ದ.ಕ.ಕ್ಕೆ ಕಾಂಗ್ರೆಸ್‌, ಬಿಜೆಪಿ ಕೊಡುಗೆ ತುಲನೆ ಮಾಡಿ: ಪದ್ಮರಾಜ್‌

KannadaprabhaNewsNetwork |  
Published : Apr 14, 2024, 01:52 AM IST
11 | Kannada Prabha

ಸಾರಾಂಶ

ಸುಳ್ಯ, ಮೂಡುಬಿದಿರೆ, ಮಂಗಳೂರು ಕ್ಷೇತ್ರಗಳಲ್ಲಿ ವಿವಿಧೆಡೆ ಬಹಿರಂಗ ಪ್ರಚಾರ, ರೋಡ್‌ ಶೋ ನಡೆಸಿದ ಪದ್ಮರಾಜ್‌, ಎಲ್ಲ ಕ್ಷೇತ್ರಗಳಲ್ಲೂ ವಿವಿಧ ದೇವಾಲಯ, ದೈವಸ್ಥಾನಗಳು, ಚರ್ಚ್‌, ಮಸೀದಿಗಳಿಗೆ ಭೇಟಿ ನೀಡಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಸ್ವಾತಂತ್ರ್ಯಾನಂತರ 40 ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಕಾಂಗ್ರೆಸ್ ಸಂಸದರು ನೀಡಿರುವ ಕೊಡುಗೆ‌ ಹಾಗೂ ನಂತರದ 33 ವರ್ಷ ಬಿಜೆಪಿ ಸಂಸದರು ನೀಡಿರುವ ಕೊಡುಗೆಗಳನ್ನು ತುಲನೆ ಮಾಡಿದರೆ ಜಿಲ್ಲೆಯ ಅಭಿವೃದ್ಧಿ ವಿಚಾರ ಅರ್ಥವಾಗುತ್ತದೆ. ಬುದ್ಧಿವಂತರ ಜಿಲ್ಲೆ ಅಭಿವೃದ್ಧಿ ಕಡೆ ಹೆಜ್ಜೆ ಹಾಕಬೇಕಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಹೇಳಿದ್ದಾರೆ.

ಆಲಂಕಾರು ಕಾಂಗ್ರೆಸ್ ಬಹಿರಂಗ ಚುನಾವಣಾ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆ ಪ್ರಾರಂಭವಾದಾಗಿನಿಂದ ದ.ಕ.ದಲ್ಲಿ ಬಿಜೆಪಿ ಸಂಸದರ ಸಾಧನೆ ಬಗ್ಗೆ ಕೇಳುತ್ತಿದ್ದೇವೆ. ಆದರೆ ಇದುವರೆಗೆ ಯಾರೂ ಇದಕ್ಕೆ ಉತ್ತರಿಸಿಲ್ಲ ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆ ಇಂದು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿ ನಿಲ್ಲಲು ಆರಂಭಿಕ 40 ವರ್ಷಗಳಲ್ಲಿ ಕಾಂಗ್ರೆಸ್‌ ಸಂಸದರು ತಂದುಕೊಟ್ಟ ಬೃಹತ್‌ ಯೋಜನೆಗಳೇ ಕಾರಣ. ಅದರ ನಂತರ 33 ವರ್ಷಗಳ ಕಾಲ ಬಿಜೆಪಿ ಸಂಸದರು ಜಿಲ್ಲೆಗೆ ಯಾವ ಪ್ರಮುಖ ಯೋಜನೆಗಳನ್ನು ತಂದಿದ್ದಾರೆ? ಇದನ್ನು ಪ್ರಶ್ನೆ ಮಾಡಬೇಕಿದೆ. ಈ ಕುರಿತು ಜನರು ಮೌನವಾದರೆ ಜಿಲ್ಲೆಯು ಅಭಿವೃದ್ಧಿಯಲ್ಲಿ ಹಿಂದೆ ಬೀಳಲಿದೆ. ಅಭಿವೃದ್ಧಿಯ ಚಿಂತನೆಯೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ಅಭಿವೃದ್ಧಿ ಪಥದತ್ತ ಸಾಗಬೇಕಿದೆ ಎಂದು ಪದ್ಮರಾಜ್‌ ಹೇಳಿದರು.ಅಪಪ್ರಚಾರಕ್ಕೆ ಕಿವಿಗೊಡಬೇಡಿ:

