ಜಗದೀಶ ಶೆಟ್ಟರ್‌ಗೆ ಸ್ಪರ್ಧೆ ಬೆಳಗಾವಿ ಬಿಜೆಪಿ ನಾಯಕರಿಂದಲೂ ವಿರೋಧ

KannadaprabhaNewsNetwork | Updated : Mar 16 2024, 02:23 PM IST

ಸಾರಾಂಶ

ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಸಿಎಂ ಜಗದೀಶ ಶೆಟ್ಟರ್‌ ಹೆಸರು ಪ್ರಬಲವಾಗಿ ಕೇಳಿಬರುತ್ತಿರುವ ನಡುವೆಯೇ, ಬಿಜೆಪಿ ಘಟಾನುಘಟಿ ನಾಯಕರು ಹೊರಗಿನ ಅಭ್ಯರ್ಥಿಗಳ ಸ್ಪರ್ಧೆಗೆ ಅವಕಾಶವಿಲ್ಲ. ಯಾವ ಕಾರಣಕ್ಕೂ ಸ್ಥಳೀಯ ನಾಯಕರನ್ನು ಹೊರತುಪಡಿಸಿ ವಲಸಿಗರಿಗೆ ಅವಕಾಶ ನೀಡದಂತೆ ವರಿಷ್ಠರ ಮೇಲೆ ಒತ್ತಡ ಹೇರಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಸಿಎಂ ಜಗದೀಶ ಶೆಟ್ಟರ್‌ ಹೆಸರು ಪ್ರಬಲವಾಗಿ ಕೇಳಿಬರುತ್ತಿರುವ ನಡುವೆಯೇ, ಜಿಲ್ಲೆಯ ಬಿಜೆಪಿ ಘಟಾನುಘಟಿ ನಾಯಕರು ಹೊರಗಿನ ಅಭ್ಯರ್ಥಿಗಳ ಸ್ಪರ್ಧೆಗೆ ಅವಕಾಶವಿಲ್ಲ. ಸ್ಥಳೀಯರಿಗೆ ಆದ್ಯತೆ ನೀಡಿ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಯಾವ ಕಾರಣಕ್ಕೂ ಸ್ಥಳೀಯ ನಾಯಕರನ್ನು ಹೊರತುಪಡಿಸಿ ವಲಸಿಗರಿಗೆ ಅವಕಾಶ ನೀಡದಂತೆ ವರಿಷ್ಠರ ಮೇಲೆ ಒತ್ತಡ ಹೇರಿದ್ದಾರೆ.

ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಮಾಜಿ ಸಿಎಂ ಜಗದೀಶ ಶೆಟ್ಟರ್‌ ಇಲ್ಲವೇ ಮಾಜಿ ಸಚಿವ ಮುರಗೇಶ ನಿರಾಣಿ ಅವರಿಗೆ ಟಿಕೆಟ್‌ ಸಿಗುತ್ತದೆ ಎಂಬ ಹಿನ್ನೆಲೆಯಲ್ಲಿ ರಾಜ್ಯಸಭಾ ಮಾಜಿ ಸದಸ್ಯ ಡಾ.ಪ್ರಭಾಕರ ಕೋರೆ ಅವರ ನಿವಾಸದಲ್ಲಿ ಶುಕ್ರವಾರ ಬಿಜೆಪಿ ನಾಯಕರ ಮಹತ್ವದ ಸಭೆ ನಡೆದಿದೆ. ಹೊರಗಿನ ಅಭ್ಯರ್ಥಿಗಳಿಗೆ ಪಕ್ಷ ಮಣೆಹಾಕದೇ ಸ್ಥಳೀಯರಿಗೆ ಟಿಕೆಟ್‌ ನೀಡಬೇಕೆಂದು ಒತ್ತಾಯಿಸಲಾಗಿದೆ. 

ಮಾತ್ರವಲ್ಲ, ಹೊರಗಿನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದೆಯಾದಲ್ಲಿ ಪಕ್ಷದೊಳಗೆ ಎದುರಾಳಿಗಳು ಹೆಚ್ಚಾಗಬಹುದು. ಈ ನಿಟ್ಟಿನಲ್ಲಿ ಸ್ಥಳೀಯರಿಗೇ ಆದ್ಯತೆ ನೀಡಬೇಕು ಎಂಬ ಸಂದೇಶವನ್ನು ಈ ಸಭೆಯ ಮೂಲಕ ವರಿಷ್ಠರ ತಲುಪಿಸುವ ಯತ್ನ ಮಾಡಿದ್ದಾರೆ. 

ಮಾತ್ರವಲ್ಲ, ಬೆಳಗಾವಿ ಜಿಲ್ಲಾ ಬಿಜೆಪಿ ನಾಯಕರು ಈ ವಿಚಾರದಲ್ಲಿ ಒಗ್ಗಟ್ಟು ಪ್ರದರ್ಶಿಸಿದ್ದು, ಬಿಜೆಪಿ ಹೈಕಮಾಂಡ್‌ಗೂ ಇದು ನುಂಗಲಾರದ ತುತ್ತಾಗಿದೆ.

