ಕನ್ನಡಪ್ರಭ ವಾರ್ತೆ ಮಂಗಳೂರು ನಗರದ ಖಾಸಗಿ ಶಾಲೆಯ ಶಿಕ್ಷಕಿಯಿಂದ ಹಿಂದು ಧರ್ಮದ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಪ್ರತಿಭಟನೆ ಸಂದರ್ಭ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿದೆ. ಈ ಬಗ್ಗೆ ರಾಜ್ಯ ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರು ನೀಡಲಾಗಿದೆ ಎಂದು ಆಯೋಗದ ಮಾಜಿ ಅಧ್ಯಕ್ಷೆ ಡಾ. ಕೃಪಾ ಅಮರ್ ಆಳ್ವ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನೆಯಿಂದ ಮಕ್ಕಳು ವಿಚಲಿತರಾಗಿದ್ದು, ಕೆಲವರು ಭಯಗೊಂಡಿದ್ದಾರೆ. ಪುಟ್ಟಮಕ್ಕಳನ್ನು ಶಾಲೆಯ ಗೇಟಿನ ಬಳಿ ನಿಲ್ಲಿಸಿ ರಾಜಕೀಯ ಪಕ್ಷದ ನಾಯಕರು ಬಳಸಿಕೊಂಡಿರುವುದು ಖಂಡನೀಯ. ಇದು ಮಕ್ಕಳ ಸ್ವಾತಂತ್ರ್ಯ ಮತ್ತು ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಆದ್ದರಿಂದ ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಆಪ್ತ ಸಲಹೆಗಾರರನ್ನು ನಿಯೋಜಿಸಿ ಮಕ್ಕಳ ಮನಸ್ಸು ತಿಳಿಗೊಳಿಸುವ ಕೆಲಸವಾಗಬೇಕು ಎಂದು ಆಗ್ರಹಿಸಿದರು. ಅಲ್ಪಸಂಖ್ಯಾತ ಆಯೋಗದ ಮಾಜಿ ಸದಸ್ಯೆ ಮೆಟಿಲ್ಡಾ, ಮಕ್ಕಳ ಹಕ್ಕುಗಳ ಕಾರ್ಯಕರ್ತೆ ನಂದಾ ಪಾಯಸ್ ಇದ್ದರು. ಮುಖಂಡರ ಮೇಲೆ ಕೇಸ್: ಇಂದು ಠಾಣೆಗಳೆದುರು ಧರಣಿಮಂಗಳೂರು: ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್, ಶಾಸಕರಾದ ವೇದವ್ಯಾಸ ಕಾಮತ್ ಮತ್ತು ಡಾ. ಭರತ್ ವೈ. ಶೆಟ್ಟಿ, ಕಾರ್ಪೊರೇಟರ್‌ಗಳಾದ ಭರತ್ ಮತ್ತು ಸಂದೀಪ್ ಮೇಲೆ ಪ್ರಕರಣ ದಾಖಲಿಸಿರುವುದನ್ನು ವಿರೋಧಿಸಿ ಫೆ.19ರಂದು ಮಂಗಳೂರು ನಗರ ವ್ಯಾಪ್ತಿಯ ಎಲ್ಲ ಪೊಲೀಸ್ ಠಾಣೆಗಳ ಎದುರು ಜೈಶ್ರೀರಾಮ್ ಘೋಷಣೆಯೊಂದಿಗೆ ಹರತಾಳ ನಡೆಸಲು ವಿಶ್ವ ಹಿಂದೂ ಪರಿಷತ್ ನಿರ್ಧರಿಸಿದೆ.
ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ, ಹಿಂದೂ ದೇವರನ್ನು ಅವಮಾನ ಮಾಡಿದ್ದಲ್ಲದೆ, ದೇಶದ ಪ್ರಧಾನಿಯನ್ನು ನರಮೇಧ ಮಾಡಿದವರೆಂದು ಅವಹೇಳನ ಮಾಡಿದ ಶಿಕ್ಷಕಿ ಮೇಲೆ ದೂರು ನೀಡಿದರೂ ಇದುವರೆಗೆ ದಾಖಲಿಸಿಲ್ಲ. ಆದರೆ ಶ್ರೀರಾಮ ದೇವರಿಗೆ ಜೈಕಾರ ಕೂಗಿದಕ್ಕೆ ಪೊಲೀಸರು ಕೇಸು ದಾಖಲಿಸಿರುವುದು ಸರಿಯಲ್ಲ. ಕಾಂಗ್ರೆಸ್ ಸರ್ಕಾರದ ಒತ್ತಡಕ್ಕೆ ಮಣಿದು ಕೇಸ್ ದಾಖಲಿಸಿದ್ದು, ಹಿಂದೂ ಸಮಾಜ ಸಹಿಸುವುದಿಲ್ಲ. ತಕ್ಷಣ ಶಿಕ್ಷಕಿ ಮೇಲೆ ಕೇಸು ದಾಖಲಿಸಿ, ಬಂಧಿಸಬೇಕು. ವಿಎಚ್‌ಪಿ, ಬಿಜೆಪಿ ನಾಯಕರ ಮೇಲೆ ಹಾಕಿರುವ ಕೇಸನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.ವಿಹಿಂಪ ಜಿಲ್ಲಾ ಕಾರ್ಯದರ್ಶಿ ಭುಜಂಗ ಕುಲಾಲ್ ಮಾತನಾಡಿ, ಶಿಕ್ಷಕಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪೋಷಕರು, ಶಾಸಕರು ಶಾಲೆ ಆಡಳಿತ ಮಂಡಳಿಯನ್ನು ಒತ್ತಾಯಿಸಿದ್ದರು. ಆ ಸಂದರ್ಭ ಮಕ್ಕಳು ಶಾಲೆಯ ಗೇಟಿನ ಹೊರಗೆ ಜೈಶ್ರೀರಾಮ್ ಘೋಷಣೆ ಕೂಗಿದ್ದಾರೆ. ಸ್ವಯಂ ಪ್ರೇರಣೆಯಿಂದ ಮಕ್ಕಳು ಜೈಕಾರ ಹಾಕಿದ್ದಾರೆಯೇ ಹೊರತು ಯಾರೂ ಒತ್ತಡ ಹಾಕಿಲ್ಲ. ಇಷ್ಟಕ್ಕೇ ಜಾಮೀನುರಹಿತ ಕೇಸು ದಾಖಲಿಸಿದ್ದಾರೆ. ಶರಣ್ ಪಂಪ್‌ವೆಲ್ ಮತ್ತು ಶಾಸಕ ಭರತ್ ಶೆಟ್ಟಿ ಅವರು ಶಾಲೆಯ ಬಳಿಯೇ ಇರಲಿಲ್ಲ. ಆದರೂ ಅವರ ಮೇಲೆ ಕೇಸು ದಾಖಲಿಸಿದ್ದು ಖಂಡನೀಯ ಎಂದರು.
ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್, ವಿಭಾಗ ಪ್ರಚಾರ ಪ್ರಮುಖ್ ಪ್ರದೀಪ್ ಸರಿಪಲ್ಲ, ಜಿಲ್ಲಾ ಉಪಾಧ್ಯಕ್ಷ ಮನೋಹರ ಸುವರ್ಣ ಮತ್ತಿತರರಿದ್ದರು.