ಕನ್ನಡಪ್ರಭ ವಾರ್ತೆ ಶಿರಾ
ಶಿರಾ ನಗರಸಭೆಗೆ ಸೇರಿದ ಅಂಗಡಿ ಮಳಿಗೆಗಳಿಂದ ಸುಮಾರು 5 ಕೋಟಿ ರು. ಬಾಡಿಗೆ ವಸೂಲಾಗಬೇಕು. ಆದರೆ ಕೇವಲ 1 ಕೋಟಿ ರು. ಮಾತ್ರ ವಸೂಲಾಗಿ ಆಗಿದೆ. ಅಧಿಕಾರಿಗಳು ಮೊದಲು ಬಾಡಿಗೆ ವಸೂಲು ಮಾಡಿ ಇದು ನಿಮ್ಮ ಜವಾಬ್ದಾರಿ ಎಂದು ಶಾಸಕ ಟಿ.ಬಿ. ಜಯಚಂದ್ರ ಹೇಳಿದರು.ನಗರಸಭಾ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ನಗರಸಭೆ ಅಧಿಕಾರಿಗಳು ನಿರ್ಲಕ್ಷ ಮಾಡದೆ ಬಾಡಿಗೆ ವಸೂಲಾತಿಯ ಬಗ್ಗೆ ಹದಿನೈದು ದಿನಗಳಿಗೊಮ್ಮೆ ನನಗೆ ಮಾಹಿತಿ ನೀಡಬೇಕು. ಬಾಡಿಗೆ ನೀಡದವರ ಅಂಗಡಿಗಳ ಬಾಗಿಲು ಹಾಕಿಸಿ ಎಂದರು.
ಶಿರಾ ನಗರಸಭೆ ವತಿಯಿಂದ ನಡೆಯುತ್ತಿರುವ ನಗರೋತ್ಥಾನ ಕಾಮಗಾರಿಗಳು ಅತ್ಯಂತ ಕಳಪೆ ಗುಣಮಟ್ಟದಲ್ಲಿ ಮಾಡಲಾಗುತ್ತಿದ್ದು, ಕೂಡಲೇ ಅಧಿಕಾರಿಗಳು ಗುತ್ತಿಗೆದಾರರಿಗೆ ನೋಟಿಸ್ ನೀಡಿ ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಶಾಸಕ ಟಿ.ಬಿ. ಜಯಚಂದ್ರ ಕಾರ್ಯಪಾಲಕ ಅಭಿಯಂತರರಿಗೆ ಸೂಚನೆ ನೀಡಿದರು. ನಗರಸಭಾ ಸದಸ್ಯರಾದ ಅಜಯ್‌ಕುಮಾರ್, ಅಂಜಿನಪ್ಪ, ಆರ್. ರಾಮು, ಎಸ್.ಎಲ್. ರಂಗನಾಥ್, ಉಮಾ ವಿಜಯರಾಜ್ ಸೇರಿದಂತೆ ಹಲವು ಸದಸ್ಯರು ತಮ್ಮ ವಾರ್ಡುಗಳಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಯನ್ನು ಗುಣಮಟ್ಟದಲ್ಲಿ ಮಾಡುತ್ತಿಲ್ಲ. ಜಲ್ಲಿ ಮತ್ತು ಎಂ ಸ್ಯಾಂಡ್ ಗುಣಮಟ್ಟದಲ್ಲಿಲ್ಲ. ಇದರಿಂದ ಕೆಲವೇ ದಿನಗಳಲ್ಲಿ ರಸ್ತೆಗಳ ಕಿತ್ತು ಹೋಗುತ್ತವೆ. ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ಬೇರೆಯವರಿಗೆ ತುಂಡು ಗುತ್ತಿಗೆ ನೀಡಿ ಹೋಗಿದ್ದು, ಕಾಮಗಾರಿ ಸರಿಯಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿದರು. ಕೂಡಲೇ ಶಾಸಕ ಟಿ.ಬಿ. ಜಯಚಂದ್ರ ಅವರು ಅಧಿಕಾರಿಗಳು ಖುದ್ದು ಸ್ಥಳ ಪರಿಶೀಲನೆ ಮಾಡಿ ಸಂಬಂಧಪಟ್ಟ ಗುತ್ತಿಗೆದಾರರಿಗೆ ನೋಟಿಸ್ ನೀಡಿ ಸಾಧ್ಯವಾದರೆ ಮರು ಟೆಂಡರ್ ಮಾಡಿ ಕಾಮಗಾರಿಗಳ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ಕ್ರಮ ವಹಿಸಿ ಎಂದರು.ಶಿರಾ ನಗರವನ್ನು ಅಮೃತ್-೨ ನಗರ ಕುಡಿಯುವ ನೀರಿನ ಯೋಜನೆಯಡಿ ಸೇರ್ಪಡೆ ಮಾಡಲಾಗಿತ್ತು. ಈ ಯೋಜನೆಗೆ ಸುಮಾರು ೮೫ ಕೋಟಿ ರು. ಹಣ ಮಂಜೂರಾಗಿದ್ದು, ನಗರದಲ್ಲಿರುವ ಸುಮಾರು ೧೬೦೦೦ ಮನೆಗಳಿಗೆ ನಿರಂತರವಾಗಿ ಕುಡಿಯುವ ನೀರನ್ನು ನೀಡಲಾಗುವುದು. ಇದಕ್ಕೆ ಪೈಪ್‌ಲೈನ್ ಸೇರಿದಂತೆ ಇತರೆ ಕಾಮಗಾರಿಗಳಿಗೆ ಸುಮಾರು ೮೫ ಕೋಟಿ ರು. ಹಣವನ್ನು ವ್ಯಯ ಮಾಡಲಾಗುವುದು ಎಂದು ಅಧಿಕಾರಿ ತಿಳಿಸಿದರು.
ನಗರದಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಒಳಚರಂಡಿ ಯೋಜನೆಯ ಕಾಮಗಾರಿ ಯಶಸ್ವಿಯಾಗಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಕೇವಲ ೧೦೦೦ ಮನೆಗಳಿಗೆ ಮಾತ್ರ ಇದುವರೆಗೆ ಸಂಪರ್ಕ ನೀಡಲಾಗಿದೆ ಎಂದು ಹೇಳುತ್ತಿದ್ದೀರಿ. ಸಂಪರ್ಕ ನೀಡಿರುವ ಮನೆಗಳಿಂದಲೂ ಸರಿಯಾಗಿ ಒಳಚರಂಡಿ ನೀರು ಹರಿಯುತ್ತಿಲ್ಲ. ಈಗಾದರೆ ಯೋಜನೆ ಸಫಲವಾಗುವುದಾದರೂ ಹೇಗೆ ಎಂದು ಶಾಸಕ ಟಿ.ಬಿ.ಜಯಚಂದ್ರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮೊದಲು ಅಧಿಕಾರಿಗಳು ಒಳಚರಂಡಿ ಕಾಮಗಾರಿಯನ್ನು ಪರಿಶೀಲನೆ ಮಾಡಿ ನಂತರ ಮನೆಗಳಿಗೆ ಸಂಪರ್ಕ ನೀಡಿ ಎಂದರು.ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಸಮ್ರಿನ್ ಖಾನಂ ನಸ್ರುಲ್ಲಾ ಖಾನ್, ಸ್ಥಾಯಿ ಸಮಿತಿ ಅಧ್ಯಕ್ಷ ಶಿವಶಂಕರ್, ಪೌರಾಯುಕ್ತ ರುದ್ರೇಶ್ ಸೇರಿದಂತೆ ಹಲವರು ಹಾಜರಿದ್ದರು.