ಕನ್ನಡಪ್ರಭ ವಾರ್ತೆ ತುಮಕೂರು
ಕಳೆದ ಒಂದೂವರೆ ತಿಂಗಳಿಂದ ನೀರಿಲ್ಲದೆ ಬವಣೆಯ ಬದುಕು ಸಾಗಿಸುತ್ತಿದ್ದೇವೆ. ನೀರಿಲ್ಲದೆ ಅಡುಗೆ, ಸ್ವಚ್ಛತಾ ಕಾರ್ಯಗಳಿಗೆ ಪರದಾಡುವಂತಾಗಿದೆ ಎಂದು ಮಾಳಿಗೆಹಟ್ಟಿಯ ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಬಳಿ ನೀರಿನ ಸಂಕಷ್ಟದ ಬಗ್ಗೆ ಎಳೆ ಎಳೆಯಾಗಿ ವಿವರಿಸಿದರು.ಶಿರಾ ತಾಲೂಕು ಬುಕ್ಕಪಟ್ಟಣ ಹೋಬಳಿ ಕುರುಬರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಮಾಳಿಗೆಹಟ್ಟಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಬರಪರಿಸ್ಥಿತಿ ಪರೀಕ್ಷಿಸಲು ಸೂರ್ಯೋದಯಕ್ಕಿಂತ ಮುನ್ನ ಶನಿವಾರ ಭೇಟಿ ನೀಡಿದ ಸಂದರ್ಭದಲ್ಲಿ ಮಾಳಿಗೆಹಳ್ಳಿಯ ಗ್ರಾಮಸ್ಥರು ತಮ್ಮ ಸಮಸ್ಯೆಗಳ ಅಹವಾಲು ಸಲ್ಲಿಸಿದರು.
ಅಹವಾಲು ಆಲಿಸಿದ ಜಿಲ್ಲಾಧಿಕಾರಿಗಳು, ಕಳೆದ ಒಂದೂವರೆ ತಿಂಗಳಿಂದ ನೀರಿಗಾಗಿ ಜನರು ಪಡುತ್ತಿರುವ ಕಷ್ಟ ಅಧಿಕಾರಿಗಳಿಗೆ ಕಾಣಲಿಲ್ಲವೇ? ಕುಡಿಯುವ ನೀರಿನ ಸಮಸ್ಯೆ ತಲೆದೋರಿದ ಕೂಡಲೇ ಎಸ್‌ಡಿಆರ್‌ಎಫ್ ಹಣದಿಂದ ತುರ್ತು ಕಾಮಗಾರಿ ಕೈಗೊಳ್ಳಬೇಕೆಂದು ನಿರ್ದೇಶನವಿದ್ದರೂ ಏಕೆ ಕ್ರಮ ಕೈಗೊಂಡಿಲ್ಲವೆಂದು ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡರು. ಕೂಡಲೇ ಟ್ಯಾಂಕರ್‌ನಿಂದ ನೀರಿನ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಸೂಚನೆ ನೀಡಿದರು.ಮಾಳಿಗೆಹಟ್ಟಿ ಗ್ರಾಮದ ಮಹಿಳೆಯರು ನೀರಿನ ಸಮಸ್ಯೆಯಿಂದ ಮಕ್ಕಳಿಗೆ ಹೊತ್ತಿಗೆ ಸರಿಯಾಗಿ ಊಟವಿಲ್ಲದಂತಾಗಿದೆ. ವಾರಕ್ಕೊಮ್ಮೆ ಸ್ನಾನ ಮಾಡುವ ಪರಿಸ್ಥಿತಿ ಎದುರಾಗಿದೆ. ಮನೆಯಲ್ಲಿ ನೀರಿಲ್ಲದೆ ಯಾವ ಕೆಲಸವೂ ಮಾಡಲಾಗುತ್ತಿಲ್ಲ. ಬೆಳಗಿನಿಂದ ನೀರು ಹೊಂಚಲು ಶುರುವಾದರೆ ಹೊತ್ತೇರಿದರೂ ಒಂದೆರಡು ಕೊಡ ನೀರು ಸಿಗುತ್ತದೆ ಎಂದು ಜಿಲ್ಲಾಧಿಕಾರಿಗಳ ಬಳಿ ಅನುಭವಿಸುತ್ತಿರುವ ತೊಂದರೆಗಳ ಬಗ್ಗೆ ಹೇಳಿಕೊಂಡರು.