ಜಗದೀಶ ಶೆಟ್ಟರ್‌ ಅವರಿಗೆ ಬೆಳಗಾವಿ ಕ್ಷೇತ್ರದಿಂದ ಟಿಕೆಟ್‌ ಬಹುತೇಕ ಖಚಿತವಾದಂತಾಗಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಆದರೆ, ಇದನ್ನು ಸುತಾರಾಂ ಸ್ಥಳೀಯ ನಾಯಕರು ಒಪ್ಪುತ್ತಿಲ್ಲ. 

ಅದೆಲ್ಲವೂ ಊಹಾಪೋಹವಷ್ಟೇ. ಬೆಳಗಾವಿ ಕ್ಷೇತ್ರದ ಟಿಕೆಟ್‌ಯನ್ನು ಕಾಯ್ದಿರಿಸಲಾಗಿದೆ. ಅಂತಿಮವಾಗಿ ಯಾರಿಗೆ ಟಿಕೆಟ್‌ ಸಿಗುತ್ತದೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ. 

ಯಾವುದೇ ಕಾರಣಕ್ಕೂ ಹೊರಗಿನ ಅಭ್ಯರ್ಥಿಗೆ ಮಣೆಹಾಕಬಾರದು. ಸ್ಥಳೀಯ ಆಕಾಂಕ್ಷಿಗಳು ಚುನಾವಣೆಗೆ ಸ್ಪರ್ಧಿಸಲು ಸಮರ್ಥರಿದ್ದಾರೆ. ಈ ಹಿಂದಿನ ಚುನಾವಣೆಗಳಲ್ಲಿಯೂ ಸ್ಥಳೀಯರಿಗೆ ಆದ್ಯತೆ ನೀಡಲಾಗಿದ್ದು, ಈ ಬಾರಿಯೂ ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂದು ಸಭೆಯಲ್ಲಿ ಪಕ್ಷದ ಮುಖಂಡರು ಒಕ್ಕೊರಲಿನಿಂದ ಒತ್ತಾಯಿಸಿದ್ದಾರೆ ಎನ್ನಲಾಗಿದೆ.

ವರಿಷ್ಠರು ಹೊರಗಿನವರಿಗೆ ಟಿಕೆಟ್ ನೀಡುತ್ತಿದ್ದಾರೆ ಎನ್ನುವ ಮಾಹಿತಿ ಬರುತ್ತಿದ್ದಂತೆ ಜಿಲ್ಲಾ ಬಿಜೆಪಿಯಲ್ಲಿ ಯಾರೂ ಗಂಡಸರಿಲ್ಲವೇ ಎನ್ನುವ ಪ್ರಶ್ನೆಯನ್ನು ಸಾರ್ವಜನಿಕರು ಕೇಳುತ್ತಿದ್ದಾರೆ. 

ಹೊರಗಿನವರು ಸ್ಫರ್ಧಿಸುವುದಕ್ಕೆ ಕಾರ್ಯಕರ್ತರಿಂದಲೂ ತೀವ್ರ ವಿರೋಧ ವ್ಯಕ್ತವಾಗುತ್ತಿದೆ ಎಂದು ಸಭೆಯಲ್ಲಿ ವಿಸ್ತೃತವಾಗಿ ಚರ್ಚೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಸಭೆಯಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಅಭಯ ಪಾಟೀಲ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ ಬೆನಕೆ, ರಾಜ್ಯ ವಕ್ತಾರ ಎಂ.ಬಿ.ಜಿರಲಿ, ವಿಧಾನ ಪರಿಷತ್‌ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ , ಮಾಜಿ ಶಾಸಕ ವಿಶ್ವನಾಥ ಪಾಟೀಲ ಮೊದಲಾದವರು ಪಾಲ್ಗೊಂಡಿದ್ದರು.

ಬೆಳಗಾವಿ ಟಿಕೆಟ್‌ ಇನ್ನೂ ಅಂತಿಮವಾಗಿಲ್ಲ: ಸಂಸದ ಕಡಾಡಿ

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಬೆಳಗಾವಿ ಕ್ಷೇತ್ರದ ಟಿಕೆಟ್‌ ಇನ್ನೂ ಅಧಿಕೃತವಾಗಿ ಘೋಷಣೆ ಆಗಿಲ್ಲ. 

