ಪಾಲಿಕೆ ವಲಯ ಕಚೇರಿಗೆ ಆಯುಕ್ತರದಿಢೀರ್‌ ಭೇಟಿ, ಸಿಬ್ಬಂದಿಗಳಿಗೆ ಕ್ಲಾಸ್‌

KannadaprabhaNewsNetwork |  
Published : Mar 14, 2024, 02:06 AM IST
ಹು-ಧಾ ಮಹಾನಗರ ಪಾಲಿಕೆಯ ವಲಯ ಕಚೇರಿ 1ಕ್ಕೆ ಮಂಗಳವಾರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ದಿಢೀರ್‌ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆ ಆಲಿಸಿದರು. | Kannada Prabha

ಸಾರಾಂಶ

ಕರ್ತವ್ಯದಲ್ಲಿ ನಿರ್ಲಕ್ಷ್ಯತನ ತೋರಿ ಕಡತಗಳನ್ನು ಬಾಕಿ ಉಳಿಸಿಕೊಂಡ ಕರವಸೂಲಿಗಾರರು ಹಾಗೂ ವಿಷಯ ನಿರ್ವಾಹಕರನ್ನು ತರಾಟೆಗೆ ತೆಗೆದುಕೊಂಡ ಆಯುಕ್ತರು, ಇವರ ಮೇಲೆ ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳುವಂತೆ ನಿರ್ದೇಶನ.

ಹುಬ್ಬಳ್ಳಿ:

ಇಲ್ಲಿನ ಮಹಾನಗರ ಪಾಲಿಕೆಯ ವಲಯ ಕಚೇರಿ 1ಕ್ಕೆ ಮಂಗಳವಾರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ದಿಢೀರ್‌ ಭೇಟಿ ನೀಡಿದರು.

ಸಾರ್ವಜನಿಕರ ದೂರಿನ ಮೇರೆಗೆ ಹಾಗೂ ಬಹುದಿನಗಳಿಂದ ಸಕಾಲದಲ್ಲಿ ಬಾಕಿ ಉಳಿದ ಇ-ಆಸ್ತಿ, ಕಟ್ಟಡ ಪರವಾನಗಿ, ಜನನ- ಮರಣ, ಟ್ರೇಡ್ ಲೈಸನ್ಸ್ , ಖಾತಾ ಬದಲಾವಣೆ ಹಾಗೂ ಇನ್ನಿತರ ಕಡತಗಳ ಕುರಿತು ಕಚೇರಿ ಕೆಲಸಕ್ಕೆಂದು ಬಂದಿದ್ದ ಸಾರ್ವಜನಿಕರ ತೊಂದರೆ, ತಕರಾರುಗಳನ್ನು ಆಲಿಸಿ ಸ್ಥಳದಲ್ಲೇ ವಿಷಯ ನಿರ್ವಾಹಕರನ್ನು ಕರೆದು ಪರಿಹಾರ ನೀಡಿದರು.ಕರ್ತವ್ಯದಲ್ಲಿ ನಿರ್ಲಕ್ಷ್ಯತನ ತೋರಿ ಕಡತಗಳನ್ನು ಬಾಕಿ ಉಳಿಸಿಕೊಂಡ ಕರವಸೂಲಿಗಾರರು ಹಾಗೂ ವಿಷಯ ನಿರ್ವಾಹಕರನ್ನು ತರಾಟೆಗೆ ತೆಗೆದುಕೊಂಡ ಆಯುಕ್ತರು, ಇವರ ಮೇಲೆ ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳುವಂತೆ ವಲಯ ಸಹಾಯಕ ಆಯುಕ್ತರಿಗೆ ನಿರ್ದೇಶನ ನೀಡಿದರು.ಬಾಕಿ ಉಳಿಸಿಕೊಂಡಿರುವ ಅರ್ಜಿಗಳನ್ನು ತಕ್ಷಣ ವಿಲೇವಾರಿ ಮಾಡುವಂತೆ ಹಾಗೂ ವಿಲೇವಾರಿ ಮಾಡಿದ ಮಾಹಿತಿ ನೀಡುವಂತೆ ವಲಯ ಕಚೇರಿಯಲ್ಲಿ ಉಪಸ್ಥಿತರಿದ್ದ ಉಪ ಆಯುಕ್ತ ಆನಂದ್ ಕಲ್ಲೋಳಿಕರಗೆ ಸೂಚಿಸಿದರು.ಕಚೇರಿಯ ಪ್ರತಿಯೊಂದು ಶಾಖೆ ಪರಿಶೀಲಿಸಿದ ಆಯುಕ್ತರು, ಇನ್ನು ಮುಂದೆ ಯಾವುದೇ ರೀತಿಯ ದೂರುಗಳು ಬಾರದಂತೆ ನೋಡಿಕೊಳ್ಳಿ. ದೂರುಗಳು ಬಂದಲ್ಲಿ ಕರ್ತವ್ಯದಲ್ಲಿ ನಿರ್ಲಕ್ಷ್ಯತನ ತೋರಿದವರನ್ನು ಅಮಾನತು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಆಯುಕ್ತಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ವಲಯ ಕಚೇರಿ 10ರ ವ್ಯಾಪ್ತಿಯಲ್ಲಿ ಸಂಚಾರ ಕೈಗೊಂಡು ಸ್ವಚ್ಛತಾ ಕಾರ್ಯ ಹಾಗೂ ಚಾಲ್ತಿಯಲ್ಲಿರುವ ಅಭಿವೃದ್ಧಿ ಕಾರ್ಯ ವೀಕ್ಷಿಸಿದರು. ನಗರದ ಇಂಡಿ ಪಂಪ್, ನೇಕಾರ ನಗರ, ಬಂಕಾಪುರ ಚೌಕ್‌, ಹಳೆ ಹುಬ್ಬಳ್ಳಿ, ಸಿದ್ಧಾರೂಢ ಮಠ ರಸ್ತೆ, ಭಾರತ್ ಮಿಲ್ ಪ್ರದೇಶಗಳಲ್ಲಿ ಆಯುಕ್ತರು ಸಂಚರಿಸಿ ಸ್ವಚ್ಛತಾ ಕಾರ್ಯ ಹಾಗೂ ಚಾಲ್ತಿಯಲ್ಲಿರುವ ಅಭಿವೃದ್ಧಿ ಕಾರ್ಯ ವೀಕ್ಷಿಸಿದರು.

