ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದ (ಹುಡಾ)ವ್ಯಾಪ್ತಿಯಲ್ಲಿ ಅಕ್ರಮಕ್ಕೆ ಅವಕಾಶ ನೀಡದೇ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಇಚ್ಚೆ ಹೊಂದಿರುವುದಾಗಿ ಹುಡಾ ನೂತನ ಅಧ್ಯಕ್ಷ ಶಾಕೀರ ಸನದಿ ಹೇಳಿದರು.ಸೋಮವಾರ ನವನಗರದ ಹುಡಾ ಕಚೇರಿಯಲ್ಲಿ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಅಕ್ರಮ ಲೇಔಟ್ ನಿರ್ಮಾಣ ಹಾಗೂ ಮಾರಾಟಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಅಕ್ರಮ ಲೇಔಟ್ ನಿರ್ಮಿಸುವವರ ಗುರುತಿಸಿ ಅವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಹುಡಾ ವ್ಯಾಪ್ತಿಯಲ್ಲಿ ಅಕ್ರಮ-ಸಕ್ರಮ ಲೇಔಟ್ ನಿರ್ಮಾಣ ಮಾಡಿ, ಕೇವಲ ಬಾಂಡ್ ಮೇಲೆ ಮಾರಾಟ ಮಾಡುವ ಮೂಲಕ ಸರ್ಕಾರಕ್ಕೆ ಹಾಗೂ ಬಡವರಿಗೆ ಅನ್ಯಾಯ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವುದರ ಜತೆಗೆ ಬಡವರಿಗೆ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಹುಡಾ ವತಿಯಿಂದಲೇ ಉತ್ತಮ ಲೇಔಟ್ ನಿರ್ಮಿಸುವ ಚಿಂತನೆಯಿದೆ ಎಂದರು.ಹೊಸ ಲೇಔಟ್ ನಿರ್ಮಾಣಕ್ಕೆ ಚಿಂತನೆ
ಹು-ಧಾ ಅವಳಿ ನಗರದ ಜನರು ಅಕ್ರಮ ಸಕ್ರಮ ಲೇಔಟ್ ಖರೀದಿಸಬಾರದು. ನಿವೇಶನದ ಅಗತ್ಯವಿದ್ದಲ್ಲಿ ಹುಡಾ ಪ್ರಾಧಿಕಾರವನ್ನು ಸಂಪರ್ಕಿಸಿ ಉತ್ತಮ ಹಾಗೂ ನ್ಯಾಯಯುತವಾಗಿ ಸೈಟ್ ಪಡೆದುಕೊಳ್ಳಬೇಕು. ಪ್ರಾಧಿಕಾರದಿಂದ ಜಮೀನು ಖರೀದಿಸಿ ಹೊಸ ಲೇಔಟ್ ನಿರ್ಮಿಸುವುದು ಹಾಗೂ ಜಮೀನು ಮಾಲೀಕರ ಜತೆಗೆ ಜಂಟಿಯಾಗಿ ಲೇಔಟ್ ನಿರ್ಮಿಸಲು ಉದ್ದೇಶಿಸಲಾಗಿದೆ. ಶೇ.50 ರಷ್ಟು ಜಾಗವನ್ನು ಭೂ ಮಾಲಿಕರಿಗೆ ನೀಡಲಾಗುವುದು. ಅದಕ್ಕೆ ಕನಿಷ್ಠ 50 ಎಕರೆ ಜಮೀನಿನ ಅವಶ್ಯಕತೆ ಇದ್ದು ಅದರ ಹುಡುಕಾಟ ನಡೆಸಲಾಗುವುದು ಎಂದರು.ಕ್ರಿಮಿನಲ್ ಕೇಸ್
ಹುಡಾ ಕಮಿಷನರ್ ಸಂತೋಷ ಬಿರಾದಾರ ಮಾತನಾಡಿ, ಹುಡಾ ವ್ಯಾಪ್ತಿಯಲ್ಲಿ ಇಲ್ಲಿಯ ವರೆಗೆ ನೂರು ಎಕರೆ ಅಕ್ರಮ ಲೇಔಟ್‌ಗಳನ್ನು ಗುರುತಿಸಿ ತೆರವುಗೊಳಿಸುವ ಕೆಲಸ ಮಾಡಲಾಗಿದೆ. ಮತ್ತೆ ಕೆಲವರು ಪ್ರಾಧಿಕಾರದ ಸೂಚನೆ ಮೇರೆಗೆ ಸ್ವಯಂ ತೆರುವುಗೊಳಿಸಿಕೊಂಡಿದ್ದಾರೆ ಎಂದರು.