ಶಿರಸಿ:
ರಾಷ್ಟ್ರೀಯ ಶಿಕ್ಷಣ ನೀತಿ ಆರಂಭವಾಗಿ ಮೂರು ವರ್ಷ ಕಳೆದಿವೆ. ಈಗ ರಾಜ್ಯ ಸರ್ಕಾರ ರಾಜ್ಯ ಶಿಕ್ಷಣ ನೀತಿ ತರುತ್ತೇನೆ ಎಂದು ಗೊಂದಲ ಮೂಡಿಸುತ್ತಿದೆ. ರಾಜಕೀಯ ಉದ್ದೇಶಕ್ಕೆ ಈ ರೀತಿ ಮಾಡಬಾರದು ಎಂದು ವಿಧಾನಸಭಾ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.ನಗರದ ಎಂ.ಎಂ. ಕಲಾ ಮತ್ತು ವಿಜ್ಞಾನ ಸಭಾಭವನದಲ್ಲಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ರಾಷ್ಟ್ರೀಯ ಶಿಕ್ಷಣ ನೀತಿ ಬದಲಾಗಿ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ರಾಜ್ಯ ಶಿಕ್ಷಣ ನೀತಿ ತರಲು ಹೊರಟಿರುವುದನ್ನು ಒಪ್ಪಲು ಸಾಧ್ಯವಿಲ್ಲ. ರಾಜಕೀಯ ನಿರ್ಧಾರ, ಸಿದ್ಧಾಂತವನ್ನು ಶಿಕ್ಷಣ ಕ್ಷೇತ್ರದ ಮೇಲೆ ಹೇರಬಾರದು. ರಾಜ್ಯದಲ್ಲೂ ರಾಷ್ಟ್ರೀಯ ಶಿಕ್ಷಣ ನೀತಿಯನ್ನೇ ಮುಂದುವರಿಸಬೇಕು. ಎನ್‌ಇಪಿಯಲ್ಲಿ ಯಾವ ವಿಷಯ ತಿರಸ್ಕರಿಸುವಂತಿದೆ ಎಂಬುದನ್ನು ಸರಕಾರ ಹೇಳಬೇಕು ಎಂದು ಆಗ್ರಹಿಸಿದರು.ಅಂತಾರಾಷ್ಟ್ರೀಯ, ರಾಷ್ಟ್ರೀಯ ಬೆಳವಣಿಗೆ ಕಾಲಕಾಲಕ್ಕೆ ಗಮನಿಸಿ ದೇಶದ ಎಲ್ಲ ಕ್ಷೇತ್ರದಲ್ಲಿ ನೀತಿ ರೂಪಿಸಲಾಗುತ್ತದೆ. ರಾಜೀವಗಾಂಧಿ ಪ್ರಧಾನಿಯಾಗಿದ್ದಾಗ ಹೊಸ ಶಿಕ್ಷಣ ನೀತಿ ಜಾರಿಯಾಗಿತ್ತು. ಇದೀಗ ೨೦೧೫ರಿಂದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಚರ್ಚೆಯಾಗಿ ೨೦೨೦ರಲ್ಲಿ ಜಾರಿ ಮಾಡಿದೆ. ಹಿಂದೆ ಎಲ್ಲ ರಾಜ್ಯಗಳು ಕೆಲ ಸಣ್ಣ ಮಾರ್ಪಾಡುಗಳೊಂದಿಗೆ ಅಳವಡಿಸಿಕೊಂಡಿವೆ. ಅದೇ ರೀತಿ ಈಗಲೂ ಅಳವಡಿಸಿಕೊಳ್ಳಬೇಕು. ಒಳ್ಳೆಯ ವಿಷಯಗಳಿರುವ ಎನ್‌ಇಪಿ ಜಾರಿಯಾಗಬೇಕು ಎಂದು ಆಗ್ರಹಿಸಿ ರಾಜ್ಯಾದ್ಯಂತ ಕೋಟಿ ಸಹಿ ಸಂಗ್ರಹ ಅಭಿಯಾನ ನಡೆಸುತ್ತಿದ್ದೇವೆ ಎಂದು ತಿಳಿಸಿದರು.