ಎರಡನೇ ಬೆಳೆಗೆ ನೀರಿಗಾಗಿ ಕಂಪ್ಲಿ ಬಂದ್ ಯಶಸ್ವಿ

KannadaprabhaNewsNetwork |  
Published : Nov 04, 2025, 12:45 AM IST
ಕಂಪ್ಲಿಯಲ್ಲಿ ನಡೆದ ರೈತರ ಪ್ರತಿಭಟನೆಯಲ್ಲಿ ರೈತ ಸಂಘದ ಬಳ್ಳಾರಿ ಜಿಲ್ಲಾಧ್ಯಕ್ಷ ಬಿ.ವಿ.ಗೌಡ ಮಾತನಾಡಿದರು.  | Kannada Prabha

ಸಾರಾಂಶ

ಪಟ್ಟಣದ ವ್ಯಾಪಾರಸ್ಥರು ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚುವ ಮೂಲಕ ರೈತರ ಹೋರಾಟಕ್ಕೆ ಬೆಂಬಲ

ಕಂಪ್ಲಿ: ಎರಡನೇ ಬೆಳೆಗೆ ನೀರು ಒದಗಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕರೆ ನೀಡಿದ್ದ ಕಂಪ್ಲಿ ಬಂದ್ ಸೋಮವಾರ ಯಶಸ್ವಿಯಾಯಿತು. ಪಟ್ಟಣದ ವ್ಯಾಪಾರಸ್ಥರು ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚುವ ಮೂಲಕ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ವಿವಿಧ ಸಂಘ-ಸಂಸ್ಥೆಗಳು ಸಹ ಈ ಬಂದ್‌ಗೆ ಸಾಥ್ ನೀಡಿದವು.

ಸಾಂಗತ್ರಯ ಸಂಸ್ಕೃತ ಪಾಠಶಾಲೆಯಿಂದ ಪ್ರಾರಂಭವಾದ ಪ್ರತಿಭಟನಾ ರ‍್ಯಾಲಿ ಡಾ.ರಾಜಕುಮಾರ ರಸ್ತೆಯ ಮಾರ್ಗವಾಗಿ ಸಂಚರಿಸಿ ಅಂಬೇಡ್ಕರ್ ವೃತ್ತದ ಬಳಿ ಸೇರಿತು. ಬಳಿಕ ರೈತರು ರಸ್ತೆ ಸಂಚಾರವನ್ನು ತಡೆದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಎರಡನೇ ಬೆಳೆಗೆ ತಕ್ಷಣ ನೀರು ಬಿಡಬೇಕೆಂದು ಆಗ್ರಹಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಬಿ.ವಿ.ಗೌಡ ಮಾತನಾಡಿ, ಅತೀ ವೃಷ್ಟಿಯಿಂದ ರೈತರು ನಷ್ಟಕ್ಕೆ ಒಳಗಾಗಿದ್ದಾರೆ. ಇನ್ನು ಈಗಲಾದರೂ ಎರಡನೇ ಬೆಳೆಗೆ ನೀರು ದೊರೆತರೆ ಆದ ನಷ್ಟವನ್ನು ಸರಿ ಪಡಿಸಿಕೊಳ್ಳಬಹುದು ಎಂಬ ನಿರೀಕ್ಷೆಯಲ್ಲಿ ರೈತರಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿಯೂ ಸಚಿವ ಶಿವರಾಜ್ ತಂಗಡಗಿ ರೈತರ ಬಗ್ಗೆ ಚೂರು ಕಾಳಜಿ ವಹಿಸದೇ ಜಲಾಶಯದಲ್ಲಿ ನೀರಿದ್ದರೂ ಇಲ್ಲ ಎಂದು ಹೇಳಿಕೆ ನೀಡುತ್ತಾರೆ. ಕಾರ್ಖಾನೆಗಳಿಗೆ ಕೊಡಲು ನೀರು ಇದೆ. ಆದರೆ ರೈತರು ಕೇಳಿದರೆ ನೀರು ಕೊಡಲ್ಲ ಅಂತೀರಾ? ಇದು ರಾಜ್ಯ ಸರ್ಕಾರ ತೋರುತ್ತಿರುವ ರೈತ ವಿರೋಧಿ ನಡೆಯಾಗಿದೆ ಎಂದು ಆಕ್ರೋಶ ಹೊರ ಹಾಕಿದರು.