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಾವು ಸಭೆ ಮಾಡಿದ್ದೇವೆ. ರಾಜಕೀಯ ವಿಷಯಗಳ ಕುರಿತು ಸಭೆಯಲ್ಲಿ ಸಾಕಷ್ಟು ಚರ್ಚೆ ಆಗಿದೆ. ಪಕ್ಷದ ಮುಖಂಡರು ಚುನಾವಣೆ ಸಿದ್ಧತೆ ಹಿನ್ನೆಲೆಯಲ್ಲಿ ನೀಡಿರುವ ಸಲಹೆ, ಸೂಚನೆಗಳನ್ನು ರಾಷ್ಟ್ರನಾಯಕರ ಗಮನ ಸೆಳೆಯಲಾಗುವುದು ಎಂದರು.

ಸ್ಥಳೀಯವಾಗಿ ಸಾಕಷ್ಟು ಆಕಾಂಕ್ಷಿ ಅಭ್ಯರ್ಥಿಗಳಿದ್ದಾರೆ. ಇನ್ನು ಪಕ್ಷದ ಹೈಕಮಾಂಡ್ ಅಧಿಕೃತವಾಗಿ ಯಾರಿಗೂ ಟಿಕೆಟ್‌ ಘೋಷಿಸಿಲ್ಲ. ನಾವು ಊಹಾಪೋಹದ ಮೇಲೆ ಯಾವುದೇ ತೀರ್ಮಾನ ಕೈಗೊಳ್ಳುವುದಿಲ್ಲ. 

ಸ್ಥಳೀಯವಾಗಿ ಸಾಕಷ್ಟು ಮುಖಂಡರಿಂದ ಟಿಕೆಟ್‌ ಬೇಡಿಕೆಯಿದೆ. ಜಿಲ್ಲಾ ನಾಯಕರು ಮೊದಲಿನಿಂದಲೂ ಒಗ್ಗಟ್ಟಾಗಿದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಹೇಳಿದರು.

ಮಾಜಿ ಸಿಎಂ ಜಗದೀಶ ಶೆಟ್ಟರ್‌ ಅವರಿಗೆ ಬೆಳಗಾವಿ ಕ್ಷೇತ್ರದ ಬಿಜೆಪಿ ಟಿಕೆಟ್‌ ಇನ್ನೂ ಅಂತಿಮವಾಗಿಲ್ಲ. ಪಕ್ಷದ ವರಿಷ್ಠರು ಅಧಿಕೃತವಾಗಿ ಘೋಷಿಸಬೇಕು. ಶೆಟ್ಟರ್‌ ಅವರಿಗೆ ಟಿಕೆಟ್‌ ಸಿಗುತ್ತದೆ ಎನ್ನುವುದು ಮಾಧ್ಯಮಗಳಿಂದ ಗೊತ್ತಾಗಿದೆ. ಪಕ್ಷದ ವರಿಷ್ಠರು ಜಗದೀಶ ಶೆಟ್ಟರ್‌ ಅವರಿಗೆ ಟಿಕೆಟ್‌ ಕೊಟ್ಟಿದ್ದೇವೆ ಎಂದು ಈವರೆಗೆ ಎಲ್ಲಿಯೂ ಹೇಳಿಲ್ಲ. ಬೆಳಗಾವಿಗೆ ಹೋಗುತ್ತೇನೆ ಎಂದ ಶೆಟ್ಟರ್‌ಗೆ ಪಕ್ಷದ ನಾಯಕರು ಹೋಗು ಎಂದಿದ್ದಾರೆ ಅಷ್ಟೇ. -ಡಾ.ಪ್ರಭಾಕರ ಕೋರೆ, ಬಿಜೆಪಿ ನಾಯಕ

ಜಿಲ್ಲೆಯ ಸ್ಥಳೀಯ ನಾಯಕರೇ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಬೇಕೆಂಬುದು ಜಿಲ್ಲೆಯ ಪ್ರತಿಯೊಬ್ಬರ ಅಪೇಕ್ಷೆಯಿದೆ. ಈ ಹಿಂದೆ ಬಾಬಾಗೌಡ ಪಾಟೀಲ, ಸುರೇಶ ಅಂಗಡಿ, ಮಂಗಲ ಅಂಗಡಿ ಜಿಲ್ಲೆಯವರು. ಹಾಗಾಗಿ, ಸ್ಥಳೀಯರಿಗೆ ಟಿಕೆಟ್‌ ನೀಡಬೇಕೆಂಬ ಬೇಡಿಕೆಯಿದೆ. ಅನೇಕ ವಿಷಯದ ಕುರಿತು ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಿದೆ. ಜಗದೀಶ ಶೆಟ್ಟರ್‌ಗೆ ಟಿಕೆಟ್‌ ಅಂತಿಮವಾಗಿರುವ ವಿಚಾರ ನಮಗ್ಯಾರಿಗೂ ಗೊತ್ತಿಲ್ಲ. -ಅಭಯ ಪಾಟೀಲ, ಶಾಸಕ, ಬೆಳಗಾವಿ ದಕ್ಷಿಣ

Share this article