ಜಿಲ್ಲೆಯಲ್ಲಿ ಬಿಜೆಪಿ ಸೋಲುತ್ತದೆ ಎನ್ನುವುದು ಬಿಜೆಪಿಗರಿಗೆ ಸ್ಪಷ್ಟವಾಗಿ ಅರಿವಾಗಿದೆ. ಅದಕ್ಕಾಗಿ ಅಪಪ್ರಚಾರದ ಮಾರ್ಗ ಹಿಡಿದಿದ್ದಾರೆ. ಮುಂದಿನ ದಿನ ಅಪಪ್ರಚಾರ ಇನ್ನೂ ಹೆಚ್ಚಾಗಬಹುದು. ಆದರೆ ಕಾರ್ಯಕರ್ತರು ಎದೆಗುಂದದೆ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳಿ ಎಂದು ಕರೆ ನೀಡಿದರು.ಜಿಲ್ಲೆಗೆ ನ್ಯಾಯ ಒದಗಿಸಿಲ್ಲ:

ಹೆದ್ದಾರಿ ಅಭಿವೃದ್ಧಿ ಮಾಡುವಾಗ ಸರ್ವಿಸ್ ರಸ್ತೆಯನ್ನು ಸರಿಪಡಿಸಿಕೊಡಬೇಕು ಎಂಬ ನಿಯಮವಿದೆ. ಆದರೆ ನಮ್ಮ ಜಿಲ್ಲೆಯಲ್ಲಿ ಮಾತ್ರ ಇದು ಅನುಷ್ಠಾನ ಆಗುತ್ತಿಲ್ಲ. ಹೀಗಿದ್ದರೂ ಬಿಜೆಪಿ ಸಂಸದರು ಮೌನವಾಗಿದ್ದಾರೆ. ಎಂಡೋಸಲ್ಫಾನ್‌ ಸಂತ್ರಸ್ತರಿಗೂ ನ್ಯಾಯ ಕೊಡಿಸಲು ಆಗಿಲ್ಲ ಎಂದರು.

ಇದೇ ಸಂದರ್ಭ ಕೇಶವ ದೇವಾಡಿಗ, ರಮೇಶ್, ಜಗದೀಶ್ ಅವರನ್ನು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಳಿಸಲಾಯಿತು. ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾ ಉಸ್ತುವಾರಿ ಬಿ.ರಮಾನಾಥ ರೈ, ಸುಳ್ಯ ಉಸ್ತುವಾರಿ ಮಮತಾ ಗಟ್ಟಿ, ಸಂಯೋಜಕರಾದ ಶಕುಂತಳಾ ಶೆಟ್ಟಿ, ಜಿ. ಕೃಷ್ಣಪ್ಪ, ಡಾ. ರಘು, ಚುನಾವಣಾ ವೀಕ್ಷಕ ಜಯಪ್ರಕಾಶ್ ರೈ, ಕಡಬ ಬ್ಲಾಕ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಪ್ರಚಾರ ಸಮಿತಿಯ ಪದಾಧಿಕಾರಿಗಳು ಇದ್ದರು.ರೋಡ್‌ ಶೋ, ದೇವಾಲಯಗಳಿಗೆ ಭೇಟಿ:

ಸುಳ್ಯ, ಮೂಡುಬಿದಿರೆ, ಮಂಗಳೂರು ಕ್ಷೇತ್ರಗಳಲ್ಲಿ ವಿವಿಧೆಡೆ ಬಹಿರಂಗ ಪ್ರಚಾರ, ರೋಡ್‌ ಶೋ ನಡೆಸಿದ ಪದ್ಮರಾಜ್‌, ಎಲ್ಲ ಕ್ಷೇತ್ರಗಳಲ್ಲೂ ವಿವಿಧ ದೇವಾಲಯ, ದೈವಸ್ಥಾನಗಳು, ಚರ್ಚ್‌, ಮಸೀದಿಗಳಿಗೆ ಭೇಟಿ ನೀಡಿದರು. ಸಾರ್ವಜನಿಕ ಸ್ಥಳಗಳು, ಅಂಗಡಿ, ಮನೆಗಳಿಗೆ ಕಾಲ್ನಡಿಗೆಯಲ್ಲಿ ಭೇಟಿ ನೀಡಿ ಮತ ಯಾಚನೆ ಮಾಡಿದರು. ಸುಳ್ಯದ ನಿಡುಪೆ ಕಾಲನಿಯಲ್ಲಿ ಅಲ್ಲಿನ ಮಹಿಳೆಯರು ಪದ್ಮರಾಜ್‌ ಅವರಿಗೆ ದೃಷ್ಟಿ ತೆಗೆದು ಆರತಿ ಬೆಳಗಿ ಸ್ವಾಗತಿಸಿ ವಿಶೇಷ ಸ್ವಾಗತ ಕೋರಿದರು.

PREV

Recommended Stories

ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''