- ಪ್ರಗತಿ ಪರಿಶೀಲನಾ ಸಭೆಯಲ್ಲಿ ಆಡಳಿತಾಧಿಕಾರಿ ಜಿ.ಕೊಟ್ರೇಶ್ ಸೂಚನೆ - - - ಕನ್ನಡಪ್ರಭ ವಾರ್ತೆ ಜಗಳೂರು
ಪಟ್ಟಣದಲ್ಲಿ ತಾಲೂಕು ಪಂಚಾಯಿತಿಯ ೨೯ ಮಳಿಗೆಗಳಿದ್ದು, 3 ಬಾರಿ ನೋಟಿಸ್ ನೀಡಿದರೂ ತೆರಿಗೆ ಕಟ್ಟದೇ ಬಾಕಿ ಉಳಿಸಿಕೊಂಡಿರುವ ಮಾಲೀಕರ ವಿರುದ್ಧ ತಕ್ಷಣ ಕ್ರಮ ಜರುಗಿಸಬೇಕು ಎಂದು ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಹಾಗೂ ದಾವಣಗೆರೆ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಕೊಟ್ರೇಶ್ ಸೂಚನೆ ನೀಡಿದರು.ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ, ಅಧಿಕಾರಿಗಳಿಂದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆಯ ಮಾಹಿತಿ ಪಡೆದು ಅವರು ಮಾತನಾಡಿದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೋಕ್ಯಾನಾಯ್ಕ್, ತಾಪಂ ಇಒ ಕೆಂಚಪ್ಪ, ಜಿಪಂ ಎಇಇ ಶಿವಮೂರ್ತಿ ಪೊಲೀಸ್ ಮತ್ತು ತಹಸೀಲ್ದಾರ್ ಅವರನ್ನು ಮಳಿಗೆ ಮಾಲೀಕರ ಬಳಿ ಕರೆದೊಯ್ದು ಅಂಗಡಿಗಳನ್ನು ಬಂದ್ ಮಾಡಿಸಬೇಕು. ಸ್ಥಳದಲ್ಲೇ ತೆರಿಗೆ ಕಟ್ಟಿದವರನ್ನು ಬಿಟ್ಟು, ಉಳಿದವರನ್ನು ಖಾಲಿ ಮಾಡಿಸಬೇಕು. ವಸೂಲಾದ ಹಣದಿಂದ ಪೌರಕಾರ್ಮಿಕರಿಗೆ ವೇತನ ಪಾವತಿಸಿ ಎಂದು ಸೂಚಿಸಿದರು.ತಾಲೂಕಿನ ಎಲ್ಲ ಶಾಲೆಗಳು, ಹಾಸ್ಟೆಲ್‌ಗಳು, ಅಂಗನವಾಡಿ ಕೇಂದ್ರಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಹೆಚ್ಚಿನ ವಿಶೇಷ ತರಗತಿ ಮಾಡಿ ಹೆಚ್ಚಿನ ಅಂಕಗಳ ಪಡೆಯುವಂತೆ ಪ್ರೇರೇಪಿಸಬೇಕು. ರೈತರಿಗೆ ಶುದ್ಧ ಮೇವಿನ ಬೀಜಗಳನ್ನು ನೀಡಬೇಕು ಎಂದು ಸೂಚಿಸಿದ ಅವರು, ಸಭೆಗೆ ಗೈರಾದ ಸಹಕಾರ, ಸಣ್ಣ ನಿರಾವರಿ, ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ಕೊಟ್ಟು, ಗೈರಿನ ಬಗ್ಗೆ ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್ ಮತ್ತು ಶಾಸಕ ಬಿ.ದೇವೇಂದ್ರಪ್ಪ ಅವರ ಗಮನಕ್ಕೆ ತರುವಂತೆ ಇ.ಒ.ಗೆ ಆಡಳಿತಾಧಿಕಾರಿ ಕೊಟ್ರೇಶ್ ಸೂಚನೆ ನೀಡಿದರು.
ಕೃಷಿ ಇಲಾಖೆ ಎಡಿಎ ಎಚ್.ಶ್ವೇತಾ ಇಲಾಖೆಯ ವರದಿ ಮಂಡಿಸಿದರು. ತೋಟಗಾರಿಕೆ ಎಸ್‍ಎಡಿಎಚ್ ಪ್ರಭು ಶಂಕರ್, ಗ್ರಾಮೀಣ ಕುಡಿಯುವ ನೀರು ಪೂರೈಕೆ ಎಇಇ ಸಾದಿಕ್ ವುಲ್ಲಾ ಮಾತನಾಡಿದರು.ಜಿಪಂ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಮೂರ್ತಿ, ಪಶು ಸಂಗೋಪನೆ ಸಹಾಯಕ ನಿರ್ದೇಶಕ ಡಾ.ಲಿಂಗರಾಜು, ಆರೋಗ್ಯ ಇಲಾಖೆಯ ಟಿಎಚ್‍ಒ ಡಾ.ವಿಶ್ವನಾಥ್, ಸಿಡಿಪಿಒ ಬೀರೇಂದ್ರ ಕುಮಾರ್, ಶಿಕ್ಷಣ ಇಲಾಖೆ ಬಿಇಒ ಹಾಲಮೂರ್ತಿ, ಬೆಸ್ಕಾಂ ಎಇಇ ಸುಧಾಮಣಿ, ಸಮಾಜ ಕಲ್ಯಾಣ ಇಲಾಖೆಯ ಪರಮೇಶ್ವರಪ್ಪ, ಎಸ್‍ಟಿ ಅಧಿಕಾರಿ ಮಂಜುನಾಥ್, ಅರಣ್ಯ ಇಲಾಖೆ ವಲಯ ಅರಣ್ಯಿ ಇಲಾಖಾಧಿಕಾರಿ ಶ್ರೀನಿವಾಸ ಸೇರಿದಂತೆ ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು ವರದಿ ಮಂಡಿಸಿದರು.
ತಾಪಂ ಇಒ ಕೆಂಚಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಸಭೆಯಲ್ಲಿ ಪಾಲ್ಗೊಂಡಿದ್ದರು.- - - -13ಜೆಜಿಎಲ್1:
ಜಗಳೂರು ಪಟ್ಟಣದ ತಾಪಂ ಸಭಾಂಗಣದಲ್ಲಿ ಆಢಳಿತಾಧಿಕಾರಿ ಕೊಟ್ರೇಶ್ ಅಧ್ಯಕ್ಷತೆಯಲ್ಲಿ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು.