ರೈಲಲ್ಲಿ ಬಂದು ಮನೆಗಳವು ಮಾಡಿ ರೈಲಲ್ಲೆ ಎಸ್ಕೇಪ್‌; ಇಬ್ಬರು ಆರೆಸ್ಟ್‌

KannadaprabhaNewsNetwork |  
Published : Oct 30, 2025, 04:00 AM ISTUpdated : Oct 30, 2025, 09:50 AM IST
Theft Case

ಸಾರಾಂಶ

ರೈಲು, ಬಸ್‌ಗಳಲ್ಲಿ ನಗರಕ್ಕೆ ಬಂದು ಬೀಗ ಹಾಕಿದ ಮನೆಗಳಲ್ಲಿ ಕಳ್ಳತನ ಮಾಡಿ ಮತ್ತೆ ರೈಲು ಅಥವಾ ಬಸ್‌ಗಳಲ್ಲೇ ಪರಾರಿಯಾಗುತ್ತಿದ್ದ ಇಬ್ಬರು ಕಳ್ಳರನ್ನು ಬೇಗೂರು ಠಾಣೆ ಪೊಲೀಸರು ಬಂಧಿಸಿ, 72 ಲಕ್ಷ ರು. ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತು ಜಪ್ತಿ ಮಾಡಿದ್ದಾರೆ.

 ಬೆಂಗಳೂರು :  ರೈಲು, ಬಸ್‌ಗಳಲ್ಲಿ ನಗರಕ್ಕೆ ಬಂದು ಬೀಗ ಹಾಕಿದ ಮನೆಗಳಲ್ಲಿ ಕಳ್ಳತನ ಮಾಡಿ ಮತ್ತೆ ರೈಲು ಅಥವಾ ಬಸ್‌ಗಳಲ್ಲೇ ಪರಾರಿಯಾಗುತ್ತಿದ್ದ ಇಬ್ಬರು ಕಳ್ಳರನ್ನು ಬೇಗೂರು ಠಾಣೆ ಪೊಲೀಸರು ಬಂಧಿಸಿ,72 ಲಕ್ಷ ರು. ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತು ಜಪ್ತಿ ಮಾಡಿದ್ದಾರೆ.

ಕೆಜಿಎಫ್‌ ನಿವಾಸಿಗಳಾದ ಶಾಂತಕುಮಾರ್‌(37) ಮತ್ತು ಜ್ಞಾನಪ್ರಕಾಶಂ(40) ಬಂಧಿತರು. ಆರೋಪಿಗಳಿಂದ 72 ಲಕ್ಷ ರು. ಮೌಲ್ಯದ 614 ಗ್ರಾಂ ಚಿನ್ನಾಭರಣ ಹಾಗೂ 470 ಗ್ರಾಂ ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಕಳೆದ ಜೂನ್‌ 16ರಂದು ವಿಶ್ವಪ್ರಿಯ ಲೇಔಟ್‌ ನಿವಾಸಿಯೊಬ್ಬರು ಮನೆಗೆ ಬೀಗ ಹಾಕಿಕೊಂಡು ಉಡುಪಿಗೆ ಹೋಗಿ ಜೂನ್‌ 18ರಂದು ವಾಪಾಸ್‌ ಬಂದು ನೋಡಿದಾಗ ದುಷ್ಕರ್ಮಿಗಳು ಮನೆಯ ಮುಂಬಾಗಿಲ ಬೀಗ ಮುರಿದು ಬೀರುವಿನಲ್ಲಿದ್ದ ಚಿನ್ನಾಭರಣ ಹಾಗೂ ಬೆಳ್ಳಿವಸ್ತುಗಳನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಇನ್ಸ್‌ಪೆಕ್ಟರ್‌ ಪಿ.ಎಸ್‌.ಕೃಷ್ಣಕುಮಾರ್‌ ನೇತೃತ್ವದಲ್ಲಿ ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೇಗೂರು ಕೆರೆ ಕೋಡಿ ಬಳಿ ಒಬ್ಬನ ಸೆರೆ:

ಪ್ರಕರಣದ ತನಿಖೆ ವೇಳೆ ಬಾತ್ಮೀದಾರರ ಮಾಹಿತಿ ಮೇರೆಗೆ ಬೇಗೂರು ಕೆರೆ ಕೋಡಿ ಬಳಿ ಓರ್ವನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಮತ್ತೊಬ್ಬ ಸಹಚರನ ಜೊತೆಗೆ ಸೇರಿ ಮನೆಗಳವು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಬೇಗೂರು ಠಾಣೆ ವ್ಯಾಪ್ತಿಯಲ್ಲಿ ಎರಡು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಂದು ಮನೆಗಳವು ಮಾಡಿರುವುದಾಗಿ ಬಾಯ್ಬಿಟ್ಟಿದ್ದಾನೆ.

