ಕುಸಿದ ರಬ್ಬರ್ ಧಾರಣೆ: ಕೃಷಿಕರು ಕಂಗಾಲು

KannadaprabhaNewsNetwork | Published : May 16, 2025 1:46 AM
Follow Us

ಸಾರಾಂಶ

ಪ್ರಸ್ತುತ ಭಾರಿ ಬಿಸಿಲು ಜತೆಗೆ ಬೇಸಿಗೆ ಮಳೆಯ ವಾತಾವರಣವಿದ್ದು, ಹೆಚ್ಚಿನ ಕೃಷಿಕರು ಟ್ಯಾಪಿಂಗ್ ನಿಲ್ಲಿಸಿದ್ದಾರೆ. ಇದರಿಂದ ಉತ್ಪಾದನೆ ಕುಸಿದಿದೆ. ಕಡಿಮೆ ಉತ್ಪಾದನೆ ಜತೆ ಬೆಲೆಯೂ ತೀವ್ರ ಕುಸಿದಿದೆ. ಉತ್ಪಾದನೆ ಕಡಿಮೆ ಇರುವ ಕಾರಣ ಬೆಲೆ ಏರಿಕೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ಬೆಲೆ ಇಳಿಕೆ ನಿರಾಸೆ ಮೂಡಿಸಿದೆ.

245 ರು.ಗೆ ತಲುಪಿದ್ದ ದರ 191 ರು.ಗೆ ಕುಸಿತ । ಬೆಂಬಲ ಬೆಲೆಗೆ ಆಗ್ರಹ

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಕುಸಿದ ರಬ್ಬರ್ ಧಾರಣೆಯಿಂದ ಕೃಷಿಕರು ಕಂಗಾಲಾಗಿದ್ದು, ಮುಂದೆ ಏನು ಎಂಬ ಚಿಂತೆಯಲ್ಲಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ 245 ರು.ಗೆ ತಲುಪಿದ್ದ ರಬ್ಬರ್ ದರ ಪ್ರಸ್ತುತ ಕೆಜಿಗೆ 191 ರು.ಗೆ ಕುಸಿದಿರುವುದು ಆತಂಕಕ್ಕೆ ಕಾರಣವಾಗಿದೆ.

150 ರು.ಗೆ ತಲುಪಿ ರಬ್ಬರ್ ಕೃಷಿಯೇ ಬೇಡ ಎಂಬ ಸ್ಥಿತಿಯಲ್ಲಿದ್ದ ರಬ್ಬರ್ ಬೆಳೆಗಾರರು ಬಳಿಕ ದರ ಏರಿಕೆಗೊಂಡು ತುಸು ಸಂತಸದಲ್ಲಿದ್ದರು. ಆದರೆ ಏರಿದ ದರ ಅದೇ ರೀತಿ ಇಳಿದು ಈಗ ಕುಸಿಯುತ್ತಿದೆ. ಹವಾಮಾನ ವೈಪರೀತ್ಯದ ಜತೆಗೆ ದರ ಇಳಿಕೆ ರೈತರಿಗೆ ಗಾಯದ ಮೇಲೆ ಬರೆ ಎಳೆದಿದೆ.

ಪ್ರಸ್ತುತ ಭಾರಿ ಬಿಸಿಲು ಜತೆಗೆ ಬೇಸಿಗೆ ಮಳೆಯ ವಾತಾವರಣವಿದ್ದು, ಹೆಚ್ಚಿನ ಕೃಷಿಕರು ಟ್ಯಾಪಿಂಗ್ ನಿಲ್ಲಿಸಿದ್ದಾರೆ. ಇದರಿಂದ ಉತ್ಪಾದನೆ ಕುಸಿದಿದೆ. ಕಡಿಮೆ ಉತ್ಪಾದನೆ ಜತೆ ಬೆಲೆಯೂ ತೀವ್ರ ಕುಸಿದಿದೆ. ಉತ್ಪಾದನೆ ಕಡಿಮೆ ಇರುವ ಕಾರಣ ಬೆಲೆ ಏರಿಕೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ಬೆಲೆ ಇಳಿಕೆ ನಿರಾಸೆ ಮೂಡಿಸಿದೆ.

ಅಂತಾರಾಷ್ಟ್ರೀಯ ಕಾರಣ:

ಯುದ್ಧ ಭೀತಿ, ಅಮೆರಿಕದ ಸುಂಕ ನೀತಿ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಹಿನ್ನಡೆಯಾಗಿದ್ದು, ಬೇಡಿಕೆ ಕುಸಿದಿರುವುದು, ಕಂಪನಿಗಳು ರಬ್ಬರ್ ದಾಸ್ತಾನು ಇಟ್ಟಿರುವುದರಿಂದ ದರ ಇಳಿಕೆಯಾಗಿದೆ ಎಂದು ತಜ್ಞರು ಹೇಳುತ್ತಾರೆ. ಬೆಲೆ ಏರಿಕೆ ಬಗ್ಗೆ ಕೇಳಿದರೆ ಸಮರ್ಪಕ ಉತ್ತರ ಸಿಗುತ್ತಿಲ್ಲ. ಸದ್ಯದ ಸ್ಥಿತಿ ಅವಲೋಕಿಸಿದರೆ ಬೆಲೆ ಇನ್ನಷ್ಟು ಇಳಿಕೆಯಾಗುವ ಸಂಭವವಿದೆ. ಮಳೆಗಾಲದ ಟ್ಯಾಪಿಂಗ್‌ನ ಪೂರ್ವಭಾವಿ ಕೆಲಸಕ್ಕೆ ಮುಂದಾಗಬೇಕಿದ್ದ ಬೆಳೆಗಾರರು ಇದುವರೆಗೂ ಅದರ ಗೋಜಿಗೆ ಹೋಗಿಲ್ಲ. ಲೀಸ್‌ಗೆ ತೋಟ ವಹಿಸಿಕೊಂಡವರು ಕೈಸುಟ್ಟುಕೊಳ್ಳುವ ಪರಿಸ್ಥಿತಿ ಉಂಟಾಗಿದೆ.

ರಬ್ಬರ್ ಕೆಜಿಗೆ ಸುಮಾರು 175 ರು. ನಷ್ಟು ಉತ್ಪಾದನಾ ವೆಚ್ಚವಿದೆ ಎಂದು ಸರ್ಕಾರವೇ ಪರಿಗಣಿಸಿದೆ. ಅಮೆರಿಕದಂತಹ ದೇಶಗಳಿಂದ ಬೇಡಿಕೆ ಕುಸಿದು, ರಬ್ಬರ್ ದರ ಪಾತಾಳಕ್ಕೆ ತಲುಪಿದೆ. ಬಿರು ಬಿಸಿಲು, ಬೇಸಿಗೆ ಮಳೆಯಿಂದ ಇಳುವರಿ ಕುಂಠಿತಗೊಂಡಿದೆ. ಅಕ್ಟೋಬರ್‌ನಲ್ಲಿ 245 ರು. ಇದ್ದಾಗ ರೈತರ ಹುಮ್ಮಸ್ಸು ಹೆಚ್ಚಿತ್ತು. ಆದರೆ ದರ ಇಳಿಕೆ ನಿರಾಶೆ ಹೆಚ್ಚಿಸಿದೆ.ರಬ್ಬರ್ ಬೆಳೆಗಾರರ ಭವಿಷ್ಯದ ದೃಷ್ಟಿಯಲ್ಲಿ ಸರ್ಕಾರ ಬೆಂಬಲ ಬೆಲೆ ಘೋಷಿಸಬೇಕು ಎಂಬುದು ರೈತರ ಆಗ್ರಹವಾಗಿದೆ. ಈ ಬಗ್ಗೆ ರಬ್ಬರ್ ವ್ಯವಹಾರ ನಡೆಸುವ ಸಂಸ್ಥೆಗಳು ಸರ್ಕಾರದ ಕದ ತಟ್ಟಿದರೂ ಪರಿಣಾಮ ಶೂನ್ಯ.

