ಏತ ನೀರಾವರಿ ಯೋಜನೆ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಬಿಡುಗಡೆ

KannadaprabhaNewsNetwork | Published : Mar 6, 2025 12:34 AM

ಸಾರಾಂಶ

ತಾಲೂಕಿನಲ್ಲಿ ಭೀಮಾ ಜಲಾಶಯ ಏತ ನೀರಾವರಿ ಯೋಜನೆಗೆ ಭೂಸ್ವಾಧೀನಗೊಂಡು ಭೂಮಿ ಕಳೆದುಕೊಂಡ ರೈತರಿಗೆ ಅನುದಾನ ಲಭ್ಯತೆ ಆಧಾರದ ಮೇಲೆ ಜ್ಯೇಷ್ಠತೆಗನುಗುಣವಾಗಿ ಪರಿಹಾರ ನೀಡುವ ಜೊತೆಗೆ ಕಾಮಗಾರಿಯನ್ನು ಅಂತಿಮಗೊಳಿಸಲು ಹಣ ಬಿಡುಗಡೆಗೆ ಕ್ರಮ ವಹಿಸುವುದಾಗಿ ಸಣ್ಣ ನೀರಾವರಿ ಸಚಿವ ಭೋಸರಾಜು ಸದನದಲ್ಲಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ತಾಲೂಕಿನಲ್ಲಿ ಭೀಮಾ ಜಲಾಶಯ ಏತ ನೀರಾವರಿ ಯೋಜನೆಗೆ ಭೂಸ್ವಾಧೀನಗೊಂಡು ಭೂಮಿ ಕಳೆದುಕೊಂಡ ರೈತರಿಗೆ ಅನುದಾನ ಲಭ್ಯತೆ ಆಧಾರದ ಮೇಲೆ ಜ್ಯೇಷ್ಠತೆಗನುಗುಣವಾಗಿ ಪರಿಹಾರ ನೀಡುವ ಜೊತೆಗೆ ಕಾಮಗಾರಿಯನ್ನು ಅಂತಿಮಗೊಳಿಸಲು ಹಣ ಬಿಡುಗಡೆಗೆ ಕ್ರಮ ವಹಿಸುವುದಾಗಿ ಸಣ್ಣ ನೀರಾವರಿ ಸಚಿವ ಭೋಸರಾಜು ಸದನದಲ್ಲಿ ತಿಳಿಸಿದರು.

ವಿಧಾನಸಭೆ ಅಧಿವೇಶನದ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಪಿ.ಎಂ ನರೇಂದ್ರಸ್ವಾಮಿ ಅವರು, ಭೀಮಾ ಜಲಾಶಯ ಏತ ನೀರಾವರಿ ಯೋಜನೆಗೆ ಭೂಸ್ವಾಧೀನಗೊಂಡು ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡಿ, ಕಾಮಗಾರಿಯನ್ನು ಅಂತಿಮಗೊಳಿಸಲು ಅನುದಾನ ನೀಡಬೇಕು ಎಂದು ಸಚಿವರ ಗಮನಕ್ಕೆ ತಂದರು.

ಹಲಗೂರು ಭಾಗ ಅಂತರ್ಜಲ ಕುಸಿತ ಕಂಡಿರುವ ಪ್ರದೇಶವಾಗಿದೆ. ಶಿಂಷಾ ನದಿಯಿಂದ ನೀರನ್ನು 3,232 ಮೀ ಉದ್ದದ ಏರು ಕೊಳವೆ ಮಾರ್ಗದ ಮುಖಾಂತರ ಹಗದೂರು ಗ್ರಾಮದ ಬಳಿ ಇರುವ ವಿತರಣಾ ತೊಟ್ಟಿಯಿಂದ 8,053 ಮೀಟರ್ ಉದ್ದದ ತೆರೆದ ಕಾಲುವೆ ಮುಖಾಂತರ ಭೀಮಾ ಜಲಾಶಯ ಮತ್ತು ಇತರೆ ಕೆರೆಗಳಿಗೆ ನೀರು ತುಂಬಿಸಲು ಯೋಜನೆಯನ್ನು2014- 15ನೇ ಸಾಲಿನಲ್ಲಿ ಪ್ರಾರಂಭಿಸಲಾಗಿತ್ತು.

ಈ ಪೈಕಿ ಪ್ರಾರಂಭಿಕ 2,323 ಮೀಟರ್ ಉದ್ದದ ಏರು ಕೊಳವೆ ಮಾರ್ಗದ ಕಾಮಗಾರಿಯು ಪೂರ್ಣಗೊಂಡಿದೆ. ಕಾಲುವೆ ಕಾಮಗಾರಿಗೆ ಸಂಬಂಧಿಸಿದಂತೆ ಚಿಕ್ಕಎಲಚಿಗೆರೆ, ಹಗಾದೂರು, ಹಲಗಾಪುರ, ಗುಂಡಾಪುರ, ನಂದೀಪುರ, ಕೆಂಪಯ್ಯನದೊಡ್ಡಿ ಹಾಗೂ ದೇವಿರಹಳ್ಳಿಗಳಲ್ಲಿ ಕಾಲುವೆ ಹಾದು ಹೋಗಿದೆ.

ರೈತರ ಜಮೀನಿನಲ್ಲಿ ಅವರಿಂದ ಒಪ್ಪಿಗೆ ಪಡೆದು ಕಾಲುವೆ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಪ್ರಸ್ತುತ ಕಾಮಗಾರಿಯು ಪ್ರಗತಿಯಲ್ಲಿದೆ. ತೆರೆದ ಕಾಲುವೆಯ 8,350 ಮೀಟರ್ ಪೈಕಿ 7,330 ಮೀಟರ್ ಉದ್ದ ಕಾಲುವೆ ಕಾಮಗಾರಿ ಪೂರ್ಣಗೊಂಡಿದೆ ಎಂದರು.

ರೈತರು ಅವಕಾಶ ಕಲ್ಪಿಸದ ಕಾರಣ ಒಟ್ಟಾರೆ 1020 ಮೀಟರ್ ಉದ್ದ ಕಾಲುವೆ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಭೂಮಿ ಕಳೆದುಕೊಂಡಿರುವ ದೇವಿರಹಳ್ಳಿ, ಕೆಂಪಯ್ಯನದೊಡ್ಡಿ ಗ್ರಾಮದ ರೈತರು ಭೂ ಪರಿಹಾರಕ್ಕೆ ಒತ್ತಾಯಿಸಿದ್ದಾರೆ. ಅವರ ಬೇಡಿಕೆಯೂ ನ್ಯಾಯಯುತವಾಗಿದೆ. ಕೂಡಲೇ ಪರಿಹಾರ ನೀಡಿ ಅನುದಾನ ನೀಡಬೇಕೆಂದು ಒತ್ತಾಯಿಸಿದರು.

ಶಾಸಕರ ಪ್ರಶ್ನೆಗೆ ಉತ್ತರಿಸಿದ ಸಚಿವರು ಪರಿಹಾರದ ಜೊತೆಗೆ ಯೋಜನೆ ಪೂರ್ಣಗೊಳ್ಳಲು ಅನುದಾನ ನೀಡುವುದಾಗಿ ಭರವಸೆ ನೀಡಿದರು.

Share this article