ಕನ್ನಡಪ್ರಭ ವಾರ್ತೆ ತುಮಕೂರು
ಕಲಾವಿದರು ರಂಗದ ಮೇಲೆ ಪಾತ್ರವಾಗಿ ಬರುತ್ತಾರೆ. ಅವರು ಹಚ್ಚಿಕೊಳ್ಳುವ ಬಣ್ಣವೇ ಅವರಿಗೆ ಪೂರಕ ಶಕ್ತಿಯಾಗಿ ಕೆಲಸ ಮಾಡುತ್ತದೆ ಎಂದು ಹಿರಿಯ ಯಕ್ಷಗಾನ ಕಲಾವಿದ ಗಣರಾಜ್‌ಕುಂಬ್ಳೆ ಹೇಳಿದರು.ಯಕ್ಷದೀವಿಗೆ ತುಮಕೂರು ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿರುವ ಎರಡು ದಿನಗಳ ‘ಯಕ್ಷಗಾನ ಬಣ್ಣಗಾರಿಕೆ ಮತ್ತು ವೇಷಭೂಷಣ ಕಮ್ಮಟ’ ಹಾಗೂ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಬಣ್ಣಗಾರಿಕೆ ಯಕ್ಷಗಾನ ಸೇರಿದಂತೆ ಯಾವುದೇ ರಂಗಕಲೆಯ ಪ್ರಮುಖ ಭಾಗ. ಇದರ ಕಲಿಕೆಯಿಂದ ಕಲೆಯ ಬೆಳವಣಿಗೆಯ ಜತೆಗೆ ಉದ್ಯೋಗ ಸೃಷ್ಟಿಯೂ ಸಾಧ್ಯ ಎಂದು ತಿಳಿಸಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಾಯಿ ರಾಮನ್ ನೃತ್ಯ ಕೇಂದ್ರದ ನಿರ್ದೇಶಕ ವಿದ್ವಾನ್ ಡಾ. ಸಾಗರ್ ಟಿ. ಎಸ್.,‘ಆಂಗಿಕ, ವಾಚಿಕ, ಆಹಾರ್ಯ ಮತ್ತು ಸಾತ್ವಿಕ’ ಕಲೆಯ ಪ್ರಮುಖ ಅಂಶಗಳು. ಕಲಿಕೆಯ ಆರಂಭದಷ್ಟೇ ನಿರಂತರವಾಗಿ ಅಭ್ಯಾಸ ಮಾಡುವುದು ಮುಖ್ಯ. ಕಲಿತ ವಿದ್ಯೆಯನ್ನು ಸೂಕ್ತವಲ್ಲದ ಜಾಗದಲ್ಲಿ ಪ್ರದರ್ಶನ ಮಾಡದೆ ಅದರ ಪಾವಿತ್ರತ್ಯೆಯನ್ನು ಕಾಪಾಡಬೇಕು ಎಂದರು.
ಅಧ್ಯಕ್ಷೀಯ ನುಡಿಗಳನ್ನಾಡಿದ ಕೃಷ್ಣಮಂದಿರದ ಅಧ್ಯಕ್ಷ ಎಚ್. ಶ್ರೀನಿವಾಸ್ ಹತ್ವಾರ್, ಕಲೆಯನ್ನು ಉಳಿಸಿ ಪ್ರತಿಭೆಗಳನ್ನು ಬೆಳೆಸುವ ಯಕ್ಷದೀವಿಗೆಯ ಕಾರ್ಯಕ್ರಮಗಳ ನಿರಂತರತೆ ಹಾಗೂ ವೈಶಿಷ್ಟ್ಯವು ಅಭಿನಂದನಾರ್ಹ. ಈ ಕಮ್ಮಟದಲ್ಲಿ ಪಾಲ್ಗೊಂಡಿರುವ ಎಲ್ಲರೂ ಕಮ್ಮಟದ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕೆಂದು ಹೇಳಿದರು.ಮೊದಲ ದಿನದ ಕಮ್ಮಟದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಗಣರಾಜಕುಂಬ್ಳೆ ಹಾಗೂ ಸಕೇಶ್ ವಿಶ್ವಕರ್ಮ ಪಾಲ್ಗೊಂಡಿದ್ದ ಐವತ್ತಕ್ಕೂ ಹೆಚ್ಚು ಶಿಬಿರಾರ್ಥಿಗಳಿಗೆ ಯಕ್ಷಗಾನದ ಮುಖವರ್ಣಿಕೆ ಹಾಗೂ ವೇಷಭೂಷಣ ಧರಿಸುವ ಕ್ರಮವನ್ನುಕಲಿಸಿದರು.