ಇದಕ್ಕೂ ಮುನ್ನ ಶಿರಾ ತಾಲೂಕು ಗೌಡಗೆರೆ ಹೋಬಳಿ ತಾವರೆಕೆರೆ, ಬುಕ್ಕಾಪಟ್ಟಣ ಹೋಬಳಿ ನೇರಳೆಗುಡ್ಡ ಗ್ರಾಮ ಪಂಚಾಯತಿ ಉಡಪಕಲ್ ತಾಂಡ ಹಾಗೂ ಕುರುಬರಹಳ್ಳಿ ಗ್ರಾಮ ಪಂಚಾಯತಿ ಬಂಗಾರಿಗೊಲ್ಲರಹಟ್ಟಿ, ಪುರ ಗ್ರಾಮಗಳಿಗೆ ಭೇಟಿ ನೀಡಿ ಬರಪರಿಸ್ಥಿತಿಯ ಬಗ್ಗೆ ಜಿಲ್ಲಾಧಿಕಾರಿಗಳು ಪರಿರೀಕ್ಷಿಸಿದರು.ಉಡಪಕಲ್ ತಾಂಡಾದಲ್ಲಿ ನೀರಿನ ಅಭಾವ ನೀಗಿಸಲು ಖಾಸಗಿ ಕೊಳವೆ ಬಾವಿ ಮಾಲೀಕರೊಂದಿಗೆ ನೀರು ಸರಬರಾಜು ಮಾಡಲು ಕರಾರು ಒಪ್ಪಂದ ಮಾಡಿಕೊಳ್ಳಲಾಗಿದೆ. ಗ್ರಾಮಕ್ಕೆ ನೀರು ಪೂರೈಕೆ ಮಾಡಲು ಪೈಪ್‌ಲೈನ್ ಅಳವಡಿಸಲಾಗಿದೆ ಎಂದು ಪಿಡಿಒ ಬರಕತ್ ಅಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಗ್ರಾಮದಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿಗಳು ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕರಿಗೆ ಮೇವಿನ ಕಿಟ್ ವಿತರಿಸಬೇಕೆಂದು ಸೂಚನೆ ನೀಡಿದಾಗ ಉತ್ತರಿಸಿದ ಸಹಾಯಕ ನಿರ್ದೇಶಕ ಡಾ. ಸಿ.ಎಸ್. ರಮೇಶ್ ಅವರು ಶಿರಾ ತಾಲೂಕಿನಲ್ಲಿ ಅಂದಾಜು 2 ತಿಂಗಳಿಗಾಗುವಷ್ಟು ಮೇವಿನ ಲಭ್ಯತೆವಿದೆ. ಈಗಾಗಲೇ 8572 ಮೇವಿನ ಕಿರು ಪೊಟ್ಟಣಗಳನ್ನು 5272 ಫಲಾನುಭವಿಗಳಿಗೆ ವಿತರಿಸಲಾಗಿದ್ದು, ತೆರೆದ/ಕೊಳವೆ ಬಾವಿ, ನೀರಿನ ಸೌಲಭ್ಯ ಹೊಂದಿರುವ ರೈತರಿಗೆ ಆದ್ಯತೆ ಮೇಲೆ ಮೇವಿ ಕಿಟ್‌ಗಳನ್ನು ವಿತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.ನಂತರ ಪುರ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ತೀರಾ ಹದಗೆಟ್ಟಿದ್ದು, ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಕ್ರಮಕೈಗೊಳ್ಳಬೇಕೆಂದು ಪಿಡಿಒ ತಿಪ್ಪೇಸ್ವಾಮಿ ಅವರಿಗೆ ಸೂಚಿಸಿದಾಗ ನೆನ್ನೆಯಷ್ಟೆ ಶಾಸಕ ಸುರೇಶ್ ಬಾಬು ಅವರು ತಾವರೆಕೆರೆ-ಬುಕ್ಕಪಟ್ಟಣ ರಸ್ತೆಯಿಂದ ಮಾಳಿಗೆ ಹಟ್ಟಿ ಮಾರ್ಗ ಲಿಂಗಶೆಟ್ಟಿ ಹಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದ್ದು, ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಶೀಘ್ರವೇ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಕುಡಿಯುವ ನೀರಿನ ಸಮಸ್ಯೆ, ಜಾನುವಾರು ಮೇವು ಕೊರತೆಗೆ ಸಂಬಂಧಿಸಿದಂತೆ ಕಳೆದ ಮಾಹೆಯಿಂದ ಜಿಲ್ಲೆಯ ತುಮಕೂರು, ಚಿಕ್ಕನಾಯಕನಹಳ್ಳಿ, ಕೊರಟಗೆರೆ ಹಾಗೂ ಮಧುಗಿರಿ ತಾಲೂಕಿನ ಗ್ರಾಮಗಳಲ್ಲಿ ಸಂಚರಿಸಿ ಬರ ಪರಿಸ್ಥಿತಿಯನ್ನು ಅವಲೋಕಿಸಲಾಗಿದೆ. ಎಲ್ಲ ತಾಲೂಕುಗಳಿಗಿಂತ ಶಿರಾ ತಾಲೂಕಿನ ಗ್ರಾಮಗಳಲ್ಲಿ ಬರ ಪರಿಸ್ಥಿತಿ ಹೆಚ್ಚಾಗಿ ಕಂಡು ಬಂದಿದ್ದು, ಅಧಿಕಾರಿಗಳು ಸಮರ್ಪಕವಾಗಿ ಬರ ಪರಿಸ್ಥಿತಿಯನ್ನು ನಿರ್ವಹಣೆ ಮಾಡಬೇಕೆಂದು ಸೂಚನೆ ನೀಡಿದರು.ಪುರ ಗ್ರಾಮದಲ್ಲಿ ಸ್ವಚ್ಛತೆಯಿಲ್ಲದಿರುವುದನ್ನು ಕಂಡ ಜಿಲ್ಲಾಧಿಕಾರಿಗಳು ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಅಧಿಕಾರಿಗಳು ಗ್ರಾಮದ ಮನೆ-ಮನೆಗೂ ಭೇಟಿ ನೀಡಿ ಸ್ವಚ್ಛತೆ ಹಾಗೂ ವೈಯಕ್ತಿಕ ಶೌಚಾಲಯ ಬಳಸುವ ಬಗ್ಗೆ ಅರಿವು ನೀಡಬೇಕು. ಈ ನಿಟ್ಟಿನಲ್ಲಿ ಐ.ಇ.ಸಿ(ಮಾಹಿತಿ, ಶಿಕ್ಷಣ, ಸಂವಹನ) ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ನಿರ್ದೇಶನ ನೀಡಿದರು.
