ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಬದ್ಧ

KannadaprabhaNewsNetwork | Published : Mar 17, 2024 1:48 AM

ಸಾರಾಂಶ

ಸರ್ಕಾರ ಈಗಾಗಲೇ ಕ್ಷೇತ್ರ ವ್ಯಾಪ್ತಿಯ ನೂರಾರು ಗ್ರಾಮಗಳಲ್ಲಿ ಸಿಸಿ ರಸ್ತೆ, ಚರಂಡಿ, ಬೀದಿ ದೀಪ, ಶುದ್ಧ ಕುಡಿಯುವ ನೀರು ಸೇರಿದಂತೆ ಇನ್ನು ಅನೇಕ ಕಾಮಗಾರಿ ಮತ್ತು ಸೌಲಭ್ಯಗಳ ಕುರಿತು ಅನುದಾನ ನೀಡಿದೆ. ಹಲವಾರು ವರ್ಷಗಳಿಂದ ಸಮರ್ಪಕ ರಸ್ತೆಗಳಿಲ್ಲದೆ ವಂಚಿತವಾದ ಕುಗ್ರಾಮಗಳಿಗೆ ರಸ್ತೆ ಸೌಲಭ್ಯ ಕಲ್ಪಿಸಿ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗಿದೆ

ಶಿರಹಟ್ಟಿ: ಗ್ರಾಮೀಣ ಪ್ರದೇಶಗಳ ಸರ್ವಾಂಗೀಣ ಅಭಿವೃದ್ಧಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಗ್ರಾಮೀಣ ಪ್ರದೇಶದ ಜನರ ಬದುಕು ಹಸನುಗೊಳಿಸಲು ಕೇಂದ್ರ ಸರ್ಕಾರವು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಶನಿವಾರ ಪಪಂ ೨೦೨೩-೨೪ನೇ ಸಾಲಿನ ಎಸ್‌ಎಫ್‌ಸಿ ಹಾಗೂ ಸ್ವಚ್ಛ ಭಾರತ ಮಿಷನ್ ೨.೦ ಯೋಜನೆಗಳಡಿಯಲ್ಲಿ ₹೨.೨೬ ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಶಿರಹಟ್ಟಿ ಪಟ್ಟಣ ತಾಲೂಕು ಕೇಂದ್ರ ಸ್ಥಳವಾಗಿದ್ದರೂ ಅನೇಕ ಸೌಲಭ್ಯಗಳಿಂದ ವಂಚಿತವಾಗಿದೆ ಎಂಬ ಕೊರಗಿದೆ. ಸಧ್ಯ ಪಪಂ ಅಡಿಯಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾರ್ಯಗಳು ನಿಗದಿತ ಅವಧಿಯೊಳಗೆ ಕಾಮಗಾರಿ ಮುಕ್ತಾಯಗೊಳಿಸುವುದರ ಜತೆಗೆ ಗುಣಮಟ್ಟದ ಕಾಮಗಾರಿ ಮಾಡಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.