ಸಾರ್ವಜನಿಕರೂ ಅಕ್ರಮ-ಸಕ್ರಮ ಲೇಔಟ್ ಬಗ್ಗೆ ಮಾಹಿತಿ ನೀಡಿದಲ್ಲಿ ಅವುಗಳನ್ನು ತೆರವುಗೊಳಿಸುವ ಕೆಲಸವನ್ನು ಹುಡಾ ಮಾಡಲಿದೆ. ಅಕ್ರಮ-ಸಕ್ರಮವಾಗಿ ಲೇಔಟ್ ನಿರ್ಮಿಸದಂತೆ ರಿಯಲ್ ಎಸ್ಟೇಟ್ ಉದ್ಯಮಿದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಅದನ್ನು ಪಾಲಿಸದಿರುವವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈಗಾಗಲೇ ಪ್ರಾಧಿಕಾರದಿಂದ ರಾಯನಾಳ, ಸತ್ತೂರು, ಸುತಗಟ್ಟಿ, ಲಕ್ಕಮ್ಮನಹಳ್ಳಿ, ತಡಸಿನಕೊಪ್ಪ ಸೇರಿದಂತೆ ವಿವಿಧೆಡೆ ನಿರ್ಮಿಸಿರುವ ಲೇಔಟ್‌ನಲ್ಲಿ 800ಕ್ಕೂ ಅಧಿಕ ನಿವೇಶನಗಳು ಉಳಿದುಕೊಂಡಿವೆ. ಅವುಗಳನ್ನು ಸಧ್ಯದಲ್ಲಿಯೇ ಹರಾಜು ಮೂಲಕ ಮಾರಾಟ ಮಾಡಲಾಗುವುದು ಎಂದರು.ಹುಡಾ ಮತ್ತು ಜಮೀನು ಮಾಲೀಕರ ಸಹಯೋಗದಲ್ಲಿ ಲೇಔಟ್ ನಿರ್ಮಿಸುವ ನಿಟ್ಟಿನಲ್ಲಿ ಈಗಾಗಲೇ 4-5 ರೈತರೊಂದಿಗೆ ಚರ್ಚಿಸಲಾಗಿದೆ. ಕನಿಷ್ಠ 25 ಎಕರೆ ಜಮೀನು ದೊರೆತಲ್ಲಿ ಲೇಔಟ್ ನಿರ್ಮಿಸಿ ಗ್ರಾಹಕರಿಗೆ ಮಾರಾಟ ಮಾಡಲಾಗುವುದು. ಹುಡಾ ಲೇಔಟ್ ಖರೀದಿಸಿದವರಿಗೆ ಇ- ಸ್ವತ್ತು ಆಗದೇ ಇರುವ ಬಗ್ಗೆ ಹಾಗೂ ಅದರಲ್ಲಿನ ತಾಂತ್ರಿಕ ತೊಂದರೆ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ವೇಳೆ ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಪ್ರಾಧಿಕಾರದ ಅಧಿಕಾರಿ ಚಂದ್ರಶೇಖರ ಮುಧೋಳ್ಕರ್ ಸೇರಿದಂತೆ ಹಲವರಿದ್ದರು.ನನಗೆ ಹಣ, ಆಸ್ತಿ ಮಾಡಬೇಕೆಂಬ ಆಸೆಗಳಿಲ್ಲ
ನನಗೆ ಯಾವುದೇ ಹಣ, ಆಸ್ತಿ ಮಾಡಬೇಕೆಂಬ ಆಸೆಗಳಿಲ್ಲ. ಖಾಲಿ ಕೈಯಲ್ಲಿಯೇ ಹುಡಾ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ನಾಳೆಯೂ ನಾನು ಹಾಗೇಯೆ ಇರುತ್ತೇನೆ ಎಂದು ಹುಡಾ ನೂತನ ಅಧ್ಯಕ್ಷ ಶಾಕೀರ ಸನದಿ ಹೇಳಿದರು. ಇನ್ನು ಕೆಲವೇ ದಿನಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರೊಂದಿಗೆ ಸಭೆ ಕರೆದು ಮಹಾನಗರದ ಅಭಿವೃದ್ಧಿಗೆ ಬೇಕಾದ ಅಗತ್ಯವಾದ ಸಲಹೆ, ಸೂಚನೆ ಪಡೆದುಕೊಳ್ಳುತ್ತೇನೆ. ನಾನು ಕಾಂಗ್ರೆಸ್ ಪಕ್ಷದ ನಿಷ್ಟಾವಂತ ಕಾರ್ಯಕರ್ತನಾಗಿದ್ದು, ಪಕ್ಷದ ಹೈಕಮಾಂಡ್ ನೀಡಿದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ. ಜತೆಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಆಕಾಂಕ್ಷಿಯೂ ಆಗಿದ್ದು, ಆ ಪ್ರಯತ್ನವನ್ನೂ ಮುಂದುವರಿಸುತ್ತೇನೆ ಎಂದರು.