ಕನ್ನಡಪ್ರಭ ವಾರ್ತೆ ಮದ್ದೂರು
ರಾಜ್ಯದಲ್ಲಿಯೇ ಹುಟ್ಟೂರು ಕದಲೂರು ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಅಭಿವೃದ್ಧಿಪಡಿಸಲು ಪಣ ತೊಟ್ಟಿದ್ದೇನೆ ಎಂದು ಶಾಸಕ ಕೆ.ಎಂ.ಉದಯ್ ಶುಕ್ರವಾರ ಹೇಳಿದರು.ತಾಲೂಕಿನ ಕದಲೂರು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ನೂತನ ಸಭಾಂಗಣ ಕಟ್ಟಡ ಉದ್ಘಾಟನೆ ಹಾಗೂ ನರೇಗಾ ಯೋಜನೆಯಡಿ ಅಡುಗೆ ಮನೆಗಳ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ನಾನು ಶಾಸಕನಾಗುವ ಮೊದಲೇ ಗ್ರಾಮದ ಅಭಿವೃದ್ಧಿಗೆ ನನ್ನ ಕೈಲಾದ ಮಟ್ಟಿಗೆ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದೇನೆ. ಆದರೆ, ನಿಮ್ಮೆಲ್ಲರ ಆಶೀರ್ವಾದದಿಂದ ಚುನಾವಣೆಯಲ್ಲಿ ಮೊದಲ ಬಾರಿಗೆ ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದ್ದೀರಿ. ಹೀಗಾಗಿ, ಗ್ರಾಮವನ್ನು ರಾಜ್ಯದಲ್ಲಿಯೇ ಮಾದರಿಯಾಗಿ ರೂಪಿಸಲಾಗುತ್ತಿದೆ ಎಂದರು.ಗ್ರಾಮದಲ್ಲಿ ದ್ವಿಚಕ್ರ ವಾಹನಗಳು ಮಾತ್ರ ಸಂಚರಿಸಲು ಸಾಧ್ಯವಾಗುತ್ತಿತ್ತು. ಗ್ರಾಮದ ರಸ್ತೆಗಳನ್ನು ಅಗಲೀಕರಣ ಮಾಡಲು ನಿಮ್ಮೆಲ್ಲರ ಸಹಕಾರದಿಂದ ಸಾಧ್ಯವಾಗಿದೆ. ಇದೇ ರೀತಿ ಗ್ರಾಮದ ಬೇರೆ ರಸ್ತೆಗಳನ್ನು ಮಾಡಲು ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದರು.
ಪ್ರತಿ ವರ್ಷ ನವೆಂಬರ್ ತಿಂಗಳಿನಲ್ಲಿ ಕೆರೆ ತುಂಬಿಸಿ ಬಾಗಿನ ಅರ್ಪಿಸುವುದು ವಾಡಿಕೆ. ಆದರೆ, ಈ ಬಾರಿ ಕೆರೆ ತುಂಬಿಸುವ ಮೊದಲು ಏತ ನೀರಾವರಿ ಯೋಜನೆ ಪೈಪ್ ಲೈನ್ ಸಂಪೂರ್ಣ ಶಿಥಿಲಗೊಂಡಿದೆ. ಹೀಗಾಗಿ ಅತ್ಯಾಧುನಿಕ ಮಾದರಿಯ ಪೈಪ್ ಲೈನ್ ನಿರ್ಮಾಣ ಕಾಮಗಾರಿ ಆದಷ್ಟು ಬೇಗ ಮುಕ್ತಾಯಗೊಳಿಸಿ ಕೆರೆ ತುಂಬಿಸುವ ಕಾರ್ಯವನ್ನು ಮಾಡಲಾಗುವುದು ಎಂದು ಭರವಸೆ ನೀಡಿದರು.ಗ್ರಾಮದಿಂದ ರೈಲ್ವೆ ಟ್ರ್ಯಾಕ್ ಮೂಲಕ ಅರಣ್ಯ ಇಲಾಖೆ ಕಚೇರಿವರೆಗೂ ರಸ್ತೆ ನಿರ್ಮಾಣ ಮಾಡಲು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಅಲ್ಲದೆ ಗ್ರಾಪಂ ವ್ಯಾಪ್ತಿಯ ಎಲ್ಲಾ ಗ್ರಾಮಗಳನ್ನು ಸರ್ವತೋಮುಖ ಅಭಿವೃದ್ಧಿಗೆ ಚಿಂತನೆ ಮಾಡಲಾಗಿದೆ. ಗ್ರಾಮದ ಅಭಿವೃದ್ಧಿಗೆ ಗ್ರಾಮಸ್ಥರು ಸಹ ಸಲಹೆ ಸೂಚನೆ ನೀಡಬಹುದು ಎಂದರು.
ತಾಪಂ ಇಒ ರಾಮಲಿಂಗಯ್ಯ ಮಾತನಾಡಿ, ಕದಲೂರು ಮಾದರಿ ಗ್ರಾಪಂ ಆಗಿ ಹೊರಹೊಮ್ಮುತ್ತಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಅಭಿವೃದ್ಧಿಯತ್ತ ಮುನ್ನುಗ್ಗುತ್ತಿದೆ. ಇದಕ್ಕೆ ಶಾಸಕ ಉದಯ್ ಅವರು ಅಗತ್ಯ ಸಹಕಾರ ನೀಡುತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.ಗ್ರಾಪಂನಲ್ಲಿ ಜನನ, ಮರಣ ಪ್ರಮಾಣ ಪತ್ರ, ಕಂದಾಯ ಇಲಾಖೆ ದಾಖಲೆಗಳು, ಸುಸಜ್ಜಿತ ಗಂಥ್ರಾಲಯ ಸೇರಿದಂತೆ ಗ್ರಾಪಂ ವ್ಯಾಪ್ತಿಯಲ್ಲಿ ಶಾಸಕರ ಅನುದಾನ, ನರೇಗಾ ಹಾಗೂ ಸ್ವಂತ ಸಂಪನ್ಮೂಲದ ಯೋಜನೆಗಳ ಮೂಲಕ ಸಾಕಷ್ಟು ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ತಿಮ್ಮೇಗೌಡ, ಉಪಾಧ್ಯಕ್ಷೆ ಶಾಂತಮ್ಮ, ಸದಸ್ಯರಾದ ಸುನೀಲ್, ಲೋಕೇಶ್, ತಿಮ್ಮೇಗೌಡ, ಶಿವಣ್ಣ, ಬೋರಮ್ಮ, ಜಯಲಕ್ಷ್ಮಮ್ಮ, ರತ್ನಮ್ಮ, ಸರೋಜಮ್ಮ, ಪಾಪಣ್ಣ, ಪಂಚಾಯತ್ ರಾಜ್ ಇಲಾಖೆ ಎಇಇ ವಿದ್ಯಾಶ್ರೀ, ತಾಲೂಕು ಯೋಜನಾಧಿಕಾರಿ ಸುರೇಶ್, ಪಿಡಿಒ ಜಗದೀಶ್ ಮತ್ತಿತರರು ಇದ್ದರು.