ನಿಷ್ಠುರ, ನಿಷ್ಪಕ್ಷಪಾತ ಪತ್ರಕರ್ತನಾಗಲು ಸತ್ಯ ಬಿಂಬಿಸುವ ಬದ್ಧತೆ ಮುಖ್ಯ: ಅಜಿತ್‌ ಹನುಮಕ್ಕನವರ್‌

KannadaprabhaNewsNetwork | Updated : Mar 02 2024, 03:12 PM IST

ಸಾರಾಂಶ

ಕೃತಕ ಬುದ್ಧಿಮತ್ತೆ ಸೇರಿದಂತೆ ಹೊಸ ಹೊಸ ತಾಂತ್ರಿಕ ಆವಿಷ್ಕಾರಗಳು ಮಾಧ್ಯಮ ಸಂವಹನಕ್ಕೆ ವೇಗ ತಂದುಕೊಡಬಲ್ಲವು. ಆದರೆ ಶ್ರೇಷ್ಠ ಪತ್ರಕರ್ತರ ವೃತ್ತಿಪರ ವೈಶಿಷ್ಟ್ಯತೆಯನ್ನೇ ಮೀರೀಸುವಂಥ ಸ್ವಯಂಶಕ್ತಿ ತಂತ್ರಜ್ಞಾನಕ್ಕೆ ಇರುವುದಿಲ್ಲ ಎಂದು ಅಜಿತ್‌ ಹನುಮಕ್ಕನವರ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಸತ್ಯವನ್ನು ಬಿಂಬಿಸುವಿಕೆಯಲ್ಲಿನ ಬದ್ಧತೆ, ಕೇಳಿದ್ದನ್ನು ದೃಢೀಕರಿಸಿಕೊಳ್ಳುವ ಪ್ರಜ್ಞೆಯಿದ್ದಾಗ ಪತ್ರಕರ್ತರು ನಿಷ್ಠುರ, ನಿಷ್ಪಕ್ಷಪಾತ ದೃಷ್ಟಿಕೋನ ಹೊಂದಲು ಸಹಾಯಕವಾಗುತ್ತದೆ ಎಂದು ಸುವರ್ಣ ನ್ಯೂಸ್ ವಾಹಿನಿಯ ಸಂಪಾದಕ ಅಜಿತ್ ಹನಮಕ್ಕನವರ್ ಅಭಿಪ್ರಾಯಪಟ್ಟರು.

ಅವರು ಉಜಿರೆಯ ಎಸ್.ಡಿ.ಎಂ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಹಾಗೂ ಬಿ.ವೊಕ್ ಡಿಜಿಟಲ್ ಮೀಡಿಯಾ-ಫಿಲ್ಮ್ ಮೇಕಿಂಗ್ ವಿಭಾಗಗಳ ಸಹಭಾಗಿತ್ವದಲ್ಲಿ ‘ಮಾಧ್ಯಮ, ಸಂಸ್ಕೃತಿ, ಮತ್ತು ತಂತ್ರಜ್ಞಾನ: ಸಾಮಾಜಿಕ-ರಾಜಕೀಯ ಸಂರಚನಾತ್ಮಕ ನೋಟ'''''''' ಕುರಿತು ನಡೆದ ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ಮಾಧ್ಯಮೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಕೃತಕ ಬುದ್ಧಿಮತ್ತೆ ಸೇರಿದಂತೆ ಹೊಸ ಹೊಸ ತಾಂತ್ರಿಕ ಆವಿಷ್ಕಾರಗಳು ಮಾಧ್ಯಮ ಸಂವಹನಕ್ಕೆ ವೇಗ ತಂದುಕೊಡಬಲ್ಲವು. ಆದರೆ ಶ್ರೇಷ್ಠ ಪತ್ರಕರ್ತರ ವೃತ್ತಿಪರ ವೈಶಿಷ್ಟ್ಯತೆಯನ್ನೇ ಮೀರೀಸುವಂಥ ಸ್ವಯಂಶಕ್ತಿ ತಂತ್ರಜ್ಞಾನಕ್ಕೆ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಕೊಪ್ಪಳ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಬಿ.ಕೆ. ರವಿ ಸಮ್ಮೇಳನದ ಪ್ರಧಾನ ಆಶಯ ಪ್ರಸ್ತುತಪಡಿಸಿದರು. ಮಾಧ್ಯಮ ರಂಗದಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿಗಳಲ್ಲಿ ಕುತೂಹಲ, ಸಮರ್ಪಣಾ ಭಾವ ಇದ್ದಲ್ಲಿ ಪ್ರಗತಿ ಹೊಂದಬಹುದು. 