ಈ ಸಮಯದಲ್ಲಿ ಸ್ವಚ್ಛತೆಯಲ್ಲಿ ನಿಷ್ಕಾಳಜಿ ಕಂಡುಬಂದ ಕಾರಣ ವಲಯ ಸಹಾಯಕ ಆಯುಕ್ತರಿಗೆ ನೋಟಿಸ್‌ ನೀಡಿ ಮುಂದೆ ಸ್ವಚ್ಛತಾ ವಿಷಯದಲ್ಲಿ ಯಾವುದೇ ರೀತಿಯ ನಿಷ್ಕಾಳಜಿ ತೋರದಂತೆ ಎಚ್ಚರಿಕೆ ನೀಡಿದರು.ಸ್ಥಳದಲ್ಲಿಯೇ ಹಾಜರಿದ್ದ ಆರೋಗ್ಯ ನಿರೀಕ್ಷಕರು ಹಾಗೂ ಅಭಿಯಂತರರಿಗೆ ಸ್ವಚ್ಛತಾ ಕಾರ್ಯದಲ್ಲಿ ಹಾಗೂ ಚಾಲ್ತಿಯಲ್ಲಿರುವ ಅಭಿವೃದ್ಧಿ ಕಾರ್ಯಗಳಲ್ಲಿ ಯಾವುದೇ ರೀತಿಯ ತೊಂದರೆ ಬಾರದಂತೆ ಸರಿಯಾಗಿ ಕಾರ್ಯನಿರ್ವಹಿಸುವಂತೆ ನಿರ್ದೇಶನ ನೀಡಿದರು.

ಈ ವೇಳೆ ವಲಯ ಆಯುಕ್ತ ಬಸವರಾಜ ಲಮಾಣಿ ಹಾಗೂ ಆರೋಗ್ಯ ನಿರೀಕ್ಷಕರು, ಸ್ವಚ್ಛತಾ ಕರ್ಮಿಗಳು ಹಾಜರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