ಹೊಸದಾಗಿ ಕೊರೆದ ಕೊಳವೆ ಬಾವಿಗಳಿಗೆ ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಿ ಮೋಟಾರ್ ಪಂಪನ್ನು ಅಳವಡಿಸಬೇಕು. ಸಾರ್ವಜನಿಕರ ಹಿತದೃಷ್ಠಿಯಿಂದ ಬಾಡಿಗೆ ಆಧಾರದ ಮೇಲೆ ನೀರು ನೀಡುವ ಖಾಸಗಿ ಕೊಳವೆ ಬಾವಿಗಳಿಗೆ ನಿರಂತರ ಜ್ಯೋತಿಯಡಿ ವಿದ್ಯುತ್ ವ್ಯವಸ್ಥೆ ಕಲ್ಪಿಸಬೇಕು ಎಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ಸೂಚನೆ ನೀಡಿದರು.ಬಂಗಾರಿಗೊಲ್ಲರಹಟ್ಟಿ ಗ್ರಾಮಕ್ಕೆ ಭೇಟಿ ನೀಡಿದಾಗ ಖಾಸಗಿ ಕೊಳವೆ ಬಾವಿಯಿಂದ ಗ್ರಾಮಕ್ಕೆ ನೀರು ಪೂರೈಕೆಯಾಗುತ್ತಿರುವ, ಶಾಲಾ ಮಕ್ಕಳಿಗೆ ರಾಗಿ ಹೆಲ್ತ್ ಮಿಕ್ಸ್ ವಿತರಿಸುತ್ತಿರುವ ಹಾಗೂ ಮಳೆಯ ಅಭಾವದಿಂದ ತಾಲೂಕಿನಲ್ಲಿ ಕುಂಠಿತಗೊಂಡಿರುವ ಕೃ ಬಿತ್ತನೆ ಪ್ರಗತಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪಂಚಾಯಿತಿ ಅದ್ಯಕ್ಷ ತಿಮ್ಮಕ್ಕ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ, ಪಿಡಿಒ ತಾವರಿ ನಾಯಕ್, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಹನುಮಂತಪ್ಪ, ಬೆಸ್ಕಾಂ ಎಂಜಿನಿಯರ್, ವಿವಿಧ ಗ್ರಾಮ ಪಂಚಾಯಿತಿ ಜನ ಪ್ರತಿನಿಧಿಗಳು ಸೇರಿದಂತೆ ಮತ್ತಿತರರಿದ್ದರು.ಒಗ್ಗೂಡಿ ಕೆಲಸ ಮಾಡಲು ಸೂಚನೆ: ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ಮಾತನಾಡಿ, ಅಧಿಕಾರಿಗಳು ಕಚೇರಿ ಕೆಲಸದ ಸಮಯಕ್ಕೂ ಮುನ್ನ ಕ್ಷೇತ್ರಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡಬೇಕು. ತಾಲೂಕಿನಲ್ಲಿ ಸಮಸ್ಯೆಗಳು ಸೃಷ್ಟಿಯಾಗದಂತೆ ಕಾರ್ಯವಹಿಸಬೇಕು. ಎಲ್ಲ ಇಲಾಖೆಗಳು ಒಗ್ಗೂಡಿ ಕೆಲಸ ಮಾಡಿದರೆ ಮಾತ್ರ ಪ್ರಗತಿ ಸಾಧ್ಯ. ಸಮಸ್ಯೆ ಇರುವ ಗ್ರಾಮಗಳನ್ನು ಗುರುತಿಸಿ ಸ್ಥಳಕ್ಕೆ ಭೇಟಿ ನೀಡಿ ಬಗೆಹರಿಸಬೇಕು ಅಧಿಕಾರಿಗಳಿಗೆ ಸೂಚನೆ ನೀಡಿದರು.