ಸಂಜೆ ಮಧುಕುಮಾರ್ ಬೋಳೂರು ಅವರ ‘ಸುದರ್ಶನ ವಿಜಯ’ ಹಾಗೂ ಶ್ರೀ ಬಲಿಪ ನಾರಾಯಣ ಭಾಗವತರ ಸಂಪಾದಿತ ‘ಇಂದ್ರಜಿತು ಕಾಳಗ’ ಯಕ್ಷಗಾನ ಪ್ರಸಂಗಗಳನ್ನು ಪ್ರದರ್ಶಿಸಲಾಯಿತು.‘ಸುದರ್ಶನ ವಿಜಯ’ ಯಕ್ಷಗಾನದಲ್ಲಿ ಹಿಮ್ಮೇಳ ಕಲಾವಿದರಾಗಿ ದೀಪಕ ತುಳುಪುಳೆ, ಅವಿನಾಶ್ ಬೈಪಾಡಿತ್ತಾಯ, ಪೃಥ್ವಿ ಬಡೆಕ್ಕಿಲ, ಮುರಳಿ ಬಾಯಾಡಿ ಭಾಗವಹಿಸಲಿದ್ದಾರೆ. ಮುಮ್ಮೇಳ ಕಲಾವಿದರಾಗಿ ತೇಜು ವಿಘ್ನೇಶ್, ಅದಿತಿ ಕೃಷ್ಣ, ಫಾಲ್ಗುಣಿ ಶ್ರೀಧರ್, ಮಹಿಮಾ ಭಟ್, ಜನ್ಯ ಟಿ.ಜೆ., ಸಂವೃತ ಶರ್ಮಾ ಎಸ್.ಪಿ., ಸಾತ್ವಿಕ ನಾರಾಯಣ ಭಟ್ ಕೆ., ನಿಶಾಂತ್ ಓಂಕಾರ್, ಇಂಚರ ಎಸ್.ಎಸ್., ಸಿಬಂತಿ ಪದ್ಮನಾಭ ಪಾತ್ರನಿರ್ವಹಿಸಿದರು.
‘ಇಂದ್ರಜಿತು ಕಾಳಗ’ದ ಕಲಾವಿದರಾಗಿ ವಿಜಯಕುಂಬ್ಳೆ, ಗಣರಾಜಕುಂಬ್ಳೆ, ಶಶಾಂಕ ಅರ್ನಾಡಿ, ಆರತಿ ಪಟ್ರಮೆ, ತೇಜಸ್ವಿ ಎಂ.ಭಟ್, ದಾಮೋದರ ನಾಯಕ್, ಖುಷಿ ಶರ್ಮಾ ಎಸ್.ಪಿ., ಜನ್ಯ ಟಿ.ಜೆ. ಪಾತ್ರನಿರ್ವಹಿಸಿದರು.ಯಕ್ಷದೀವಿಗೆಯ ಅಧ್ಯಕ್ಷೆ ಆರತಿ ಪಟ್ರಮೆ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಯಕ್ಷಗಾನ ಸಾಂಸ್ಕೃತಿಕ ವೇದಿಕೆಯ ಪ್ರಧಾನ ಸಂಚಾಲಕ ಅನಂತರಾವ್, ನಾಗರಾಜಧನ್ಯ, ವೋಲ್ವೊ ವಿನ್ಯಾಸ ವಿಭಾಗದ ವ್ಯವಸ್ಥಾಪಕ ಸಕೇಶ್ ವಿಶ್ವಕರ್ಮ ಉಪಸ್ಥಿತರಿದ್ದರು.