ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರುಕೇಂದ್ರ ಸಚಿವರು ರೈತರನ್ನು ಭಯೋತ್ಪಾದಕರಿಗೆ ಹೋಲಿಸುತ್ತಿರುವುದು ಶೋಚನೀಯ ಸಂಗತಿ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಯಶವಂತ ರಾವ್ ಘೋರ್ಪಡೆ ಹೇಳಿದರು.
ಇಲ್ಲಿಗೆ ಸಮೀಪದ ಅರಹತೊಳಲು ಕೈಮರದ ಸುಂದರೇಶ್ ವೃತ್ತದಲ್ಲಿ ಕೇಂದ್ರ ಸರ್ಕಾರ ವಿರುದ್ಧ ಮಂಗಳವಾರ ಹಮ್ಮಿಕೊಂಡಿದ್ದ ರಸ್ತೆ ತಡೆ, ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.ರೈತರು ಕೇವಲ ತಮ್ಮ ಹಕ್ಕು ಪ್ರತಿಪಾದನೆ ಮಾಡುವಂತೆ ಪ್ರತಿಭಟನೆ ನಡೆಸುತ್ತಿದ್ದರೆ, ಅವರನ್ನು ಹತ್ತಿಕ್ಕಲು ಕೇಂದ್ರ ಸಚಿವರು ಮನಬಂದಂತೆ ಮಾತನಾಡುತ್ತಿರುವುದು ವಿಪರ್ಯಸ. ಇಂತಹ ಹೇಳಿಕೆಗಳನ್ನು ನೀಡುವ ಮೊದಲು ತಾವು ಎಷ್ಟರಮಟ್ಟಿಗೆ ರೈತರ ಹಿತ ಕಾಪಾಡುವಲ್ಲಿ ಶ್ರಮವಹಿಸಿದ್ದೇವೆಂದು ದೇಶದ ರೈತರಿಗೆ ತಿಳಿಸಲಿ ಎಂದರು.
ಈಗಾಗಲೇ ರೈತರು ದೆಹಲಿ ಗಡಿಭಾಗದಲ್ಲಿ ಶಾಂತಿಯಿಂದ ಪ್ರತಿಭಟನೆ ನಡೆಸುತ್ತಿದ್ದರೆ, ಅವರನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಪೊಲೀಸರ ಮೂಲಕ ಪ್ರಯತ್ನ ನಡೆಸುತ್ತಿದೆ. ಇಂತಹ ಗೊಡ್ಡು ಬೆದರಿಕೆ ರೈತರು ಜಗ್ಗುವುದಿಲ್ಲ. ಈ ಹಿಂದಿನಿಂದಲೂ ಯಾವುದೇ ಸರ್ಕಾರಗಳು ರೈತರನ್ನು ಎದುರು ಹಾಕಿಕೊಂಡು ಮತ್ತೊಮ್ಮೆ ಅಧಿಕಾರಕ್ಕೆ ಬಂದ ಉದಾಹರಣೆಗಳಿಲ್ಲ ಎಂದು ಎಚ್ಚರಿಸಿದರು.ರೈತರು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸಬೇಕು. ಅಗತ್ಯ ವಸ್ತುಗಳ ಕಾಯಿದೆಯನ್ನು ತಿದ್ದುಪಡಿ ಮಾಡಬಾರದು. ಎಪಿಎಂಸಿ ಕಾಯಿದೆಯನ್ನು ಹಿಂಪಡೆಯಬೇಕು. ಕಬ್ಬು ಬೆಳೆಗೆ ನ್ಯಾಯಯುತವಾದ ಬೆಲೆ ಘೋಷಿಸಬೇಕು. ಭೂಸುಧಾರಣಾ ಕಾಯಿದೆಯನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಮುಂಬರುವ ಚುನಾಣೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ತಕ್ಕ ಉತ್ತರ ನೀಡಲಾಗುವುದು ಎಂದರು.
ಮೇಕೆದಾಟು ಯೋಜನೆ ಜಾರಿಗೆ ತರುತ್ತೇವೆಂದು ಪಾದಯಾತ್ರೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಇಂದು ಅದರ ಬಗ್ಗೆ ಚಕಾರವೆತ್ತದೇ ಅಧಿಕಾರ ನಡೆಸುತ್ತಿದೆ. ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ₹3500 ಕೋಟಿ ನೀಡುವುದಾಗಿ ಭರವಸೆ ನೀಡಿದ್ದು, ಅದನ್ನು ತಕ್ಷಣವೇ ಜಾರಿಗೆ ತರಬೇಕೆಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ರಾಜ್ಯ ವಲಯ ಕಾರ್ಯದರ್ಶಿ ಡಿ.ವಿ.ವೀರೇಶ್, ಹಿರಣಯ್ಯ, ಡಿ.ಯಲ್ಲಪ್ಪ, ಮಂಜುನಾಥ, ಶಿವಾಜಿರಾವ್, ಕಗ್ಗಿ ಮಲ್ಲೇಶ್ ರಾವ್, ಬಸವರಾಜ್, ಕೃಷ್ಣಮೂರ್ತಿ ಇನ್ನಿತರರು ಹಾಜರಿದ್ದರು.
- - --27ಎಚ್‌ಎಚ್‌ಆರ್‌ಪಿ01:
ಹೊಳೆಹೊನ್ನೂರಿನ ಸಮೀಪದ ಅರಹತೊಳಲು ಕೈಮರದ ಎನ್.ಡಿ. ಸುಂದರೇಶ್ ವೃತ್ತದಲ್ಲಿ ರೈತರು ರಸ್ತೆ ತಡೆ ನಡೆಸಿದರು.