ಕಳೆದ ಸುಮಾರು 15 ವರ್ಷಗಳ ಹಿಂದೆ ರಬ್ಬರ್ ಕೃಷಿಯಲ್ಲಿ ಕ್ರಾಂತಿಯಾಗಿತ್ತು. ಆ ಕಾಲದಲ್ಲಿ 250 ರು. ಆಸುಪಾಸಿನಲ್ಲಿ ದರವಿತ್ತು. ಕೃಷಿಕರು ತಮ್ಮ ಗುಡ್ಡ ಜಾಗಗಳಲ್ಲಿ ಸಾವಿರಾರು ರಬ್ಬರ್ ಗಿಡಗಳನ್ನು ನೆಟ್ಟಿದ್ದರು. ಆದರೆ ಇಳುವರಿ ನೀಡುವ ಹೊತ್ತಿಗೆ ದರ ಕುಸಿದಿತ್ತು. ಕಳೆದ ಐದು ವರ್ಷಗಳಿಂದ ಹೊಸದಾಗಿ ರಬ್ಬರ್ ಕೃಷಿ ಮಾಡುವವರ ಸಂಖ್ಯೆ ಇಳಿಮುಖವಾಗಿದೆ. ಬೆರಳೆಣಿಕೆಯ ಕೆಲವರು ಮಾತ್ರ ರಬ್ಬರ್ ಕೃಷಿ ಮಾಡಿದ್ದರು. ಅದನ್ನು ಮುಂದುವರಿಸುವ ಉತ್ಸಾಹ ಕಂಡುಬರುತ್ತಿಲ್ಲ. ಕೆಲವೆಡೆ ಅಡಕೆ ತೋಟಗಳನ್ನು ಕಡಿದು ರಬ್ಬರ್ ಕೃಷಿ ಮಾಡಿದ ರೈತರು ಸದ್ಯ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.ಕೋಟ್‌ಸದ್ಯದ ಸ್ಥಿತಿಯಲ್ಲಿ ರಬ್ಬರ್ ಕೃಷಿಯಿಂದ ದೈನಂದಿನ ಜೀವನ ನಿರ್ವಹಣೆ ಸಾಧ್ಯವಿಲ್ಲ. ಸಿಕ್ಕಿದ ಇಳುವರಿ ಉತ್ಪಾದನಾ ವೆಚ್ಚಕ್ಕೆ ಸಾಕಾಗದ ಪರಿಸ್ಥಿತಿ ಇದೆ. ರಬ್ಬರ್ ಕೃಷಿಕರ ಪರಿಸ್ಥಿತಿ ಡೋಲಾಯಮಾನವಾಗಿದೆ.

। ಚಂದ್ರಹಾಸ ಪಟವರ್ಧನ್, ರಬ್ಬ‌ರ್ ಕೃಷಿಕ, ಗುರಿಪಳ್ಳ, ಉಜಿರೆ

-------------------------------------------------

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದಿರುವುದು ಬೆಲೆ ಕುಸಿತಕ್ಕೆ ಕಾರಣವಾಗಿದೆ. ಸಂಘದಿಂದ ಸರ್ಕಾರ, ಜನಪ್ರತಿನಿಧಿಗಳಿಗೆ ರಬ್ಬರ್‌ಗೆ ಬೆಂಬಲ ಬೆಲೆ ಘೋಷಿಸುವ ಕುರಿತು ಅನೇಕ ಬಾರಿ ಮನವಿ ಸಲ್ಲಿಸಲಾಗಿದೆ.

। ಶ್ರೀಧರ ಜಿ.ಭಿಡೆ, ಅಧ್ಯಕ್ಷ, ರಬ್ಬರ್ ಸೊಸೈಟಿ, ಉಜಿರೆಉಜಿರೆ ರಬ್ಬ‌ರ್ ಸೊಸೈಟಿ ಮೇ 9ರ ರಬ್ಬರ್ ದರ (ಕೆಜಿಗೆ)

1 ಎಕ್ಸ್222 ರು.

ಗ್ರೇಡ್ 3191.50 ರು.

ಗ್ರೇಡ್ 4191 ರು.

ಗ್ರೇಡ್ 5186 ರು.

ಲಾಟ್176 ರು.

ಸ್ಕ್ರಾಪ್ 1118 ರು.

ಸ್ಕ್ರಾಪ್110 ರು.