ಸರ್ಕಾರ ಈಗಾಗಲೇ ಕ್ಷೇತ್ರ ವ್ಯಾಪ್ತಿಯ ನೂರಾರು ಗ್ರಾಮಗಳಲ್ಲಿ ಸಿಸಿ ರಸ್ತೆ, ಚರಂಡಿ, ಬೀದಿ ದೀಪ, ಶುದ್ಧ ಕುಡಿಯುವ ನೀರು ಸೇರಿದಂತೆ ಇನ್ನು ಅನೇಕ ಕಾಮಗಾರಿ ಮತ್ತು ಸೌಲಭ್ಯಗಳ ಕುರಿತು ಅನುದಾನ ನೀಡಿದೆ. ಹಲವಾರು ವರ್ಷಗಳಿಂದ ಸಮರ್ಪಕ ರಸ್ತೆಗಳಿಲ್ಲದೆ ವಂಚಿತವಾದ ಕುಗ್ರಾಮಗಳಿಗೆ ರಸ್ತೆ ಸೌಲಭ್ಯ ಕಲ್ಪಿಸಿ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಸರ್ಕಾರದ ನಾನಾ ಸೌಲಭ್ಯಗಳನ್ನು ಜನರು ಸುಲಭವಾಗಿ ಪಡೆಯಲು ಸಾಧ್ಯವಿಲ್ಲ. ಜನಪ್ರತಿನಿಧಿಗಳು, ಇಲಾಖೆಗಳು ಹಾಗೂ ಅಧಿಕಾರಿಗಳ ಮೇಲೆ ಸತತ ಒತ್ತಡ ಹೇರುವ ಮೂಲಕ ಸರ್ಕಾರಿ ಸವಲತ್ತು ಪಡೆದುಕೊಳ್ಳಬೇಕು. ಅಭಿವೃದ್ಧಿ ಕಾಮಗಾರಿಗಳು ನಡೆಯುವ ವೇಳೆ ಗ್ರಾಮದಲ್ಲಿ ವಾಸಿಸುವ ಬಡ ಕುಟುಂಬದವರಿಗೆ ಅನಾನುಕೂಲವಾಗದಂತೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಬೇಕು ಎಂದು ಸೂಚನೆ ನೀಡಿದರು.

ಶಿರಹಟ್ಟಿ ಪಟ್ಟಣದಲ್ಲಿ ಈಗಾಗಲೇ ನೂರು ಹಾಸಿಗೆಯುಳ್ಳ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ನಿವೇಶನ ಗುರುತಿಸಲಾಗಿದೆ. ಎಪಿಎಂಸಿ ಮಾರುಕಟ್ಟೆ ಪ್ರಾರಂಭಕ್ಕೆ ಸಿದ್ಧತೆ ಕೈಗೊಳ್ಳಲಾಗಿದೆ. ಶಿರಹಟ್ಟಿ ವಿಧಾನ ಸಭಾ ಮತಕ್ಷೇತ್ರದ ಜನತೆ ನನ್ನ ಮೇಲೆ ಅಪಾರ ನಂಬಿಕೆಯಿಟ್ಟು ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಿಸಿದ್ದು, ತಮ್ಮೆಲ್ಲರ ಋಣ ತೀರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ತಾಲೂಕಿನ ಎಲ್ಲ ವರ್ಗದವರನ್ನು ಜಾತಿ ಭೇದವಿಲ್ಲದೆ ಸರ್ವರನ್ನು ಏಕತಾ ಮನೋಭಾವನೆಯಿಂದ ಕಂಡು ಎಲ್ಲರ ಸಮಸ್ಯೆಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.

ತಹಸೀಲ್ದಾರ ಅನಿಲ ಬಡಿಗೇರ, ಪಪಂ ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ, ಜಾನು ಲಮಾಣಿ, ನಾಗರಾಜ ಲಕ್ಕುಂಡಿ, ತಿಪ್ಪಣ್ಣ ಕೊಂಚಿಗೇರಿ, ಪಪಂ ಸದಸ್ಯರಾದ ಪರಮೇಶ ಪರಬ, ಇಸಾಕ ಆದ್ರಳ್ಳಿ, ಹೊನ್ನಪ್ಪ ಶಿರಹಟ್ಟಿ, ಸಂದೀಪ ಕಪ್ಪತ್ತನವರ, ಮುಸ್ತಾಕ ಚೋರಗಸ್ತಿ, ಹಸರತ ಢಾಲಾಯತ, ನಂದಾ ಪಲ್ಲೇದ, ಬಸವರಾಜ ತುಳಿ, ರಮೇಶ ಉತ್ತಂಗಿ, ದೀಪು ಕಳಸಣ್ಣವರ, ಇರಶಾದ ಆದ್ರಳ್ಳಿ, ಪ್ರಭು ಹಲಸೂರ, ಮಂಜು ಚಡಚಣ್ಣವರ, ನಂದಾ ಪಲ್ಲೇದ, ಅಕಬರ ಯಾದಗಿರಿ ಸೇರಿ ಅನೇಕರು ಇದ್ದರು.

Share this article