ಎರಡನೇ ಬೆಳೆಗೆ ನೀರು ಬಿಡುವ ವಿಚಾರವನ್ನು ರಾಜಕೀಯಗೊಳಿಸದೆ, ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಮುನಿರಾಬಾದಿನಲ್ಲಿ ತುರ್ತಾಗಿ ಐಸಿಸಿ ಸಭೆ ಕರೆಯಬೇಕು. ಜಲಾಶಯದಲ್ಲಿ 80 ಟಿಎಂಸಿ ನೀರು ಇದ್ದು, ಇದರ ಸದುಪಯೋಗದಿಂದ 2026ರ ಫೆಬ್ರವರಿವರೆಗೆ ಎರಡನೇ ಬೆಳೆಗೆ ನೀರಾವರಿ ನೀಡಬಹುದು. ಜಲಾಶಯದ ಗೇಟುಗಳ ದುರಸ್ತಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಕರ್ನಾಟಕ, ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಯಾರಿಗೂ ಸೇರಿದವರಲ್ಲದ ವ್ಯಕ್ತಿಯನ್ನು ಟಿಬಿ ಬೋರ್ಡ್ ಕಾರ್ಯದರ್ಶಿಯಾಗಿ ನೇಮಿಸಬೇಕು. ಎಂದು ಒತ್ತಾಯಿಸಿದರಲ್ಲದೆ ನಮ್ಮ ಬೇಡಿಕೆಗೆ ಸ್ಪಂದಿಸಿ ನೀರು ಬಿಡದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಹೋರಾಟ ಉಗ್ರ ರೂಪ ತಾಳುತ್ತದೆ ಎಂದು ಸರ್ಕಾರವನ್ನು ಎಚ್ಚರಿಸಿದರು.

ಬಳಿಕ ತಹಸೀಲ್ದಾರ್ ಜೂಗಲ ಮಂಜು ನಾಯಕ ಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ರೈತ ನಾಯಕರು ಜೆ.ಭರಮರೆಡ್ಡಿ, ಕೆ.ವೀರೇಶ್, ತಿಮ್ಮಪ್ಪನಾಯಕ, ಕೆ.ರಮೇಶ, ಡಿ.ಮುರಾರಿ, ಟಿ.ಗಂಗಣ್ಣ, ವಿ.ಟಿ.ರಾಜು, ಕುರಿ ಮಂಜುನಾಥ, ಕೆ.ಎಂ.ಹೇಮಯ್ಯಸ್ವಾಮಿ, ಎ.ಸಿ.ದಾನಪ್ಪ, ಅಳ್ಳಳ್ಳಿ ವೀರೇಶ್, ಎಂ.ಸುಧೀರ್, ಪಿ.ನಾರಾಯಣರೆಡ್ಡಿ, ಕಡೇಮನಿ ಪಂಪಾಪತಿ, ಡಿ.ವಿ.ಸುಬ್ಬಾರಾವ್, ಬಿ.ಸದಾಶಿವಪ್ಪ, ಸಿ.ಡಿ.ಮಹಾದೇವ, ಡಿ.ಮುನಿಸ್ವಾಮಿ, ಟಿ.ಬದ್ರಿನಾಥ, ಇಟಗಿ ಬಸವರಾಜಗೌಡ, ವೆಂಕಟರಾಮರಾಜು, ಬಿ.ಅಂಬಣ್ಣ, ವಾಲಿ ಕೊಟ್ರಪ್ಪ, ಮಾಧವರೆಡ್ಡಿ ಸೇರಿದಂತೆ ಅನೇಕ ರೈತರು ಭಾಗವಹಿಸಿದ್ದರು.

PREV

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