ಆರು ಗಿರವಿ ಅಂಗಡಿಗಳಲ್ಲಿ ಅಡಮಾನ:

ಈತನ ಮಾಹಿತಿ ಮೇರೆಗೆ ಬೇಗೂರು ಠಾಣಾ ವ್ಯಾಪ್ತಿಯ ಮುನೇಶ್ವರ ಲೇಔಟ್‌ ಬಳಿ ಮತ್ತೊಬ್ಬನ್ನು ವಶಕ್ಕೆ ಪಡೆಯಲಾಯಿತು. ಬಳಿಕ ಇಬ್ಬರು ಆರೋಪಿಗಳು ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ಕೆಜಿಎಫ್‌ನ ಮೂರು ಗಿರವಿ ಅಂಗಡಿ ಮತ್ತು ಚಿಂತಾಮಣಿಯ ಮೂರು ಗಿರಿವಿ ಅಂಗಡಿಗಳಲ್ಲಿ ಅಡಮಾನ ಇರಿಸಿದ್ದ ಚಿನ್ನಾಭರಣ ಹಾಗೂ ಬೆಳ್ಳಿವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಆರೋಪಿಗಳ ಬಂಧನದಿಂದ ಬೇಗೂರು ಠಾಣೆಯ ಮೂರು, ಹೊಸಕೋಟೆ, ಚಿಕ್ಕಬಳ್ಳಾಪುರ ತಲಾ ಒಂದು ಸೇರಿ ಒಟ್ಟು ಐದು ಮನೆಗಳವು ಪ್ರಕರಣಗಳು ಪತ್ತೆಯಾಗಿವೆ. ಸದ್ಯ ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೊಬೈಲ್‌ ಬಳಸದ ಚಲಾಕಿಗಳು!

ಆರೋಪಿಗಳು ಕಳ್ಳತನಕ್ಕೆ ಬರುವಾಗ ಮೊಬೈಲ್‌ ಬಳಸುವುದಿಲ್ಲ. ಕೆಜಿಎಫ್‌ನಿಂದ ರೈಲು ಅಥವಾ ಬಸ್‌ಗಳಲ್ಲಿ ನಗರಕ್ಕೆ ಬಂದು ವಿವಿಧೆಡೆ ಸುತ್ತಾಡುತ್ತಿದ್ದರು. ಬೀಗ ಹಾಕಿದ ಮನೆಗಳನ್ನು ಗುರುತಿಸಿ ತಡರಾತ್ರಿ ಅಥವಾ ಮುಂಜಾನೆ ಆ ಮನೆಗಳ ಬೀಗ ಮುರಿದು ಮನೆ ಪ್ರವೇಶಿಸಿ ನಗದು, ಚಿನ್ನಾಭರಣ ಸೇರಿದಂತೆ ದುಬಾರಿ ವಸ್ತುಗಳನ್ನು ಕಳವು ಮಾಡಿ ಬಹುತೇಕ ರೈಲುಗಳಲ್ಲಿ ಕೆಜಿಎಫ್‌ ಕಡೆಗೆ ಪ್ರಯಾಣ ಬೆಳೆಸುತ್ತಿದ್ದರು. ಬಳಿಕ ಪರಿಚಿತ ಗಿರವಿ ಅಂಗಡಿಗಳಲ್ಲಿ ಕದ್ದ ಮಾಲುಗಳನ್ನು ಗಿರಿವಿ ಇಟ್ಟು ಹಣ ಪಡೆದು ಮೋಜು-ಮಸ್ತಿ ಮಾಡುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

PREV
Read more Articles on

Recommended Stories

ಇಂದಿರಾರ ಆದರ್ಶವನ್ನು ಎಲ್ಲರೂ ಪಾಲಿಸಬೇಕು : ಸಿದ್ದರಾಮಯ್ಯ
ಕುಡಚಿ ಶಾಸಕ ಪುತ್ರಗೆ ಡಿಕೆಶಿಯಿಂದ ‘ಶಿವಕುಮಾರ್‌’ ಎಂದು ನಾಮಕರಣ!