ಹೊಸ ಶಿಕ್ಷಣ ನೀತಿಯಲ್ಲಿ ಯಾವ ತಪ್ಪು ಇದೆ ಎಂಬುದನ್ನು ತಿಳಿಸದೇ ಏಕಮುಖವಾಗಿ ನಿರ್ಧಾರ ಕೈಗೊಂಡು, ಪೂರ್ವಸಿದ್ಧತೆ, ಸಮಾಲೋಚನೆ ಇಲ್ಲದೇ ರಾಜ್ಯ ಶಿಕ್ಷಣ ನೀತಿ ಜಾರಿ ಮಾಡಲಾಗುತ್ತಿದೆ. ಇದರ ಅನುಷ್ಠಾನದಿಂದ ದೇಶದ ವಿದ್ಯಾರ್ಥಿಗಳ ಜತೆ ಕರ್ನಾಟಕದ ವಿದ್ಯಾರ್ಥಿಗಳು ಸ್ಪರ್ಧೆ ನೀಡಲು ಸಾಧ್ಯವಿಲ್ಲ ಎಂದರು.ಎಡಪಂಥೀಯ ವಿಚಾರಧಾರೆ ಮತ್ತು ದೇಶದ ಇತಿಹಾಸ ಮರೆಮಾಚುವ ವಿಷಯಗಳು ಪಠ್ಯ-ಪುಸ್ತಕಗಳಲ್ಲಿರುವುದನ್ನು ಬದಲಾಯಿಸಲು ಶಿಕ್ಷಣ ಸಚಿವನಾಗಿದ್ದ ಸಂದರ್ಭದಲ್ಲಿ ಪರಿಷ್ಕರಣಾ ಸಮಿತಿ ರಚಿಸಿ, ೧ರಿಂದ ೧೦ನೇ ತರಗತಿಯ ಎಲ್ಲ ಪುಸ್ತಕ ಪರಿಷ್ಕರಣೆ ಮಾಡಿ, ಗುಲಾಮಿ ಮಾನಸಿಕತೆ ದೂರವಾಗಿ ನಮ್ಮ ಇತಿಹಾಸ, ನಮ್ಮ ಆಚಾರ ವಿಚಾರ, ಸಂಸ್ಕ್ರತಿ ಬಿಂಬಿಸುವ ವಿಷಯ ಅಳವಡಿಸಿದ್ದೆ. ಆಗ ಕಾಗೇರಿಯವರು ಶಿಕ್ಷಣ ಕ್ಷೇತ್ರವನ್ನು ಕೇಸರಿಕರಣ ಮಾಡಲು ಹೊರಟಿದ್ದಾರೆ ಎಂದು ವಿರೋಧ ಪಕ್ಷದವರೂ ಟೀಕಿಸಿದರೂ, ನಮ್ಮ ಮಕ್ಕಳಿಗೆ ಉತ್ತಮ ವಿಷಯ ನೀಡಬೇಕೆಂದು ಹಠ ತೊಟ್ಟು ಬದಲಾಯಿಸಿದ್ದೆ ಎಂದರು.ರಾಜ್ಯ ಶಿಕ್ಷಣ ನೀತಿಗೆ ಸಂಬಂಧಿಸಿದಂತೆ ನೇಮಿಸಲಾದ ಸಮಿತಿಯಲ್ಲಿ ಹೊರ ರಾಜ್ಯದವರೇ ಇದ್ದಾರೆ. ಎಡಪಂಥೀಯ ವಿಚಾರಧಾರೆ ಹೊಂದಿದವರೇ ಇದ್ದಾರೆ ಎಂದ ಅವರು, ನಾವೆಲ್ಲ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಧ್ವನಿ ಎತ್ತಬೇಕು. ಇಂದಿನ ಯುವ ಜನಾಂಗ ತಮ್ಮ ಮನೆ, ಮೊಬೈಲ್ ಸೇರಿ ತಮ್ಮಷ್ಟಕ್ಕೆ ಸೀಮಿತವಾದರೆ ಭವಿಷ್ಯದ ಯುವ ಜನಾಂಗಕ್ಕೆ ಕೊಡಲಿ ಏಟು ನೀಡಿದಂತಾಗುತ್ತದೆ. ಎಚ್ಚೆತ್ತುಕೊಳ್ಳುವ ಅನಿವಾರ್ಯತೆಯಿದೆ ಎಂದರು.ನಗರಸಭೆ ನಿಕಟಪೂರ್ವ ಅಧ್ಯಕ್ಷ ಗಣಪತಿ ನಾಯ್ಕ, ಐಕ್ಯೂಎಸಿ ಸಂಚಾಲಕ ಎಸ್.ಎಸ್. ಭಟ್ಟ, ಪ್ರಮುಖರಾದ ಆರ್.ಡಿ. ಹೆಗಡೆ ಜಾನ್ಮನೆ ಇದ್ದರು. ಉಪನ್ಯಾಸಕರಾದ ಗಣೇಶ ಹೆಗಡೆ ಸ್ವಾಗತಿಸಿದರು. ಡಾ. ಕೆ.ಜಿ. ಭಟ್ಟ ನಿರೂಪಿಸಿದರು.ಪಾಲಕರು, ಶಿಕ್ಷಣ ಸಂಸ್ಥೆಗಳ ವಲಯ, ವಿದ್ಯಾರ್ಥಿಗಳ ಹಂತದಲ್ಲಿ ನ. ೧೫ರಿಂದ ೩೦ರ ವರೆಗೆ ಸಹಿ ಸಂಗ್ರಹ ಅಭಿಯಾನ ನಡೆಸುತ್ತಿದ್ದೇವೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.