿ ಗಿಡ ಹಾಗೂ ಮೆಣಸು ಬಳ್ಳಿಗಳು ಸೊರಗಲಾರಂಭಿಸಿದೆ. ನೀರಿನ ವ್ಯವಸ್ಥೆ ಇದ್ದ ಕಡೆ ಬೆಳೆಗಾರರು ನೀರು ಹಾಯಿಸಿ ಗಿಡಗಳನ್ನು ರಕ್ಷಿಸಿಕೊಂಡಿದ್ದಾರೆ. ಆದರೆ ಕೆಲವು ಕಡೆಗಳಲ್ಲಿ ನೀರಿಲ್ಲದ ಪರಿಣಾಮ ಕಾಫಿ ಗಿಡಗಳು ಒಣಗುತ್ತಿವೆ. ಮತ್ತೊಂದು ಕಡೆ ಕಾಳು ಮೆಣಸು ಬಳ್ಳಿ ಕೂಡ ನೀರಿಲ್ಲದೆ ಹಳದಿ ಬಣ್ಣಕ್ಕೆ ತಿರುಗುತ್ತಿದೆ.ನಿರಾಶೆಯಲ್ಲಿ ಬೆಳೆಗಾರ : ಫೆಬ್ರವರಿ ತಿಂಗಳ ಕೊನೆಯಲ್ಲಿ ಹಾಗೂ ಮಾರ್ಚ್ ತಿಂಗಳ ಆರಂಭದಲ್ಲಿ ಕೊಡಗು ಜಿಲ್ಲೆಯಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿತ್ತು. ಆದರೆ ನಾಪೋಕ್ಲುವಿನ ಕೆಲವು ಕಡೆ ಮಾತ್ರ ಒಂದಷ್ಟು ಸಾಧಾರಣ ಮಳೆಯಾಗಿತ್ತು. ಉಳಿದ ಬೇರೆಲ್ಲೂ ಮಳೆಯಾಗಿಲ್ಲ. ಕೆಲವು ಕಡೆಗಳಲ್ಲಿ ಮೋಡ ಆವರಿಸಿ ಮಳೆ ಬರುವ ಲಕ್ಷಣ ಇದ್ದರೂ ಕೂಡ ಮಳೆಯ ಸುಳಿವೇ ಇಲ್ಲದಂತಾಗಿದೆ. ಇದರಿಂದ ಮಳೆಯ ನಿರೀಕ್ಷೆಯಲ್ಲಿದ್ದ ಬೆಳೆಗಾರರಿಗೆ ತೀವ್ರ ನಿರಾಶೆಯುಂಟಾಗಿದೆ.
ಜಿಲ್ಲೆಯಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಾಗಿದೆ. ಇದರಿಂದ ಕಾಫಿ ಗಿಡಗಳು ಹಾಗೂ ಕಾಳು ಮೆಣಸು ಬಳ್ಳಿ ತೀವ್ರ ಸೊರಗುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ಗಿಡಗಳಿಗೆ ನೀರು ನೀಡುವುದು ತೀರಾ ಅನಿವಾರ್ಯವಾಗಿದೆ. ಗಿಡಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಗಿಡಗಳ ಬುಡದಲ್ಲಿ ಶೀತಾಂಶ ಇರುವಂತೆ ಮಾಡಲು ತರಗೆಲೆಗಳನ್ನು ಹಾಕಬೇಕು.-ಡಾ. ವೀರೇಂದ್ರ ಕುಮಾರ್, ವಿಜ್ಞಾನಿಗಳು ಕೃಷಿ ವಿಜ್ಞಾನ ಕೇಂದ್ರ ಗೋಣಿಕೊಪ್ಪ