ವೃತ್ತಿ ಮೇಲಿನ ಪ್ರೀತಿ ಮತ್ತು ಪರಿಪೂರ್ಣತೆ ಮಾಧ್ಯಮ ಕ್ಷೇತ್ರದ ವೃತ್ತಿಪರತೆಗೆ ಪೂರಕವಾಗಿದೆ. ಈ ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ಮಾಧ್ಯಮೋತ್ಸವ ಭಾರತೀಯ ಮಧ್ಯಮ ಮತ್ತು ವಿವಿಧ ವಿಶ್ವವಿದ್ಯಾನಿಲಯಗಳ ನಡುವೆ ಸೇತುವೆಯಾಗಿದೆ. ತರಗತಿಯಲ್ಲಿ ನಡೆಯುವ ಪಾಠದ ಜೊತೆಗೆ ಈ ರೀತಿಯ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಏಳಿಗೆಗೆ ಕಾರಣವಾಗುತ್ತವೆ ಎಂದರು.

ಎಸ್.ಡಿ. ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ವಿಜ್ಞಾನದ ಜಗತ್ತಿನಲ್ಲಿ ಹೇಗೆ ಶಬ್ದ ಪ್ರಸರಣಕ್ಕೆ ಗಾಳಿ ಅವಶ್ಯವೊ ಹಾಗೆಯೇ ಇಂದು ಸುದ್ದಿಗಳ ಪ್ರಸರಣಕ್ಕೆ ಮಾಧ್ಯಮವು ಮೂಲಭೂತ ಅಗತ್ಯದ ಪರಿಕರವಾಗಿದೆ ಎಂದು ಅಭಿಪ್ರಾಯಪಟ್ಟರು. ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ. ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸುವರ್ಣ ವಾಹಿನಿ ಸಂಪಾದಕ ಅಜಿತ್ ಹನುಮಕ್ಕನವರ್, ಅತಿಥಿಗಳಾದ ಕೊಪ್ಪಳ ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ. ಬಿ.ಕೆ ರವಿ, ಸಿಲ್ಚಾರ್‍ನ ಅಸ್ಸಾಂ ಕೇಂದ್ರಿಯ ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿ ಪ್ರೊ.ಕೆ.ವಿ. ನಾಗರಾಜ್ ಮತ್ತು ದ್ವಿತೀಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿದ್ಯಾರ್ಥಿಗಳಾದ ಸ್ಪೀಕ್ ಫಾರ್‌ ಇಂಡಿಯಾದ ವಿಜೇತ ಶಾಮ್‍ಪ್ರಸಾದ್ ಎಚ್.ಪಿ. ಮತ್ತು ಕಮ್ಯೂನಿಟಿ ಲೀಡರ್‌ ಶಿಪ್‌ ಅವಾರ್ಡ್ ವಿಜೇತ ಸೋಮೇಶ್ವರ ಗುರುಮಠ ಅವರನ್ನು ಸನ್ಮಾನಿಸಲಾಯಿತು. 

ದ್ವಿತೀಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿದ್ಯಾರ್ಥಿನಿಯಾದ ಸ್ಯಾನ್ರಿಟಾ ಜಾಸ್ಮಿನ್ ನಿರೂಪಿಸಿದರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ್‌ ಹೆಗಡೆ ಸ್ವಾಗತಿಸಿದರು. ಬಿ.ವೊಕ್ ಡಿಜಿಟಲ್ ಮೀಡಿಯಾ- ಫಿಲ್ಮ್ ಮೇಕಿಂಗ್ ವಿಭಾಗದ ಮುಖ್ಯಸ್ಥ ಮಾಧವ ಹೊಳ್ಳ ವಂದಿಸಿದರು.

Share this article