ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ತಾಲೂಕು ಪಂಚಾಯತಿ ಕಚೇರಿ ವ್ಯಾಪ್ತಿಯ ಸರ್ವೇ ನಂಬರ್ ಸಿಟಿಎಸ್ 1979ರಲ್ಲಿನ ಸುಮಾರು 7 ಎಕರೆ ಸರ್ಕಾರಿ ಖಾಲಿ ಸ್ಥಳಕ್ಕೆ ಶಾಸಕ ಹಾಗೂ ಕೆಎಸ್‌ಡಿಎಲ್ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ಲ್ಯಾಂಡ್ ಆರ್ಮಿ ಎಇಇ ಆನಂದಸ್ವಾಮಿ ಹಾಗೂ ತಾಲೂಕು ಪಂಚಾಯತಿ ಅಧಿಕಾರಿಗಳೊಂದಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ವೇಳೆ ಭೂ ಪ್ರದೇಶದಲ್ಲಿ ಬಯಲು ರಂಗಮಂದಿರ, ವಾಣಿಜ್ಯ ಮಳಿಗೆಗಳು, (ಶಾಪಿಂಗ್ ಕಾಂಪ್ಲೆಕ್ಸ್) ತಾಲೂಕು ಪಂಚಾಯತಿ ಇಲಾಖೆ ಅಧಿಕಾರಿಗಳಿಗೆ ಕ್ವಾಟರ್ಸ್‌ಗಳು, ಸುಸಜ್ಜಿತ ಸಮುದಾಯ ಭವನ, ತಾಲೂಕು ಪಂಚಾಯತಿ ಕಚೇರಿ ಸೇರಿದಂತೆ ವಿವಿಧ ರೀತಿ ಸಾರ್ವಜನಿಕರಿಗೆ ರಸ್ತೆ, ಪಾರ್ಕಿಂಗ್ ವ್ಯವಸ್ಥೆ ನಿರ್ಮಿಸಲು ಅತ್ಯಾಧುನಿಕ ನೀಲನಕ್ಷೆ ತಯಾರಿಸಿ ಕೊಡಿ. ಇದಕ್ಕೆ ಸರ್ಕಾರದಿಂದ ವಿಶೇಷ ಅನುದಾನ ತರುವ ಮೂಲಕ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಲ್ಯಾಂಡ್ ಆರ್ಮಿ ಇಲಾಖೆ ಎಇಇ ಆನಂದಸ್ವಾಮಿ ಅವರಿಗೆ ಸೂಚನೆ ನೀಡಿದರು.
ಈಗಾಗಲೇ ಕೆಲ ವಾಣಿಜ್ಯ ಮಳಿಗೆಗಳಿದ್ದು, ಅವು ಉಪಯೋಗವಿಲ್ಲದೇ ದುಸ್ಥಿತಿಯಲ್ಲಿವೆ. ಅಂತವುಗಳನ್ನು ಪುನಃ ದುರಸ್ತಿಗೊಳಿಸಲು ಸಾಧ್ಯವಿದ್ದರೆ ದುರಸ್ತಿಗೊಳಿಸಿ, ಇಲ್ಲವಾದರೆ ಸಂಪೂರ್ಣ ತೆರವುಗೊಳಿಸಿ ಸುಸಜ್ಜಿತ ಅಭಿವೃದ್ಧಿ ಪೂರಕ ಯೋಜನೆಗಳನ್ನು ಹೊಂದಿದ ಕಟ್ಟಡಗಳನ್ನು ನಿರ್ಮಿಸಲು ಅನುಕೂಲವಾಗಲಿದೆ. ಈಗಿರುವ ಮಳಿಗೆಗಳನ್ನು ತೆರವುಗೊಳಿಸಿ ಅತ್ಯಾಧುನಿಕ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುವುದರಿಂದ ತಾಲೂಕು ಪಂಚಾಯತಿಗೆ ಬಾಡಿಗೆ ರೂಪದಲ್ಲಿ ಆದಾಯ ಬರಲಿದೆ. ಇದರಿಂದ ತಾಲೂಕು ಪಂಚಾಯತಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ಒದಗಿಸುವ ಮೂಲಕ ಸದ್ಭಳಕೆ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.ಇದು ಸರ್ಕಾರಿ ಜಾಗ ಆಗಿರುವುದರಿಂದ ಬೇಕಾಬಿಟ್ಟಿಯಾಗಿ ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್, ಕಚ್ಚಾ ವಸ್ತುಗಳು ಸೇರಿದಂತೆ ಕಸ ಕಡ್ಡಿ, ಎಸೆದು ಹಾಳು ಮಾಡುವುದಲ್ಲದೇ ಸುತ್ತಲಿನ ಜನರಿಗೆ ದುರ್ನಾತ ಬೀರುತ್ತದೆ. ಇದು ಹಲವು ರೋಗಗಳಿಗೆ ತುತ್ತಾಗಬಹುದಾಗಿದೆ. ಸಧ್ಯ ಇಂತಹ ವಿಶಾಲ ಜಾಗದಲ್ಲಿ ಕಟ್ಟಡಗಳನ್ನು ನಿರ್ಮಿಸುವುದರಿಂದ ಸ್ವಚ್ಛತೆ ಜತೆ ನಿತ್ಯ ಜನರ ಸಂಚಾರ, ವ್ಯಾಪಾರ ವಹಿವಾಟಿಗೆ ಅನುಕೂಲವಾಗಲಿದೆ. ಇದೇ ರೀತಿ ಪಟ್ಟಣವೂ ಸೇರಿದಂತೆ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಪಡಿಸುವ ಮೂಲಕ ಮಾದರಿಯ ಕ್ಷೇತ್ರ ಮಾಡುವ ಉದ್ದೇಶವಿದೆ. ಅಧಿಕಾರಿಗಳು ಸಮರ್ಪಕವಾಗಿ ಸ್ಪಂದಿಸಿ ಸಹಕಾರ ನೀಡಬೇಕು. ಜನರ ಸೇವೆ ಮಾಡುವ ಉದ್ದೇಶದಿಂದ ನಮ್ಮನ್ನು ಗೆಲ್ಲಿಸಿದ್ದಾರೆ. ಅವರ ಋಣ ತೀರಿಸಲು ಅಭಿವೃದ್ಧಿ ಮಾಡುವುದು ಕರ್ತವ್ಯವಾಗಿದೆ ಎಂದು ಅಧಿಕಾರಿಗಳಿಗೆ ತಿಳಿಸುವ ಮೂಲಕ ಕಾಮಗಾರಿಗಳ ಬಗ್ಗೆ ಸಮಾಲೋಚನೆ ನಡೆಸಿದರು.
ಈ ವೇಳೆ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ತಾಲೂಕು ಪಂಚಾಯತಿ ರವಿಕಾಂತ ಮೇಟಿ, ಆನಂದ ಬಿರಾದಾರ ಸೇರಿದಂತೆ ಹಲವರು ಇದ್ದರು.